ಉದ್ಯೋಗದ ಹೆಸರಲ್ಲಿ ವಂಚನೆ: ಮಾಸ್ಕೋದ ಕಾಡಿಗೆ ಕರೆದೊಯ್ದ ಏಜೆಂಟ್​; ಆಮೇಲೆ ಆಗಿದ್ದೇನು? Russian Job Scam

 ಉದ್ಯೋಗದ ಹೆಸರಲ್ಲಿ ವಂಚನೆ
ಉದ್ಯೋಗದ ಹೆಸರಲ್ಲಿ ವಂಚನೆ
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗದ ಹೆಸರಲ್ಲಿ ವಂಚನೆ
  • ರಷ್ಯಾದಲ್ಲಿ ಸಿಲುಕಿಕೊಂಡ ಭಾರತೀಯ ಯುವಕ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಮಾಸ್ಕೋ: ರಷ್ಯಾದಲ್ಲಿ ಕೈತುಂಬಾ ಸಂಬಳ ದೊರೆಯುವ ಕೆಲಸ ಕೊಡಿಸುವುದಾಗಿ ನಂಬಿಸಿ, ಮಾಸ್ಕೋಗೆ ಕರೆದೊಯ್ದು ದಟ್ಟ ಕಾಡಿನಲ್ಲಿ ಕೈಬಿಟ್ಟಿರುವ (Russian Job Scam) ಆಘಾತಕಾರಿ ಘಟನೆಯೊಂದು ಈದೀಗ  ಬೆಳಕಿಗೆ ಬಂದಿದೆ. 

ಜಲಂಧರ್‌ನ ಯುವಕನೊಬ್ಬ ಟ್ರಾವೆಲ್ ಏಜೆಂಟ್‌ನಿಂದ ತನಗಾದ ವಂಚನೆಯ ಬಗ್ಗೆ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಜಲಂಧರ್‌ನ ರಾಮ್ ನಗರದ ನಿವಾಸಿ ಆಕಾಶದೀಪ್ ಮೋಸಹೋದ ಯುವಕನಾಗಿದ್ದು, ಸ್ಥಳೀಯ ಏಜೆಂಟ್ ಪವನ್ ಕುಮಾರ್ ಎಂಬಾತ, ರಷ್ಯಾದಲ್ಲಿ ಹಣ್ಣು ಕೀಳುವ ಕೆಲಸವಿದ್ದು, ಅಲ್ಲಿ  ಉತ್ತಮ ವಸತಿ ಉತ್ತಮ ಸಂಬಳ ಸಿಗಲಿದೆ ಎಂದು ಸುಳ್ಳು ಭರವಸೆ ನೀಡಿದ್ದಾನೆ. ಇದನ್ನು ನಂಬಿ ಆಕಾಶದೀಪ್ ಜೂನ್ 15 ರಂದು ದೆಹಲಿಯಿಂದ ಮಾಸ್ಕೋಗೆ ಪ್ರಯಾಣ ಬೆಳೆಸಿದ್ದಾನೆ. 

ಅಸಲಿಯತ್ತು ಬಯಲಿಗೆಳೆದ ಯುವಕ

ಮಾಸ್ಕೋ ತಲುಪಿದ ಬಳಿಕ ತಾನು ಮೋಸಹೋಗಿದ್ದಾಗಿ  ಆಕಾಶದೀಪ್​ಗೆ ಅರಿವಾಗಿದೆ. ಏಜೆಂಟ್ ಹೇಳಿದ ಯಾವ ಸೌಲಭ್ಯವೂ ಅಲ್ಲಿ ಸಿಗಲಿಲ್ಲ. ಬದಲಿಗೆ, ವಿಮಾನ ನಿಲ್ದಾಣದಿಂದ ಕರೆದೊಯ್ದು ಕಾಡಿನ ಮಧ್ಯೆ ಪಾಳುಬಿದ್ದ ಕಟ್ಟಡವೊಂದರಲ್ಲಿ ಇತರ ಭಾರತೀಯರೊಂದಿಗೆ ಕೂಡಿಹಾಕಿದ್ದಾರೆ. 

