ಚೀನಾ ಸೇನೆಯಲ್ಲಿ ಭಾರಿ ಭಿನ್ನಮತ

ಚೀನೀ ಸೇನೆ
ಚೀನೀ ಸೇನೆ
Published on

ಚೀನಾ: ಹಲವು ರಾಷ್ಟ್ರಗಳಲ್ಲಿ ಆಡಳಿತವಿರೋಧಿ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ ಡ್ರ್ಯಾಗನ್​ ರಾಷ್ಟ್ರ ಚೀನಾದಲ್ಲೂ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ವಿರುದ್ಧ ಕ್ಷಿಪ್ರಕ್ರಾಂತಿಯ ಸಿದ್ಧತೆಗಳು ನಡೆಯುತ್ತಿವೆ. ಸೇನಾಪಡೆಯ ಜನರಲ್ ಜಾಂಗ್ ಯೂಕ್ಸಿಯಾರನ್ನು ವಜಾಗೊಳಿಸಿದ ಬೆನ್ನಲ್ಲೇ ಬಂಧನಕ್ಕೆ ಒಳಪಡಿಸಲಾಗಿದೆ. ತೈವಾನ್ ಮರುವಶಪಡಿಸಿಕೊಳ್ಳುವ ಸಂಬಂಧ ಇಬ್ಬರು ನಾಯಕರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು. ಮೂಲಗಳ ಪ್ರಕಾರ, ಜಿನ್​ಪಿಂಗ್ ವಿರುದ್ಧ ಹಲವು ವಲಯಗಳಲ್ಲಿ ಆಕ್ರೋಶ ಹೆಚ್ಚಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮಹತ್ವಾಕಾಂಕ್ಷಿ ಧೋರಣೆ ಅವರಿಗೇ ಮುಳುವಾಗುತ್ತಿದೆ. ಜಿನ್​ಪಿಂಗ್​ರ ಒಬ್ಬೊಬ್ಬರೇ ಸ್ನೇಹಿತರು, ಆತ್ಮೀಯರು ಅವರ ವಿರೋಧಿಗಳಾಗಿ ಬದಲಾಗುತ್ತಿದ್ದು, ಚೀನಾದ ಸೇನೆಯಲ್ಲಂತೂ ಆಂತರಿಕ ತಳಮಳ ತೀವ್ರವಾಗಿದೆ. ಆದರೆ, ಇದೆಲ್ಲವನ್ನೂ ರಾಜತಾಂತ್ರಿಕವಾಗಿ ಬಗೆಹರಿಸುವುದನ್ನು ಬಿಟ್ಟು ತಮ್ಮ ವಿರುದ್ಧ ಮಾತನಾಡುವವರ ಮೇಲೆ ಜಿನ್​ಪಿಂಗ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಜನರಲ್ ಜಾಂಗ್ ಯೂಕ್ಸಿಯಾ.

ಇವರು ಜಿನ್​ಪಿಂಗ್ ನೇತೃತ್ವದ ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷರಾಗಿದ್ದರು. ಅಂದರೆ, ಜಿನ್​ಪಿಂಗ್ ನಂತರ ಅತ್ಯಂತ ಶಕ್ತಿಶಾಲಿ ಸೇನಾ ಅಧಿಕಾರಿಯಾಗಿದ್ದರು. ತೈವಾನ್ ಮರುವಶಪಡಿಸಿಕೊಳ್ಳುವ ಸಂಬಂಧ ಜಿನ್​ಪಿಂಗ್ ಮತ್ತು ಜಾಂಗ್ ನಡುವೆ ಸೃಷ್ಟಿಯಾದ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋದ ಬಳಿಕ, ಜಾಂಗ್ ಯೂಕ್ಸಿಯಾರನ್ನು ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ದಿಢೀರನೆ ವಜಾಗೊಳಿಸಿ, ಆದೇಶ ಹೊರಡಿಸಲಾಯಿತು. ಇದರ ಬೆನ್ನಲ್ಲೇ ಜಾಂಗ್ ಯೂಕ್ಸಿಯಾರನ್ನು ಬಂಧಿಸಲಾಗಿದ್ದು, ಈ ಬೆಳವಣಿಗೆ ಸಂಚಲನ ಮೂಡಿಸಿದೆ. ಚೀನಾದ ಮಿಲಿಟರಿ ಇತಿಹಾಸದಲ್ಲಿ ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯೆಂದು ಪರಿಗಣಿಸಲಾಗಿದೆ, ಏಕೆಂದರೆ ಜಾಂಗ್ ಅವರು ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಆಪ್ತಮಿತ್ರರಲ್ಲಿ ಒಬ್ಬರಾಗಿದ್ದರು.

