6 ಬಿಟ್ರನ್​​ ಪಿಎಂಗಳ ಜೊತೆ ಕೆಲಸ ಮಾಡಿದ ಬೆಕ್ಕಿದು! ಚೀಫ್ ಮೌಸರ್ ಲ್ಯಾರಿ ಬಗ್ಗೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ

ಲ್ಯಾರಿ ದಿ ಕ್ಯಾಟ್​ ಎಂದೇ ಹೆಸರುವಾಸಿಯಾದ ಬೆಕ್ಕು
ಲ್ಯಾರಿ ದಿ ಕ್ಯಾಟ್​ ಎಂದೇ ಹೆಸರುವಾಸಿಯಾದ ಬೆಕ್ಕು
Published on

ಪ್ರಮುಖ ಮುಖ್ಯಾಂಶಗಳು

  • ಬ್ರಿಟಿಷ್ ಪ್ರಧಾನಿ ಸ್ಟಾರ್ಮರ್ ರಾಜೀನಾಮೆ ಬೆನ್ನಲ್ಲೇ ಚೀಫ್​ ಮೌಸರ್​ ಲ್ಯಾರಿ ಹೆಸರು ವೈರಲ್​
  • ಮನುಷ್ಯರಂತೆ ಬಿಟ್ರನ್​ ಪ್ರಧಾನಿಗಳ ಜೊತೆ ಕೆಲಸ
  • 6 ಪ್ರಧಾನಿಗಳ ಅಡಿಯಲ್ಲಿ ಸೇವೆ ಸಲ್ಲಿಸಿದ ಈ ಬೆಕ್ಕು
Larry The Cat: ಬ್ರಿಟನ್​ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳು ಎದುರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಒತ್ತಡಗಳಿಂದಾಗಿ ಇದೀಗ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ 'ಲ್ಯಾರಿ ದಿ ಕ್ಯಾಟ್'​ ಹೆಸರು ಜಾಲತಾಣಗಳಲ್ಲಿ ಸಖತ್​ ಟ್ರೆಂಡ್​ ಆಗುತ್ತಿದೆ.
ಲಂಡನ್‌ನ 10 ಡೌನಿಂಗ್ ಸ್ಟ್ರೀಟ್ ಎಂದೇ ಖ್ಯಾತಿ ಗಳಿಸಿರುವ ಈ ಬೆಕ್ಕು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ 15 ವರ್ಷಗಳಲ್ಲಿ ಒಟ್ಟು 6 ಬ್ರಿಟನ್​ ಪ್ರಧಾನಿಗಳನ್ನು ನೋಡಿರುವ ಲ್ಯಾರಿ, ಈಗ ಏಳನೇ ಪ್ರಧಾನಿಯನ್ನು ಸ್ವಾಗತಿಸಲು ಎದುರುನೋಡುತ್ತಿದೆ. ಅಷ್ಟು ಪ್ರಧಾನ ಮಂತ್ರಿಗಳನ್ನು ಬಹಳ ಹತ್ತಿರದಿಂದ ನೋಡಿದ ಏಕೈಕ ಶಾಶ್ವತ ಕ್ಯಾಬಿನೆಟ್ ಸದಸ್ಯ ಎಂದರೆ ಅದು ಈ ಲ್ಯಾರಿ ದಿ ಕ್ಯಾಟ್​ ಎಂಬುದೇ ಅಚ್ಚರಿಯ ವಿಷಯ.
ಕೀರ್ ಸ್ಟಾರ್ಮರ್ ಅವರ ರಾಜೀನಾಮೆ ಘೋಷಣೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಲ್ಯಾರಿ ದಿ ಕ್ಯಾಟ್​ ಖಾತೆಯಿಂದ ಹೊರಬಿದ್ದ ಕೆಲವು ಪೋಸ್ಟ್​ಗಳು ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. "ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯನ್ನು ನಾನು ಸ್ವೀಕರಿಸಿದ್ದೇನೆ. ಮುಂದೆ ಯಾರೇ ಬಂದರೂ ನನ್ನ ಹೊಟ್ಟೆಗೆ ಆಹಾರ ಸಿಗುತ್ತದೆ ಎಂಬುದು ನನಗೆ ಮುಖ್ಯ ಎಂದು ಬರೆದುಕೊಂಡಿರುವುದು ಹಲವರಿಗೆ ಹಾಸ್ಯಸ್ಪದ ಅನಿಸಿದೆ.
ಈ ಕಂದು ಮತ್ತು ಬಿಳಿ ಬಣ್ಣದ ಬೆಕ್ಕನ್ನು 2011ರಲ್ಲಿ ಬ್ಯಾಟರ್‌ಸಿಯಾ ಡಾಗ್ಸ್ ಅಂಡ್ ಕ್ಯಾಟ್ಸ್ ಹೋಮ್‌ನಿಂದ ರಕ್ಷಿಸಿ, ಲಂಡನ್‌ನಲ್ಲಿರುವ ಪ್ರಧಾನ ಮಂತ್ರಿಯ ಅಧಿಕೃತ ನಿವಾಸಕ್ಕೆ ತರಲಾಯಿತು. ಅಂದಿನಿಂದ, ಇದು ಡೇವಿಡ್ ಕ್ಯಾಮರೂನ್, ಥೆರೆಸಾ ಮೇ, ಬೋರಿಸ್ ಜಾನ್ಸನ್, ಲಿಜ್ ಟ್ರಸ್, ರಿಷಿ ಸುನಕ್ ಮತ್ತು ಕೀರ್ ಸ್ಟಾರ್ಮರ್ ಸೇರಿ ಒಟ್ಟು ಆರು ಬ್ರಿಟಿಷ್ ಪ್ರಧಾನಿಗಳಿಗೆ ಸೇವೆ ಸಲ್ಲಿಸಿದೆ ಎನ್ನಲಾಗಿದೆ. ಈಗ ಬ್ರಿಟನ್ ರಾಜಕೀಯದಲ್ಲಿ ಶಾಶ್ವತ ಐಕಾನ್ ಆಗಿರುವ ಲ್ಯಾರಿ, ಪ್ರಧಾನಿ ನಿವಾಸದ ಹೊರಗೆ ವಿಶ್ವ ನಾಯಕರು, ಪತ್ರಕರ್ತರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಆಗಾಗ್ಗೆ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಸುದ್ದಿಯಲ್ಲಿರುತ್ತೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net