ಅಮೆರಿಕದಲ್ಲಿ ಮಿನಿ ಇಂಡಿಯಾ: ಟ್ರಂಪ್​ ಕಠಿಣ ನಿಯಮ ತಂದರೂ ಹೆಚ್ಚುತ್ತಿದೆ ಭಾರತೀಯರ ಸಂಖ್ಯೆ

Mini India in America | ಅಮೆರಿಕದಲ್ಲಿ ಮಿನಿ ಇಂಡಿಯಾ
Mini India in America | ಅಮೆರಿಕದಲ್ಲಿ ಮಿನಿ ಇಂಡಿಯಾ
Published on
ಅಮೆರಿಕದಲ್ಲಿ ಭಾರತೀಯರ ವಸತಿ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಕಳೆದ 20 ವರ್ಷಗಳಲ್ಲಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಭಾರತೀಯರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ನೆಲೆಸಿದೆ. ಇವುಗಳನ್ನು "ಮಿನಿ ಇಂಡಿಯಾ' ಎಂದೇ ಕರೆಯಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಇಂತಹ ಪ್ರದೇಶಗಳ ಸಂಖ್ಯೆ 75ಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ವೀಸಾ ಮತ್ತು ಗ್ರೀನ್​ಕಾರ್ಡ್​ ಕುರಿತು ಟ್ರಂಪ್​ ಅವರ ಕಠಿಣ ನಿಯಮಗಳ ಹೊರತಾಗಿಯೂ ಭಾರತೀಯರು ಅಮೆರಿಕಕ್ಕೆ ಹೋಗುವುದು ಮತ್ತು ಅಲ್ಲಿ ನೆಲೆಸುವುದು ಮುಂದುವರಿದಿದೆ. ಆದಾಯದಲ್ಲೂ, ಅಮೆರಿಕನ್ನರಿಗಿಂತ ಅನಿವಾಸಿ ಭಾರತೀಯರು ಮುಂದಿರುವುದು ಗಮನಾರ್ಹ.
ವಲಸೆ ನೀತಿಯನ್ನು ಕಠಿಣಗೊಳಿಸಲು ಡೊನಾಲ್ಡ್​ ಟ್ರಂಪ್​ ಆಡಳಿತ ಒಂದಾದರೊಂದರ ಬಳಿಕ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಎಚ್​&1ಬಿ ವೀಸಾ ನಿಯಮಗಳನ್ನು ಕೂಡ ಕಠಿಣಗೊಳಿಸಲಾಗಿದೆ. ಆದರೆ, ವಾಸ್ತವದಲ್ಲಿ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಮೂಲದವರ ಸಂಖ್ಯೆ ಹೆಚ್ಚಿದೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ. ಅಲ್ಲದೆ, ಅಲ್ಲಿ ಸ್ಥಾಪನೆಗೊಂಡ ಭಾರತದ ಉದ್ಯಮಗಳು ಅಮೆರಿಕನ್ನರಿಗೆ ಕೆಲಸ ನೀಡುತ್ತಿವೆ. ಭಾರತೀಯರು ಅದರಲ್ಲೂ ಜೆನ್​&ಜೀ ಪೀಳಿಗೆಯವರು ತಮ್ಮ ಪ್ರತಿಭೆ, ಕೌಶಲದ ಮೂಲಕವೇ ಅಮೆರಿಕದಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಿಂದ ಅನಿವಾಸಿ ಭಾರತೀಯರು ಹಿಂದೆ ಸರಿದರೆ ಅಮೆರಿಕದ ಸ್ಥಿತಿ ಡೋಲಾಯಮಾನವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹೆಲ್ತ್​ಕೇರ್​, ಫಾರ್ಮಾ, ಹೋಟೆಲ್​, ಆತಿಥ್ಯ ರಂಗ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳು ಭಾರತೀಯ ಮೂಲದವರನ್ನು ಹುಡುಕಿಕೊಂಡು ಬರುತ್ತಿದ್ದು, ಅಮೆರಿಕದಲ್ಲಿ ಎನ್​ಐಆರ್​ಗಳ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಅತ್ಯಧಿಕ ಅಂದರೆ ಸುಮಾರು 9.3 ಲಕ್ಷ ಭಾರತೀಯ ಮೂಲದವರು ವಾಸಿಸುತ್ತಿದ್ದಾರೆ. ಅಮೆರಿಕದ ನೀತಿಗಳಲ್ಲಿ ನಿಯಮಗಳು ಬಿಗಿಯಾದರೂ ಅಮೆರಿಕದ ನಾವೀನ್ಯತೆ ಹಾಗೂ ಆರ್ಥಿಕ ಬೆಳವಣಿಗೆ ಭಾರತೀಯ ಪ್ರತಿಭೆಗಳನ್ನು ಹೊರಗಿಟ್ಟು ಮುನ್ನಡೆಯಲು ಸಾಧ್ಯವಿಲ್ಲ ಎಂಬ ವಾಸ್ತವ ಸ್ಥಿತಿಯನ್ನು ಇದು ಬಿಂಬಿಸಿದೆ. ಅಮೆರಿಕದ ಆರ್ಥಿಕತೆಯಲ್ಲೂ ಭಾರತೀಯರ ಕೊಡುಗೆ ಅಸಾಧಾರಣವಾದದ್ದು.

