ಮಧ್ಯಪ್ರಾಚ್ಯ ಯುದ್ಧ: ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ! Iran Missile Attack on Israel

ಮಧ್ಯಪ್ರಾಚ್ಯ ಯುದ್ಧ: ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!
ಮಧ್ಯಪ್ರಾಚ್ಯ ಯುದ್ಧ: ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!
Published on
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ದಿನಗಳಿಂದ ತಂಗಿದ್ದ ಯುದ್ದದ ಭೀತಿಯ ವಾತಾವರಣವು ಈಗ ಮತ್ತೊಂದು ಅಪಾಯಕಾರಿ ತಿರುವು ಪಡೆದುಕೊಂಡಿದೆ. ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್(Iran Missile Attack on Israel) ನಡೆಸಿದ ಭೀಕರ ವೈಮಾನಿಕ ದಾಳಿಗೆ ಪ್ರತೀಕಾರವಾಗಿ, ಇರಾನ್ ಭಾನುವಾರ ತಡರಾತ್ರಿ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆದಿದೆ.
ಏಪ್ರಿಲ್ 8 ರಂದು ಜಾರಿಗೆ ಬಂದಿದ್ದ ಕದನ ವಿರಾಮದ ನಂತರ ಇಸ್ರೇಲ್ ಮೇಲೆ ಇರಾನ್ ನಡೆಸಿದ ಮೊದಲ ನೇರ ದಾಳಿ ಇದಾಗಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದೆ.

ಸೈರನ್ ಸೌಂಡ್, ಹೆದರಿದ ಜನತೆ!

ಇರಾನ್‌ನಿಂದ ಕ್ಷಿಪಣಿಗಳು ನುಗ್ಗಿ ಬರುತ್ತಿದ್ದಂತೆ ಇಸ್ರೇಲ್‌ನ ಉತ್ತರ ಭಾಗದಾದ್ಯಂತ ವಾಯು ದಾಳಿಯ ಮುನ್ನೆಚ್ಚರಿಕೆ ಸೈರನ್‌ಗಳು ಮೊಳಗಿದವು. ಇಸ್ರೇಲ್ ಸೇನೆಯು ಕೂಡಲೇ ಎಚ್ಚೆತ್ತುಕೊಂಡು ತನ್ನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿತು.
ಇರಾನ್ ಉಡಾವಣೆ ಮಾಡಿದ್ದ ಎಲ್ಲಾ ಕ್ಷಿಪಣಿಗಳನ್ನು ನಮ್ಮ ವಾಯುಪಡೆ ಯಶಸ್ವಿಯಾಗಿ ಹೊಡೆದು ಉರುಳಿಸಿದೆ. ಆದರೆ ಇರಾನ್ ಕಡೆಯಿಂದ ಮತ್ತಷ್ಟು ಕ್ಷಿಪಣಿಗಳು ಬರುವ ಸಾಧ್ಯತೆ ಇದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಅಥವಾ ಭಾರಿ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ದಾಳಿಗೆ ಕಾರಣವೇನು? ಕದನ ವಿರಾಮ ಮುರಿದಿದ್ದೇಕೆ?

ಬೈರೂತ್ ಮೇಲೆ ದಾಳಿ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಇರಾನ್ ಇಸ್ರೇಲ್‌ಗೆ ಪದೇಪದೆ ಎಚ್ಚರಿಕೆ ನೀಡುತ್ತಲೇ ಇತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿತ್ತು. ಆದರೆ, ಎರಡೂ ಕಡೆಯವರು ದಾಳಿ ಮುಂದುವರಿಸಿದ್ದರಿಂದ ಈ ಒಪ್ಪಂದವು ಜಾರಿಯಾದ ದಿನವೇ ಮುರಿದುಬಿದ್ದಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಪಡೆಗಳು ಹೆಜ್ಬೊಲ್ಲಾದ ಭದ್ರಕೋಟೆಯಾಗಿರುವ ಬೈರೂತ್‌ನ ದಹಿಯೆಹ್ ಪ್ರದೇಶದ ಮೇಲೆ ತೀವ್ರ ವೈಮಾನಿಕ ದಾಳಿ ನಡೆಸಿದವು. ಇದು ಇರಾನ್‌ನ ಕೆರಳಿಸಿದ್ದು, ತಡಮಾಡದೆ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ.

'ರೆಡ್ ಲೈನ್' ದಾಟಿದ ಇಸ್ರೇಲ್: ಇರಾನ್ ಆಕ್ರೋಶ

ದಾಳಿಯ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC), ನಾವು ಇಸ್ರೇಲ್‌ನ ರಮತ್ ಡೇವಿಡ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದೇವೆ ಎಂದು ಹೇಳಿಕೊಂಡಿದೆ.
ಇರಾನ್‌ನ ಖಾತಮ್ ಅಲ್-ಅನ್ಬಿಯಾ ಪಡೆಯ ಕಮಾಂಡರ್ ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಇಸ್ರೇಲ್ ಬೈರೂತ್ ಮೇಲೆ ದಾಳಿ ಮಾಡುವ ಮೂಲಕ ಎಲ್ಲಾ ಲಕ್ಷ್ಮಣ ರೇಖೆಗಳನ್ನು ದಾಟಿದೆ. ಲೆಬನಾನ್ ಮೇಲಿನ ದಾಳಿಯನ್ನು ಇಸ್ರೇಲ್ ತಕ್ಷಣ ನಿಲ್ಲಿಸಬೇಕು. ಒಂದು ವೇಳೆ ಇಸ್ರೇಲ್ ಮತ್ತೆ ವಾಯು ದಾಳಿ ವಿಸ್ತರಿಸಿದರೆ ಅಥವಾ ಇರಾನ್ ಕ್ರಮಕ್ಕೆ ತಿರುಗೇಟು ನೀಡಲು ಮುಂದಾದರೆ, ಮುಂದಿನ ದಿನಗಳಲ್ಲಿ ಇಸ್ರೇಲ್ ಮತ್ತು ಅದರ ಬೆಂಬಲಿಗರು ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಒಟ್ಟಾರೆಯಾಗಿ, ಇರಾನ್ ಮತ್ತು ಇಸ್ರೇಲ್ ನಡುವಿನ ಈ ನೇರ ಸಂಘರ್ಷವು ಇಡೀ ಮಧ್ಯಪ್ರಾಚ್ಯವನ್ನು ಮತ್ತೊಮ್ಮೆ ಯುದ್ಧದ ಜ್ವಾಲೆಗೆ ತಳ್ಳುವ ಮುನ್ಸೂಚನೆ ನೀಡುತ್ತಿದ್ದು, ಜಗತ್ತಿನ ಕಣ್ಣುಗಳು ಈಗ ಈ ಎರಡು ದೇಶಗಳ ಮುಂದಿನ ಹೆಜ್ಜೆಯ ಮೇಲಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net