ಬುಲೆಟ್ ರೈಲು ವಿಳಂಬಕ್ಕೆ ಭಾರತವೇ ಹೊಣೆ: ಜಪಾನ್ ಮಾಜಿ ಸಚಿವ ಗಂಭೀರ ಆರೋಪ! ಕೇಂದ್ರ ತಿರುಗೇಟು

ಮುಂಬೈ-ಅಹಮದಾಬಾದ್​ ಬುಲೆಟ್​ ರೈಲು ವಿಳಂಬ ಆರೋಪ
ಮುಂಬೈ-ಅಹಮದಾಬಾದ್​ ಬುಲೆಟ್​ ರೈಲು ವಿಳಂಬ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಬುಲೆಟ್ ರೈಲು ವಿಳಂಬಕ್ಕೆ ಭಾರತವೇ ಹೊಣೆ
  • ಜಪಾನಿನ ಮಾಜಿ ಸಚಿವರ ಗಂಭೀರ ಆರೋಪ
  • ಹಿದೇಕಿ ಮಕಿಹರಾ ಆರೋಪ ನಿರಾಕರಿಸಿದ ಕೇಂದ್ರ
ಟೋಕಿಯೋ: ಬಹುನಿರೀಕ್ಷಿತ ಭಾರತದ ಮೊದಲ ಮುಂಬೈ-ಅಹಮದಾಬಾದ್ ಬುಲೆಟ್ ರೈಲು (Mumbai-Ahmedabad Bullet Train) ಯೋಜನೆಗೆ ಸಂಬಂಧಿಸಿದಂತೆ ಜಪಾನ್‌ನ ಮಾಜಿ ಕಾನೂನು ಸಚಿವ ಹಿದೇಕಿ ಮಕಿಹರಾ ಆಡಿರುವ ಮಾತುಗಳು ಸದ್ಯ ದೇಶದ ರಾಜಕೀಯ ಮತ್ತು ರಾಜತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಹಾಗೂ ಟೀಕೆಗಳಿಗೆ ಸಾಕ್ಷಿಯಾಗಿದೆ.
ಟೋಕಿಯೋದ 'ಟೊಯೊ ಕೀಜೈ ಆನ್‌ಲೈನ್' ಪತ್ರಿಕೆಯಲ್ಲಿ ಹಿರಿಯ ರೈಲ್ವೆ ಇಂಜಿನಿಯರ್ ಇಸಾವೊ ತ್ಸುಜಿಮುರಾ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯಿಸಿದ ಹಿದೇಕಿ ಮಕಿಹರಾ, ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಭಾರತಕ್ಕೆ ತಲುಪಬೇಕಿದ್ದ ಬುಲೆಟ್​ ರೈಲಿಗೆ ಸಂಬಂಧಿಸಿದಂತೆ ಕೆಲವು ಆತಂಕಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಭಾರತೀಯ ಅಧಿಕಾರಿಗಳೊಂದಿಗೆ ನಡೆದ ಅಂತಾರಾಷ್ಟ್ರೀಯ ಸಭೆಗಳಲ್ಲಿ ನಿರಂತರ ಬೇಜವಾಬ್ದಾರಿ ಕಂಡುಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ತಾವು ನೀಡಿದ ಭರವಸೆಗಳನ್ನು ಉಳಿಸಿಕೊಳ್ಳದೆ, ಕೇವಲ ತಮ್ಮ ಸ್ವಂತ ಹಿತಾಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಈ ಯೋಜನೆ ವಿಳಂಬಕ್ಕೆ ಭಾರತವೇ ನೇರ ಹೊಣೆ ಎಂದು ಕೇಂದ್ರ ಸರ್ಕಾರದತ್ತ ಬೆರಳು ಮಾಡಿ ತೋರಿಸಿದ್ದಾರೆ.

ಆರೋಪ ತಳ್ಳಿಹಾಕಿದ ಕೇಂದ್ರ ಸರ್ಕಾರ

ಜಪಾನ್ ಮಾಜಿ ಸಚಿವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, ಜಪಾನ್ ನಡುವೆ ಯೋಜನೆಯ ಕುರಿತು ಸಕಾರಾತ್ಮಕ ಚರ್ಚೆಗಳು ಮುಂದುವರಿದಿವೆ. ಪ್ರಸ್ತುತ ನಿರ್ಮಾಣ ಕಾಮಗಾರಿಗಳು ಹಿಂದೆಂದಿಗಿಂತಲೂ ಅತ್ಯಂತ ವೇಗವಾಗಿ ಪ್ರಗತಿಯಲ್ಲಿವೆ ಮತ್ತು ಹಲವು ಪ್ರಮುಖ ಮೈಲಿಗಲ್ಲುಗಳನ್ನು ಈಗಾಗಲೇ ತಲುಪಿದ್ದೇವೆ. ಜಪಾನ್ ಅಭಿವೃದ್ಧಿಪಡಿಸುತ್ತಿರುವ ಹೊಸ ಪೀಳಿಗೆಯ E10 ಶಿಂಕನ್ಸೆನ್ ರೈಲುಗಳು 2030ರ ಆರಂಭಕ್ಕೂ ಮುನ್ನವೇ ಲಭ್ಯವಾಗಲಿದೆ. ಅಲ್ಲಿಯವರೆಗೆ ಭಾರತೀಯ ಹೈ-ಸ್ಪೀಡ್ ರೈಲುಗಳ ಮೂಲಕ ಸೇವೆಗಳನ್ನು ಪ್ರಾರಂಭಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

ಕಾಂಗ್ರೆಸ್ ಟೀಕೆ

ಜಪಾನ್ ಮಾಜಿ ಸಚಿವರ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸಂಸದ ಪವನ್ ಖೇರಾ ಮಾತನಾಡಿ, "ಶಿಂಕನ್ಸೆನ್ ಯೋಜನೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದ ಜಪಾನ್‌ನ ಮಾಜಿ ಸಚಿವರ ಹೇಳಿಕೆಗಳು ತೀವ್ರ ಕಳವಳಕಾರಿ. ಜಪಾನ್ ಪ್ರಧಾನಿ ಭೇಟಿಯ ನಂತರವೂ ಯೋಜನೆ ವೇಗ ಪಡೆದುಕೊಂಡಿಲ್ಲ ಎಂಬುದು ಗಮನಾರ್ಹ. ಅಲ್ಲದೆ, ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಜಪಾನ್ ಅನ್ನು ಮೂಲೆಗುಂಪು ಮಾಡಲಾಗಿದೆ" ಎಂದು ಟೀಕಿಸಿದ್ದಾರೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ

  • ಒಟ್ಟು ಉದ್ದ: 508 ಕಿಮೀ
  • ಪ್ಲಾಟ್​ಫಾರ್ಮ್​: ಒಟ್ಟು 12 ನಿಲ್ದಾಣಗಳು
  • ವೇಗ: ಕಾರ್ಯಾಚರಣೆಯ ಗರಿಷ್ಠ ವೇಗ ಗಂಟೆಗೆ 320 ಕಿಮೀ
  • ಸಮಯ ಉಳಿತಾಯ: ಈಗಿರುವ 8 ಗಂಟೆಗಳ ಪ್ರಯಾಣದ ಅವಧಿ 2 ಗಂಟೆಗಳಿಗೆ ಇಳಿಕೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net