ಸಿಲಿಕಾನ್​ ವ್ಯಾಲಿಯಲ್ಲಿ ಖದರ್

ಗೂಗಲ್​ (ಸುಂದರ್​ ಪಿಚೈ), ಮೈಕ್ರೋಸಾಫ್ಟ್​ (ಸತ್ಯ ನಾದೆಳ್ಳ), ಐಬಿಎಂ (ಅರವಿಂದ್​ ಕೃಷ್ಣ) ನಂತಹ ದೈತ್ಯ ಸಂಸ್ಥೆಗಳನ್ನು ಮುನ್ನಡೆಸುತ್ತಿರುವುದು ಭಾರತೀಯರೇ. ಸಿಲಿಕಾನ್​ ವ್ಯಾಲಿಯ ಶೇ.70ಕ್ಕಿಂತ ಹೆಚ್ಚು ಎಚ್​&1ಬಿ ವೀಸಾ ಪಡೆಯುವವರು ಭಾರತೀಯ ನುರಿತ ಇಂಜಿನಿಯರ್​ಗಳು. ಕೃತಕ ಬುದ್ಧಿಮತ್ತೆ (ಎಐ) ಸಂಶೋಧನೆಯಲ್ಲಿ ಭಾರತೀಯರ ಕೊಡುಗೆ ನಿರ್ಣಾಯಕವಾಗಿದೆ. ಮುಂದಿನ ದಿನಗಳಲ್ಲಿ ಸಿಲಿಕಾನ್​ ವ್ಯಾಲಿಯಲ್ಲಿ ಭಾರತೀಯರ ಪಾತ್ರ ಮತ್ತಷ್ಟು ಬಲಗೊಳ್ಳಲಿದೆ. ಭಾರತೀಯರ ಈ ಪಯಣ 25 ವರ್ಷಗಳ ಹಿಂದೆ ಪ್ರಾರಂಭವಾಯಿತು ಮತ್ತು ಈಗ ಅದರ ವೇಗ ಮತ್ತಷ್ಟು ಹೆಚ್ಚುತ್ತಿದೆ. ಇಂದು ಸಿಲಿಕಾನ್​ ವ್ಯಾಲಿಯ ಶೇ.35ರಷ್ಟು ಸ್ಟಾರ್ಟಪ್​ಗಳಲ್ಲಿ ಕನಿಷ್ಠ ಒಬ್ಬ ಭಾರತೀಯ ಮೂಲದ ಸಹ&ಸಂಸ್ಥಾಪಕರಿದ್ದಾರೆ. ಐಟಿ ಕ್ಷೇತ್ರದಲ್ಲಿ ಭಾರತೀಯರ ಸಹಭಾಗಿತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಇತರ ರಾಜ್ಯಗಳಲ್ಲೂ ಹೊಸ ಮಿನಿ ಇಂಡಿಯಾಗಳು ರೂಪುಗೊಳ್ಳಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸಮುದಾಯವು ಅಮೆರಿಕದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದು, ಇತರ ಯಾವುದೇ ವಲಸಿಗ ಸಮುದಾಯಕ್ಕೆ ಹೋಲಿಸಿದರೆ ಅವರ ಪಾತ್ರ ಅತ್ಯಂತ ಪ್ರಬಲವಾಗಿ ಗೋಚರಿಸುತ್ತದೆ.

