10 ವರ್ಷ, 6 ಪ್ರಧಾನಿ! 23 ತಿಂಗಳಿಗೆ ರಾಜೀನಾಮೆ ಘೋಷಿಸಲು ಸ್ಟಾರ್ಮರ್​ ಮಾಡಿಕೊಂಡ ಆ 4 ಎಡವಟ್ಟೇ ಕಾರಣ?

ಬ್ರಿಟನ್​ ಮಾಜಿ ಪ್ರಧಾನಿ ಕೀರ್​ ಸ್ಟಾರ್ಮರ್​
ಬ್ರಿಟನ್​ ಮಾಜಿ ಪ್ರಧಾನಿ ಕೀರ್​ ಸ್ಟಾರ್ಮರ್​
Published on

ಪ್ರಮುಖ ಮುಖ್ಯಾಂಶಗಳು

  • ಯುಕೆ ಪ್ರಧಾನಿ ಹುದ್ದೆಗೆ ಕೀರ್​ ಸ್ಟಾರ್ಮರ್​ ರಾಜೀನಾಮೆ
  • ಪಿಎಂ ಹಾಗೂ ದಿ ಲೇಬರ್​ ಪಕ್ಷದ ಸ್ಥಾನಕ್ಕೆ ಗುಡ್​ಬೈ
  • ಸ್ಟಾರ್ಮರ್​ ಮಾಡಿದ ತಪ್ಪುಗಳೇ ಈ ಸ್ಥಿತಿಗೆ ಕಾರಣ?
ಲಂಡನ್​: ಪಿಎಂ ಹುದ್ದೆಗೆ ಮತ್ತು ಲೇಬರ್​ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯುಕೆ ಮಾಜಿ ಪ್ರಧಾನಿ ಕೀರ್ ಸ್ಟಾರ್ಮರ್, 2024ರ ಜುಲೈನಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೇರಿದ 23 ತಿಂಗಳಲ್ಲೇ ಪಟ್ಟದಿಂದ ಕೆಳಗಿಳಿದಿರುವುದು ಸದ್ಯ ಜಾಗತಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕೀರ್​ ಅವರ ರಾಜೀನಾಮೆಯಿಂದಾಗಿ ಬ್ರಿಟನ್ ಕಳೆದ 10 ವರ್ಷಗಳಲ್ಲಿ 7ನೇ ಪ್ರಧಾನಿಯನ್ನು ನೋಡುವ ಹೊಸ್ತಿಲಲ್ಲಿದೆ. ಅಸಲಿಗೆ, ಬ್ರಿಟನ್​ ರಾಜಕೀಯದಲ್ಲಿ ಆಂತರಿಕೆ ಸಮಸ್ಯೆಗಳು, ತಮ್ಮ ಮೇಲೆ ತೀವ್ರ ಒತ್ತಡ ಹಾಕಿದ ಕಾರಣಕ್ಕೇ ಅವರು ಈ ನಿರ್ಧಾರ ಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಕುರಿತಾಗಿ ಇಲ್ಲಿಯವರೆಗೆ ಸ್ಟಾರ್ಮರ್​ ಯಾವುದೇ ರೀತಿ ಸ್ಪಷ್ಟನೆ ಅಥವಾ ಬೆರಳು ಮಾಡಿ ಯಾರ ಬಗ್ಗೆಯೂ ಮಾತನಾಡಿಲ್ಲ.  

ಸ್ಟಾರ್ಮರ್ ರಾಜೀನಾಮೆಗೆ ಕಾರಣಗಳೇನು?

ಕೀರ್ ಸ್ಟಾರ್ಮರ್ ಅವರ ರಾಜೀನಾಮೆ ದಿಢೀರ್​ ಆಗಿದ್ದಲ್ಲ. ಕಳೆದ ಕೆಲವು ತಿಂಗಳುಗಳಿಂದ ಸ್ವಪಕ್ಷದ (ಲೇಬರ್ ಪಾರ್ಟಿ) ಸಂಸದರಲ್ಲೇ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಇದು ಆಂತರಿಕವಾಗಿ ಪಕ್ಷದ ನಾಯಕರಲ್ಲಿ ವೈಮನಸ್ಸು ಮೂಡುವಂತೆ ಮಾಡಿತ್ತು.  

