ಪಾತಾಳ ಲೋಕದಲ್ಲಿ ಮಿಸೈಲ್ ಸಿಟಿ! ಇರಾನ್‌ನ ಈ ರಹಸ್ಯ ಸುರಂಗಗಳ ವಿಡಿಯೋ ನೋಡಿ ಇಸ್ರೇಲ್​, ಅಮೆರಿಕ ಬೆಚ್ಚಿಬಿದ್ದಿದ್ದೇಕೆ? Iran Missile Power

ಪಾತಾಳ ಲೋಕದಲ್ಲಿ ಮಿಸೈಲ್ ಸಿಟಿ! ಇರಾನ್‌ನ ಈ ರಹಸ್ಯ ಸುರಂಗಗಳ ವಿಡಿಯೋ ನೋಡಿ ಇಸ್ರೇಲ್​, ಅಮೆರಿಕ ಬೆಚ್ಚಿಬಿದ್ದಿದ್ದೇಕೆ?
ಪಾತಾಳ ಲೋಕದಲ್ಲಿ ಮಿಸೈಲ್ ಸಿಟಿ! ಇರಾನ್‌ನ ಈ ರಹಸ್ಯ ಸುರಂಗಗಳ ವಿಡಿಯೋ ನೋಡಿ ಇಸ್ರೇಲ್​, ಅಮೆರಿಕ ಬೆಚ್ಚಿಬಿದ್ದಿದ್ದೇಕೆ?
Published on
ಟೆಹ್ರಾನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಉಭಯ ದೇಶಗಳ ನಡುವೆ ಈಗ ಮಾಹಿತಿ ಸಮರ ತೀವ್ರಗೊಂಡಿದೆ. ಒಂದು ಕಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಮಾತುಕತೆಯ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಇರಾನ್‌ನ ಕ್ರಾಂತಿಕಾರಿ ಸೇನೆ IRGC ತನ್ನ ಭೂಗತ ಕ್ಷಿಪಣಿ ನೆಲೆಗಳ (Iran Missile Power) ಭೀಕರ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಅಮೆರಿಕಕ್ಕೆ ನೇರ ಸವಾಲು ಹಾಕಿದೆ.

ಪಾತಾಳ ಲೋಕದ ಯುದ್ಧ ಶಾಲೆ: ಏನಿದೆ ಆ ವಿಡಿಯೋದಲ್ಲಿ?

ಇರಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಪರ್ವತಗಳ ಕೆಳಗೆ ನೂರಾರು ಅಡಿ ಆಳದಲ್ಲಿ ನಿರ್ಮಿಸಲಾದ ಬೃಹತ್ ಸುರಂಗ ಮಾರ್ಗಗಳು ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳು ಕಂಡುಬಂದಿವೆ.
ಖೋರ್ದಾದ್-15 ವ್ಯವಸ್ಥೆ: ಈ ಭೂಗತ ನೆಲೆಯಲ್ಲಿ ಇರಾನ್ ನಿರ್ಮಿತ ಅತ್ಯಾಧುನಿಕ ಖೋರ್ದಾದ್-15 ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಇದು 150 ಕಿ.ಮೀ ದೂರದ ಗುರಿಯನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
F-35 ಗೆ ಸವಾಲು: ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ರೇಡಾರ್‌ಗಳಿಗೆ ಸಿಗದ F-35 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ತಡೆಹಿಡಿಯಲು ಈ ವ್ಯವಸ್ಥೆಯನ್ನು ಬಳಸಲಾಗಿದೆ ಎಂದು ಇರಾನ್ ಸೇನೆ ಪ್ರತಿಪಾದಿಸಿದೆ. ಅಷ್ಟೇ ಅಲ್ಲದೆ, ಇತ್ತೀಚಿನ ದಾಳಿಗಳಲ್ಲಿ ಅಮೆರಿಕದ ವಿಮಾನಗಳನ್ನು ಈ ನೆಲೆಯಿಂದಲೇ ಗುರಿ ಮಾಡಲಾಗಿತ್ತು ಎಂಬ ಶಾಕಿಂಗ್ ಮಾಹಿತಿಯನ್ನು ನೀಡಿದೆ.

ಯುದ್ಧದ ತೀವ್ರತೆ: ಪರಮಾಣು ಕೇಂದ್ರಗಳ ಮೇಲೆ ದಾಳಿ..?

ವರದಿಗಳ ಪ್ರಕಾರ, ಮಾರ್ಚ್ 21 ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ನತಾಂಜ್ ಪರಮಾಣು ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಇದಕ್ಕೆ ಪ್ರತೀಕಾರವಾಗಿ ಇರಾನ್, ಇಸ್ರೇಲ್‌ನ ಪರಮಾಣು ಸಂಶೋಧನಾ ಕೇಂದ್ರವಿರುವ ಡಿಮೋನಾ ಪಟ್ಟಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸುರಿಮಳೆಗರೆದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇರಾನ್ ಕ್ಷಿಪಣಿಗಳು ಇಸ್ರೇಲ್‌ನ ಅತ್ಯಂತ ಸುರಕ್ಷಿತ ಪರಮಾಣು ವಲಯದ ಭದ್ರತೆಯನ್ನು ಭೇದಿಸಿವೆ ಎನ್ನಲಾಗಿದೆ.

ಟ್ರಂಪ್‌ರ ಐದು ದಿನಗಳ ಗಡುವು ಮತ್ತು ಇರಾನ್‌ನ ಪ್ರತಿಕ್ರಿಯೆ

ಅಧ್ಯಕ್ಷ ಟ್ರಂಪ್ ಅವರು ಮಾತುಕತೆಗಾಗಿ ಐದು ದಿನಗಳ ಕಾಲ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಇರಾನ್ ಮಾತ್ರ ಟ್ರಂಪ್ ನಮ್ಮ ಶಕ್ತಿಗೆ ಹೆದರಿ ಹಿಂದೆ ಸರಿದಿದ್ದಾರೆ ಎಂದು ಲೇವಡಿ ಮಾಡಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅಮೆರಿಕ ನೀಡಿದ್ದ 48 ಗಂಟೆಗಳ ಗಡುವು ಮುಗಿದಿದ್ದರೂ, ಇರಾನ್ ಈವರೆಗೆ ಜಲಸಂಧಿಯನ್ನು ಮುಕ್ತಗೊಳಿಸಿಲ್ಲ. ಬದಲಾಗಿ, ತನ್ನ ಭೂಗತ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ನಾವು ಯಾವುದಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಂಪನ

ಇರಾನ್ ಮತ್ತು ಅಮೆರಿಕ ನಡುವಿನ ಈ ಶಕ್ತಿ ಪ್ರದರ್ಶನದಿಂದಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 112 ಡಾಲರ್ ದಾಟಿದೆ. ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಮುಚ್ಚಲ್ಪಟ್ಟರೆ ಜಗತ್ತು ಕಂಡರಿಯದ ಇಂಧನ ಬಿಕ್ಕಟ್ಟು ಎದುರಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net