ಹಲವು ರಾಜ್ಯಗಳಲ್ಲಿ ಹೆಚ್ಚಿದ ಪ್ರಾಬಲ್ಯ

ಅಮೆರಿಕದಲ್ಲಿ ಅತಿ ಹೆಚ್ಚು ಭಾರತೀಯ ಮೂಲದ ಜನರು ಕ್ಯಾಲಿಫೋರ್ನಿಯಾದಲ್ಲಿ (9.3 ಲಕ್ಷ) ನೆಲೆಸಿದ್ದಾರೆ. ಎರಡನೇ ಸ್ಥಾನದಲ್ಲಿ ಟೆಕ್ಸಾಸ್​ ಇದ್ದು, ಇಲ್ಲಿ 5.4 ಲಕ್ಷ ಭಾರತೀಯ ಮೂಲದವರು ವಾಸಿಸುತ್ತಿದ್ದಾರೆ. ಟೆಕ್ಸಾಸ್​ನ ಫ್ರಿಸ್ಕೋ ನಗರವು 25 ವರ್ಷಗಳ ಹಿಂದಿನವರೆಗೆ ಹೆಚ್ಚಾಗಿ ಕೃಷಿ ಭೂಮಿಯಾಗಿದ್ದ ಪ್ರದೇಶವಾಗಿತ್ತು. ಪ್ರಸ್ತುತ ಇಲ್ಲಿನ ಜನಸಂಖ್ಯೆ 2.5 ಲಕ್ಷಕ್ಕಿಂತಲೂ ಹೆಚ್ಚಿದೆ. ಇದರಲ್ಲಿ ಶೇಕಡ 19ರಷ್ಟು ಜನರು ಭಾರತೀಯ ಮೂಲದವರಾಗಿದ್ದಾರೆ. ಫ್ರಿಸ್ಕೋ ನಗರದ ಆಸುಪಾಸಿನ ಪ್ಲಾನೊ ಮತ್ತು ಅಲೆನ್​ ನಗರಗಳಲ್ಲೂ ಭಾರತೀಯ ದೇವಾಲಯಗಳು, ರೆಸ್ಟೋರೆಂಟ್​ಗಳು ಮತ್ತು ಮಳಿಗೆಗಳ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಿದೆ. ಅಲ್ಲದೆ, ಕ್ಯಾಲಿಫೋರ್ನಿಯಾದ ಡಬ್ಲಿನ್​ ಮತ್ತು ಸ್ಯಾನ್​ ರಾಮೋನ್​ ಪ್ರದೇಶಗಳಲ್ಲಿ ಭಾರತೀಯ ಜನಸಂಖ್ಯೆ ಸರಿಸುಮಾರು ಶೇ.18ರಷ್ಟಿದೆ. ಡಬ್ಲಿನ್​ನ ಶಾಲೆಗಳಲ್ಲಿ ಶೇ.41ರಷ್ಟು ವಿದ್ಯಾರ್ಥಿಗಳು ಭಾರತೀಯ ಮೂಲದವರಾಗಿದ್ದಾರೆ. ಇಲ್ಲಿ ಭಾರತೀಯ ಸಂಸ್ಕೃತಿಯ ಸ್ಪಷ್ಟ ಚಿತ್ರಣ ಕಾಣಸಿಗುತ್ತದೆ. ಇಂದಿನ ಯುವ ಪೀಳಿಗೆಯು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ವಾರಾಂತ್ಯದಲ್ಲಿ ಕ್ರಿಕೆಟ್​ ಕೂಡ ಆಡುತ್ತದೆ. ಭಾರತೀಯ ಆಹಾರದ ಜನಪ್ರಿಯತೆ ಎಷ್ಟು ಹೆಚ್ಚಾಗಿದೆಯೆಂದರೆ, ಹಲವೆಡೆ ಡ್ರೈವ್​&ಥ್ರೂ ಭಾರತೀಯ ಆಹಾರ ಮಳಿಗೆಗಳು ಸಹ ಆರಂಭವಾಗಿವೆ.
ವಿವೇಕ್​ ರಾಮಸ್ವಾಮಿ, ನಿಕ್ಕಿ ಹ್ಯಾಲಿ ಸೇರಿದಂತೆ ಹಲವು ಭಾರತೀಯ ಮೂಲದ ನಾಯಕರು ಅಮೆರಿಕದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಟ್ರಂಪ್​ ತಂಡದಲ್ಲೂ ತಾಂತ್ರಿಕ ಹಾಗೂ ಆರ್ಥಿಕ ಸಲಹೆಗಾರರಾಗಿ ಭಾರತೀಯ ಮೂಲದ ಪರಿಣಿತರಿದ್ದಾರೆ.

