ಇರಾನ್‌ನ ತೈಲ ರಫ್ತಿನ ಜೀವನಾಡಿ 'ಖಾರ್ಗ್ ದ್ವೀಪ' ಧ್ವಂಸ: ಡೊನಾಲ್ಡ್ ಟ್ರಂಪ್ ಘೋಷಣೆ! | Kharg Island

Kharg Island
Kharg Island
Published on
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಭೀಕರ ರೂಪ ಪಡೆದಿದೆ. ಇರಾನ್‌ನ ತೈಲ ರಫ್ತಿನ ಜೀವನಾಡಿ ಎಂದೇ ಕರೆಯಲ್ಪಡುವ 'ಖಾರ್ಗ್ ದ್ವೀಪ'ದ (Kharg Island) ಮೇಲಿರುವ ಸೇನಾ ನೆಲೆಗಳನ್ನು ಅಮೆರಿಕದ ವಾಯುಪಡೆ ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ದಾಳಿಯನ್ನು "ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದು" ಎಂದು ಅವರು ಬಣ್ಣಿಸಿದ್ದಾರೆ.
ಶುಕ್ರವಾರ 'ಟ್ರೂತ್ ಸೋಶಿಯಲ್' (Truth Social) ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್‌ನ ಕಚ್ಚಾ ತೈಲ ರಫ್ತಿನ ಬಹುಭಾಗವನ್ನು ನಿರ್ವಹಿಸುವ ಖಾರ್ಗ್ ದ್ವೀಪದಲ್ಲಿರುವ ಮಿಲಿಟರಿ ಗುರಿಗಳನ್ನು ಅಮೆರಿಕದ ಪಡೆಗಳು "ಸಂಪೂರ್ಣವಾಗಿ ನಿರ್ನಾಮ" (Totally Obliterated) ಮಾಡಿವೆ ಎಂದು ತಿಳಿಸಿದ್ದಾರೆ. "ನಮ್ಮ ಶಸ್ತ್ರಾಸ್ತ್ರಗಳು ವಿಶ್ವದಲ್ಲೇ ಅತ್ಯಂತ ಅತ್ಯಾಧುನಿಕ ಮತ್ತು ಶಕ್ತಿಶಾಲಿಯಾದವು. ಸೌಜನ್ಯದ ದೃಷ್ಟಿಯಿಂದ ನಾನು ಸದ್ಯಕ್ಕೆ ಅಲ್ಲಿನ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಲ್ಲ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಅಡ್ಡಿಪಡಿಸಿದರೆ, ತೈಲ ಬಾವಿಗಳನ್ನೂ ನಾಶಪಡಿಸಲು ಹಿಂದೆಮುಂದೆ ನೋಡುವುದಿಲ್ಲ" ಎಂದು ಕಟುವಾದ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧ ನೌಕೆಗಳ ಪಹರೆ

ಇರಾನ್ ನಡೆಸಿದ ಸರಣಿ ದಾಳಿಗಳಿಂದಾಗಿ ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಮತ್ತು ಅನಿಲ ಸಂಚಾರ ನಡೆಸುವ 'ಹಾರ್ಮುಜ್ ಜಲಸಂಧಿ'ಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ, ತೈಲ ಟ್ಯಾಂಕರ್‌ಗಳಿಗೆ ರಕ್ಷಣೆ ನೀಡಲು ಅಮೆರಿಕದ ನೌಕಾಪಡೆ ಶೀಘ್ರದಲ್ಲೇ ಕಾರ್ಯಪ್ರವೃತ್ತವಾಗಲಿದೆ ಎಂದು ಟ್ರಂಪ್ ಖಚಿತಪಡಿಸಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಪೆಂಟಗನ್, ಜಪಾನ್ ಮೂಲದ 'ಯುಎಸ್‌ಎಸ್ ಟ್ರಿಪೋಲಿ' (USS Tripoli) ಯುದ್ಧನೌಕೆಯನ್ನು ಸುಮಾರು 2,500 ಮರೀನ್ ಸೈನಿಕರೊಂದಿಗೆ ಈ ಭಾಗಕ್ಕೆ ರವಾನಿಸಿದೆ.

15,000 ಗುರಿಗಳ ಮೇಲೆ ದಾಳಿ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ನೀಡಿರುವ ಮಾಹಿತಿಯಂತೆ, ಶುಕ್ರವಾರದ ದಾಳಿಯು ಈ ಯುದ್ಧದ ಅತಿದೊಡ್ಡ ದಾಳಿಯಾಗಿದೆ. ಕಳೆದ ಎರಡು ವಾರಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಸುಮಾರು 15,000 ಗುರಿಗಳನ್ನು ಧ್ವಂಸಗೊಳಿಸಿವೆ. ಇದರಲ್ಲಿ 7,600 ದಾಳಿಗಳನ್ನು ಇಸ್ರೇಲ್ ಕೇವಲ ಇರಾನ್‌ನ ಕ್ಷಿಪಣಿ ತಾಣಗಳ ಮೇಲೆ ನಡೆಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಟೆಹ್ರಾನ್ ನಗರದಲ್ಲಿ ಶುಕ್ರವಾರ ತಡರಾತ್ರಿ ಭೀಕರ ಸ್ಫೋಟಗಳು ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

$100 ದಾಟಿದ ತೈಲ ಬೆಲೆ

ಈ ಭೀಕರ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ತಕ್ಷಣವೇ ಬೀರಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 42 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಳ ಗಡಿ ದಾಟಿದೆ. ಇದು ವಿಶ್ವದಾದ್ಯಂತ ಹಣದುಬ್ಬರ ಮತ್ತು ಇಂಧನ ಪೂರೈಕೆಯ ಆತಂಕವನ್ನು ಹೆಚ್ಚಿಸಿದೆ.

ಇರಾನ್‌ನಲ್ಲಿ ಆಂತರಿಕ ಅಸ್ಥಿರತೆ 

ಫೆಬ್ರವರಿ 28 ರಂದು ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾದ ನಂತರ, ಅವರ ಪುತ್ರ ಮುಜ್ತಬಾ ಖಮೇನಿಯನ್ನು ಹೊಸ ನಾಯಕನೆಂದು ಘೋಷಿಸಲಾಗಿತ್ತು. ಆದರೆ ಅವರು ಕೂಡ ಗಾಯಗೊಂಡಿದ್ದಾರೆ ಎಂಬ ವರದಿಗಳಿವೆ. ಅವರ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net