ಯುದ್ಧ ನಿಲ್ಲಿಸುವ ಸಮಯ ಬಂದಿದೆ: ನೆತನ್ಯಾಹುಗೆ ಟ್ರಂಪ್ ಶಾಕ್: ಇರಾನ್ ದಾಳಿ ತಡೆದು, ಒಪ್ಪಂದಕ್ಕೆ ಸಜ್ಜಾದ ಅಮೆರಿಕ! US-Iran Deal

ಯುದ್ಧ ನಿಲ್ಲಿಸುವ ಸಮಯ ಬಂದಿದೆ: ನೆತನ್ಯಾಹುಗೆ ಟ್ರಂಪ್ ಶಾಕ್: ಇರಾನ್ ದಾಳಿ ತಡೆದು, ಒಪ್ಪಂದಕ್ಕೆ ಸಜ್ಜಾದ ಅಮೆರಿಕ!
ಯುದ್ಧ ನಿಲ್ಲಿಸುವ ಸಮಯ ಬಂದಿದೆ: ನೆತನ್ಯಾಹುಗೆ ಟ್ರಂಪ್ ಶಾಕ್: ಇರಾನ್ ದಾಳಿ ತಡೆದು, ಒಪ್ಪಂದಕ್ಕೆ ಸಜ್ಜಾದ ಅಮೆರಿಕ!
Published on
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಕಳೆದ ಮೂರೂವರೆ ತಿಂಗಳಿನಿಂದ ಭುಗಿಲೆದ್ದಿದ್ದ ಭೀಕರ ಯುದ್ಧಕ್ಕೆ ಕೊನೆಗೂ ಬಿಗ್ ಬ್ರೇಕ್ ಬೀಳುವ ಕಾಲ ಹತ್ತಿರ ಬಂದಿದೆ. ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಮುಕ್ತಾಯ ಹಾಡಲು ಉಭಯ ದೇಶಗಳು ಐತಿಹಾಸಿಕ ಶಾಂತಿ ಒಪ್ಪಂದಕ್ಕೆ(US-Iran Deal) ಸಜ್ಜಾಗಿವೆ. ಇದೇ ವಾರಾಂತ್ಯದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ.
ಆದರೆ, ಈ ಇಡೀ ಪ್ರಕ್ರಿಯೆಯಲ್ಲಿ ಅಮೆರಿಕದ ಪರಮ ಆಪ್ತ ದೇಶವಾದ ಇಸ್ರೇಲ್ ಅನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ನೇರವಾಗಿ ಫೋನ್ ಮಾಡಿ, ಈ ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆ. ನಾವು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಖಡಕ್ ಆಗಿ ಹೇಳಿರುವುದು ಜಾಗತಿಕ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಇದು ಅದ್ಭುತ ಒಪ್ಪಂದ, ಯುದ್ಧ ನಿಲ್ಲಿಸಿ: ನೆತನ್ಯಾಹುಗೆ ಟ್ರಂಪ್ ಕಡಕ್ ಆದೇಶ!
ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆ ‘ಅಕ್ಸಿಯೋಸ್ ವರದಿಯ ಪ್ರಕಾರ, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಲು ಇಸ್ರೇಲ್ ಹೂಡಿದ್ದ ಎಲ್ಲಾ ಯೋಜನೆಗಳನ್ನು ಡೊನಾಲ್ಡ್ ಟ್ರಂಪ್ ತಲೆಕೆಳಗು ಮಾಡಿದ್ದಾರೆ. ಇರಾನ್‌ನ ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ ಇದೇ ವಾರ ದೊಡ್ಡ ಮಟ್ಟದ ದಾಳಿ ನಡೆಸಲು ನೆತನ್ಯಾಹು ಸ್ಕೆಚ್ ಹಾಕಿದ್ದರು. ಆದರೆ ಟ್ರಂಪ್ ಕೊನೆ ಕ್ಷಣದಲ್ಲಿ ಇಸ್ರೇಲ್ ಪ್ರಧಾನಿಯನ್ನು ತಡೆದಿದ್ದಾರೆ.
ಗುರುವಾರ ಸಂಜೆ ನೆತನ್ಯಾಹು ಅವರಿಗೆ ಕರೆ ಮಾಡಿದ ಟ್ರಂಪ್, ನೋಡಿ ನೆತನ್ಯಾಹು, ಇದು ಅತ್ಯಂತ ಅದ್ಭುತವಾದ ಒಪ್ಪಂದ. ಈ ರಕ್ತಪಾತವನ್ನು ಕೊನೆಗೊಳಿಸಲು ಇದು ಸೂಕ್ತ ಸಮಯ ಎಂದು ನೇರವಾಗಿ ಹೇಳಿದ್ದಾರೆ. ನೆತನ್ಯಾಹು ಈ ಒಪ್ಪಂದಕ್ಕೆ ಅಡ್ಡಿಪಡಿಸಬಹುದು ಎಂಬ ಆತಂಕ ವಾಷಿಂಗ್ಟನ್‌ನಲ್ಲಿತ್ತು. ಆದರೆ ಟ್ರಂಪ್ ಅವರ ಖಡಕ್ ಮಾತಿನ ಮುಂದೆ ತಮ್ಮ ಆಟ ನಡೆಯುವುದಿಲ್ಲ ಮತ್ತು ಟ್ರಂಪ್ ಅವರನ್ನು ತಡೆಯಲು ತಮಗೆ ಸಾಧ್ಯವಿಲ್ಲ ಎಂಬ ಕಹಿ ಸತ್ಯವನ್ನು ನೆತನ್ಯಾಹು ಅರಿತುಕೊಂಡಿದ್ದಾರೆ. ಅಂದಿನಿಂದ ಇಸ್ರೇಲ್ ಅನ್ನು ಈ ಸಂಧಾನದ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಮಾಹಿತಿಯಿಂದ ಹೊರಗೆ ಇಡಲಾಗಿದೆ.

