ಮುಸ್ಲಿಂ ಬಾಹುಳ್ಯದ ಯುರೋಪ್​

ಯುರೋಪ್ ರಾಷ್ಟ್ರಗಳ ವಲಸೆ ನೀತಿ ಹಾಗೂ ಜನಸಂಖ್ಯಾ ಬದಲಾವಣೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಟ್ರಂಪ್, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಐರೋಪ್ಯ ಸಂಸ್ಕೃತಿ ಮತ್ತು ಅಸ್ಮಿತೆಗೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದ್ದಾರೆ.
ಮುಸ್ಲಿಂ ಬಾಹುಳ್ಯದ ಯುರೋಪ್​
Published on: 

ಯುರೋಪ್​: ಪಾಶ್ಚಿಮಾತ್ಯ ಜಗತ್ತಿನಲ್ಲಿ, ವಿಶೇಷವಾಗಿ ಯುರೋಪ್ ಒಕ್ಕೂಟದ ಪ್ರಮುಖ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಜನಸಂಖ್ಯಾ ಬದಲಾವಣೆಗಳು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಗಮನ ಸೆಳೆದಿವೆ. ‘ಫ್ರಾನ್ಸ್ ಶೀಘ್ರದಲ್ಲೇ ಮುಸ್ಲಿಂ ಬಹುಸಂಖ್ಯಾತ ದೇಶವಾಗಲಿದೆ’ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಯುರೋಪ್ ರಾಷ್ಟ್ರಗಳ ವಲಸೆ ನೀತಿ ಹಾಗೂ ಜನಸಂಖ್ಯಾ ಬದಲಾವಣೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಟ್ರಂಪ್, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಐರೋಪ್ಯ ಸಂಸ್ಕೃತಿ ಮತ್ತು ಅಸ್ಮಿತೆಗೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದ್ದಾರೆ. ವಾಸ್ತವವಾಗಿ, ಕಳೆದ ಕೆಲ ದಶಕಗಳಿಂದ ಪಶ್ಚಿಮ ಮತ್ತು ಉತ್ತರ ಯುರೋಪ್ ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಆ ದೇಶಗಳಲ್ಲಿ ಸಂಘರ್ಷಕ್ಕೂ ಕಾರಣವಾಗಿದೆ. ಈ ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣಗಳೇನು? ಮುಸ್ಲಿಂ ಜನಸಂಖ್ಯೆ ಹೆಚ್ಚಳದಿಂದ ಆಗಿರುವ ಪರಿಣಾಮಗಳೇನು? ಈ ಕುರಿತಾದ ವಿವರ ಇಲ್ಲಿದೆ.

ಫ್ರಾನ್ಸ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಭುಗಿಲೆದ್ದಿರುವ ತೀವ್ರ ಹಿಂಸಾಚಾರದ ಘಟನೆಗಳ ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಹರಸಾಹಸ ಪಡುತ್ತಿದೆ. ಈ ನಡುವೆ, ಯುರೋಪಿಯನ್ ದೇಶವಾದ ಫ್ರಾನ್ಸ್​ನ ಒಟ್ಟು ಜನಸಂಖ್ಯೆಯಲ್ಲಿ ಯಾವ ಧರ್ಮವನ್ನು ಪಾಲಿಸುವವರು ಎಷ್ಟಿದ್ದಾರೆ ಮತ್ತು ಅಲ್ಲಿ ಮುಸ್ಲಿಂ ಸಮುದಾಯದ ನೈಜ ಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳುವುದು ಕುತೂಹಲಕಾರಿಯಾಗಿದೆ. ಫ್ರಾನ್ಸ್​ನ ಒಟ್ಟು ಜನಸಂಖ್ಯೆ 6.88 ಕೋಟಿ. ವಿವಿಧ ಸಾಮಾಜಿಕ ಸಮೀಕ್ಷೆಗಳ ಪ್ರಕಾರ, ಈ ದೇಶದ ಬಹುಸಂಖ್ಯಾತ ಜನರು, ಅಂದರೆ 53 ಪ್ರತಿಶತದಷ್ಟು ಮಂದಿ ಯಾವುದೇ ಧರ್ಮವನ್ನು ನಂಬುವುದಿಲ್ಲ ಹಾಗೂ ತಮ್ಮನ್ನು ನಾಸ್ತಿಕರು ಅಥವಾ ಧರ್ಮರಹಿತ ವರ್ಗದಲ್ಲಿ ಗುರುತಿಸಿಕೊಳ್ಳುತ್ತಾರೆ.

