ಕಾಬೂಲ್‌ನಲ್ಲಿ ರಕ್ತಪಾತ: ಆಸ್ಪತ್ರೆ ಮೇಲೆ ಪಾಕ್ ವಾಯುಪಡೆ ಅಟ್ಟಹಾಸ: 400 ಮಂದಿ ಸಾವು! | Kabul Strike

Kabul Strike
Kabul Strike
Published on
ಕಾಬೂಲ್: ಕಳೆದ ಮೂರು ವಾರಗಳಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷ ಈಗ ಇನಷ್ಟು ಭೀಕರತೆಗೆ ತಲುಪಿದೆ. ಸೋಮವಾರ ತಡರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ(Kabul Strike) ದಾಳಿಯಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಕಾಬೂಲ್‌ನ 9ನೇ ಪೊಲೀಸ್ ಜಿಲ್ಲೆಯಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ (Drug Rehabilitation Center) ಮತ್ತು ಆಸ್ಪತ್ರೆಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಇಡೀ ಕಾಬೂಲ್ ನಗರ ಭೀಕರ ಸ್ಫೋಟದ ಸದ್ದಿಗೆ ನಡುಗಿತು. ರಂಜಾನ್ ಮಾಸದ ಉಪವಾಸ ಬಿಟ್ಟು ಜನರು ವಿಶ್ರಮಿಸುತ್ತಿದ್ದ ಸಮಯದಲ್ಲಿ ಈ ಅನಿರೀಕ್ಷಿತ ದಾಳಿ ನಡೆದಿದ್ದು, ಆಸ್ಪತ್ರೆಯ ಬಹುತೇಕ ಭಾಗ ನೆಲಸಮವಾಗಿದೆ.

ತಾಲಿಬಾನ್ ಆಕ್ರೋಶ

ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಕುರಿತು ಎಕ್ಸ್ (X) ನಲ್ಲಿ ಮಾಹಿತಿ ನೀಡಿದ್ದು, "ಪಾಕಿಸ್ತಾನದ ಮಿಲಿಟರಿ ಆಡಳಿತವು ಮತ್ತೊಮ್ಮೆ ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿದೆ. ಚಿಕಿತ್ಸೆ ಪಡೆಯುತ್ತಿದ್ದ ಅಸಹಾಯಕ ರೋಗಿಗಳನ್ನೇ ಗುರಿಯಾಗಿಸಿ ದಾಳಿ ನಡೆಸಿರುವುದು ಮಾನವಕುಲದ ವಿರುದ್ಧದ ಮಹಾಪರಾಧ," ಎಂದು ತೀವ್ರವಾಗಿ ಖಂಡಿಸಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಸಮರ್ಥನೆ

ಮತ್ತೊಂದೆಡೆ, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಪಾಕಿಸ್ತಾನ, "ನಾವು ಯಾವುದೇ ನಾಗರಿಕ ಆಸ್ಪತ್ರೆಯನ್ನು ಗುರಿಯಾಗಿಸಿಲ್ಲ. ಅಫ್ಘಾನಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕ ತಾಣಗಳ ಮೇಲೆ ಮಾತ್ರ ನಿಖರ ದಾಳಿ ನಡೆಸಲಾಗಿದೆ," ಎಂದು ಹೇಳಿದೆ. ಪಾಕಿಸ್ತಾನದ ಪ್ರಕಾರ, ಅಫ್ಘಾನ್ ಮೂಲದ ಉಗ್ರರು ಪಾಕ್ ಗಡಿಯೊಳಗೆ ನುಸುಳಿ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಸಂಘರ್ಷದ ಹಿನ್ನೆಲೆ

ಈ ವೈಮಾನಿಕ ದಾಳಿಗೆ ಕೆಲವೇ ಗಂಟೆಗಳ ಮೊದಲು ಗಡಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಅಫ್ಘನ್ನರು ಸಾವನ್ನಪ್ಪಿದ್ದರು. ಫೆಬ್ರವರಿ ಅಂತ್ಯದಿಂದಲೇ ಉಭಯ ರಾಷ್ಟ್ರಗಳ ನಡುವೆ 'ಮುಕ್ತ ಯುದ್ಧ' (Open War) ಘೋಷಣೆಯಾದಂತಾಗಿದ್ದು, ಈಗ ಅದು ರಾಜಧಾನಿ ಕಾಬೂಲ್‌ಗೆ ವ್ಯಾಪಿಸಿದೆ. ಆಸ್ಪತ್ರೆಯ ಮೇಲಿನ ದಾಳಿಯಿಂದಾಗಿ ನೂರಾರು ಕುಟುಂಬಗಳು ಬೀದಿಪಾಲಾಗಿದ್ದು, ಅಂತಾರಾಷ್ಟ್ರೀಯ ಸಮುದಾಯ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡುವಂತೆ ವಿಶ್ವಸಂಸ್ಥೆ ಮನವಿ ಮಾಡಿದೆ.
ಕಾಬೂಲ್‌ನ ಬೀದಿಗಳಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net