ಇಸ್ಲಾಮಿಕ್ ನ್ಯಾಟೋ: ಮಕ್ಕಾ ಒಪ್ಪದದಿಂದ ಏನೆಲ್ಲ ಬದಲಾವಣೆ?

ಸ್ಲಾಮಿಕ್ ನ್ಯಾಟೋ
ಸ್ಲಾಮಿಕ್ ನ್ಯಾಟೋ
Published on

ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧದ ಬಳಿಕ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಹಾಗೂ ಸಾಮರಿಕ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಪ್ರಸ್ತುತ, ಸೌದಿ ಅರೇಬಿಯಾ-ಪಾಕಿಸ್ತಾನ-ಟರ್ಕಿ ನಡುವೆ ನಡೆದಿರುವ ಮಹತ್ವದ ರಕ್ಷಣಾ ಒಪ್ಪಂದದ ಬಗ್ಗೆ ಅಂತಾರಾಷ್ಟ್ರೀಯ ವಲಯದಲ್ಲೂ ಕಳವಳದ ದನಿಯಲ್ಲಿ ಚರ್ಚೆ ಏರ್ಪಟ್ಟಿದೆ. 

ಈ ಒಪ್ಪಂದದಂತೆ, ಪಾಕಿಸ್ತಾನದ ಮೇಲೆ ದಾಳಿಯಾದರೆ, ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಅದರ ಪರವಾಗಿ ರಂಗಕ್ಕಿಳಿಯಲಿವೆ. ಆಗಸ್ಟ್ 7ರಂದು ಮಕ್ಕಾದಲ್ಲಿ ಈ ಮೂರೂ ದೇಶಗಳ ನಡುವೆ ಈ ರಕ್ಷಣಾ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ, ಯಾವುದೇ ಒಂದು ದೇಶದ ಮೇಲಿನ ದಾಳಿಯನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಇಸ್ಲಾಮಿಕ್ ನ್ಯಾಟೋನ ಆರಂಭ ಎಂದು ವಿಶ್ಲೇಷಿಸಲಾಗುತ್ತಿದ್ದು, ಇದರ ಅತಿದೊಡ್ಡ ಪರಿಣಾಮ ಭಾರತ ಮತ್ತು ಇಸ್ರೇಲ್​ನಂತಹ ದೇಶಗಳ ಮೇಲೆ ಬೀಳಲಿದೆ. ಈ ಕುರಿತಾದ ವಿವರ ಇಲ್ಲಿದೆ.

ಸರಿಸುಮಾರು 11 ತಿಂಗಳ ಹಿಂದೆ, ಅಂದರೆ 2025ರ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಈ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು. ತದನಂತರ 2026ರ ಜನವರಿಯಲ್ಲಿ ಟರ್ಕಿ ಕೂಡ ಈ ಒಪ್ಪಂದಕ್ಕೆ ಸೇರ್ಪಡೆಯಾಗಲು ಸಮ್ಮತಿಸಿತು. ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾ ಮೂರೂ ಸುನ್ನಿ ಮುಸ್ಲಿಂ ಬಾಹುಳ್ಯದ ದೇಶಗಳು. ಆದರೆ, ಟರ್ಕಿ ಮತ್ತು ಸೌದಿಯ ನಡುವೆ ಸುನ್ನಿ ಇಸ್ಲಾಮಿಕ್ ರಾಷ್ಟ್ರಗಳ ನಾಯಕತ್ವದ ವಿಷಯದಲ್ಲಿ ಭಿನ್ನಾಭಿಪ್ರಾಯ ಮತ್ತು ಉದ್ವಿಗ್ನತೆ ಇತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವದ ಮೂಲಕ ಇವೆರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಂಡಿವೆ. ಜನವರಿ 8ರಂದು ಇವೆರಡೂ ದೇಶಗಳು ಪ್ರಥಮ ಬಾರಿಗೆ ನೌಕಾಪಡೆ ಸಹಭಾಗಿತ್ವಕ್ಕಾಗಿ ಸಭೆ ನಡೆಸಿದ್ದವು. ಪ್ರಸ್ತುತ ಟರ್ಕಿ, ಸೌದಿ ಮತ್ತು ಪಾಕಿಸ್ತಾನದ ನಡುವೆ ಸಹಿಯಾಗಿರುವ ಈ ಒಪ್ಪಂದವನ್ನು ‘ಮಕ್ಕಾ ಅಗ್ರಿಮೆಂಟ್’ ಎಂದು ಕರೆಯಲಾಗಿದೆ.

