ಅಲಿ ಖಮೇನಿ ಅಂತ್ಯಕ್ರಿಯೆ ವೇಳೆ ಮಾಸ್ಕ್ ಧರಿಸಿ ಕಾಣಿಸಿಕೊಂಡ ಆ ನಿಗೂಢ ವ್ಯಕ್ತಿ ಯಾರು? ಕೊನೆಗೂ ಸಿಕ್ತು ಉತ್ತರ...Khamenei Funeral

ಅಲಿ ಖಮೇನಿ ಅಂತ್ಯಕ್ರಿಯೆ ವೇಳೆ ಮಾಸ್ಕ್ ಧರಿಸಿ ಕಾಣಿಸಿಕೊಂಡ ಆ ನಿಗೂಢ ವ್ಯಕ್ತಿ ಯಾರು? ಕೊನೆಗೂ ಸಿಕ್ತು ಉತ್ತರ...Khamenei Funeral
ಅಲಿ ಖಮೇನಿ ಅಂತ್ಯಕ್ರಿಯೆ ವೇಳೆ ಮಾಸ್ಕ್ ಧರಿಸಿ ಕಾಣಿಸಿಕೊಂಡ ಆ ನಿಗೂಢ ವ್ಯಕ್ತಿ ಯಾರು? ಕೊನೆಗೂ ಸಿಕ್ತು ಉತ್ತರ...Khamenei Funeral
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್ ಮಾಜಿ ಪರಮೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ರಹಸ್ಯ ಮಾಸ್ಕ್ ವ್ಯಕ್ತಿ ಯಾರು?
  • ಲಕ್ಷಾಂತರ ಜನರ ಸಮ್ಮುಖದಲ್ಲಿ ಮುಕ್ತಾಯಗೊಂಡ ಇರಾನ್ ಮಾಜಿ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ
  • ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಕಪ್ಪು ಮಾಸ್ಕ್ ಧರಿಸಿ ಕುಳಿತಿದ್ದ ನಿಗೂಢ ವ್ಯಕ್ತಿಯ ಗುರುತು ಪತ್ತೆ
  • ಮಾಸ್ಕ್ ಧರಿಸಿ ತಾತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಲಿ ಖಮೇನಿ ಹಿರಿಯ ಮೊಮ್ಮಗ ಮೊಹಮ್ಮದ್ ಜವಾದ್
Khamenei Funeral : ಇರಾನ್‌ನ ಮಾಜಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಲಕ್ಷಾಂತರ ಜನರ ಸಮ್ಮುಖದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವಾಯುದಾಳಿಯಲ್ಲಿ ಖಮೇನಿ ಹಾಗೂ ಅವರ ಕುಟುಂಬದವರು ಹತರಾಗಿದ್ದರು. ದಾಳಿ ನಡೆದ ಸುಮಾರು ನಾಲ್ಕು ತಿಂಗಳ ಬಳಿಕ ಅವರ ತವರು ನಗರವಾದ ಮಶಾದ್‌ನಲ್ಲಿ ಅಧಿಕೃತ ಅಂತ್ಯಕ್ರಿಯೆ ಮೆರವಣಿಗೆಯನ್ನು ಆಯೋಜಿಸಲಾಯಿತು. ಈ ವೇಳೆ ಇಡೀ ಇರಾನ್ ಕಂಬನಿ ಮಿಡಿಯಿತು. ಆದರೆ, ಈ ಭಾವುಕ ವಿದಾಯದ ನಡುವೆಯೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ರಹಸ್ಯ ವ್ಯಕ್ತಿಯೊಬ್ಬ ಇಡೀ ವಿಶ್ವದ ಗಮನ ಸೆಳೆದಿದ್ದಾನೆ.