ಇದರ ನಂತರ ಎರಡನೇ ಸ್ಥಾನದಲ್ಲಿ ಕ್ರಿಶ್ಚಿಯನ್ ಸಮುದಾಯವಿದ್ದು, ಇದರಲ್ಲಿ ಮುಖ್ಯವಾಗಿ ರೋಮನ್ ಕ್ಯಾಥೋಲಿಕರು ಸೇರಿದ್ದಾರೆ ಮತ್ತು ಇವರ ಜನಸಂಖ್ಯೆ 25ರಿಂದ 34 ಪ್ರತಿಶತದಷ್ಟಿದೆ. ಅದೇ ಸಮಯದಲ್ಲಿ, ಫ್ರಾನ್ಸ್​ನಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವವರು ಒಟ್ಟು ಜನಸಂಖ್ಯೆಯ 10 ಪ್ರತಿಶತದಷ್ಟಿದ್ದಾರೆ, ಇವರ ಸಂಖ್ಯೆ ಸುಮಾರು 60 ಲಕ್ಷದಷ್ಟಾಗುತ್ತದೆ. ಇದಲ್ಲದೆ ಬೌದ್ಧ ಮತ್ತು ಯಹೂದಿ ಧರ್ಮದ ಜನರು 0.5 ಪ್ರತಿಶತ ಹಾಗೂ ಹಿಂದೂ ಮತ್ತು ಸಿಖ್​ರಂತಹ ಇತರ ಅಲ್ಪಸಂಖ್ಯಾತರು ಶೇಕಡ ಒಂದಕ್ಕಿಂತ ಕಡಿಮೆ ಇದ್ದಾರೆ.

ಮುಸ್ಲಿಂರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣಗಳು...

1. ಮಧ್ಯಪ್ರಾಚ್ಯದ ಸಿರಿಯಾ, ಇರಾಕ್​ನಲ್ಲಿ ಮತ್ತು ಉತ್ತರ ಆಫ್ರಿಕಾದ ಮೊರಾಕೊ, ಅಲ್ಜೀರಿಯಾ, ಟ್ಯುನೇಶಿಯಾದಲ್ಲಿ ರಾಜಕೀಯ ಅಸ್ಥಿರತೆ ಹಾಗೂ ಆಂತರಿಕ ಸಂಘರ್ಷಗಳಿಂದಾಗಿ ಲಕ್ಷಾಂತರ ಜನರು ಯುರೋಪ್​ಗೆ ಆಶ್ರಯ ಅರಸಿ ಬಂದಿದ್ದಾರೆ.

