Escape Story: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ: 10 ವರ್ಷಗಳ ತಯಾರಿ, ಈ ಪ್ಲಾನ್ ಸಿನಿಮಾದನ್ನೂ ಮೀರಿಸುವಂತಿದೆ!

Escape Story
Escape Story
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪನ ಚಿತಾಭಸ್ಮದೊಂದಿಗೆ ಸ್ವಾತಂತ್ರ್ಯದ ಪಯಣ: ಸಮುದ್ರದ ಅಲೆಗಳ ನಡುವೆ ಸಾವನ್ನು ಗೆದ್ದ 9 ಜನರ ಸಾಹಸಗಾಥೆ!
  • ನರಕದಿಂದ ಸ್ವರ್ಗದತ್ತ 120 ನಿಮಿಷಗಳ ಪ್ರಯಾಣ: 10 ವರ್ಷದ ಗುಪ್ತ ಯೋಜನೆ ಸಫಲವಾದ ಕಥೆ
  • ಮೀನುಗಾರರ ವೇಷದಲ್ಲಿ ರಹಸ್ಯ ತಯಾರಿ
ಸಿಯೋಲ್: ಜಗತ್ತಿನ ಅತ್ಯಂತ ಕಟ್ಟುನಿಟ್ಟಿನ ದೇಶಗಳಲ್ಲಿ ಒಂದಾದ ಉತ್ತರ ಕೊರಿಯಾದಿಂದ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಕಿಮ್ ಕುಟುಂಬದ ಒಂಬತ್ತು ಸದಸ್ಯರು ಪ್ರಾಣದ ಹಂಗು ತೊರೆದು ಕೈಗೊಂಡ ಸಾಹಸಮಯ(Escape Story) ಪಯಣ ಈಗ ಜಗತ್ತಿನ ಗಮನ ಸೆಳೆದಿದೆ. ಹತ್ತು ವರ್ಷಗಳ ಕಾಲ ಅತ್ಯಂತ ರಹಸ್ಯವಾಗಿ ರೂಪಿಸಿದ ಯೋಜನೆಯ ಫಲವಾಗಿ, ಕೇವಲ ಎರಡೇ ಗಂಟೆಗಳಲ್ಲಿ ಈ ಕುಟುಂಬ ಸಾವಿನ ದವಡೆಯಿಂದ ಪಾರಾಗಿ ದಕ್ಷಿಣ ಕೊರಿಯಾ ತಲುಪುವಲ್ಲಿ ಯಶಸ್ವಿಯಾಗಿದೆ.

ಅಪ್ಪನ ಕನಸಿಗೆ ಗಂಡು ಮಕ್ಕಳ ಸಾಕಾರ

ಈ ಸಾಹಸದ ಬೀಜ ಬಿತ್ತಿದ್ದು ಕಿಮ್ ಸಹೋದರರ ತಂದೆ. ಸಮುದ್ರ ಮಾರ್ಗದ ಮೂಲಕ ದಕ್ಷಿಣ ಕೊರಿಯಾಕ್ಕೆ ಓಡಿಹೋಗಬೇಕೆಂದು ಅವರು 10 ವರ್ಷಗಳ ಹಿಂದೆಯೇ ಯೋಜಿಸಿದ್ದರು. ಆದರೆ ಆ ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅವರ ಗಂಡು ಮಕ್ಕಳಾದ ಕಿಮ್ ಇಲ್-ಹ್ಯೋಕ್ ಮತ್ತು ಕಿಮ್ ಯಿ-ಹ್ಯೋಕ್ ಅಪ್ಪನ ಆಸೆಯನ್ನು ಈಡೇರಿಸಲು ನಿರ್ಧರಿಸಿದರು. ಅವರು ಉತ್ತರ ಕೊರಿಯಾ ತೊರೆಯುವಾಗ ಅಪ್ಪನ ಚಿತಾಭಸ್ಮವನ್ನೂ ತಮ್ಮ ದೋಣಿಯಲ್ಲೇ ಹೊತ್ತೊಯ್ದಿದ್ದರು ಎಂಬುದು ಭಾವುಕ ಸಂಗತಿ.

ಮೀನುಗಾರರ ವೇಷದಲ್ಲಿ ರಹಸ್ಯ ತಯಾರಿ

ತಪ್ಪಿಸಿಕೊಳ್ಳುವ ಯೋಜನೆಗಾಗಿ ಕಿಮ್ ಯಿ-ಹ್ಯೋಕ್ ಸಮುದ್ರ ತೀರಕ್ಕೆ ವಾಸ್ತವ್ಯ ಬದಲಿಸಿ ಮೀನುಗಾರಿಕೆಯನ್ನು ಕಲಿತರು. ಸ್ವಂತ ದೋಣಿ ಖರೀದಿಸಿ, ಸ್ಥಳೀಯ ಭದ್ರತಾ ಅಧಿಕಾರಿಗಳಿಗೆ ಲಂಚ ನೀಡಿ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡರು. ಪ್ರತಿದಿನ ಮೀನುಗಾರಿಕೆಗೆ ಹೋಗುವ ನೆಪದಲ್ಲಿ ಗಡಿ ಪ್ರದೇಶದ ಭದ್ರತಾ ಸಿಬ್ಬಂದಿಯ ಗಸ್ತು ಅವಧಿ ಮತ್ತು ರಾಡಾರ್ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದು ಬರೋಬ್ಬರಿ ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯಾಗಿತ್ತು.

