11 ವರ್ಷ... ಇಂದಿಗೂ 'MH370' ಕಣ್ಮರೆಗಿಲ್ಲ ಉತ್ತರ! ಮಿಸ್ಟರಿ ಆಗಿಯೇ ಉಳಿದ ಮಲೇಶಿಯಾ ಫ್ಲೈಟ್​ನ ದುರಂತ ಕಥೆಯಿದು

ಮಿಸ್ಟರಿ ಕೇಸ್​ ಆಗಿ ಉಳಿದ ಮಲೇಶಿಯಾ MH370
ಮಿಸ್ಟರಿ ಕೇಸ್​ ಆಗಿ ಉಳಿದ ಮಲೇಶಿಯಾ MH370
Published on

ಪ್ರಮುಖ ಮುಖ್ಯಾಂಶಗಳು

  • 2014ರ ಮಾರ್ಚ್​ 08ರಂದು ನಾಪತ್ತೆಯಾದ ಮಲೇಶಿಯಾ MH 370 ವಿಮಾನ
  • ಅಂದಿನಿಂದ ಇಂದಿಗೂ ಕಣ್ಮರೆಯಾಗಿದ್ದೇಕೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ
  • ನಿಗೂಢವಾಗಿಯೇ ಉಳಿದ ಮಲೇಶಿಯಾ ವಿಮಾನದಲ್ಲಿದ್ದವರು 239 ಮಂದಿ
ಬೆಂಗಳೂರು: ಮಲೇಷಿಯಾ 'ಎಂಎಚ್​ 370' (MH370) ವಿಮಾನದ ಹೆಸರು ಕೇಳಿದರೆ ಸಾಕು ಇಂದಿಗೂ ಅನೇಕರ ತಲೆಯಲ್ಲಿ ಉತ್ತರ ಸಿಗದ ಪ್ರಶ್ನೆಯೊಂದು ಥಟ್​ ಎಂದು ಮರುಕಳಿಸುತ್ತದೆ. ನಾಪತ್ತೆಯಾದ ಅದೆಷ್ಟೋ ಸಂಖ್ಯೆಯ ವಿಮಾನಗಳ ಪೈಕಿ ಎಂಎಚ್​ 370 ಮಾತ್ರ ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ.
ಬರ್ಮುಡಾ ತ್ರಿಕೋನದ ಸಮೀಪ ಹೋದ ಯಾವುದೇ ಹಡಗು ಅಥವಾ ವಿಮಾನಗಳೇ ಆಗಲಿ ಪತ್ತೆಯಾಗಿದ್ದು ಇತಿಹಾಸದಲ್ಲಿಯೇ ಇಲ್ಲ ಎಂಬ ವಿಚಾರ ಬಹುತೇಕರಿಗೆ ಗೊತ್ತಿದೆ. ಆದ್ರೆ, ಇದೇ ಮೊದಲ ಬಾರಿಗೆ ಮಲೇಷಿಯಾ ವಿಮಾನವೊಂದು ರೇಡರ್​​ಗೆ ಸಿಗದಂತೆ ಕಾಣೆಯಾಗಿದ್ದು ನಿಜಕ್ಕೂ ಇಡೀ ಜಗತ್ತಿಗೆ ಅಚ್ಚರಿ ಮೂಡಿಸಿತು. ಅಸಲಿಗೆ ಈ ವಿಮಾನ ಕಣ್ಮರೆಯಾಗಿ ಈ ವರ್ಷದ ಮಾರ್ಚ್ 08ಕ್ಕೆ 11 ವರ್ಷ ತುಂಬಲಿದೆ.
ಇಂದಿಗೂ ಇದರ ಸುಳಿವು ಪತ್ತೆಹಚ್ಚಲಾಗದ ರಹಸ್ಯವಾಗಿಯೇ ಉಳಿದು ಹೋಗಿದೆ. ವಿಮಾನ ನಾಪತ್ತೆ ಹಿಂದಿರುವ ಅಸಲಿ ಕಾರಣವೇನು ಎಂಬುದನ್ನು ಭೇದಿಸಲು ಇಲ್ಲಿಯವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಆಕಾಶ, ಕಡಲಾಳ ಸೇರಿದಂತೆ ಶೋಧ ಕೈಗೊಳ್ಳದ ಜಾಗವೇ ಇಲ್ಲ. ಆದರೆ, ಫಲಿತಾಂಶ ಮಾತ್ರ ಶೂನ್ಯ. ವಿಮಾನಯಾನ ಕ್ಷೇತ್ರ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ‘ಕಣ್ಮರೆ ಕಥೆ’ಗೆ ಹುಟ್ಟಿಕೊಂಡಿದ್ದು ಬರೀ ರೆಕ್ಕೆಪುಕ್ಕಗಳು. ತಾರ್ಕಿಕ ಅಂತ್ಯ ಯಾರಿಂದಲೂ ಸಾಧ್ಯವಾಗಿಲ್ಲ.