2. ಯುರೋಪ್​ನಲ್ಲಿ ಮುಸ್ಲಿಂ ಮಹಿಳೆಯರ ಸರಾಸರಿ ಫಲವತ್ತತೆ ದರವು ಪ್ರತಿ ಮಹಿಳೆಗೆ 2.6 ಮಕ್ಕಳಷ್ಟಿದ್ದರೆ, ಮುಸ್ಲಿಮೇತರ ಮಹಿಳೆಯರಲ್ಲಿ ಈ ದರವು ಕೇವಲ 1.6ರಷ್ಟಿದೆ. ಇದಲ್ಲದೆ, ಯುರೋಪ್​ನಲ್ಲಿ ಮುಸ್ಲಿಮರ ಸರಾಸರಿ ವಯಸ್ಸು 30.4 ವರ್ಷಗಳಾಗಿದ್ದರೆ, ಇತರ ಯುರೋಪಿಯನ್ನರ ಸರಾಸರಿ ವಯಸ್ಸು 43.8 ವರ್ಷಗಳಾಗಿದೆ. ಇದರರ್ಥ ಮುಸ್ಲಿಂ ಸಮುದಾಯದ ಒಂದು ದೊಡ್ಡ ವರ್ಗವು ಪ್ರಸ್ತುತ ಮಕ್ಕಳನ್ನು ಪಡೆಯುವ ವಯಸ್ಸಿನಲ್ಲಿದೆ ಅಥವಾ ಶೀಘ್ರದಲ್ಲೇ ಆ ಹಂತವನ್ನು ಪ್ರವೇಶಿಸಲಿದೆ. ಇದು ಜನಸಂಖ್ಯೆಯ ಬೆಳವಣಿಗೆಗೆ ನಿರಂತರ ವೇಗವನ್ನು ನೀಡುತ್ತದೆ. ಯುರೋಪ್​ನ ಸ್ಥಳೀಯ ಜನಸಂಖ್ಯೆ ವಯೋವೃದ್ಧರಾಗುತ್ತಿದ್ದರೆ, ವಲಸೆ ಬಂದ ಸಮುದಾಯಗಳಲ್ಲಿ ದುಡಿಯುವ ಹಾಗೂ ಸಂತಾನೋತ್ಪತ್ತಿಯ ವಯಸ್ಸಿನ ಯುವಕರ ಪ್ರಮಾಣ ಹೆಚ್ಚಾಗಿದೆ.

ಪಶ್ಚಿಮ ಯುರೋಪ್​ನಲ್ಲೇ ಅತಿ ಹೆಚ್ಚು

ಫ್ರಾನ್ಸ್​ನಲ್ಲಿ ವಾಸಿಸುವ ಮುಸ್ಲಿಂ ಸಮುದಾಯವು ಗಾತ್ರ ಮತ್ತು ಪ್ರಭಾವದ ದೃಷ್ಟಿಯಿಂದ ಪಶ್ಚಿಮ ಯುರೋಪ್​ನಲ್ಲೇ ಅತಿ ದೊಡ್ಡದು ಎಂದು ಪರಿಗಣಿಸಲಾಗಿದೆ. ಈ ಸಮುದಾಯದ ಬಹುತೇಕ ಜನರು ನೇರವಾಗಿ ಅಲ್ಜೀರಿಯಾ, ಮೊರಾಕೊ ಮತ್ತು ಟ್ಯುನೇಶಿಯಾದಂತಹ ಉತ್ತರ ಆಫ್ರಿಕಾದ ದೇಶಗಳಿಂದ ದಶಕಗಳ ಹಿಂದೆ ಬಂದ ವಲಸಿಗರ ವಂಶಸ್ಥರಾಗಿದ್ದಾರೆ. ಕಾಲಾನಂತರದಲ್ಲಿ ಈ ಕುಟುಂಬಗಳು ಫ್ರಾನ್ಸ್​ನ ಮುಖ್ಯವಾಹಿನಿಯ ಸಂಸ್ಕೃತಿಯಲ್ಲಿ ಬೆರೆತುಹೋದರೂ, ತಮ್ಮ ಸಾಂಸ್ಕೃತಿಕ ಮತ್ತು ಧಾರ್ವಿುಕ ಗುರುತನ್ನು ಸಹ ಕಾಪಾಡಿಕೊಂಡು ಬಂದಿವೆ. ಇದು ಅನೇಕ ಬಾರಿ ಸಾಮಾಜಿಕ ಚರ್ಚೆಗಳ-ಘರ್ಷಣೆಗಳ ಕೇಂದ್ರಬಿಂದುವಾಗುತ್ತದೆ. ಪಾಶ್ಚಿಮಾತ್ಯ ದೇಶಗಳಾದ ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿಯೂ ಆರ್ಥಿಕ, ಶೈಕ್ಷಣಿಕ ಹಾಗೂ ವಲಸೆಯ ಪರಿಣಾಮವಾಗಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದೆ. ಫ್ರಾನ್ಸ್ ನಂತಹ ದೇಶಗಳು ತೀವ್ರವಾದ ಜಾತ್ಯತೀತತೆಯನ್ನು (ಲೈಸಿಟೆ- ಔಚ್ಚಜಿಠಿ) ಪಾಲಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ವಿುಕ ಚಿಹ್ನೆಗಳು, ಹಿಜಾಬ್, ಬುರ್ಖಾ ಮುಂತಾದವುಗಳ ನಿರ್ಬಂಧವು ಅಸ್ಮಿತೆಯ ಸಂಘರ್ಷಗಳಿಗೆ ಕಾರಣವಾಗಿದೆ.