ಇಸ್ರೇಲ್ ಭದ್ರತೆಯ ಭರವಸೆ; ಆದರೆ ಇರಾನ್ ಪರಮಾಣು ಯೋಜನೆಗೆ ಸದ್ಯಕ್ಕಿಲ್ಲ ಬ್ರೇಕ್!

ತಮ್ಮನ್ನು ಕತ್ತಲಲ್ಲಿಟ್ಟಿದ್ದರೂ ಇಸ್ರೇಲ್ ಸರ್ಕಾರವು ಅಮೆರಿಕದ ಈ ನಿರ್ಧಾರಕ್ಕೆ ಅನಿವಾರ್ಯವಾಗಿ ತಲೆಬಾಗಿದೆ. ಇಸ್ರೇಲ್ ಪ್ರಧಾನಿ ಕಚೇರಿ (PMO) ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಶಾಂತಿ ಒಪ್ಪಂದದಲ್ಲಿ ಇಸ್ರೇಲ್ ನೇರ ಭಾಗಿ ಆಗದಿದ್ದರೂ, ಇಸ್ರೇಲ್‌ನ ಸಂಪೂರ್ಣ ಭದ್ರತೆಗೆ ಅಧ್ಯಕ್ಷ ಟ್ರಂಪ್ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್‌ನ ಪರಮಾಣು ಮೂಲಸೌಕರ್ಯಗಳ ಧ್ವಂಸ, ಕ್ಷಿಪಣಿ ಉತ್ಪಾದನೆಗೆ ಮಿತಿ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವ ಭರವಸೆಯನ್ನು ಟ್ರಂಪ್ ಉಳಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.
ಆದರೆ ಇರಾನ್ ಮೂಲಗಳ ಪ್ರಕಾರ, ಇದೇ ವಾರಾಂತ್ಯದಲ್ಲಿ ಸಹಿ ಆಗಲಿರುವ ಆರಂಭಿಕ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಯೋಜನೆಗಳ ಬಗ್ಗೆ ಯಾವುದೇ ಕಠಿಣ ನಿಯಮಗಳನ್ನು ಸೇರಿಸಲಾಗಿಲ್ಲ. ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ಸ್ಪಷ್ಟಪಡಿಸಿರುವಂತೆ, ಪರಮಾಣು ವಿಷಯಕ್ಕೆ ಸಂಬಂಧಿಸಿದ ಅಂತಿಮ ಷರತ್ತುಗಳನ್ನು ಈ ಒಪ್ಪಂದಕ್ಕೆ ಸಹಿ ಬಿದ್ದ 60 ದಿನಗಳ ನಂತರವಷ್ಟೇ ನಿರ್ಧರಿಸಲಾಗುವುದು. ಒಟ್ಟಿನಲ್ಲಿ ಮಿತ್ರ ರಾಷ್ಟ್ರ ಇಸ್ರೇಲ್‌ನ ತೀವ್ರ ವಿರೋಧದ ನಡುವೆಯೂ ಅಮೆರಿಕವು ಇರಾನ್ ಜೊತೆ ಶಾಂತಿ ಹಸ್ತ ಚಾಚುತ್ತಿರುವುದು ಇಡೀ ವಿಶ್ವದ ಗಮನ ಸೆಳೆದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net