ಬೀಜಿಂಗ್/ಹುನಾನ್: ಸಿನೆಮಾ ಕಥೆಗಳಲ್ಲೂ ಕೇಳರಿಯದ ಅಚ್ಚರಿಯ ಘಟನೆಯೊಂದು ಚೀನಾದ ಹುನಾನ್ ಪ್ರಾಂತ್ಯದ ಲಾಂಗ್‌ಹುಯಿ ಕೌಂಟಿಯಲ್ಲಿ ನಡೆದಿದೆ. ಮಾಂಸಕ್ಕಾಗಿ ಬಾತುಕೋಳಿಯನ್ನು ಕತ್ತರಿಸುತ್ತಿದ್ದ ಗ್ರಾಮಸ್ಥನಿಗೆ ಅದರ ಹೊಟ್ಟೆಯೊಳಗೆ ಹೊಳೆಯುವ ಚಿನ್ನದ ಕಣಗಳು ಪತ್ತೆಯಾಗಿದ್ದು, ಇಡೀ ಗ್ರಾಮವೇ ಈಗ ಈ 'ಚಿನ್ನದ ಬಾತುಕೋಳಿ'(Duck)ಯನ್ನು ನೋಡಲು ಮುಗಿಬಿದ್ದಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಲಿಯು ಎಂಬ ವ್ಯಕ್ತಿ ತನ್ನ ಮನೆಯಲ್ಲಿದ್ದ ಬಾತುಕೋಳಿಯನ್ನು ಕೊಯ್ದು ಸ್ವಚ್ಛಗೊಳಿಸುತ್ತಿದ್ದಾಗ, ಅದರ ಜಠರದಲ್ಲಿ (Stomach) ಸಣ್ಣ ಸಣ್ಣ ಹಳದಿ ಬಣ್ಣದ ಕಣಗಳು ಇರುವುದು ಕಂಡುಬಂದಿದೆ. ಕುತೂಹಲಗೊಂಡು ಆ ಕಣಗಳನ್ನು ಪರೀಕ್ಷಿಸಿದಾಗ ಅವು ಅಪ್ಪಟ ಚಿನ್ನ ಎಂಬುದು ಸಾಬೀತಾಗಿದೆ!
ಲಿವು ಪತ್ತೆಹಚ್ಚಿದ ಈ ಚಿನ್ನದ ಒಟ್ಟು ತೂಕ ಸುಮಾರು 10 ಗ್ರಾಂ. ಇದರ ಮೌಲ್ಯ ಅಂದಾಜು 12,000 ಯುವಾನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 1,65,821 ರೂ. ಎನ್ನಲಾಗಿದೆ. ಲಿಯು ಅವರ ತಂದೆ ಈ ಘಟನೆಯನ್ನು ಮುಂಬರುವ ವರ್ಷದ ಶುಭ ಸಂಕೇತ (Auspicious sign) ಎಂದು ಬಣ್ಣಿಸಿದ್ದಾರೆ.
ಬಾತುಕೋಳಿ ಹೊಟ್ಟೆಗೆ ಚಿನ್ನ ಬಂದಿದ್ದು ಹೇಗೆ?
ಈ ರಹಸ್ಯದ ಹಿಂದೆ ಒಂದು ಭೌಗೋಳಿಕ ಕಾರಣವಿದೆ. ಲಿಯು ವಾಸಿಸುವ ಹಳ್ಳಿಯ ಪಕ್ಕದಲ್ಲೇ ಚೆನ್‌ಶುಯಿ ನದಿ ಹರಿಯುತ್ತದೆ. ಈ ನದಿಯು 1970 ರಿಂದ 1990ರ ದಶಕದವರೆಗೆ ಚಿನ್ನದ ನಿಕ್ಷೇಪಗಳಿಗೆ ಹೆಸರುವಾಸಿಯಾಗಿತ್ತು. ಬಾತುಕೋಳಿಗಳು ನದಿಯ ದಡದಲ್ಲಿ ಆಹಾರ ಹುಡುಕುವಾಗ ಮಣ್ಣನ್ನು ತಿನ್ನುತ್ತವೆ. ಮಣ್ಣಿನಲ್ಲಿದ್ದ ಸಣ್ಣ ಚಿನ್ನದ ಕಣಗಳನ್ನು ಬಾತುಕೋಳಿಗಳು ನುಂಗಿರಬಹುದು. ತಜ್ಞರ ಪ್ರಕಾರ, ಮನುಷ್ಯ ಅಥವಾ ಪ್ರಾಣಿಗಳ ದೇಹವು ಚಿನ್ನವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅದು ಬಾತುಕೋಳಿಯ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಇತಿಹಾಸ ಮರುಕಳಿಸಿತೇ?
ಇದು ಕೇವಲ ಆಕಸ್ಮಿಕವಲ್ಲ, ಈ ಭಾಗದಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಚೀನಾದ ಟ್ಯಾಂಗ್ ರಾಜವಂಶದ (Tang Dynasty - 618-907 AD) ಕಾಲದಲ್ಲಿ ರೈತರು ಚಿನ್ನದಂಶವಿರುವ ಮಣ್ಣು ತಿಂದ ಬಾತುಕೋಳಿ ಮತ್ತು ಹೆಬ್ಬಾತುಗಳ ಮಲದಿಂದ ಚಿನ್ನದ ಕಣಗಳನ್ನು ಸಂಗ್ರಹಿಸುತ್ತಿದ್ದ ಸಂಪ್ರದಾಯವಿತ್ತು ಎಂಬುದು ಇಲ್ಲಿ ಗಮನಾರ್ಹ.
ಆದರೆ, ಈ ಚಿನ್ನ ಈಗ ಯಾರಿಗೆ ಸೇರಬೇಕು ಎಂಬ ಪ್ರಶ್ನೆ ಎದ್ದಿದೆ. ಚೀನಾ ಕಾನೂನಿನ ಪ್ರಕಾರ ಭೂಮಿಯ ಅಡಿಯಲ್ಲಿ ಸಿಗುವ ಖನಿಜ ಸಂಪತ್ತು ಸರ್ಕಾರದ ಆಸ್ತಿ. ಈ 'ಬಾತುಕೋಳಿ ಚಿನ್ನ' ಲಿಯುಗೆ ಸೇರುತ್ತದೆಯೇ ಅಥವಾ ಸರ್ಕಾರ ವಶಪಡಿಸಿಕೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ,(ಏಜೆನ್ಸೀಸ್).