ಮುಖದಲ್ಲಿ ಸುಟ್ಟಗಾಯ, ಪ್ಲಾಸ್ಟಿಕ್ ಸರ್ಜರಿ ಅನಿವಾರ್ಯ!... ಮಾತನಾಡಲು ಪರದಾಡುತ್ತಿದ್ದಾರಂತೆ ಇರಾನ್ ನಾಯಕ ಮೊಜ್ತಬಾ! | Mojtaba Khamenei

Mojtaba Khamenei | ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ
Mojtaba Khamenei | ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ
Published on
Mojtaba Khamenei: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಸ್ತುತ ಜೀವಂತವಾಗಿದ್ದಾರೆ ಮತ್ತು ಪ್ರಜ್ಞಾವಸ್ಥೆಯಲ್ಲಿದ್ದಾರೆ. ಆದರೆ, ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದು, ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮೊಜ್ತಬಾ ಅವರು ಪ್ರಸ್ತುತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕಟ್ಟುನಿಟ್ಟಿನ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಇರುವ ಹಿರಿಯ ಅಧಿಕಾರಿಗಳ ಪ್ರಕಾರ, ಖಮೇನಿಯ ಒಂದು ಕಾಲಿಗೆ ಈಗಾಗಲೇ ಮೂರು ಶಸ್ತ್ರಚಿಕಿತ್ಸೆಗಳು ನಡೆದಿವೆ ಮತ್ತು ಪ್ರಸ್ತುತ ಕೃತಕ ಅಂಗದ (Prosthetic leg) ಜೋಡಣೆಗಾಗಿ ಅವರು ಕಾಯುತ್ತಿದ್ದಾರೆ. ಜೊತೆಗೆ ಅವರ ಒಂದು ಕೈಗೂ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅದು ಕೂಡ ಕ್ರಮೇಣ ಸುಧಾರಿಸುತ್ತಿದೆ. ಮುಖ ಮತ್ತು ತುಟಿಗಳಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದು, ಇದರಿಂದ ಮಾತನಾಡುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎಂದು ವರದಿಗಳು ತಿಳಿಸಿವೆ.
ತಮ್ಮ ದೈಹಿಕ ಸ್ಥಿತಿ ಮತ್ತು ಭದ್ರತೆಯ ದೃಷ್ಟಿಯಿಂದ ಮೊಜ್ತಬಾ ಖಮೇನಿ ಇತರ ನಾಯಕರನ್ನು ಭೇಟಿಯಾಗುತ್ತಿಲ್ಲ. ಐಆರ್‌ಜಿಸಿಯ ಹಿರಿಯ ಕಮಾಂಡರ್‌ಗಳು ಅಥವಾ ಉನ್ನತ ಸರ್ಕಾರಿ ಅಧಿಕಾರಿಗಳಿಗೂ ಅವರನ್ನು ನೇರವಾಗಿ ಭೇಟಿಯಾಗಲು ಅವಕಾಶವಿಲ್ಲ. ಇತ್ತ ಇರಾನ್​ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸ್ವತಃ ಹೃದಯ ಶಸ್ತ್ರಚಿಕಿತ್ಸಕರಾಗಿರುವುದರಿಂದ, ಆರೋಗ್ಯ ಸಚಿವರೊಂದಿಗೆ ಸೇರಿ ಮೊಜ್ತಬಾ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಆಡಳಿತಾತ್ಮಕ ಸಂವಹನಕ್ಕಾಗಿ ಅತ್ಯಂತ ವಿವೇಚನಾಪೂರ್ಣ ಮತ್ತು ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸುತ್ತಿದ್ದು, ಅವರ ಸಂದೇಶಗಳನ್ನು ಕೈಬರಹದ ಮೂಲಕ ಬರೆದು, ಮೊಹರು ಮಾಡಿದ ಲಕೋಟೆಗಳಲ್ಲಿ ವಿಶ್ವಾಸಾರ್ಹ ಕೊರಿಯರ್‌ಗಳ ಸರಪಳಿಯ ಮೂಲಕ ರಸ್ತೆಯ ಮಾರ್ಗವಾಗಿ ರವಾನಿಸಲಾಗುತ್ತದೆ. ಇದೇ ವಿಧಾನದ ಮೂಲಕ ಅಧಿಕಾರಿಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ.

ಆಡಳಿತ ಮತ್ತು ನಿರ್ಧಾರಗಳ ಮೇಲೆ ಪ್ರಭಾವ...

ಚಾಥಮ್ ಹೌಸ್‌ನ ಸನಮ್ ವಕೀಲ್ ಪ್ರಕಾರ, ಮೊಜ್ತಬಾ ಖಮೇನಿ ಪ್ರಸ್ತುತ ಇರಾನ್‌ನ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿಲ್ಲ. ಅವರು ಔಪಚಾರಿಕವಾಗಿ ಪ್ರಮುಖ ನಿರ್ಧಾರಗಳಿಗೆ ಸಹಿ ಹಾಕುತ್ತಿದ್ದರೂ, ಹೆಚ್ಚಿನ ನಿರ್ಧಾರಗಳನ್ನು ಈಗಾಗಲೇ ಮಿಲಿಟರಿ ನಾಯಕರು ಮತ್ತು ಅಧಿಕಾರಿಗಳು ಅಂತಿಮಗೊಳಿಸಿರುತ್ತಾರೆ.
ಇತ್ತೀಚೆಗೆ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, ವಾಷಿಂಗ್ಟನ್‌ನ ಪರಮಾಣು ಪ್ರಸ್ತಾವನೆಗೆ ಸಂಬಂಧಿಸಿದಂತೆ ಖಮೇನಿ ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ ಎಂದು ಹೇಳಿದ್ದಾರಾದರೂ, ಅವರ ದೈಹಿಕ ಅಶಕ್ತತೆ ಮತ್ತು ಭದ್ರತಾ ಕಳವಳಗಳಿಂದಾಗಿ ಪ್ರಮುಖ ನಿರ್ಧಾರಗಳ ಜವಾಬ್ದಾರಿ ಹೆಚ್ಚಾಗಿ ಮಿಲಿಟರಿ ನಾಯಕರ ಕೈಯಲ್ಲಿದೆ. ಸದ್ಯಕ್ಕೆ ಅವರ ಮೊದಲ ಆದ್ಯತೆ ಆರೋಗ್ಯ ಸುಧಾರಣೆ ಮತ್ತು ಭದ್ರತೆಯಾಗಿದ್ದು, ಮಿಲಿಟರಿ ನಾಯಕತ್ವವು ದೇಶದ ಆಡಳಿತವನ್ನು ಮುನ್ನಡೆಸುತ್ತಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net