30ರಿಂದ 40 ಬಿಯರ್​ ಕುಡಿದಿದ್ದೆ... ಹಂಸದ ಕತ್ತು ಹಿಡಿದು ಎಳೆದಾಡಿದವನಿಗೆ ನಶೆ ಇಳಿಸಿದ ಹೋಟೆಲ್​ ಮಾಲೀಕರು | Mitchell Fairbarn

ಅಮೇರಿಕದ ಲಾಸ್ ವೇಗಾಸ್‌ನ ಹೋಟೆಲ್​ಗೆ ಭೇಟಿ ನೀಡಿದ ಕೆನಡಾದ ಪ್ರಜೆಯೊಬ್ಬ, ಸುಮಾರು 30ರಿಂದ 40 ಬಿಯರ್​ ಕುಡಿದ ನಶೆಯಲ್ಲಿ ಹಂಸವನ್ನು ಹಿಡಿದು ಎಳೆದಾಡಿದ್ದಲ್ಲದೇ, ಅದನ್ನು ಹೊತ್ತೊಯ್ಯುತ್ತಿರುವ ದೃಶ್ಯವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Mitchell Fairbarn
30ರಿಂದ 40 ಬಿಯರ್​ ಕುಡಿದಿದ್ದೆ... ಹಂಸದ ಕತ್ತು ಹಿಡಿದು ಎಳೆದಾಡಿದವನಿಗೆ ನಶೆ ಇಳಿಸಿದ ಹೋಟೆಲ್​ ಮಾಲೀಕರು
Published on: 

ಲಾಸ್​ ವೇಗಸ್​: ಕಂಠಪೂರ್ತಿ ಕುಡಿದಾಗ ತೆಪ್ಪಗೆ ಹೋಗಿ ಮಲಗಬೇಕು ಎಂಬ ಮಾತು ನಮ್ಮಲ್ಲಿ ತೀರ ಸಾಮಾನ್ಯ. ಬಹುತೇಕರು ಈ ಮಾತಿನಂತೆ, ಕುಡಿದ ಭರದಲ್ಲಿ ನಾಲಿಗೆಯನ್ನು ಹರಿಬಿಡುವುದು ಅಥವಾ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಇಂಥ ಸಮಯದಲ್ಲಿ, ಕೆಲವರು ಇನ್ಯಾವತ್ತು ಮುಂದೆ ಈ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ ಎಂದು ಬುದ್ಧಿ ಕಲಿತರೆ, ಇನ್ನೂ ಕೆಲವರು ಅರಿಯುವ ಮುನ್ನವೇ ಪ್ರಾಣವನ್ನೇ ಕಳೆದುಕೊಂಡಿರುತ್ತಾರೆ. ಆದರೆ, ಇಲ್ಲೊಬ್ಬ ವಿದೇಶಿ ಮೇಧಾವಿ, ಗಂಟಲಿನವರೆಗೆ ಕುಡಿದು ಹಕ್ಕಿಯ ಗಂಟಲನ್ನು ಹಿಡಿದು ಎಳೆದಾಡಿದ ಘಟನೆಗೆ ಇದೀಗ ಜೈಲುವಾಸ ಅನುಭವಿಸುವ ಸ್ಥಿತಿಗೆ ತಲುಪಿದ್ದಾನೆ.

ಅಮೇರಿಕದ ಲಾಸ್ ವೇಗಾಸ್‌ನ ಹೋಟೆಲ್​ಗೆ ಭೇಟಿ ನೀಡಿದ ಕೆನಡಾದ ಪ್ರಜೆಯೊಬ್ಬ, ಸುಮಾರು 30ರಿಂದ 40 ಬಿಯರ್​ ಕುಡಿದ ನಶೆಯಲ್ಲಿ ಹಂಸವನ್ನು ಹಿಡಿದು ಎಳೆದಾಡಿದ್ದಲ್ಲದೇ, ಅದನ್ನು ಹೊತ್ತೊಯ್ಯುತ್ತಿರುವ ದೃಶ್ಯವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯಿಂದ ಅಕ್ಷರಶಃ ಕೆಂಡಾಮಂಡಲಗೊಂಡ ಹೋಟೆಲ್​ ಸಿಬ್ಬಂದಿ, ತಮ್ಮ ಪಕ್ಷಿಯನ್ನು ಹಿಂಸಿಸಿದ ಮಿಚೆಲ್ ಫೇರ್‌ಬರ್ನ್ ಎಂಬಾತನ ವಿರುದ್ಧ ಹಿಂಸಾತ್ಮಕ ಅಪರಾಧದಡಿ ಪ್ರಕರಣ ದಾಖಲಿಸಿದ್ದಾರೆ.

