Middle East War: ಇರಾನ್ ಕ್ಷಿಪಣಿ ದಾಳಿಗೆ ಅಮೆರಿಕದ 10 ಸೈನಿಕರಿಗೆ ಗಾಯ; ಇಸ್ರೇಲ್ ಅಣುಸ್ಥಾವರವೇ ಟಾರ್ಗೆಟ್!

Middle East War
Middle East War
Published on
ವಾಷಿಂಗ್ಟನ್/ಟೆಲ್ ಅವಿವ್: ಮಧ್ಯಪ್ರಾಚ್ಯದಲ್ಲಿ(Middle East War) ನಡೆಯುತ್ತಿರುವ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಂಡಿದ್ದು, ಯುದ್ಧ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಶುಕ್ರವಾರ ಇರಾನ್ ನಡೆಸಿದ ಸರಣಿ ಕ್ಷಿಪಣಿ ದಾಳಿಯಲ್ಲಿ ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಹಾನಿಯಾಗಿದ್ದು, ಕನಿಷ್ಠ 10 ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ ಎಂದು ಶನಿವಾರ ವರದಿಯಾಗಿದೆ.
ಸೌದಿ ಅರೇಬಿಯಾದಲ್ಲಿರುವ 'ಪ್ರಿನ್ಸ್ ಸುಲ್ತಾನ್ ಏರ್ ಬೇಸ್' ಮೇಲೆ ಇರಾನ್ ಗುರಿ ಇಟ್ಟಿದೆ. ಈ ದಾಳಿಯಲ್ಲಿ ಹತ್ತು ಮಂದಿ ಯುಎಸ್ ಸೈನಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮೂಲಗಳು ಖಚಿತಪಡಿಸಿವೆ. ಅಲ್ಲದೆ ಅಮೆರಿಕದ ಹಲವು ರಿಫ್ಯೂಲಿಂಗ್ ವಿಮಾನಗಳು (Refueling aircraft) ಜಖಂಗೊಂಡಿವೆ.

ಅಣುಸ್ಥಾವರದ ಬಳಿ ಸೈರನ್ ಸದ್ದು!

ಇತ್ತ ಇಸ್ರೇಲ್ ಮೇಲೆ ಇರಾನ್ ಮತ್ತು ಹಿಜ್ಬುಲ್ಲಾ ಪಡೆಗಳು ನಿರಂತರವಾಗಿ ಕ್ಷಿಪಣಿ ಮಳೆಗರೆಯುತ್ತಿವೆ. ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರವಿರುವ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಮೂರನೇ ಬಾರಿಗೆ ಸೈರನ್ ಮೊಳಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಯೆಮನ್‌ನ ಹೌತಿ ಬಂಡುಕೋರರು ಸಹ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಯುದ್ಧಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

ಇರಾನ್‌ನ ಈ ಉದ್ಧಟತನಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಇಂಧನ ಘಟಕಗಳನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಆದರೆ, ಜಾಗತಿಕ ಷೇರು ಮಾರುಕಟ್ಟೆಯ ಕುಸಿತ ಮತ್ತು ಇರಾನ್ ಮಾತುಕತೆಗೆ ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ಟ್ರಂಪ್ ಏಪ್ರಿಲ್ 6ರವರೆಗೆ ಗಡುವನ್ನು ವಿಸ್ತರಿಸಿದ್ದಾರೆ. "ಮಾತುಕತೆಗಳು ನಡೆಯುತ್ತಿವೆ, ಆದರೆ ಇರಾನ್ ಸಾರ್ವಜನಿಕವಾಗಿ ಇದನ್ನು ನಿರಾಕರಿಸುತ್ತಿದೆ," ಎಂದು ಟ್ರಂಪ್ ಹೇಳಿದ್ದಾರೆ.

ಇಸ್ರೇಲ್ ಪ್ರತಿದಾಳಿ

ತನ್ನ ಮೇಲೆ ನಡೆಯುತ್ತಿರುವ ಸತತ ದಾಳಿಗಳಿಂದ ಕೆರಳಿರುವ ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದೆ. ಶನಿವಾರ ಮುಂಜಾನೆ ಟೆಲ್ ಅವಿವ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಷಿಪಣಿ ದಾಳಿಯ ಮುನ್ಸೂಚನೆ ನೀಡುವ ಸೈರನ್‌ಗಳು ಮೊಳಗಿದ್ದು, ಇಸ್ರೇಲ್ ವಾಯುಪಡೆ ಇರಾನ್‌ನ ಕ್ಷಿಪಣಿಗಳನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದೆ. ಅಬುಧಾಬಿಯ ಕೈಗಾರಿಕಾ ವಲಯದಲ್ಲೂ ಕ್ಷಿಪಣಿ ಅವಶೇಷಗಳು ಬಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net