ಗುಡ್​ನೈಟ್​ ಮಲೇಶಿಯನ್​ 370...

ಈ ವಿಷಯದಲ್ಲಿ ವಿಶ್ವದ ದಿಗ್ಗಜ ತಂತ್ರಜ್ಞಾನ ಸಂಸ್ಥೆಗಳು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. 2014ರ ಮಾರ್ಚ್​ 08ರಂದು ಕೌಲಾಲಂಪುರನಿಂದ ಚೀನಾದ ಬೀಜಿಂಗ್​ಗೆ ಹೊರಟಿದ್ದ ಮಲೇಷಿಯಾ ಏರ್​ಲೈನ್ಸ್ 370 ವಿಮಾನದ ಕಾಕ್​ಪಿಟ್​ನಿಂದ ಕೇಳಿ ಬಂದ ಕೊನೆಯ ಶಬ್ದ ಗುಡ್​ನೈಟ್​ ಮಲೇಶಿಯನ್​ 370. ಮಾರ್ಚ್ 8ರ ತಡರಾತ್ರಿ ವಿಮಾನ ಶುಭ್ರ ಆಕಾಶಕ್ಕೆ ಹಾರಿ ಒಂದು ಗಂಟೆಯಾಗಿತ್ತು. ಪ್ರಯಾಣಿಕರು ಬಹುಶಃ ನಿದ್ರೆಗೆ ಜಾರಿದ್ದರು ಅನಿಸುತ್ತದೆ. ಆಗ ಈ ಬೃಹತ್ ವಿಮಾನ, ರೇಡಾರ್ ಪರದೆಯಿಂದ ದಿಢೀರ್​ ಕಣ್ಮರೆಯಾಯಿತು. ಅಂದಿನಿಂದ ಎಲ್ಲಿ ಹೋಯಿತು ಎಂಬುದರ ಸಣ್ಣ ಸುಳಿವು ಸಿಗದಿರುವುದು ನಿಜಕ್ಕೂ ನಿಗೂಢವೇ.

2014ರಿಂದ 2025

ಎಂಎಚ್-370 ಸಣ್ಣ ವಿಮಾನವೇನಲ್ಲ. ಅದು ಬೋಯಿಂಗ್ 777 ಜೆಟ್. ಐದು ಅಂತಸ್ತಿನ ಕಟ್ಟಡಕ್ಕಿಂತ ಎತ್ತರವಾಗಿರುವ ಈ ವಿಮಾನದಲ್ಲಿ ಬರೋಬ್ಬರಿ 239 ಮಂದಿ ಪ್ರಯಾಣಿಸುತ್ತಿದ್ದರು. ಇವರ ಪೈಕಿ ಐವರು ಭಾರತೀಯರು ಇದ್ದರು. ಇದೊಂದು ವಿಮಾನಕ್ಕಾಗಿ ಮಲೇಷಿಯಾ ಸರ್ಕಾರ ಹುಡುಕಾಡದ ಜಾಗಗಳೇ ಇಲ್ಲ. ಇದೀಗ ನಾಪತ್ತೆಯಾಗಿರುವ MH370 ವಿಮಾನ ಎಲ್ಲಿ ಅಡಗಿದೆ ಎಂಬುದನ್ನು ತಿಳಿಯಲು ಎಷ್ಟೇ ವಿಜ್ಞಾನಿಗಳು ಬುಡ ಮೇಲೆ ಮಾಡಿ ನಿಂತರು ಸಾಧ್ಯವಾಗಿಲ್ಲ ಎಂಬುದೇ ದುರಂತ. ಆದರೆ, ಇಂದಿಗೂ ಸರ್ಚ್​ ಆಪರೇಷನ್​ ಮಾತ್ರ ನಿಂತಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net