ಅಮೆರಿಕದ ಶಾಂತಿ ಒಪ್ಪಂದಕ್ಕೆ ಕ್ಯಾರೆ ಎನ್ನದ ಇಸ್ರೇಲ್! ಲೆಬನಾನ್‌ ಮೇಲೆ ಡ್ರೋನ್ ದಾಳಿ, ನಾಲ್ವರ ಸಾವು; ಇರಾನ್ ಆಕ್ರೋಶ! Israeli Strikes Lebanon

ಅಮೆರಿಕದ ಶಾಂತಿ ಒಪ್ಪಂದಕ್ಕೆ ಕ್ಯಾರೆ ಎನ್ನದ ಇಸ್ರೇಲ್! ಲೆಬನಾನ್‌ ಮೇಲೆ ಡ್ರೋನ್ ದಾಳಿ, ನಾಲ್ವರ ಸಾವು; ಇರಾನ್ ಆಕ್ರೋಶ!
ಅಮೆರಿಕದ ಶಾಂತಿ ಒಪ್ಪಂದಕ್ಕೆ ಕ್ಯಾರೆ ಎನ್ನದ ಇಸ್ರೇಲ್! ಲೆಬನಾನ್‌ ಮೇಲೆ ಡ್ರೋನ್ ದಾಳಿ, ನಾಲ್ವರ ಸಾವು; ಇರಾನ್ ಆಕ್ರೋಶ!
Published on
ಬೈರೂತ್: ಅಮೆರಿಕ ಮತ್ತು ಇರಾನ್ ನಡುವೆ ಜಾಗತಿಕ ಮಟ್ಟದಲ್ಲಿ ಶಾಂತಿ ಮಾತುಕತೆಗಳು ಮತ್ತು ಕದನ ವಿರಾಮದ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿದ್ದರೂ, ಮಧ್ಯಪ್ರಾಚ್ಯದಲ್ಲಿ ರಕ್ತಪಾತ ಮಾತ್ರ ನಿಂತಿಲ್ಲ. ದಕ್ಷಿಣ ಲೆಬನಾನ್‌ನ(Israeli Strikes Lebanon) ನಬಾತಿಯಾ ಪ್ರಾಂತ್ಯದ ಮೇಲೆ ಇಸ್ರೇಲ್ ಸೇನೆ ಮಂಗಳವಾರ ನಡೆಸಿದ ಭೀಕರ ವೈಮಾನಿಕ ಮತ್ತು ಡ್ರೋನ್ ದಾಳಿಗಳಲ್ಲಿ ಕನಿಷ್ಠ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಲ್ಲಾ ರಂಗಗಳಲ್ಲೂ ಯುದ್ಧ ಕೊನೆಗಾಣಿಸಲು ಅಮೆರಿಕ-ಇರಾನ್ ನಡುವೆ ಇತ್ತೀಚೆಗಷ್ಟೇ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.
ಲೆಬನಾನ್‌ನ ಮೇಫಡೌನ್ ಎಂಬಲ್ಲಿ ಎರಡು ಪ್ರತ್ಯೇಕ ವಾಹನಗಳನ್ನು ಗುರಿಯಾಗಿಸಿ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಶೌಕಿನ್ ಗ್ರಾಮದಲ್ಲೂ ಮತ್ತೊಂದು ವಾಹನದ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಒಪ್ಪಂದ ಉಲ್ಲಂಘಿಸಿದ ಇಸ್ರೇಲ್; ಇರಾನ್ ಕೆಂಡಾಮಂಡಲ!

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಪ್ರಧಾನಿ, ಈ ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ಎಲ್ಲಾ ಮುಂಭಾಗಗಳಲ್ಲಿ ತಕ್ಷಣವೇ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸೋಮವಾರವಷ್ಟೇ ಸ್ಪಷ್ಟಪಡಿಸಿದ್ದರು. ಆದರೆ, ಒಪ್ಪಂದ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ ಅನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಳ್ಳಲಿದೆ ಮತ್ತು ದಾಳಿ ಮುಂದುವರಿಸಲಿದೆ ಎಂದು ಹೇಳಿಕೆ ನೀಡಿದ್ದರು.
ಇಸ್ರೇಲ್‌ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮಾತನಾಡಿ, ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಪಡೆಗಳು ಸಂಪೂರ್ಣವಾಗಿ ಹಿಂತೆಗೆದುಕೊಳ್ಳದಿದ್ದರೆ ಯುದ್ಧ ಕೊನೆಗೊಂಡಿದೆ ಎಂದು ಅರ್ಥವಲ್ಲ. ಇಸ್ರೇಲ್‌ನ ಮುಂದುವರಿದ ಆಕ್ರಮಣವು ಶಾಂತಿ ಒಪ್ಪಂದದ ನೇರ ಉಲ್ಲಂಘನೆಯಾಗಿದೆ ಎಂದು ಎಚ್ಚರಿಸಿದ್ದಾರೆ. ಇತ್ತ ಇರಾನ್‌ನ ಸಶಸ್ತ್ರ ಪಡೆಗಳ ಕೇಂದ್ರ ಕಮಾಂಡ್, ಇಸ್ರೇಲ್ ತಕ್ಷಣವೇ ದಾಳಿ ನಿಲ್ಲಿಸದಿದ್ದರೆ ಇರಾನ್ ಸೇನೆಯಿಂದ ಭೀಕರ ಪ್ರತ್ಯುತ್ತರ ಎದುರಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದೆ.