ಅಂತ್ಯಕ್ರಿಯೆಯ ಪ್ರಾರ್ಥನೆಯ ವೇಳೆ ಮುಂಚೂಣಿಯ ಸಾಲಿನಲ್ಲಿ ಕಪ್ಪು ಬಣ್ಣದ ಫೇಸ್ ಮಾಸ್ಕ್ ಹಾಗೂ ಕಪ್ಪು ಬೇಸ್‌ಬಾಲ್ ಕ್ಯಾಪ್ ಧರಿಸಿ ಕುಳಿತಿದ್ದ ವ್ಯಕ್ತಿಯ ಸುತ್ತ ಹತ್ತಾರು ವದಂತಿಗಳು ಹರಿದಾಡತೊಡಗಿದ್ದವು. ಇರಾನ್‌ನ ಇಂದಿನ ನಾಯಕತ್ವದ ಭದ್ರತೆಯ ನಡುವೆ ಈ ರೀತಿ ಮುಖ ಮುಚ್ಚಿಕೊಂಡು ಬಂದ ವ್ಯಕ್ತಿ ಯಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದು ಇರಾನ್‌ನ ಪ್ರಸ್ತುತ ಪರಮೋಚ್ಚ ನಾಯಕ ಹಾಗೂ ಖಮೇನಿ ಅವರ ಪುತ್ರನಾದ ಮೊಜ್ತಾಬಾ ಖಮೇನಿ ಇರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ಆರಂಭವಾದವು.
ಆದರೆ, ಇರಾನ್ ಮಾಧ್ಯಮಗಳು ಈ ರಹಸ್ಯ ವ್ಯಕ್ತಿಯ ಗುರುತನ್ನು ಪತ್ತೆಹಚ್ಚುವ ಮೂಲಕ ಜಾಗತಿಕ ವದಂತಿಗಳಿಗೆ ತೆರೆ ಎಳೆದಿವೆ. ಮಾಸ್ಕ್ ಧರಿಸಿದ್ದ ಆ ವ್ಯಕ್ತಿ ಮಾಜಿ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಹಿರಿಯ ಮೊಮ್ಮಗ ಮೊಹಮ್ಮದ್ ಜವಾದ್ ಖಮೇನಿ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆರಂಭದಲ್ಲಿ ಇರಾನ್‌ನ ಮುಂದಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಅವರೇ ಹೀಗೆ ಬಂದಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಕೊನೆಗೂ ಆ ಮುಖವಾಡದ ಹಿಂದಿದ್ದ ನಿಜವಾದ ಮುಖ ಮೊಮ್ಮಗ ಜವಾದ್ ಅವರದ್ದೇ ಎಂದು ಖಚಿತಪಟ್ಟಿದೆ.
ಮಾಧ್ಯಮಗಳ ವರದಿ ಪ್ರಕಾರ, ಫೆಬ್ರವರಿ 28 ರಂದು ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯ ಸಮಯದಲ್ಲಿ ಮೊಹಮ್ಮದ್ ಜವಾದ್ ಅವರ ಮುಖಕ್ಕೆ ತೀವ್ರ ಗಾಯಗಳಾಗಿದ್ದವು. ಮುಖದ ಮೇಲಿನ ಗಾಯದ ಕಲೆಗಳು ಮತ್ತು ಗಂಭೀರ ಸ್ವರೂಪದ ಗಾಯದ ಕಾರಣದಿಂದಾಗಿಯೇ ಅವರು ಅನಿವಾರ್ಯವಾಗಿ ಮುಖವಾಡ ಧರಿಸಿ ತಾತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಯಿತು ಎಂದು ಹೇಳಲಾಗುತ್ತಿದೆ. ತೀವ್ರ ದುಃಖದ ನಡುವೆಯೂ ಅವರು ತಮ್ಮ ಕುಟುಂಬದ ಅಂತಿಮ ವಿಧಿವಿಧಾನಗಳಲ್ಲಿ ಮುಂಚೂಣಿಯಲ್ಲಿ ನಿಂತು ಭಾಗವಹಿಸಿದ್ದರು.
ಮತ್ತೊಂದೆಡೆ, ಇರಾನ್‌ನ ಪ್ರಸ್ತುತ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೆ ಗೈರುಹಾಜರಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕನ್ ಗುಪ್ತಚರ ಸಂಸ್ಥೆಗಳ ಮಾಹಿತಿಯ ಪ್ರಕಾರ, ಅಂದು ನಡೆದ ವಾಯುದಾಳಿಯ ವೇಳೆ ಮೊಜ್ತಾಬಾ ಅವರು ತಮ್ಮ ತಂದೆಯ ನಿವಾಸದ ಮತ್ತೊಂದು ಕೋಣೆಯಲ್ಲಿದ್ದರು. ದಾಳಿಯಿಂದ ಅವರು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದರೂ, ಅವರ ಮುಖ ಸಂಪೂರ್ಣವಾಗಿ ವಿರೂಪಗೊಂಡಿದೆ ಹಾಗೂ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಂತ್ಯಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ನಂಬಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net