ದಾಖಲೆಯ ಗೆಲುವು ಶೂನ್ಯ 

2024ರ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದರೂ, ಅಧಿಕಾರಕ್ಕೆ ಬಂದ ನಂತರ ಲೇಬರ್ ಪಕ್ಷದ ಜನಪ್ರಿಯತೆ ತಲೆಕೆಳಗಾಯಿತು. ಗೆದ್ದಾಗ ಇದ್ದ ಜೋಶ್​, ಅಧಿಕಾರದ ಅವಧಿಯಲ್ಲಿ ದಿನದಿಂದ ದಿನಕ್ಕೆ ಕಣ್ಮರೆಯಾಯಿತು. ಸ್ಟಾರ್ಮರ್ ಅವರ ಆಡಳಿತ ವೈಖರಿಯನ್ನು ಬೆಂಬಲಿಸದ ಪಕ್ಷದ ನಾಯಕರು, ಸಂಸದರು, ನಾಯಕತ್ವ ಬದಲಾವಣೆಗೆ ಒತ್ತಡ ಹೇರಲು ಪ್ರಾರಂಭಿಸಿದರು. ಇದು ಅವರ ರಾಜೀನಾಮೆಗೆ ಒಂದು ಬಲವಾದ ಕಾರಣ. 

ಆರ್ಥಿಕ ಮತ್ತು ಆಡಳಿತಾತ್ಮಕ ವೈಫಲ್ಯ

ಸ್ಟಾರ್ಮರ್ ಸರ್ಕಾರವು ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮತ್ತು ನಾಗರಿಕರ ಜೀವನ ವೆಚ್ಚದ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಜನರ ಜೀವನಮಟ್ಟ ಸುಧಾರಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಕೇಳಿಬಂದಿತು. ಇದನ್ನೇ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಂಡಿತು. 

ಪೀಟರ್ ಮ್ಯಾಂಡೆಲ್ಸನ್ ನೇಮಕಾತಿ ವಿವಾದ

ಸ್ಟಾರ್ಮರ್ ಅವರ ಇಮೇಜ್‌ಗೆ ದೊಡ್ಡ ಹೊಡೆತ ನೀಡಿದ್ದೇ ಮಾಜಿ ಸಂಸದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕದ ಬ್ರಿಟನ್ ರಾಯಭಾರಿಯನ್ನಾಗಿ ನೇಮಕ ಮಾಡಿದ ನಿರ್ಧಾರ. ಕುಖ್ಯಾತ ಅಪರಾಧಿ ಜೆಫ್ರಿ ಎಪ್ಸ್ಟಿನ್​ ಜೊತೆ ಮ್ಯಾಂಡೆಲ್ಸನ್ ನಂಟು ಹೊಂದಿದ್ದ ವಿಷಯ ಬಹಿರಂಗಗೊಂಡ ಕೂಡಲೇ ಅವರನ್ನು ಹುದ್ದೆಯಿಂದ ವಜಾ ಮಾಡಲಾಯಿತು. ಆದರೆ, ಅಷ್ಟರೊಳಗೆ ಸ್ಟಾರ್ಮರ್ ಸರ್ಕಾರದ ಹೆಸರಿಗೆ ಭಾರಿ ಕಳಂಕ ಅಂಟಿಕೊಂಡಿತ್ತು.

ಸ್ಟಾರ್ಮರ್ ಸಾಧನೆಗಳೇನು?

ದೇಶೀಯವಾಗಿ ಸಾಕಷ್ಟು ಟೀಕೆ ಮತ್ತು ವಿವಾದಗಳನ್ನು ಎದುರಿಸಿದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್​ ಸ್ಟಾರ್ಮರ್ ತೆಗೆದುಕೊಂಡ ಕೆಲವು ಮಹತ್ವದ ನಿರ್ಧಾರಗಳು ಜನರ ಗಮನ ಸೆಳೆದಿವೆ. 
  • ಉಕ್ರೇನ್ ಪರ ಬೆಂಬಲ: ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಯುರೋಪಿಯನ್ ರಾಷ್ಟ್ರಗಳ ಒಗ್ಗಟ್ಟಿನ ಬೆಂಬಲವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
  • ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ಯುದ್ಧದ ಜಾಗತಿಕ ಪ್ರಭಾವ ಮತ್ತು ಆರ್ಥಿಕ ಪರಿಣಾಮಗಳನ್ನು ತಗ್ಗಿಸಲು ಸ್ಟಾರ್ಮರ್​ ಕೆಲವು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದ್ದು ಇಲ್ಲಿ ಗಮನಾರ್ಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net