ಇತಿಹಾಸದಲ್ಲೇ ಮೊದಲು!..ಮೋದಿ ಸ್ವಾಗತಕ್ಕೆ ಇಸ್ರೇಲ್ ಸಜ್ಜು; ಸಂಸತ್ ಮೇಲೆ ಮೂಡಿತು ಕೇಸರಿ-ಬಿಳಿ-ಹಸಿರು ಸಂಭ್ರಮ | Modi In Israel

Modi In Israel | ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೆಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು
Modi In Israel | ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೆಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್‌ಗೆ ಐತಿಹಾಸಿಕ ಭೇಟಿ ನೀಡುತ್ತಿದ್ದು (Mod In Israel), ಈ ಭೇಟಿಯು ಕೇವಲ ಒಂದು ರಾಜತಾಂತ್ರಿಕ ಪ್ರವಾಸವಲ್ಲ, ಬದಲಿಗೆ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸುವ ಮಹತ್ವದ ಹೆಜ್ಜೆ ಎಂದು ವರದಿಯಾಗಿದೆ.
ಟೆಲ್ ಅವಿವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ಇಸ್ರೇಲ್ ಸರ್ಕಾರವು ಕೆಂಪು ಹಾಸಿನ (Red Carpet) ಅದ್ಧೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಿದೆ.
ಈ ಪ್ರವಾಸದಲ್ಲಿ ನವದೆಹಲಿ ಮತ್ತು ಟೆಲ್ ಅವಿವ್ ನಡುವಿನ ಸಂಬಂಧಗಳು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಿ ಮೇಲ್ದರ್ಜೆಗೇರಲಿದ್ದು, ರಕ್ಷಣೆ, ವ್ಯಾಪಾರ ಮತ್ತು ಇತರ ವಿಷಯಗಳ ಕುರಿತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಿವೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ನಿಜವಾದ ಸ್ನೇಹಿತ

ಈ ಭೇಟಿಯ ಕುರಿತಾಗಿ ತಮ್ಮ ಎಕ್ಸ್​ ಖಾತೆಯ ಮೂಲಕ ಹಿಂದಿಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಇಸ್ರೇಲ್‌ನ ಮಾಜಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್, ಇಡೀ ಇಸ್ರೇಲ್ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಉತ್ಸುಕವಾಗಿದ್ದು, ಅವರು ಇಸ್ರೇಲ್‌ನ ನಿಜವಾದ ಸ್ನೇಹಿತ, ಉಭಯ ದೇಶಗಳ ನಡುವಿನ ಸಂಬಂಧವು ಕೇವಲ ಕಾರ್ಯತಂತ್ರದ ಸಂಬಂಧವಲ್ಲ, ಬದಲಾಗಿ ರಾಷ್ಟ್ರಗಳ ನಡುವಿನ ಆಳವಾದ ಸ್ನೇಹದ ಬಂಧವಾಗಿದೆ ಎಂದು ಬರೆದಿದ್ದಾರೆ.
ಪ್ರಧಾನಿ ಭೇಟಿಯ ಈ ಐತಿಹಾಸಿಕ ಕ್ಷಣವನ್ನು ವಿಶೇಷವಾಗಿಸಲು ಇಸ್ರೇಲ್ ಸರ್ಕಾರವು ಅತ್ಯಂತ ಅಪರೂಪದ ಮತ್ತು ಗೌರವಯುತ ಕ್ರಮವನ್ನು ಕೈಗೊಂಡಿದ್ದು, ಇಸ್ರೇಲ್‌ನ ಸಂಸತ್ ಭವನವಾದ ನೆಸ್ಸೆಟ್ ಅನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಈ ಚಿತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂದು ಪರಸ್ಪರ ಪಾಲುದಾರಿಕೆಗೆ ಸಲ್ಲುತ್ತಿರುವ ಸಾಂಕೇತಿಕ ಗೌರವ ಎಂದು ಬಣ್ಣಿಸಿದ್ದಾರೆ.

ಭಾರತ-ಇಸ್ರೇಲ್ ಸಂಬಂಧ ವೃದ್ಧಿ

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಸಮಯದಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಲಿವೆ, ಇದು ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳೊಂದಿಗಿನ ಇಸ್ರೇಲ್‌ನ ಸಂಬಂಧಗಳಿಗೆ ಹೋಲಿಸಬಹುದಾದ ಮಹತ್ವದ ಮುನ್ನಡೆ ಎಂದು ಮೂಲಗಳು ಬಣ್ಣಿಸಿವೆ.
ರಕ್ಷಣೆ ಮತ್ತು ವ್ಯಾಪಾರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ಮೋದಿ ಬುಧವಾರ ಇಸ್ರೇಲ್‌ಗೆ 2 ದಿನಗಳ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. 9 ವರ್ಷಗಳಲ್ಲಿ ಇದು ಅವರ 2 ನೇ ಇಸ್ರೇಲ್ ಭೇಟಿಯಾಗಿದ್ದು, 2017 ರ ಮೊದಲ ಭೇಟಿಯ ಸಮಯದಲ್ಲಿ ಕಾರ್ಯತಂತ್ರದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸಲಾಯಿತು.
ಈ ಎರಡೂ ದೇಶಗಳು ಹಲವು ವರ್ಷಗಳಿಂದ ವಿಶ್ವಾಸಾರ್ಹ ಪಾಲುದಾರರಾಗಿದ್ದಾರೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಇದು ಸಾಬೀತಾಗಿದೆ. ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಇದನ್ನು ಈಗ ಔಪಚಾರಿಕವಾಗಿ ಗುರುತಿಸಲಾಗುತ್ತಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಪ್ರಧಾನಿ ಮೋದಿಯರನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ. ಸ್ವಾಗತದ ಬಳಿಕ ಇಬ್ಬರೂ ನಾಯಕರು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಯಹೂದಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಬುಧವಾರ ಸಂಜೆ, ಪ್ರಧಾನಿ ಮೋದಿ ಇಸ್ರೇಲ್‌ನ ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರಮುಖ ಇಸ್ರೇಲಿ ಕಾರ್ಯನಿರ್ವಾಹಕರು ಉಪಸ್ಥಿತರಿರುತ್ತಾರೆ. ಆ ರಾತ್ರಿ ಪ್ರಧಾನಿ ನೆತನ್ಯಾಹು ಗೌರವಾರ್ಥವಾಗಿ ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net