ಸಪ್ತ ಸಾಗರಗಳಾಚೆಗೆ ನಂದಿನಿ ಉತ್ಪನ್ನಗಳು

ಕೆಎಂಎಫ್ ಉತ್ಪನ್ನಗಳು
ಕೆಎಂಎಫ್ ಉತ್ಪನ್ನಗಳು
Published on

ಪ್ರಮುಖ ಮುಖ್ಯಾಂಶಗಳು

  • ಇನ್ನೂ 500 ಕೆಎಂಎಫ್ ಔಟ್ ಲೆಟ್ ಪ್ರಾರಂಭಿಸಲು ಕ್ರಮ
  • ನಿತ್ಯವೂ 1 ಕೋಟಿ ಲೀ. ಹಾಲು
  • ಕೆಎಂಎಫ್ ಮೆಗಾ ಯೋಜನೆ ಸಿದ್ಧತೆ
ಶಿವಾನಂದ ತಗಡೂರು, ಬೆಂಗಳೂರು:
ಸಪ್ತ ಸಾಗರಗಳ ಆಚೆಗೂ ಇನ್ನೂ ಕೆಎಂಎಫ್ ಉತ್ಪನ್ನಗಳು ಎಲ್ಲೆಡೆ ಮೇಳೈಸಲಿವೆ.
ಹೌದು. ಹೀಗೊಂದು ಮೆಗಾ ಪ್ಲಾನ್ ಮಾಡಿರುವ ಕೆಎಂಎಫ್, ತನ್ನ ನಂದಿನಿ ಬ್ರಾಂಡ್‌ನ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ದಾಪುಗಾಲು ಹಾಕಲು ಸಜ್ಜಾಗಿದೆ.
ಮೊದಲ ಹಂತದಲ್ಲಿ ಅಮೇರಿಕಾ, ದುಬೈ, ಸೌದಿ ಅರೆಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಕೆಎಂಎಫ್ ಉತ್ಪನ್ನಗಳು ಹೆಜ್ಜೆ ಇಡಲಿವೆ. ಡಿಸೆಂಬರ್ ಅಂತ್ಯದೊಳಗೆ ಹೊಸ ಮಾರುಕಟ್ಟೆ ಜಾಲ ವಿಸ್ತಾರವಾಗಲಿದ್ದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಚಾಲನೆ ಕೊಡಿಸಲು ಹಗಲು ರಾತ್ರಿ ಕೆಲಸ ನಡೆಯುತ್ತಿದೆ. ಹೊಸ ವರ್ಷಕ್ಕೆ ವಿದೇಶದಲ್ಲಿ ಸುದ್ದಿ ನೀಡಲು ಕೆಎಂಎಫ್ ಮುಂದಾಗಿದೆ.
ಮೊದಲ ಹಂತದಲ್ಲಿ ತುಪ್ಪ:
ಹೊರ ದೇಶಗಳಲ್ಲಿ ಕೆಎಂಎಫ್ ಯಾವ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಇದೆ ಎನ್ನುವ ಬಗ್ಗೆ ಸರ್ವೆ ಮಾಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ನಂದಿನಿ ತುಪ್ಪ, ಬಟರ್ ಮತ್ತು ಚೀಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂದು ಮೂಲಗಳು ಖಚಿತಪಡಿಸಿವೆ. ಹಾಗಾಗಿ ಮೊದಲು ಈ ಉತ್ಪನ್ನಗಳಿಗೆ ಆದ್ಯತೆ ನೀಡಿ, ನಂತರದಲ್ಲಿ ಸಿಹಿ ಸೇರಿದಂತೆ ಇನ್ನುಳಿದ ಉತ್ಪನ್ನಗಳಿಗೆ ಮನ್ನಣೆ ನೀಡಲು ಉದ್ದೇಶಿಸಲಾಗಿದೆ.
ಇನ್ನೂ 500 ಔಟ್ ಲೆಟ್:
ಕೆಎಂಎಫ್ ಮಾರುಕಟ್ಟೆಯನ್ನು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಸ್ತರಿಸಲು ಯೋಜಿಸಿದಂತೆ ಈಗಾಗಲೇ ಆ ಯೋಜನೆಗೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 500 ಔಟ್‌ಲೆಟ್‌ಗಳಿಗೆ ಸಿಎಂ ಚಾಲನೆ ನೀಡಿದ್ದರು. ಇನ್ನು ಎರಡನೇ ಹಂತದಲ್ಲಿ ಇನ್ನೂ 500 ಔಟ್ ಲೆಟ್ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ಈ ಮೊದಲು ಇದ್ದ 2568 ಔಟ್‌ಲೆಟ್‌ಗಳ ಜೊತೆಗೆ ಈಗ 500 ಔಟ್ ಲೆಟ್‌ಗಳು ಸೇರುವುದರಿಂದ ಒಟ್ಟು ಔಟ್‌ಲೆಟ್‌ಗಳ ಸಂಖ್ಯೆ 3068ಕ್ಕೆ ಏರಿಕೆ ಆಗಿದೆ.
ಕೆಎಂಎಫ್ ಕೆಫೆಗಳು:
ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಮುಂಬಯಿ, ಹೈದರಾಬಾದ್, ದೆಹಲಿ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಭಾಗದಲ್ಲಿ ಕೆಫೆಗಳನ್ನು ಪ್ರಾರಂಭಿಸಲು ಕೆಎಂಎಫ್ ಮುಂದಾಗಿದೆ.