ಜಾಂಗ್ ವಜಾ ಬಳಿಕ ಚೀನಾ ಸೇನೆ ಮೇಲೆ ಹಿಡಿತ ಹೊಂದಿರುವ ಚೀನಾ ಮಿಲಿಟರಿ ಕಮಿಷನ್​ನಲ್ಲಿ (ಸಿಎಂಸಿ) ಜಿನ್​ಪಿಂಗ್ ಸೇರಿ ಇಬ್ಬರು ಸದಸ್ಯರು ಮಾತ್ರ ಇದ್ದಾರೆ. ಚೀನಾ ಸೇನೆಯ ಮೇಲೆ ಸೆಂಟ್ರಲ್ ಮಿಲಿಟರಿ ಕಮಿಷನ್ ಸಂಪೂರ್ಣ ಹಿಡಿತ ಹೊಂದಿದೆ. ಇದರ ಏಳು ಸದಸ್ಯರ ಪೈಕಿ ನಾಲ್ವರನ್ನು ಇತ್ತೀಚೆಗೆ ಭ್ರಷ್ಟಾಚಾರ ಆರೋಪದ ಮೇಲೆ ಕೈಬಿಡಲಾಗಿದೆ.

ಸೇನೆ ಶುದ್ಧೀಕರಣದ ನೆಪ

ಜಾಂಗ್ ವಜಾಕ್ಕೆ ರಕ್ಷಣಾ ಸಚಿವಾಲಯ ನೀಡಿರುವ ಕಾರಣ ‘ಸೇನಾ ಶುದ್ಧೀಕರಣ’. ದೇಶದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಮೆರಿಕಕ್ಕೆ ಸೋರಿಕೆ ಮಾಡಿದ ಮತ್ತು ಗಂಭೀರ ಶಿಸ್ತು ಉಲ್ಲಂಘನೆಯ ಆರೋಪವನ್ನು ಜಾಂಗ್ ಮೇಲೆ ವಹಿಸಲಾಗಿದೆ. ಅಲ್ಲದೆ, ಮಿಲಿಟರಿ ಉಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಮತ್ತು ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಲಂಚ ಪಡೆದ ಆರೋಪಗಳಿವೆ. ಜಾಂಗ್ ಕುಟುಂಬ ಸದಸ್ಯರು ಮತ್ತು ಆಪ್ತರು ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮುಖ್ಯವಾಗಿ, ತಮ್ಮ ಪ್ರಭಾವವನ್ನು ಬಳಸಿ ರಾಜಕೀಯ ಗುಂಪುಗಳನ್ನು ರಚಿಸಿಕೊಂಡಿದ್ದರು ಮತ್ತು ಕ್ಸಿ ಜಿನ್​ಪಿಂಗ್ ಅವರ ಅಧಿಕಾರಕ್ಕೆ ಸವಾಲಾಗುವಂತೆ ಬೆಳೆದಿದ್ದರು. ಇದು ಜಿನ್​ಪಿಂಗ್ ಅಸಮಾಧಾನಕ್ಕೆ ಕಾರಣವಾಗಿತ್ತು.