ದೊಡ್ಡ ನಗರಗಳ ಉಪನಗರಗಳಲ್ಲಿ ವಲಸಿಗರು ಪ್ರತ್ಯೇಕ ಗುಂಪುಗಳಾಗಿ ವಾಸಿಸುತ್ತಿರುವುದು, ಉದ್ಯೋಗಾವಕಾಶಗಳ ಕೊರತೆ ಮತ್ತು ಶಿಕ್ಷಣದ ಅಂತರಗಳು ಸಾಮಾಜಿಕ ಅಸಮಾಧಾನವನ್ನು ಹೆಚ್ಚಿಸಿವೆ. ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ಮತ್ತು ಇಡೀ ಯುರೋಪಿಯನ್ ಒಕ್ಕೂಟವು ಗಡಿ ನಿಯಂತ್ರಣ, ಅಕ್ರಮ ವಲಸೆ ತಡೆ ಮತ್ತು ಗಡಿಪಾರು ಪ್ರಕ್ರಿಯೆಗಳನ್ನು ಬಿಗಿಗೊಳಿಸುವ ಹೊಸ ನೀತಿಗಳನ್ನು ಜಾರಿಗೆ ತರುತ್ತಿವೆ. 2024ರ ವರದಿಯೊಂದರ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ್ದ 76% ಮುಸ್ಲಿಮರು ಧರ್ಮವು ತಮ್ಮ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರೆ, 24% ಜನರು ಇದನ್ನು ಸ್ವಲ್ಪ ಮಟ್ಟಿಗೆ ಮಹತ್ವದ್ದು ಎಂದು ಪರಿಗಣಿಸಿದ್ದಾರೆ. ಅದೇ ಸಮಯದಲ್ಲಿ, ಫ್ರಾನ್ಸ್​ನ ಸಾಗರೋತ್ತರ ಪ್ರದೇಶವಾದ ಮಯೊಟ್ಟೆಯಲ್ಲಿ 97%ರಷ್ಟು ಜನಸಂಖ್ಯೆ ಮುಸ್ಲಿಮರದ್ದಾಗಿದೆ. ಐಎನ್​ಎಸ್​ಇಇ ಸಂಸ್ಥೆಯ ಪ್ರಕಾರ, 2024ರಲ್ಲಿ ಫ್ರಾನ್ಸ್​ನಲ್ಲಿ 76.15 ಲಕ್ಷ ವಲಸಿಗರು ನೆಲೆಸಿದ್ದಾರೆ.

ಫ್ರಾನ್ಸ್​ನ ಪ್ರಸ್ತುತ ಸ್ಥಿತಿಗತಿ

1. ಪ್ರಸ್ತುತ ಫ್ರಾನ್ಸ್​ನಲ್ಲಿ ಮುಸ್ಲಿಂ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸರಿಸುಮಾರು 10% ರಷ್ಟಿದೆ. (60 ಲಕ್ಷ ಜನರು). ಫ್ರಾನ್ಸ್​ನ ಸಂವಿಧಾನ ಮತ್ತು ಕಾನೂನುಗಳು ಧರ್ಮ ಅಥವಾ ಜನಾಂಗ ಆಧಾರಿತ ಜನಗಣತಿಯನ್ನು ನಿರ್ಬಂಧಿಸುವುದರಿಂದ, ಈ ಅಂಕಿ-ಅಂಶಗಳು ಸ್ವತಂತ್ರ ಸಂಸ್ಥೆಗಳ ಅಧ್ಯಯನಗಳನ್ನು ಆಧರಿಸಿವೆ.

