ಒಂದೇ ತಂಡದ ದಿಗ್ಗಜ ಗೆಳೆಯರು… ಈಗ 3 ವರ್ಷಗಳಿಂದ ಮಾತಿಲ್ಲ! ಇಮ್ರಾನ್ ಖಾನ್ ಬಗ್ಗೆ ವಾಸಿಮ್ ಅಕ್ರಮ್ ಹೇಳಿದ್ದೇನು? Wasim Akram on Imran Khan

ಪಾಕಿಸ್ತಾನದ ಮಾಜಿ ಕ್ರಿಕೆಟ್ ತಂಡದ ಆಟಗಾರರಾದ ವಾಸಿಮ್ ಅಕ್ರಮ್ ಮತ್ತು ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಕ್ರಿಕೆಟ್ ತಂಡದ ಆಟಗಾರರಾದ ವಾಸಿಮ್ ಅಕ್ರಮ್ ಮತ್ತು ಇಮ್ರಾನ್ ಖಾನ್
Published on
ಇಸ್ಲಾಮಾಬಾದ್​: ಒಂದು ಕಾಲದಲ್ಲಿ ತಮ್ಮ ಮಾರಕ ಬೌಲಿಂಗ್​ ದಾಳಿ ಮೂಲಕ ವಿಶ್ವದ ಅಗ್ರಮಾನ್ಯ ಬ್ಯಾಟರ್​ಗಳ ನಿದ್ದೆಗೆಡಿಸಿದ್ದ ಬೌಲರ್​ಗಳಲ್ಲಿ ಪಾಕಿಸ್ತಾನದ ಇಮ್ರಾನ್​ ಖಾನ್​ ಹಾಗೂ ವಾಸಿಮ್​ ಅಕ್ರಮ್ (Wasim Akram on Imran Khan) ಮೇಲ್ಪಂತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಆಟಗಾರನಾಗಿ ನಿವೃತ್ತಿ ಹೊಂದಿದ ಬಳಿಕ ಇಮ್ರಾನ್​ ಖಾನ್​ ರಾಜಕೀಯದತ್ತ ಮುಖ ಮಾಡಿದರೆ, ವಾಸಿಮ್​ ಕ್ರಿಕೆಟ್​ಗೆ ತಮ್ಮ ಜೀವನವನ್ನು ಮುಡಿಪಾಟಿಟ್ಟರು. ಇಮ್ರಾನ್ ಖಾನ್​ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ ಜನರ ಬೆಂಬಲ ಅಭೂತಪೂರ್ವ ಮಟ್ಟದಲ್ಲಿ ದೊರೆತ ಪರಿಣಾಮ ದೇಶದ ಪ್ರಧಾನ ಮಂತ್ರಿ ಹುದ್ದೆಯನ್ನು ಕೂಡ ಅಲಂಕರಿಸಿದರು.
ಆದರೆ, ವಿಧಿಯಾಟ ಎಂಬಂತೆ ಈಗ ಸರಣಿ ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಮ್ರಾನ್​ ಖಾನ್​, ಸದ್ಯ ಅಡಿಯಾಲಾ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ತಮ್ಮ ನೆಚ್ಚಿನ ಗೆಳೆಯನ ಬಗ್ಗೆ ವಾಸಿಮ್​ ಅಕ್ರಮ್ ಬಳಿ ಕೇಳಿದಾಗ, ಅವರಾಡಿದ ಮಾತುಗಳು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ. ​

ನಾನು ಮೂರು ವರ್ಷದಿಂದ ಅವನೊಟ್ಟಿಗೆ ಮಾತನಾಡಿಲ್ಲ!

ಇತ್ತೀಚೆಗೆ ಇಮ್ರಾನ್​ ಖಾನ್​ ಬಗ್ಗೆ ಮಾತನಾಡಿರುವ ವಾಸಿಮ್​ ಅಕ್ರಮ್, ನಾನು ಇಮ್ರಾನ್​ ಜೊತೆ ಕಳೆದ ಮೂರು ವರ್ಷಗಳಿಂದ ಮಾತನಾಡಿಲ್ಲ. ಆದರೆ ಅವನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ತಿಳಿದಾಗ ಬಹಳ ಬೇಸರವಾಯಿತು.
ಅವನು ಇಲ್ಲಿವರೆಗೆ ಆರೋಪಿಯೇ ಹೊರತು ಅಪರಾಧಿಯಲ್ಲ, ಹೀಗಾಗಿ ಅವನಿಗೆ ನೀಡಬೇಕಾದ ವೈದ್ಯಕೀಯ ನೆರವನ್ನು ಸರ್ಕಾರ ಮತ್ತು ಜೈಲು ಸಿಬ್ಬಂದಿಗಳು ನೀಡಲೇ ಬೇಕು. ನಿಜವೆಂದರೆ ನಾನು ಅವನನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಾ ಇದ್ದೆನೆ. ನನ್ನ ಮತ್ತು ಅವನ ಸ್ನೇಹ ರಾಜಕೀಯ, ಕ್ರಿಕೆಟ್​ ಎಲ್ಲವನ್ನು ಮೀರಿದ್ದಾಗಿತ್ತೆಂದು ವಾಸಿಮ್​ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇಮ್ರಾನ್ ಖಾನ್ ಜೈಲು ಹಾದಿ

2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದ ಇಮ್ರಾನ್ ಖಾನ್, ನಾಲ್ಕು ವರ್ಷಗಳ ಬಳಿಕ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಮತದಲ್ಲಿ ಅಧಿಕಾರ ಕಳೆದುಕೊಂಡರು. ಅಂದಿನಿಂದ ಪಾಕ್ ಮಿಲಿಟರಿ ಹಾಗೂ ಪಿಟಿಐ ಪಕ್ಷದ ನಡುವೆ ನಿರಂತರ ರಾಜಕೀಯ ಸಂಘರ್ಷ ನಡೆಯುತ್ತಲೇ ಇದೆ.
ಮೇ 2023ರಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಮೇಲೆ ತೋಷಖಾನಾ (ಉಡುಗೊರೆಗಳ ಅಕ್ರಮ ಮಾರಾಟ) ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಪಿಟಿಐ ಪಕ್ಷ ಮತ್ತು ಇಮ್ರಾನ್ ಖಾನ್ ಬೆಂಬಲಿಗರು ಆರೋಪಿಸುತ್ತಾ ಬಂದಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಇಮ್ರಾನ್ ಖಾನ್ ಅವರ ಆರೋಗ್ಯ ಚೇತರಿಕೆ ಮತ್ತು ಮುಂದಿನ ರಾಜಕೀಯ ನಡೆ ಹೇಗಿರಲಿದೆ ಎಂಬುದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net