ಟ್ರಂಪ್ ವಿರುದ್ಧ ಬೀದಿಗಿಳಿದ ಲಕ್ಷಾಂತರ ಜನ; ಇರಾನ್ ಮೇಲಿನ ದಾಳಿ, ವಲಸೆ ನೀತಿ ಖಂಡಿಸಿ ಅಮೆರಿಕ ಯುರೋಪ್ನಾದ್ಯಂತ No Kings Protest
No Kings Protest in US
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಶ್ವದಾದ್ಯಂತ ಟ್ರಂಪ್ ಆಡಳಿತದ ವಿರುದ್ಧ ಜನಾಕ್ರೋಶ
ಅಮೆರಿಕ ಮತ್ತು ಯುರೋಪ್ ಸೇರಿದಂತೆ 90 ಲಕ್ಷ ಜನರಿಂದ ಬೃಹತ್ 'ನೋ ಕಿಂಗ್ಸ್' ರ‍್ಯಾಲಿ
ಇರಾನ್ ಯುದ್ಧ ಮತ್ತು ವಲಸೆ ನೀತಿ ವಿರೋಧಿಸಿ ಪ್ರತಿಭಟನೆ
ಮಿನ್ನೇಸೋಟ:ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಆಕ್ರಮಣಕಾರಿ ವಲಸೆ ನೀತಿಗಳನ್ನು ಖಂಡಿಸಿ ಶನಿವಾರ ಅಮೆರಿಕದಾದ್ಯಂತ ಹಾಗೂ ಯುರೋಪ್‌ನ ಪ್ರಮುಖ ನಗರಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಜನರು 'ನೋ ಕಿಂಗ್ಸ್' (No Kings Rally in US) ಬೃಹತ್ ಪ್ರತಿಭಟನಾ ರ‍್ಯಾಲಿಗಳಲ್ಲಿ ಭಾಗಿಯಾಗಿದ್ರು.
ಹಾಡಿನ ಮೂಲಕ ರ‍್ಯಾಲಿ ಆರಂಭ
ಖ್ಯಾತ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ "ಸ್ಟ್ರೀಟ್ಸ್ ಆಫ್ ಮಿನಿಯಾಪೊಲಿಸ್" ಹಾಡಿನ ಮೂಲಕ ಪ್ರತಿಭಟನಾಕಾರರಲ್ಲಿ ಹುರುಪು ತುಂಬಿದರು. ಅಮೆರಿಕದ ನಗರಗಳ ಮೇಲಿನ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಅವರು ಗುಡುಗಿದರು.
ಸೇಂಟ್ ಪಾಲ್ನ ಕ್ಯಾಪಿಟಲ್ ಲಾನ್‌ನಲ್ಲಿ ಸಾವಿರಾರು ಜನರು ಸೇರಿ ಟ್ರಂಪ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಫೆಡರಲ್ ಏಜೆಂಟ್‌ಗಳಿಂದ ಹತರಾದ ರೆನೀ ಗುಡ್ ಮತ್ತು ಅಲೆಕ್ಸ್ ಪ್ರೆಟ್ಟಿ ಅವರಿಗೆ ಗೌರವ ಸಲ್ಲಿಸಿದರು.
ಪ್ರತಿಭಟನೆಗೆ ಜಾಗತಿಕ ಬೆಂಬಲ
ಅನೇಕ ದೇಶಗಳಲ್ಲಿ, ವಿಶೇಷವಾಗಿ ಲಂಡನ್, ಪ್ಯಾರಿಸ್ ಮತ್ತು ರೋಮ್, ಇಟಲಿ, ಆಸ್ಟ್ರೇಲಿಯಾ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿಭಟನೆಗಳು ನಡೆದವು. ಇಟಲಿಯ ರೋಮ್‌ನಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು.
ಇರಾನ್ ಮೇಲಿನ ಅಮೆರಿಕದ ದಾಳಿ ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಮಿಲಿಟರಿ ನಿಯೋಜನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಕಸ್ಟಮ್ಸ್ ಮತ್ತು ವಲಸೆ ಜಾರಿಸಂಸ್ಥೆಯ ಕಠಿಣ ಕ್ರಮಗಳು ಮತ್ತು ಫೆಡರಲ್ ಏಜೆಂಟ್‌ಗಳ ಗುಂಡಿನ ದಾಳಿಗೆ ಇಬ್ಬರು ಬಲಿಯಾದದ್ದನ್ನು ಖಂಡಿಸಿ ಮಿನ್ನೇಸೋಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಟ್ರಾನ್ಸ್‌ಜೆಂಡರ್ ಹಕ್ಕುಗಳ ಕಡಿತ ಮತ್ತು ಸರ್ವಾಧಿಕಾರಿ ಧೋರಣೆಯ ವಿರುದ್ಧ ನಮಗೆ ರಾಜರು ಬೇಡ ಎಂಬ ಘೋಷವಾಕ್ಯದೊಂದಿಗೆ ಜನರು ಬೀದಿಗಿಳಿದು ಆಕ್ರೋಶ ಹೊರಹಾಕಿದರು.
ಎಲ್ಲೆಲ್ಲಿ ಪ್ರತಿಭಟನೆ ನಡೆಯಿತು?
ವಾಷಿಂಗ್ಟನ್ನಲ್ಲಿನ ಲಿಂಕನ್ ಮೆಮೋರಿಯಲ್ ಬಳಿ ನಡೆದ ಮೆರವಣಿಗೆಯಲ್ಲಿ ಜನರು ಆಡಳಿತ ಬದಲಾವಣೆ ಮನೆಯಿಂದಲೇ ಆರಂಭವಾಗಲಿ(Regime Change Begins at Home) ಎಂಬ ಫಲಕಗಳನ್ನು ಹಿಡಿದಿದ್ದರು.ಸ್ಯಾನ್ ಡಿಯಾಗೋದಲ್ಲಿ ಸುಮಾರು 40,000 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಂಡನ್ ಮತ್ತು ಪ್ಯಾರಿಸ್ನಲ್ಲಿ ವರ್ಣಭೇದ ನೀತಿ ಮತ್ತು ಯುದ್ಧದ ವಿರುದ್ಧ ಘೋಷಣೆ ಕೂಗಿ ಹೋರಾಟ ಮಾಡಲಾಯಿತು.
ಶ್ವೇತಭವನದ ಪ್ರತಿಕ್ರಿಯೆ ಏನು?
ಹೇಟ್ ಅಮೆರಿಕ ಪ್ರತಿಭಟನೆಯಲ್ಲಿ ಎಡಪಂಥೀಯರ ಅತ್ಯಂತ ಹಿಂಸಾತ್ಮಕ, ಈ ಪ್ರತಿಭಟನೆಗಳು ಎಡಪಂಥೀಯ ನಿಧಿ ಜಾಲಗಳ ಪ್ರಾಯೋಜಿತ ಕಾರ್ಯಕ್ರಮ ಮತ್ತು ಟ್ರಂಪ್ ಡಿರೇಂಜ್‌ಮೆಂಟ್ ಥೆರಪಿ ಸೆಷನ್ಸ್ ಎಂದು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಲೇವಡಿ ಮಾಡಿದ್ದಾರೆ, (ಏಜೆನ್ಸೀಸ್).