2. ಜರ್ಮನಿ ಜನಸಂಖ್ಯೆಯ 6.5%ರಿಂದ 7%ರಷ್ಟು ಮುಸ್ಲಿಂ ಜನಸಂಖ್ಯೆ. ಟರ್ಕಿ ಮೂಲದವರು ಮತ್ತು ಇತ್ತೀಚಿನ ಸಿರಿಯನ್ ನಿರಾಶ್ರಿತರರಿಂದ ಮುಸ್ಲಿಂ ಜನಸಂಖ್ಯೆ ಹೆಚ್ಚಳಗೊಂಡಿದೆ.

3. ಯುನೈಟೆಡ್ ಕಿಂಗ್​ಡಮ್ ಅಂದರೆ ಬ್ರಿಟನ್​ನಲ್ಲಿ ದಕ್ಷಿಣ ಏಷ್ಯಾದ ವಲಸಿಗರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದು, ಇಲ್ಲಿನ ಜನಸಂಖ್ಯೆಯ ಪೈಕಿ 6.5%ರಷ್ಟು ಮುಸ್ಲಿಮರು.

4. ಸ್ವೀಡನ್ ಮತ್ತು ಬೆಲ್ಜಿಯಂನಲ್ಲಿ 7%ರಿಂದ 9% ಜನಸಂಖ್ಯೆ ಮುಸ್ಲಿಮರದ್ದು.

5. ಫ್ರಾನ್ಸ್​ನಲ್ಲಿ 18ರಿಂದ 59 ವರ್ಷ ವಯಸ್ಸಿನ 10% ಜನರು ಮುಸ್ಲಿಮರಾಗಿದ್ದಾರೆ.

6. 2024ರಲ್ಲಿ ಫ್ರಾನ್ಸ್​ನ ಒಟ್ಟು ಜನಸಂಖ್ಯೆಯಲ್ಲಿ ವಲಸಿಗರ ಪಾಲು 11.2% ಆಗಿತ್ತು.

7. ಫ್ರಾನ್ಸ್​ನಲ್ಲಿ 2050ರ ವೇಳೆಗೆ ಮುಸ್ಲಿಂ ಜನಸಂಖ್ಯೆಯು ಶೇಕಡ 18ಕ್ಕೆ ತಲುಪಬಹುದು ಎಂದು ಪ್ಯೂ ರಿಸರ್ಚ್ ಸಂಸ್ಥೆಯು ಅಂದಾಜಿಸಿದೆ.

8. 2050ರ ವೇಳೆಗೆ ಯುರೋಪ್​ನಲ್ಲಿ ಮುಸ್ಲಿಂ ಜನಸಂಖ್ಯೆಯು ಶೇಕಡ 14ಕ್ಕೆ ಅಂದರೆ 7.5 ಕೋಟಿಗೆ ತಲುಪುವ ಸಾಧ್ಯತೆಯಿದೆ.

9. ಸ್ವೀಡನ್​ನಲ್ಲಿ 2016ರಲ್ಲಿ ಮುಸ್ಲಿಂ ಜನಸಂಖ್ಯೆ 8.1%ರಷ್ಟಿತ್ತು. 2050ರ ವೇಳೆಗೆ ಶೇ.30ಕ್ಕೆ ಏರಿಕೆ ಸಾಧ್ಯತೆ ಇದೆ.

10. ರಷ್ಯಾದಲ್ಲೂ ಇಸ್ಲಾಂ ಧರ್ಮವು ವೇಗವಾಗಿ ಬೆಳೆದಿದೆ. ಈ ದೇಶದ ಒಟ್ಟು ಜನಸಂಖ್ಯೆ 14.6 ಕೋಟಿಯಾಗಿದ್ದು, ಇದರಲ್ಲಿ 7ರಿಂದ 10 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಅಂದರೆ ರಷ್ಯಾದಲ್ಲಿ ಸರಿಸುಮಾರು ಎರಡೂವರೆ ಕೋಟಿ ಮುಸ್ಲಿಮರು ನೆಲೆಸಿದ್ದಾರೆ. ಆದರೆ, 2050ರ ಹೊತ್ತಿಗೆ ಈ ಸಂಖ್ಯೆ 18 ಕೋಟಿಗೆ ತಲುಪುವ ಸಾಧ್ಯತೆ ಇದೆ.