ಈ ಕುರಿತು ಐದು ವಿಡಿಯೋಗಳ ಸರಣಿಯನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕಾಶದೀಪ್, ಇತರ ಯುವಕರು ಇಂತಹ ನಕಲಿ ಏಜೆಂಟರ ಬಲೆಗೆ ಬೀಳಬೇಡಿ ಎಂದು ಕಣ್ಣೀರಿನ ಮೂಲಕ ಎಚ್ಚರಿಕೆ ನೀಡಿದ್ದಾರೆ.


ನಾವು  ನರಕದಲ್ಲಿದ್ದೇವೆ!

ಹರಿಯಾಣ ಮತ್ತು ರಾಜಸ್ಥಾನದ ಕೆಲವರು ಸೇರಿದಂತೆ ಒಟ್ಟು 10 ಮಂದಿ ಭಾರತೀಯರು ಈ ಕಾಡಿನ ನಡುವಿನ ಆಶ್ರಯ ತಾಣದಲ್ಲಿ ಸಿಲುಕಿಕೊಂಡಿದ್ದಾರೆ. ಬಾತ್​ರೂಂನಷ್ಟು ಇಕ್ಕಟ್ಟಾದ ಕೊಠಡಿಯಲ್ಲಿ ನಾವೆಲ್ಲರೂ ಮಲಗುತ್ತಿದ್ದೆವೆ. ಸದ್ಯ ನಾವು ನರಕದಂತಹ ವಾತಾವರಣದಲ್ಲಿ ದಿನ ಕಳೆಯುತ್ತಿದ್ದೇವೆ ಎಂದು ಆಕಾಶದೀಪ್ ವಿಡಿಯೋದಲ್ಲಿ ವಿವರಿಸಿದ್ದಾರೆ.
ಅಲ್ಲದೆ, ನಾವು ರಷ್ಯಾಕ್ಕೆ ಬಂದಿಳಿದ ಕ್ಷಣದಿಂದಲೇ ನಮ್ಮ ಜವಾಬ್ದಾರಿ ಮುಗಿಯಿತು, ಮುಂದೆ ಏನೇ ಆದರೂ ನಮ್ಮ ಜವಾಬ್ದಾರಿಯಲ್ಲ ಎಂದು ಏಜೆಂಟರ ಸಹಚರರು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಪ್ರವಾಸಿ ವೀಸಾದಲ್ಲಿ ವಂಚನೆ!

ಆಕಾಶ್‌ದೀಪ್‌ಗೆ ಕೆಲಸದ ವೀಸಾ ನೀಡುವುದಾಗಿ ನಂಬಿಸಲಾಗಿತ್ತು. ಆದರೆ ಮಾಸ್ಕೋಗೆ ಹೋದ ಮೇಲಷ್ಟೇ ಅವರಿಗೆ ತಾವು ಬಂದಿರುವುದು ಪ್ರವಾಸಿ ವೀಸಾದಲ್ಲಿ ಎಂಬ ಸತ್ಯ ಗೊತ್ತಾಗಿದೆ. ವೀಸಾ ಬಗ್ಗೆ ಪ್ರಶ್ನಿಸಿದರೆ ನಂತರ ವಿಸ್ತರಿಸುವುದಾಗಿ ಏಜೆಂಟ್ ಸುಳ್ಳು ಹೇಳಿದ್ದಾರೆ. 

ನಕಲಿ ಉದ್ಯೋಗಗಳ ಆಮಿಷ ಒಡ್ಡಿ ಭಾರತದ ಯುವಕರನ್ನು ರಷ್ಯಾಕ್ಕೆ ಕರೆತರಲಾಗುತ್ತಿದ್ದು, ನಂತರ ಅವರನ್ನು ರಷ್ಯಾದ ಮಿಲಿಟರಿಗೆ ನೇಮಕಾತಿ ಮಾಡಿಕೊಳ್ಳುವ ದೊಡ್ಡ ಜಾಲ ಇದರ ಹಿಂದೆ ಇದೆ ಎಂದು ಆಕಾಶದೀಪ್ ಗಂಭೀರ ಆರೋಪ ಮಾಡಿದ್ದಾರೆ, (ಏಜನ್ಸೀಸ್​). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net