ಪ್ರಮುಖ ಬೆಳವಣಿಗೆಗಳು

ಜಾಂಗ್ ಯೂಕ್ಸಿಯಾ ಬಂಧನದ ಬೆನ್ನಲ್ಲೇ ಸೇನಾ ಜಂಟಿ ಸಿಬ್ಬಂದಿ ವಿಭಾಗದ ಮುಖ್ಯಸ್ಥರಾಗಿದ್ದ ಜನರಲ್ ಲಿಯು ಝೆನ್ಲಿ ಅವರನ್ನೂ ಕೂಡ ತನಿಖೆಗೆ ಒಳಪಡಿಸಲಾಗಿದೆ. ಕಳೆದ ಕೆಲವು ತಿಂಗಳಲ್ಲೇ ಚೀನಾ ಅಣ್ವಸ್ತ್ರ ಪಡೆಗಳ ಹಲವು ಉನ್ನತ ಅಧಿಕಾರಿಗಳನ್ನು ಸಾಲಾಗಿ ವಜಾಗೊಳಿಸಲಾಗಿದೆ. ಇದು ಕ್ಸಿ ಜಿನ್​ಪಿಂಗ್ ಮಿಲಿಟರಿಯನ್ನು ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದೂ ವ್ಯಾಖ್ಯಾನಿಸಲಾಗಿದೆ. 7 ಸದಸ್ಯರಿರುವ ಪ್ರಭಾವಿ ಸಿಎಮ್​ಯುಲ್ಲಿ ಈ ಬೆಳವಣಿಗೆಯ ಬಳಿಕ ಈಗ ಕೇವಲ ಇಬ್ಬರು ಸದಸ್ಯರು (ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮತ್ತು ಜನರಲ್ ಜಾಂಗ್ ಶೆಂಗ್ಮಿನ್) ಮಾತ್ರ ಉಳಿದುಕೊಂಡಂತಾಗಿದೆ.

ತೈವಾನ್ ಮೇಲೆ ಕಣ್ಣು

ತೈವಾನ್ ಮರುವಶ ಅಥವಾ ಏಕೀಕರಣಕ್ಕೆ ಸಂಬಂಧಿಸಿದಂತೆ 2026ರ ಆರಂಭದಲ್ಲಿ ಚೀನಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅತ್ಯಂತ ಸಂಕೀರ್ಣ ಮತ್ತು ಗಂಭೀರವಾಗಿವೆ. ಜಿನ್​ಪಿಂಗ್ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸೇನಾ ಚಟುವಟಿಕೆಗಳು ಈ ವಿಷಯದಲ್ಲಿ ಚೀನಾದ ಆಕ್ರಮಣಕಾರಿ ನಿಲುವನ್ನು ಸ್ಪಷ್ಟಪಡಿಸುತ್ತಿವೆ. 2026ರ ‘ಹೊಸ ವರ್ಷದ ಭಾಷಣ’ದಲ್ಲಿ ಜಿನ್​ಪಿಂಗ್, ‘ತೈವಾನ್​ನೊಂದಿಗಿನ ಏಕೀಕರಣವು ಇತಿಹಾಸದ ಅನಿವಾರ್ಯತೆ ಮತ್ತು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಚೀನಾ ಸರ್ಕಾರವು 2025ರಿಂದ ‘ತೈವಾನ್ ರಿಕವರಿ ಡೇ’ ಅನ್ನು ಅಧಿಕೃತವಾಗಿ ಆಚರಿಸಲು ಪ್ರಾರಂಭಿಸಿದ್ದು, ಇದು ತೈವಾನ್ ತನ್ನ ಭೂಭಾಗ ಎಂಬ ಹಕ್ಕನ್ನು ಜಾಗತಿಕವಾಗಿ ಒತ್ತಿಹೇಳುವ ಪ್ರಯತ್ನವಾಗಿದೆ. ‘ಶಾಂತಿಯುತ ಏಕೀಕರಣವು ತೈವಾನ್​ಗೆ ಆರ್ಥಿಕ ಸಮೃದ್ಧಿ ಮತ್ತು ಅಭಿವೃದ್ಧಿಯ ಬಾಗಿಲು ತೆರೆಯಲಿದೆ’ ಎಂದು ಚೀನಾ ಮತ್ತೆ ಮತ್ತೆ ಹೇಳುತ್ತಿದೆ.

ತೈವಾನ್ ಏನು ಹೇಳುತ್ತದೆ?

‘2026 ಅತ್ಯಂತ ನಿರ್ಣಾಯಕ ವರ್ಷ’ ಎಂದು ಕರೆದಿರುವ, ತೈವಾನ್ ಅಧ್ಯಕ್ಷ ವಿಲಿಯಂ ಲೈ ಚಿಂಗ್-ಟೆ ಅವರು ರಕ್ಷಣಾ ವೆಚ್ಚವನ್ನು ಜಿಡಿಪಿಯ 3.3% ಗೆ ಏರಿಸಿದ್ದಾರೆ. ಅಮೆರಿಕವು ತೈವಾನ್​ಗೆ ಸುಮಾರು 11 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಸಹಾಯವನ್ನು ಘೊಷಿಸಿದೆ.