ಕಠಿಣಗೊಂಡ ನಿಯಮಗಳು

ಡೊನಾಲ್ಡ್​ ಟ್ರಂಪ್​ ಸರ್ಕಾರವು ಎಚ್​&1ಬಿ ವೀಸಾ ಶುಲ್ಕವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಇದರ ಅಡಿಯಲ್ಲಿ ಪ್ರತಿ ವೀಸಾಕ್ಕೆ 1,03,265 ಡಾಲರ್​ (ಸುಮಾರು 98 ಲಕ್ಷ ರೂಪಾಯಿ) ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ ಈ ಶುಲ್ಕವು 2,000ರಿಂದ 5,000 ಡಾಲರ್​ ಇತ್ತು. ರಾಯಿಟರ್ಸ್​ ವರದಿಯ ಪ್ರಕಾರ, ಈ ನಿಯಮವನ್ನು 2026ರ ವರ್ಷಾಂತ್ಯದ ವೇಳೆಗೆ ಜಾರಿಗೆ ತರಬಹುದು. 2025ರ ಡಿಸೆಂಬರ್​ನಿಂದ ಎಚ್​&1ಬಿ ಮತ್ತು ಅವರ ಎಚ್​&4 ಅವಲಂಬಿತರ ಆನ್​ಲೈನ್​ ಚಟುವಟಿಕೆಗಳ ತಪಾಸಣೆಯನ್ನು ಹೆಚ್ಚಿಸಲಾಗಿದೆ. ಅರ್ಜಿದಾರರು ತಮ್ಮ ಸೋಷಿಯಲ್​ ಮೀಡಿಯಾ ಪ್ರೊಫೈಲ್​ಗಳನ್ನು ಸಾರ್ವಜನಿಕವಾಗಿ ಇರಿಸಿಕೊಳ್ಳಲು ಸೂಚಿಸಲಾಗಿದೆ. 2025ರ ಅಕ್ಟೋಬರ್​ನಿಂದ ಹೆಚ್ಚಿನ ವಲಸೆಯೇತರ ವೀಸಾ ಅರ್ಜಿದಾರರಿಗೆ ಸಂದರ್ಶನವನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ 14 ವರ್ಷದೊಳಗಿನ ಮತ್ತು 79 ವರ್ಷ ಮೇಲ್ಪಟ್ಟ ಅರ್ಜಿದಾರರಿಗೆ ಸಿಗುತ್ತಿದ್ದ ವಿನಾಯಿತಿಯನ್ನು ಹಿಂಪಡೆಯಲಾಗಿದೆ, ಆದರೂ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ವಿನಾಯಿತಿ ಮುಂದುವರಿದಿದೆ.