ಸಂಶೋಧನಾ ವರದಿಗಳು ಏನು ಹೇಳುತ್ತವೆ?

ಅಮೆರಿಕದ ಪ್ರತಿಷ್ಠಿತ ಜನಸಂಖ್ಯಾ ಸಂಶೋಧನಾ ಸಂಸ್ಥೆ ಪ್ಯೂ ರಿಸರ್ಚ್ ಸೆಂಟರ್ ಯುರೋಪ್​ನ 2050ರ ಜನಸಂಖ್ಯಾ ಪ್ರಕ್ಷೇಪಣೆಯ ಕುರಿತು ವಿಸõತ ವರದಿಯನ್ನು ಪ್ರಕಟಿಸಿದೆ. ಈ ವರದಿಯು ಮೂರು ಸನ್ನಿವೇಶಗಳನ್ನು ಊಹಿಸಿದೆ.

ಶೂನ್ಯ ವಲಸೆ: ಇಂದಿನಿಂದಲೇ ಸಂಪೂರ್ಣ ವಲಸೆ ನಿಂತರೂ, ಯುವ ವಯೋಮಾನದ ಕಾರಣದಿಂದ ಫ್ರಾನ್ಸ್​ನಲ್ಲಿ 2050ರ ವೇಳೆಗೆ ಮುಸ್ಲಿಂ ಜನಸಂಖ್ಯೆ 12.7%ಕ್ಕೆ ತಲುಪಬಹುದು.

ಮಧ್ಯಮ ವಲಸೆ: ಆರ್ಥಿಕ ಅಥವಾ ಶೈಕ್ಷಣಿಕ ವಲಸೆ ಮುಂದುವರಿದರೆ, ಫ್ರಾನ್ಸ್​ನಲ್ಲಿ ಇದು 17%ರಿಂದ 18%ಕ್ಕೆ ತಲುಪುವ ಸಾಧ್ಯತೆಯಿದೆ.

ಹೆಚ್ಚಿನ ವಲಸೆ: 2015-16ರ ನಿರಾಶ್ರಿತರ ಬಿಕ್ಕಟ್ಟಿನಂತೆ ಸತತವಾಗಿ ಗರಿಷ್ಠ ವಲಸೆ ಮುಂದುವರಿದರೆ, ಫ್ರಾನ್ಸ್​ನಲ್ಲಿ ಈ ಪ್ರಮಾಣ ಗರಿಷ್ಠ 18%ರಿಂದ 20%ಕ್ಕೆ ತಲುಪಬಹುದು ಸ್ವೀಡನ್​ನಲ್ಲಿ ಇದು 20%ರಿಂದ 30%ಕ್ಕೆ ತಲುಪಬಹುದು.

2050ರ ಹೊತ್ತಿಗೆ ಯುರೋಪ್​ನ ಸ್ಥಿತಿ

ದೇಶ ಮುಸ್ಲಿಮರ ಜನಸಂಖ್ಯೆ

ಸ್ವೀಡನ್- 31.6%

ಆಸ್ಟ್ರಿಯಾ- 19.8%

ಜರ್ಮನಿ -19.4%

ಬೆಲ್ಜಿಯಂ- 18.2%

ಫ್ರಾನ್ಸ್- 18%

ಬ್ರಿಟನ್- 17.2%

ನಾರ್ವೆ- 17%

ಡೆನ್ಮಾರ್ಕ್- 16%

ನೆದರ್​ಲ್ಯಾಂಡ್- 15.2%

ಫಿನ್​ಲ್ಯಾಂಡ್- 15%

(ಆಧಾರ: ವಲಸೆ ಪ್ರಮಾಣ ಕುರಿತ ಪ್ಯೂ ರಿಸರ್ಚ್ ಸೆಂಟರ್ನ ವರದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net