ಯೂಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜನರ ಜೀವನಶೈಲಿ ಮತ್ತು ಸಾಮಾಜಿಕ ಪದ್ಧತಿಗಳಲ್ಲಿ ಭಾರೀ ಬದಲಾವಣೆಗಳಾಗಿದ್ದು, ಆನ್ಲೈನ್ ವಿವಾಹಗಳು ಹೆಚ್ಚಿವೆ. ಯೂಕ್ರೇನಿಯನ್ನರು 2026ರ ಮೊದಲ ಆರು ತಿಂಗಳಲ್ಲಿ, ಒಟ್ಟು 79,516 ವಿವಾಹಗಳನ್ನು ನೋಂದಾಯಿಸಿದ್ದು, ಅದರಲ್ಲಿ 30,488 ವಾಹಗಳು ಆನ್ಲೈನ್ ಮೂಲಕ ನಡೆದಿವೆ. ಇದು 2025ಕ್ಕೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. 2025ರ ವಾರ್ಷಿಕ ಒಟ್ಟು ವಿವಾಹಗಳಲ್ಲಿ ಆನ್ಲೈನ್ ನೋಂದಣಿಗಳು 18.4% ಮಾತ್ರ ಆಗಿದ್ದವು. ಯೂಕ್ರೇನ್ ಸರ್ಕಾರವು ಪ್ರಾಯೋಗಿಕ ಆನ್ಲೈನ್ ವಿವಾಹ ಯೋಜನೆಯನ್ನು ಇನ್ನೆರಡು ವರ್ಷಗಳ ಕಾಲ ವಿಸ್ತರಿಸಿದೆ. ವಿದೇಶದ 48 ದೇಶಗಳಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಭೌತಿಕ ವಿವಾಹ ಪ್ರಮಾಣಪತ್ರಗಳನ್ನು ತಲುಪಿಸುವ ಸೌಲಭ್ಯವನ್ನು ಸರ್ಕಾರ ವಿಸ್ತರಿಸಿದೆ. ಮುಂಬರುವ ದಿನಗಳಲ್ಲಿ ವಿಧವೆಯರು ಮತ್ತು ವಿದುರರು ಆನ್ಲೈನ್ ಮೂಲಕ ಮರುಮದುವೆಯಾಗುವ ಸೌಲಭ್ಯವನ್ನು ಹಾಗೂ ಅಂಗವಿಕಲರ ಸುಲಭ ಬಳಕೆಗೆ ನೆರವಾಗುವಂತೆ ಸಂಕೇತ ಭಾಷಾ (ಸೈನ್ ಲ್ಯಾಂಗ್ವೇಜ್) ತರ್ಜುಮೆ ದಾರರೊಂದಿಗೆ ವಿಡಿಯೋ ವಿವಾಹ ಸಮಾರಂಭಗಳನ್ನು ನಡೆಸಲಾಗುತ್ತದೆ.