ನಿತ್ಯವೂ 1 ಕೋಟಿ ಲೀ. ಹಾಲು
ದಿನ ನಿತ್ಯವೂ ಕೆಎಂಎಫ್ ಬರುತ್ತಿರುವ ಹಾಲಿನ ಪ್ರಮಾಣ 1 ಕೋಟಿ ಲೀಟರ್ ದಾಟಿದೆ. ಕಳೆದ ವರ್ಷ ಒಂದೆರಡು ದಿನ ಮಾತ್ರವೇ 1 ಕೋಟಿ ಲೀಟರ್ ಹಾಲು ಬಂದಿತ್ತು. ಆದರೆ, ಈ ಬಾರಿ ಮೇ 23ರಿಂದಲೂ 1 ಕೋಟಿ ಲೀಟರ್‌ಗೂ ಹೆಚ್ಚು ಹಾಲು ಕೆಎಂಎ್ಗೆ ಬರುತ್ತಿದೆ. ಹಾಗಾಗಿ ಹಾಲು ಪೂರ್ಣ ಪ್ರಮಾಣದಲ್ಲಿ ಮಾರಾಟವಾಗದೆ ಉಳಿಕೆಯಾಗುತ್ತಿದೆ. ಹಾಗಾಗಿ ಮಾರುಕಟ್ಟೆ ಜಾಲ ವಿಸ್ತರಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಿ ಸಂಗ್ರಹಿಸಿಡುವ ಕೆಲಸವನ್ನು ಕೆಎಂಎಫ್ ಮಾಡುತ್ತಾ ಬಂದಿದೆ. ಆದರೆ, ಈ ಹಾಲಿನ ಪುಡಿಗೂ ಬೇಡಿಕೆ ಇಲ್ಲದ ಹೊತ್ತಿನಲ್ಲಿ ಬೆಲೆ ಕುಸಿತದಿಂದ ತೀವ್ರ ಸಮಸ್ಯೆಯನ್ನು ಎದುರಿಸಿದ್ದಿದೆ. ಆ ಕಾರಣಕ್ಕಾಗಿಯೇ ಹಾಲು ಮತ್ತು ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಕೆಎಂಎಫ್
ಅನಿವಾರ್ಯವಾಗಿದೆ.
ಆಕರ್ಷಣೀಯವಾದ ಔಟ್ ಲೆಟ್:
ಮುಂಚೆ ನಂದಿನಿ ಬೂತ್‌ಗಳ ಖಾಲಿ ಡಬ್ಬ ಮಾದರಿಯಲ್ಲಿದ್ದು, ಜನರನ್ನು ಆಕರ್ಷಣೆ ಮಾಡುತ್ತಿರಲಿಲ್ಲ. ಆ ಕಾರಣಕ್ಕಾಗಿಯೇ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಗ್ರಾಹಕರನ್ನು ಆಕರ್ಷಣೆ ಮಾಡುವ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಒಂದು ಔಟ್ ಲೆಟ್ ಪ್ರಾರಂಭ ಮಾಡಬೇಕೆಂದರೆ ಸುಮಾರು 10 ಲಕ್ಷ ರೂ ಬೇಕು. ಇದರಲ್ಲಿ 5 ಲಕ್ಷ ಸಬ್ಸಿಡಿಯನ್ನು ಕೆಎಂಎಫ್ ನೀಡುತ್ತಿದೆ. ಎಲ್‌ಇಡಿ ಬೋರ್ಡ್ ಅಳವಡಿಕೆ ಸೇರಿದಂತೆ ಆಕರ್ಷಣೀಯವಾಗಿ ಮಾಡಲು ಹಾಗೂ ಮತ್ತಿತರ ಅಗತ್ಯವಾದದ್ದನ್ನು ಅಲ್ಲಿಗೆ ಅಳವಡಿಸಲು ಇನ್ನು ಎರಡರಿಂದ ಮೂರು ಲಕ್ಷ ರೂ ಆಗಲಿದೆ.
1100 ಟನ್ ಸ್ವೀಟ್ ಮಾರಾಟ ದಾಖಲೆ:
ಕೆಎಂಎಫ್ ನವರಾತ್ರಿಯ ಸಂದರ್ಭದಲ್ಲಿ 700 ಮೆಟ್ರಿಕ್ ಟನ್ ಸ್ವೀಟ್ ಮಾರಾಟ ಮಾಡಿದ್ದು ದಾಖಲೆ ಆಗಿತ್ತು. ಕೆಎಂಎಫ್ ತನ್ನೆಲ್ಲ ಔಟ್‌ಲೆಟ್‌ಗಳ ಮೂಲಕ ನಂದಿನಿ ಉತ್ಪನ್ನಗಳಲ್ಲಿ ಒಂದು ಸಾವಿರ ಟನ್ ಸ್ವೀಟ್ ಮಾರಾಟ ಮಾಡಲು ಯೋಜಿಸಿದ್ದರಿಂದ 1100 ಟನ್ ಮಾರಾಟ ಮಾಡಲು ಸಾಧ್ಯವಾಗಿದ್ದು, ಇದು ಹೊಸ ದಾಖಲೆಯಾಗಿದೆ.

ಕೆಎಂಎಫ್ ಉತ್ಪನ್ನಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಮೆಗಾ ಯೋಜನೆ ಸಿದ್ಧಪಡಿಸಲಾಗಿದೆ. ಹೊಸ ವರ್ಷದ ಹೊತ್ತಿಗೆ ಈ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಹೊಸದಾಗಿ 500 ಔಟ್‌ಲೆಟ್ ಪ್ರಾರಂಭ ಮಾಡಿರುವುದು ಯಶಸ್ವಿ ಯೋಜನೆಯಾಗಿ ಹೊರ ಹೊಮ್ಮಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net