ಸೇನಾ ಚಟುವಟಿಕೆ, ಸಮರಾಭ್ಯಾಸ

ಚೀನಾ ಇತ್ತೀಚೆಗೆ ತೈವಾನ್ ಸುತ್ತಮುತ್ತ ಬೃಹತ್ ಪ್ರಮಾಣದ ಸೇನಾ ಸಮರಾಭ್ಯಾಸಗಳನ್ನು ನಡೆಸುತ್ತಿದೆ. ಇದು ಕೇವಲ ತರಬೇತಿಯಲ್ಲದೆ, ತೈವಾನ್ ಅನ್ನು ಸಂಪೂರ್ಣವಾಗಿ ದಿಗ್ಬಂಧನ ಮಾಡುವ ತಾಲೀಮು ಎಂಬುದು ವಿಶ್ಲೇಷಕರ ಅಭಿಪ್ರಾಯ. ಅಲ್ಲದೆ, ಕೆಲ ದಿನಗಳ ಹಿಂದಷ್ಟೇ ಚೀನಾದ ಡ್ರೋನ್​ಗಳು ತೈವಾನ್​ನ ಪ್ರಟಾಸ್ ದ್ವೀಪದ ವಾಯುಪ್ರದೇಶವನ್ನು ಪ್ರವೇಶಿಸಿದ್ದು, ಇದು ಹಲವು ದಶಕಗಳಲ್ಲೇ ಮೊದಲ ಬಾರಿಗೆ ನಡೆದ ನೇರ ಉಲ್ಲಂಘನೆಯಾಗಿದೆ. ಅಲ್ಲದೆ, ಚೀನಾದ ಸೇನೆಯು ತೈವಾನ್​ನ ರಾಜಕೀಯ ನಾಯಕತ್ವವನ್ನು ಗುರಿಯಾಗಿಸಿಕೊಂಡು ನಡೆಸುವ ‘ಸರ್ಜಿಕಲ್ ಸ್ಟ್ರೆ ೖಕ್’ ಮಾದರಿಯ ದಾಳಿಗಳ ಬಗ್ಗೆ ವಿಶೇಷ ತರಬೇತಿ ನೀಡುತ್ತಿದೆ.

ಭದ್ರತಾ ಕಟ್ಟೆಚ್ಚರ

ಈ ಬೆಳವಣಿಗೆಯು ಚೀನಾದ ಆಂತರಿಕ ಭದ್ರತೆಯಲ್ಲಿ ಬಿರುಕು ಮೂಡಿಸಬಹುದು ಎಂಬ ಅನುಮಾನದಿಂದ ಅಲ್ಲಿನ ಸರ್ಕಾರವು ಮಿಲಿಟರಿ ಅಧಿಕಾರಿಗಳ ಮೇಲೆ ನಿಗಾ ಹೆಚ್ಚಿಸಿದೆ. ಒಟ್ಟಾರೆಯಾಗಿ ಈ ಘಟನೆಯು ಚೀನಾದ ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆ ಎಷ್ಟಿದೆ ಎಂಬುದನ್ನು ದರ್ಶಿಸಿದೆ. ತನ್ನ ಅತ್ಯಂತ ಆಪ್ತ ಸೇನಾ ದಳಪತಿಯನ್ನೇ ಬಂಧಿಸಿರುವುದು ಕ್ಸಿ ಜಿನ್​ಪಿಂಗ್ ಅವರ ಕಠಿಣ ಆಡಳಿತದ ಅಥವಾ ಸರ್ವಾಧಿಕಾರಿ ಧೋರಣೆಯ ದ್ಯೋತಕವಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಜಪಾನ್​ನಲ್ಲೂ ರಾಜಕೀಯ ಕಂಪನ!

