ಖಮೇನಿ ಆಡಳಿತಕ್ಕೆ ಮುಕ್ತಿ ಹಾಡುವ ಸಮಯ ಬಂದಿದೆ: ಇರಾನ್ ನಾಯಕತ್ವ ಬದಲಾವಣೆಗೆ ಟ್ರಂಪ್ ಕರೆ! | Iranian

Trump
Trump
Published on
ವಾಷಿಂಗ್ಟನ್/ಟೆಹ್ರಾನ್: ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ದಬಾಳಿಕೆಯ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪದತ್ಯಾಗಕ್ಕೆ ಆಗ್ರಹಿಸಿದ್ದಾರೆ.
'ಪೊಲಿಟಿಕೊ' (Politico) ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾನುವಾರ ಮಾತನಾಡಿದ ಟ್ರಂಪ್, "ಇರಾನ್‌ನಲ್ಲಿ ಈಗ ಹೊಸ ನಾಯಕತ್ವವನ್ನು ಹುಡುಕುವ ಸಮಯ ಬಂದಿದೆ," ಎಂದು ನೇರವಾಗಿ ಹೇಳಿದ್ದಾರೆ.
ಇರಾನ್‌ನ ಇಂದಿನ ದುಸ್ಥಿತಿಗೆ ಖಮೇನಿ ಅವರೇ ನೇರ ಹೊಣೆ ಎಂದು ಟ್ರಂಪ್ ದೂರಿದ್ದಾರೆ. "ಒಬ್ಬ ನಾಯಕನಾಗಿ ಅವರು ಇಡೀ ದೇಶವನ್ನು ನಾಶಪಡಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹಿಂಸಾಚಾರವನ್ನು ಜಗತ್ತು ಹಿಂದೆಂದೂ ಕಂಡಿರಲಿಲ್ಲ. ಸಾವಿರಾರು ಜನರನ್ನು ಕೊಲ್ಲುವ ಮೂಲಕ ಅಧಿಕಾರ ಹಿಡಿಯುವುದು ನಾಯಕತ್ವವಲ್ಲ, ನಾಯಕತ್ವ ಎಂದರೆ ಗೌರವದಿಂದ ಗಳಿಸುವುದು," ಎಂದು ಅವರು ಕಿಡಿಕಾರಿದ್ದಾರೆ. ಅಲ್ಲದೆ, ಖಮೇನಿ ಒಬ್ಬ "ಅಸ್ವಸ್ಥ ವ್ಯಕ್ತಿ" (Sick man) ಎಂದು ಕರೆದ ಟ್ರಂಪ್, ಅವರು ದೇಶವಾಸಿಗಳ ಹತ್ಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಸಿದ್ದಾರೆ.
ಘಟನೆ ಹಿನ್ನೆಲೆ
2025ರ ಡಿಸೆಂಬರ್ ಅಂತ್ಯದಲ್ಲಿ ಇರಾನ್‌ನಲ್ಲಿ ಆರಂಭವಾದ ಪ್ರತಿಭಟನೆಗಳು ಜನವರಿ 2026ರ ವೇಳೆಗೆ ಭೀಕರ ಸ್ವರೂಪ ಪಡೆದುಕೊಂಡಿವೆ. ಮಾನವ ಹಕ್ಕುಗಳ ಸಂಘಟನೆಗಳ ವರದಿಯಂತೆ, ಭದ್ರತಾ ಪಡೆಗಳ ಗುಂಡೇಟಿಗೆ ಈಗಾಗಲೇ 3,400ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಈ ಹಿಂಸಾಚಾರದ ಹೊಣೆಯನ್ನು ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ಮೇಲೆ ಹೊರಿಸಿದ್ದರು. ಟ್ರಂಪ್ ಅವರು ಪ್ರತಿಭಟನಾಕಾರರನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಕ್ಸ್ (X) ಮೂಲಕ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಈ ಖಡಕ್ ಹೇಳಿಕೆ ನೀಡಿದ್ದಾರೆ.
ಸೇನಾ ಕಾರ್ಯಾಚರಣೆಯ ಭೀತಿ: ಇರಾನ್ ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ಟ್ರಂಪ್ ಈ ಹಿಂದೆ ಎಚ್ಚರಿಕೆ ನೀಡಿದ್ದರು. ಸದ್ಯ ಇರಾನ್ ಸರ್ಕಾರ ಗಲ್ಲಿಗೇರಿಸುವ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಹೇಳಲಾಗಿದ್ದರೂ, ಅಮೆರಿಕ ಅಧ್ಯಕ್ಷರ ಈ 'ನಾಯಕತ್ವ ಬದಲಾವಣೆ'ಯ ಕರೆ ಇರಾನ್ ಆಡಳಿತಕ್ಕೆ ನಡುಕ ಹುಟ್ಟಿಸಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶೀತಲ ಸಮರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net