ಆದಾಯದಲ್ಲೂ ಮುಂದು

ಅಮೆರಿಕನ್​ ಕುಟುಂಬಗಳಿಗಿಂತ ಭಾರತೀಯ ಕುಟುಂಬಗಳ ಆದಾಯ ಹೆಚ್ಚಿದೆ. "ಮಿನಿ ಇಂಡಿಯಾ'ದಲ್ಲಿ ವಾಸಿಸುವ ಭಾರತೀಯ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ 1.54 ಕೋಟಿ ರೂಪಾಯಿಗಳಾಗಿದೆ. ಅದೇ ರೀತಿ ಅಮೆರಿಕನ್​ ಕುಟುಂಬಗಳ ಸರಾಸರಿ ಆದಾಯ 80 ಲಕ್ಷ ರೂಪಾಯಿಗಳಾಗಿದೆ. ಅಮೆರಿಕನ್​ ಕಮ್ಯುನಿಟಿ ಸರ್ವೆ ಮತ್ತು ಪ್ಯೂ ರಿಸರ್ಚ್​ ಸೆಂಟರ್​ ವರದಿಯ ಪ್ರಕಾರ, ಮುಂಬರುವ ವರ್ಷಗಳಲ್ಲಿ ಈ ಅಂತರವು ಮತ್ತಷ್ಟು ಹೆಚ್ಚಾಗಬಹುದು.
  • ಅಮೆರಿಕದಲ್ಲಿ ಭಾರತೀಯ ಮೂಲದವರ ಜನಸಂಖ್ಯೆ: 50 ಲಕ್ಷ
  • ಎಚ್​&1ಬಿ ವೀಸಾ ಪಡೆಯುವಲ್ಲಿ ಪಾಲು: ಶೇಕಡ 70
  • ಭಾರತೀಯ ಮೂಲದವರಲ್ಲಿ ಶೇ.75ರಷ್ಟು ಜನರು ಪದವೀಧರರು
  • ಎನ್​ಆರ್​ಐಗಳ ಸರಾಸರಿ ಆದಾಯ: 1.20 ಲಕ್ಷ ಡಾಲರ್
  • ​ಅಮೆರಿಕನ್ನರ ಸರಾಸರಿ ಆದಾಯ: 70 ಸಾವಿರ ಡಾಲರ್​
  • ಅಮೆರಿಕದಲ್ಲಿರುವ ಭಾರತೀಯ ಕಂಪನಿಗಳ ಮೌಲ್ಯ: 1 ಟ್ರಿಲಿಯನ್​ ಡಾಲರ್
  • ​ಅಮೆರಿಕದಲ್ಲಿರುವ ನವೋದ್ಯಮಗಳ ಪೈಕಿ ಶೇ.30ಕ್ಕೂ ಹೆಚ್ಚು ಫೌಂಡರ್​ಗಳು ಭಾರತೀಯ ಮೂಲದವರು.
  • 90ಕ್ಕೂ ಅಧಿಕ ಯೂನಿಕಾರ್ನ್​ ಕಂಪನಿಗಳಿಗೆ ಭಾರತದ ನಂಟು.
  • ದೊಡ್ಡ ಟೆಕ್​ ಕಂಪನಿಗಳ ನಾಯಕತ್ವ ಭಾರತೀಯ ಮೂಲದವರ ಬಳಿ.
  • ಅಮೆರಿಕದ ಪ್ರತಿ ಆರು ಜನ ವೈದ್ಯರಲ್ಲಿ ಒಬ್ಬರು ಭಾರತೀಯ ಮೂಲದವರು.
  • ಅಮೆರಿಕದ ಶೇ.60ರಷ್ಟು ಹೋಟೆಲ್​ಗಳು ಮತ್ತು ಮೋಟೆಲ್​ಗಳು (ವಿಶೇಷವಾಗಿ ಏಷ್ಯನ್​ ಅಮೆರಿಕನ್​ ಹೋಟೆಲ್​ ಮಾಲೀಕರ ಸಂಘ - AAHOA) ಭಾರತೀಯರ ಒಡೆತನದಲ್ಲಿವೆ. ಹೋಟೆಲ್​ ಉದ್ಯಮದಲ್ಲಿ ಪ್ರತಿ ಎರಡರಲ್ಲಿ ಒಂದು ಭಾರತೀಯ ಮೂಲದವರದ್ದು.
  • ಪ್ರತಿ 10ರಲ್ಲಿ 7 ಎಚ್​&1ಬಿ ವೀಸಾ ಭಾರತೀಯರದ್ದು.
  • ಟೆಕ್​ ನವೋದ್ಯಮದ ಫೌಂಡರ್​ಗಳ ಪೈಕಿ ಪ್ರತಿ 3ರಲ್ಲಿ ಒಬ್ಬರು ಭಾರತೀಯರು.
  • ಅಮೆರಿಕದಲ್ಲಿ ಭಾರತೀಯ ಉದ್ಯಮಗಳು 2.5&3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ.
  • ಅಮೆರಿಕದ ಆರ್ಥಿಕತೆಗೆ 40 ಬಿಲಿಯನ್​ ಡಾಲರ್​ ತೆರಿಗೆ ಪಾವತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net