ಪೂರ್ಣ ಪ್ರಮಾಣದ ಇಸ್ಲಾಮಿಕ್ ನ್ಯಾಟೋ ಆಗಬಲ್ಲದೇ?

ಇಸ್ಲಾಮಿಕ್ ನ್ಯಾಟೋ ಕುರಿತಾದ ಚರ್ಚೆಗಳು ತೀವ್ರಗೊಂಡಿದ್ದು 2025ರ ಸೆಪ್ಟೆಂಬರ್ 7ರಿಂದ 9ರ ಅವಧಿಯಲ್ಲಿ. ಆಗ ಇಸ್ರೇಲ್ ಕೇವಲ 72 ಗಂಟೆಗಳಲ್ಲಿ ಯೆಮನ್, ಕತಾರ್, ಲೇಬನಾನ್, ಸಿರಿಯಾ ಮತ್ತು ಟ್ಯುನೀಷಿಯಾ ಸೇರಿದಂತೆ 6 ಇಸ್ಲಾಮಿಕ್ ದೇಶಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬರ್ 15ರಂದು ದೋಹಾದಲ್ಲಿ ಇಸ್ಲಾಮಿಕ್ ದೇಶಗಳ ತುರ್ತು ಸಭೆ ಕರೆಯಲಾಗಿತ್ತು. ಅರಬ್ ಲೀಗ್ ಮತ್ತು ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್​ನ 50ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸಿದ್ದವು. ಅಲ್ಲಿ ನ್ಯಾಟೋದ ಮಾದರಿಯಲ್ಲೇ ಒಂದು ಒಕ್ಕೂಟ ರಚಿಸುವ ಪ್ರಸ್ತಾಪ ಸಿದ್ಧವಾಯಿತಾದರೂ, ಯಾವುದೇ ನಿರ್ದಿಷ್ಟ ಕಾಲಮಿತಿ ನಿಗದಿಯಾಗಲಿಲ್ಲ.

ಆದಾಗ್ಯೂ, ಇದು ನ್ಯಾಟೋದಂತೆ ಬಲವಾದ ಒಕ್ಕೂಟವಾಗುವುದು ಕಷ್ಟಸಾಧ್ಯ. ಏಕೆಂದರೆ, 1949ರ ಏಪ್ರಿಲ್ 4ರಂದು ರಚನೆಯಾದ ನ್ಯಾಟೋ ಪ್ರಸ್ತುತ 33 ದೇಶಗಳ ಬಲವಾದ ಸೈನಿಕ ಒಕ್ಕೂಟವಾಗಿದೆ. ಇದರ ‘ಆರ್ಟಿಕಲ್-5’ ರ ಪ್ರಕಾರ, ಯಾವುದೇ ಒಂದು ಸದಸ್ಯ ದೇಶದ ಮೇಲಿನ ದಾಳಿಯನ್ನು ಎಲ್ಲ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಪ್ರಸ್ತುತ ಸೌದಿ ಮತ್ತು ಪಾಕಿಸ್ತಾನದ ನಡುವೆ ಇಂತಹದ್ದೇ ಕಲಂ ಆಧರಿಸಿ ಒಪ್ಪಂದವಾಗಿದ್ದರೂ, ಇವೆರಡೂ ದೇಶಗಳು ಇಲ್ಲಿಯವರೆಗೆ ಪರಸ್ಪರರ ಯುದ್ಧಗಳಿಂದ ದೂರವೇ ಉಳಿದಿವೆ. ಪಾಕಿಸ್ತಾನವು ಅಫ್ಘಾನಿಸ್ತಾನದ ತಾಲಿಬಾನ್ ಜೊತೆಗಿನ ಸಂಘರ್ಷದಲ್ಲಿ ನಿರತವಾಗಿದ್ದರೆ, ಸೌದಿ ಅರೇಬಿಯಾ ಇರಾನ್ ಮತ್ತು ಹೂತಿಗಳ ದಾಳಿಯನ್ನು ಎದುರಿಸುತ್ತಿದೆ.