ಆ ಕರಾಳ ರಾತ್ರಿಯ ಸಾಹಸ

ಮೇ 6, 2023 ರಂದು ಬಿರುಗಾಳಿ ಮತ್ತು ಮಳೆಯ ಮುನ್ಸೂಚನೆ ಸಿಕ್ಕಾಗ ಕುಟುಂಬ ಈ ನಿರ್ಧಾರ ಕೈಗೊಂಡಿತು. ಮಳೆಯ ಕಾರಣ ರಾಡಾರ್‌ಗಳಲ್ಲಿ ದೋಣಿ ಪತ್ತೆಯಾಗುವುದು ಕಷ್ಟ ಎಂದು ಅವರು ಲೆಕ್ಕಾಚಾರ ಹಾಕಿದ್ದರು. ಕಿಮ್ ಇಲ್-ಹ್ಯೋಕ್ ಅವರ ಐದು ತಿಂಗಳ ಗರ್ಭಿಣಿ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು ಮೊದಲು ನೆಲಬಾಂಬ್ ಇರುವ ಅಪಾಯಕಾರಿ ಪ್ರದೇಶವನ್ನು ಕಾಲ್ನಡಿಗೆಯಲ್ಲೇ ದಾಟಬೇಕಾಯಿತು. ಸಿಕ್ಕಿಬೀಳುವ ಭೀತಿಯಿಂದ 4 ಮತ್ತು 6 ವರ್ಷದ ಇಬ್ಬರು ಕಂದಮ್ಮಗಳನ್ನು ಗೋಣಿಚೀಲದಲ್ಲಿ ಅಡಗಿಸಿ ಇಡಲಾಗಿತ್ತು. ಮಕ್ಕಳು ಕಿಂಚಿತ್ತೂ ಶಬ್ದ ಮಾಡದಂತೆ ಸೂಚಿಸಲಾಗಿತ್ತು.
ಸಣ್ಣ ದೋಣಿಯು ಸಮುದ್ರದಲ್ಲಿ ತೇಲುವ ಕಸದಂತೆ ಕಾಣುವಷ್ಟು ನಿಧಾನವಾಗಿ ಚಲಿಸಿತು. "ಆ ಸಮಯದಲ್ಲಿ ಇಂಜಿನ್ ಶಬ್ದಕ್ಕಿಂತ ನನ್ನ ಹೃದಯ ಬಡಿತವೇ ನನಗೆ ಜೋರಾಗಿ ಕೇಳಿಸುತ್ತಿತ್ತು," ಎಂದು ಕಿಮ್ ಇಲ್-ಹ್ಯೋಕ್ ಆ ಕ್ಷಣದ ಭಯವನ್ನು ನೆನಪಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಸಿಕ್ಕಿತು, ಆದರೆ ದುರಂತ ಬೆನ್ನಟ್ಟಿತು

ದಕ್ಷಿಣ ಕೊರಿಯಾದ ಯಿಯೋನ್‌ಪಯಾಂಗ್ ದ್ವೀಪದ ದೀಪಗಳು ಕಂಡಾಗ ಅವರ ಸಂಕಷ್ಟ ಕೊನೆಗೊಂಡಿತು. ದಕ್ಷಿಣ ಕೊರಿಯಾದ ನೌಕಾಪಡೆ ಅವರನ್ನು ರಕ್ಷಿಸಿತು. ಸಿಯೋಲ್ ತಲುಪಿದ ನಾಲ್ಕು ತಿಂಗಳ ನಂತರ ಕಿಮ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕುಟುಂಬವು ಹೊಸ ಜೀವನದ ಸಂಭ್ರಮದಲ್ಲಿತ್ತು.
ಆದರೆ, ಈ ಸಂತಸ ಬಹಳ ಕಾಲ ಉಳಿಯಲಿಲ್ಲ. ಕುಟುಂಬದ ಪಾರಾಗುವಿಕೆಗೆ ಹಗಲಿರುಳು ಶ್ರಮಿಸಿದ್ದ ಕಿರಿಯ ಸಹೋದರ ಕಿಮ್ ಯಿ-ಹ್ಯೋಕ್, ದಕ್ಷಿಣ ಕೊರಿಯಾ ತಲುಪಿದ ಕೇವಲ 19 ತಿಂಗಳ ನಂತರ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಮೃತಪಟ್ಟರು. ಕಷ್ಟಪಟ್ಟು ಪಡೆದ ಸ್ವಾತಂತ್ರ್ಯವನ್ನು ಅನುಭವಿಸುವ ಮೊದಲೇ ಅವರು ವಿಧಿವಶರಾದರು.

ಇಂದಿನ ಸ್ಥಿತಿ

ಪ್ರಸ್ತುತ ಕಿಮ್ ಇಲ್-ಹ್ಯೋಕ್ ದಕ್ಷಿಣ ಕೊರಿಯಾದಲ್ಲಿ ಬಾಣಸಿಗನಾಗಿ ತರಬೇತಿ ಪಡೆಯುತ್ತಿದ್ದಾರೆ. ಇದೇ ಮಾರ್ಚ್ 2026 ರಲ್ಲಿ ಅವರಿಗೆ ಎರಡನೇ ಪುತ್ರಿ ಜನಿಸಿದ್ದಾಳೆ. "ಉತ್ತರ ಕೊರಿಯಾದ ನರಕ ಸದೃಶ್ಯ ಜೀವನದಿಂದ ಪಾರಾದ ನಾನು ಅದೃಷ್ಟವಂತ," ಎನ್ನುತ್ತಾರೆ ಕಿಮ್. ಸದ್ಯ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಉತ್ತರ ಕೊರಿಯಾದ ದಮನಕಾರಿ ಆಡಳಿತದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net