ವೈರಲ್​ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಮಿಚೆಲ್​ ಹಂಸದ ಕುತ್ತಿಗೆ ಹಿಡಿದುಕೊಂಡು ಹೋಟೆಲ್ ಕಾರಿಡಾರ್‌ನಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು. ಅದರಲ್ಲೂ, ಈ ಘಟನೆ ವೇಳೆ ಆತನ ಮುಖದಲ್ಲಿ ಗಹಿಗಹಿಸುವ ನಗು ಇರುವುದು ಕಂಡುಬಂದಿದೆ. ಇದನ್ನೇ ಹೋಟೆಲ್​ ಮಾಲೀಕರು ತಮ್ಮ ದೂರಿನಲ್ಲಿ ಒತ್ತಿ ಹೇಳಿದ್ದಾರೆ. ಮಿಚೆಲ್​ ಉದ್ದೇಶವು ಹಕ್ಕಿಯನ್ನು ಹೊತ್ತೊಯ್ಯುವುದೇ ಆಗಿತ್ತು ಎಂದು. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಆತ, ನಾನು 30ರಿಂದ 40 ಬಿಯರ್‌ಗಳನ್ನು ಕುಡಿದಿದ್ದೆ. ಕುತೂಹಲ ಮತ್ತು ಮೋಜಿಗಾಗಿ ಹಕ್ಕಿಯನ್ನು ಹಿಡಿದೆ ಅಷ್ಟೇ ಎಂದಿದ್ದಾನೆ.

ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡ ಮಿಚೆಲ್​, ಸುಮಾರು 30ರಿಂದ 40 ಬಿಯರ್​ಗಳನ್ನು ಕುಡಿದಿದ್ದೆ. ಈ ಸಮಯದಲ್ಲಿ, ಹಕ್ಕಿಯನ್ನು ನೋಡಿದಾಗ ಉತ್ಸಾಹದಲ್ಲಿ ಅದನ್ನು ಹಿಡಿದುಕೊಂಡೆ. ಹಾನಿ ಮಾಡುವುದು ಅಥವಾ ಅದನ್ನು ಕದ್ದು ಪರಾರಿಯಾಗುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಈ ಮಧ್ಯೆ, ಘಟನೆಯಲ್ಲಿ ಹಂಸವು ತನ್ನ ಗರಿಗಳನ್ನು ಕಳೆದುಕೊಂಡಿದೆ. ಜತೆಗೆ ದೇಹಕ್ಕೆ ಗಾಯಗಳಾಗಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

Also Read
ಬಣ್ಣ ಬಣ್ಣದ ಸೋಪಾದ್ರೂ ಬರುವ ನೊರೆ ಮಾತ್ರ ಬಿಳಿಯೇ! ಏಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ | Soap Foam
Mitchell Fairbarn

ಈ ವಾದ-ಪ್ರತಿವಾದಗಳನ್ನು ಆಲಿಸಿರುವ ಕೋರ್ಟ್​, ಮಿಚೆಲ್​ ಪ್ರಾಣಿ ಹಿಂಸೆಗೆ ಡಿಸೆಂಬರ್ 1ರಂದು ಶಿಕ್ಷೆಯನ್ನು ಪ್ರಕಟಿಸುವುದಾಗಿ ತಿಳಿಸಿದೆ. ಗಂಭೀರ ಅಪರಾಧಕ್ಕೆ ಸುಮಾರು ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆಯಿದ್ದು, ಸಣ್ಣ ಅಪರಾಧಕ್ಕೆ ಆರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ವರದಿಗಳ ಪ್ರಕಾರ, ಈ ತಪ್ಪಿಗೆ ಮಿಚೆಲ್​ ನಾಲ್ಕೂವರೆ ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net