ಈ ಹಿಂದೆಯೂ ಮುಸ್ಲಿಂ ದೇಶಗಳು ನ್ಯಾಟೋ ಮಾದರಿಯ ಒಕ್ಕೂಟ ರಚಿಸಲು ಯತ್ನಿಸಿ ವಿಫಲವಾಗಿವೆ. ಉದಾಹರಣೆಗೆ, 2015ರಲ್ಲಿ ಸೌದಿ ಅರೇಬಿಯಾ ‘ಇಸ್ಲಾಮಿಕ್ ಮಿಲಿಟರಿ ಕೌಂಟರ್ ಟೆರರಿಸಂ ಕೊಯಲಿಷನ್’ ಅನ್ನು ಪ್ರಾರಂಭಿಸಿತು. ಇದರಲ್ಲಿ ಪಾಕಿಸ್ತಾನ, ಟರ್ಕಿ ಸೇರಿದಂತೆ 43 ದೇಶಗಳಿದ್ದವು. ಇದನ್ನು ‘ಮುಸ್ಲಿಂ ನ್ಯಾಟೋ’ ಎಂದು ಕರೆಯಲಾಯಿತಾದರೂ, ಇದರಲ್ಲಿ ನ್ಯಾಟೋ ಮಾದರಿಯ ಒಗ್ಗಟ್ಟಿನ ಯಾವುದೇ ಕಡ್ಡಾಯ ನಿಯಮಗಳಿರಲಿಲ್ಲ. ಅಲ್ಲದೆ, ಮುಸ್ಲಿಂ ದೇಶಗಳು ತಮ್ಮ ತಮ್ಮಲ್ಲೇ ಜಗಳವಾಡುತ್ತಿರುತ್ತವೆ. ಶಿಯಾ ಬಾಹುಳ್ಯದ ಇರಾನ್ ಮತ್ತು ಸೌದಿ ಅರೇಬಿಯಾ ವೈರಿಗಳಾಗಿಯೇ ಉಳಿದಿವೆ. ಟರ್ಕಿಯ ಜನರೂ ಇಂತಹ ಧಾರ್ವಿುಕ ಮಿಲಿಟರಿ ಒಕ್ಕೂಟವನ್ನು ಇಷ್ಟಪಡುವುದಿಲ್ಲ. 

ಈಜಿಪ್ತ್, ಜೋರ್ಡಾನ್ ಮತ್ತು ಕತಾರ್​ಗಳು ಅಮೆರಿಕದ ದೊಡ್ಡ ಮಿತ್ರರಾಷ್ಟ್ರಗಳು. ಇತ್ತ ಇಂಡೋನೇಷ್ಯಾ ಮತ್ತು ಮಲೇಷ್ಯಾದಂತಹ ದೇಶಗಳ ರಾಜಕೀಯ ಪರಿಸ್ಥಿತಿ ಉಳಿದ ಇಸ್ಲಾಮಿಕ್ ದೇಶಗಳಿಗಿಂತ ತೀರಾ ವಿಭಿನ್ನವಾಗಿದೆ. ಹೀಗಿರುವಾಗ ಇವೆಲ್ಲವೂ ಒಂದಾಗಿ ಮಿಲಿಟರಿ ಮೈತ್ರಿಕೂಟ ರಚಿಸುವುದು ಕಷ್ಟ. ಮತ್ತೊಂದೆಡೆ, ಎಲ್ಲ ಇಸ್ಲಾಮಿಕ್ ದೇಶಗಳು ಚೀನಾಗೆ ಹತ್ತಿರವಾಗಲು ಯತ್ನಿಸುತ್ತಿವೆ. ಆದ್ದರಿಂದ ಅಮೆರಿಕ ಕೂಡ ಇವು ಒಂದಾಗಲು ಬಿಡುವುದಿಲ್ಲ. ಮಧ್ಯಪ್ರಾಚ್ಯದ ದೇಶಗಳ ಮೇಲೆ ಅಮೆರಿಕದ ಪ್ರಭಾವ ಹೆಚ್ಚಾಗಿದೆ. ಇಷ್ಟೆಲ್ಲ ಮೀರಿ ಇಸ್ಲಾಮಿಕ್ ದೇಶಗಳು ಪ್ರಯತ್ನಿಸಿದರೂ, ಒಂದು ಅಧಿಕೃತ ಸೈನಿಕ ಒಕ್ಕೂಟ ರೂಪುಗೊಳ್ಳಲು ಇನ್ನೂ ಹಲವು ವರ್ಷಗಳು ಬೇಕಾಗುತ್ತವೆ.

ಈ ಒಪ್ಪಂದದ ಅಗತ್ಯವೇನಿತ್ತು?