ಅಮೆರಿಕದ ಮೇಲೆ ಇರಾನ್ ಒತ್ತಡ; ಹಿಜ್ಬುಲ್ಲಾಗೆ ಭರವಸೆ

ಇರಾನ್‌ನ ಪ್ರಮುಖ ಸಂಧಾನಕಾರ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರು ಲೆಬನಾನ್ ಸಂಸತ್ತಿನ ಸ್ಪೀಕರ್ ನಬಿ ಬೆರ್ರಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಲೆಬನಾನ್ ಮೇಲಿನ ಯುದ್ಧವನ್ನು ನಿಲ್ಲಿಸಲು, ಮನೆಗಳ ಧ್ವಂಸವನ್ನು ತಡೆಯಲು ಮತ್ತು ಇಸ್ರೇಲ್ ಪಡೆಗಳನ್ನು ಹಿಂಪಡೆಯುವಂತೆ ಮಾಡಲು ಅಮೆರಿಕವು ಇಸ್ರೇಲ್ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಅಮೆರಿಕದೊಂದಿಗಿನ ಮುಂದಿನ ಹಂತದ ಮಾತುಕತೆಯಲ್ಲಿ ಇಸ್ರೇಲ್ ಸೇನೆಯನ್ನು ಲೆಬನಾನ್‌ನಿಂದ ಸಂಪೂರ್ಣವಾಗಿ ಹೊರಹಾಕಲು ಇರಾನ್ ಬದ್ಧವಾಗಿದೆ ಎಂಬ ಗಟ್ಟಿಯಾದ ಭರವಸೆ ತಮಗೆ ಸಿಕ್ಕಿದೆ ಎಂದು ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಭೀತಿಯ ನೆರಳಿನಲ್ಲಿ ನಾಗರಿಕರು; ದಶಕಗಳ ಮುನಿಸು

ಯುದ್ಧದ ತೀವ್ರತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನಬಾತಿಯಾ ಪ್ರಾಂತ್ಯದ ನಾಗರಿಕರು ತಮ್ಮ ಮನೆ ಮತ್ತು ಆಸ್ತಿಪಾಸ್ತಿಗಳನ್ನು ಪರಿಶೀಲಿಸಲು ಮರಳುತ್ತಿದ್ದಾರೆ. ಆದರೆ ಅಲ್ಲಿ ಸದ್ಯ ತೀವ್ರ ನಿರಾಶೆ ಮತ್ತು ಭೀತಿಯ ವಾತಾವರಣ ನೆಲೆಸಿದೆ. ಇದು ಇಸ್ರೇಲ್ ಜೊತೆಗಿನ ದಶಕಗಳ ಹಳೆಯ ಸಂಘರ್ಷ. ನಂಬಿಕೆಗೆ ಅರ್ಹವಲ್ಲದ ಶತ್ರು ದೇಶದ ಮುಂದೆ ನಾವು ಎಂದಿಗೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ನಾಸರ್ ಅಳಲು ತೋಡಿಕೊಂಡಿದ್ದಾರೆ.
ಕಳೆದ ಮಾರ್ಚ್ 2 ರಂದು ಯುದ್ಧ ಪುನರಾರಂಭಗೊಂಡಾಗಿನಿಂದ ಇಸ್ರೇಲ್ ನಡೆಸಿದ ಭೀಕರ ದಾಳಿಗಳಿಗೆ ಲೆಬನಾನ್‌ನಲ್ಲಿ ಕನಿಷ್ಠ 3,826 ಜನರು ಬಲಿಯಾಗಿದ್ದಾರೆ ಮತ್ತು 11,851 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net