ಜಪಾನ್ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ 2025ರ ಅಕ್ಟೋಬರ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಸನೇ ತಕೈಚಿ (64) ಮೂರೇ ತಿಂಗಳಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರು ಜಪಾನ್ ಸಂಸತ್​ನ ಕೆಳಮನೆಯಾಗಿರುವ ಪಾರ್ಲಿಮೆಂಟ್​ನ್ನು ವಿಸರ್ಜಿಸಿದ್ದಾರೆ. ಸನೇ ತಕೈಚಿ ಪ್ರಧಾನಿಯಾದ ನಂತರ ತೈವಾನ್ ಪರ ನಿಲುವು ತಳೆದಿದ್ದು, ಚೀನಾ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದೊಂದಿಗೂ ಕಠಿಣವಾಗಿ ವರ್ತಿಸಿದ ಸನೇ ತಕೈಚಿ ಜಪಾನ್ ಸೇನೆಯನ್ನು ಬಲಿಷ್ಠಗೊಳಿಸಲು ಮೂರೇ ತಿಂಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡರು. ಲಿಬರಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಸನೇ ತಕೈಚಿ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

465 ಸದಸ್ಯಬಲ್ಯದ ಪಾರ್ಲಿಮೆಂಟ್​ಗೆ ಫೆಬ್ರವರಿ 8ರಂದು ಮತದಾನ ನಡೆಯಲಿದೆ. ಶಿಂಜೋ ಅಬೆ ಅವರ ನಿಧನದ ನಂತರ ಕೇವಲ ಒಂದು ವರ್ಷ ಪ್ರಧಾನಿಯಾಗಿದ್ದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷ ನಿರಂತರ ಸೋಲುಗಳನ್ನು ಅನುಭವಿಸಿತು. ಈ ಕಾರಣದಿಂದ ಬಲಪಂಥೀಯ ವಾದದ ನಾಯಕಿ ಸನೇ ತಕೈಚಿ ಪ್ರಧಾನಿಯಾಗುವ ಮೂಲಕ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯವನ್ನು ತಕ್ಕಮಟ್ಟಿಗೆ ಸರಿಪಡಿಸಿದರು. ಈ ಜನಪ್ರಿಯತೆಯ ಆಧಾರದ ಮೇಲೆ ಅವರು ಚುನಾವಣೆ ಎದುರಿಸಲು ಸಜ್ಜಾಗಿದ್ದು, ಅವಧಿ ಮುನ್ನವೇ ಪಾರ್ಲಿಮೆಂಟ್ ವಿಸರ್ಜಿಸಿರುವುದು ಕುತೂಹಲ ಮೂಡಿಸಿದೆ.

ಹೀಗಿದೆ ವ್ಯವಸ್ಥೆ

ಜಪಾನ್ ಪಾರ್ಲಿಮೆಂಟ್​ಗೆ ನ್ಯಾಷನಲ್ ಡಯಟ್ ಅಥವಾ ಕೊಕ್ಕೈ ಎಂದು ಹೆಸರು. ಇದು ಎರಡು ಮನೆಗಳನ್ನು ಹೊಂದಿದೆ: ಕೆಳಮನೆಯು ‘ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್’ ಆಗಿದ್ದು, ಜಪಾನೀಸ್​ನಲ್ಲಿ ಇದನ್ನು ‘ಶೂಗಿಇನ್’ ಎಂದು ಕರೆಯುತ್ತಾರೆ. ಕೆಳಮನೆಯೇ ಹೆಚ್ಚು ಶಕ್ತಿಶಾಲಿಯಾಗಿದ್ದು, ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವುದು, ಬಜೆಟ್ ಅನುಮೋದನೆ ಮುಂತಾದವುಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೇಲ್ಮನೆಯು ‘ಹೌಸ್ ಆಫ್ ಕೌನ್ಸಿಲರ್ಸ್’ ಆಗಿದ್ದು, ಜಪಾನೀಸ್​ನಲ್ಲಿ ಇದನ್ನು ‘ಸಂಗಿಇನ್’ ಎಂದು ಕರೆಯುತ್ತಾರೆ. ಇದು ಸ್ಥಿರತೆ ಮತ್ತು ಪರಿಶೀಲನೆಯ ಪಾತ್ರವನ್ನು ನಿರ್ವಹಿಸುತ್ತದೆ, ಸದಸ್ಯರು 6 ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net