1. ಕ್ಷೀಣಿಸಿದ ಅಮೆರಿಕದ ಮೇಲಿನ ನಂಬಿಕೆ: ನ್ಯಾಟೋದ ಸ್ಥಾಪಕ ಸದಸ್ಯ ದೇಶವಾದ ಡೆನ್ಮಾರ್ಕ್​ನ ಗ್ರೀನ್​ಲ್ಯಾಂಡ್ ಪ್ರಾಂತ್ಯದ ಮೇಲೆ ಡೊನಾಲ್ಡ್ ಟ್ರಂಪ್ ದಾಳಿಯ ಬೆದರಿಕೆ ಹಾಕಿದ್ದು ಮತ್ತು ಇರಾನ್ ಯುದ್ಧದ ಕಾರಣದಿಂದ ತೈಲ ಬಿಕ್ಕಟ್ಟು ಸೃಷ್ಟಿಯಾಗಿದ್ದು ನ್ಯಾಟೋ ದೇಶಗಳನ್ನು ಎರಡು ಬಣಗಳಾಗಿ ವಿಂಗಡಿಸಿದೆ. ಇನ್ನೊಂದೆಡೆ, ಇರಾನ್ ದೇಶವು ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್​ನಂತಹ ಮಧ್ಯಪ್ರಾಚ್ಯದ ಸುನ್ನಿ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. 

ಇರಾನ್ ಬೆಂಬಲಿತ ಹೂತಿ ಬಂಡುಕೋರರು ಕೂಡ ಸೌದಿ ಮೇಲೆ ದಾಳಿ ಮಾಡಿದ್ದಾರೆ. ಈ ಎಲ್ಲ ದೇಶಗಳಲ್ಲಿ ಅಮೆರಿಕದ ಸೇನಾ ನೆಲೆಗಳಿದ್ದರೂ ಮತ್ತು ಅಮೆರಿಕ ಇವುಗಳಿಗೆ ಸುರಕ್ಷತೆಯ ಭರವಸೆ ನೀಡಿದ್ದರೂ, ದಾಳಿಗಳನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಅಮೆರಿಕದ ಮೇಲಿನ ನಂಬಿಕೆ ಕಡಿಮೆಯಾಗಿದೆ. ಭವಿಷ್ಯದಲ್ಲಿ ನ್ಯಾಟೋ ಒಕ್ಕೂಟವೇನಾದರೂ ವಿಘಟನೆಯಾದರೆ, ಟರ್ಕಿಗೆ ಬ್ಯಾಕಪ್ ಆಗಿ ಈ ಇಸ್ಲಾಮಿಕ್ ನ್ಯಾಟೋ ನೆರವಿಗೆ ಬರಲಿದೆ.

2. ಇಸ್ರೇಲ್​ಗೆ ಪ್ರತಿಯಾಗಿ ಅಣ್ವಸ್ತ್ರ ಶಕ್ತಿಯ ಅಗತ್ಯ: ವಿಪರೀತ ತೈಲ ಸಂಪತ್ತಿನಿಂದಾಗಿ ಗಲ್ಪ್ ದೇಶಗಳು ಅತ್ಯಂತ ಶ್ರೀಮಂತವಾಗಿವೆ. ಆದರೆ ಅಮೆರಿಕದ ಭದ್ರತಾ ಭರವಸೆಯಿದ್ದ ಕಾರಣಕ್ಕೆ ಇವು ಎಂದಿಗೂ ಸ್ವಂತವಾಗಿ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲಿಲ್ಲ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಒಂದೇ ಅಣ್ವಸ್ತ್ರ ಹೊಂದಿರುವ ದೇಶವಾಗಿದೆ. ಇಸ್ರೇಲ್ ತೀವ್ರ ಸಂಕಷ್ಟಕ್ಕೆ ಸಿಲುಕಿದರೆ, ಅದು ಅಣು ದಾಳಿ ನಡೆಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅಂತಹ ಸಂದರ್ಭದಲ್ಲಿ ಅಮೆರಿಕ ತಮಗೆ ಅಣ್ವಸ್ತ್ರ ಬೆಂಬಲ ನೀಡುವುದಿಲ್ಲ ಎಂಬ ಅರಿವು ಗಲ್ಪ್ ದೇಶಗಳಿಗಿದೆ. ಆದ್ದರಿಂದಲೇ ಪಾಕಿಸ್ತಾನವನ್ನು ಜೊತೆ ಗೂಡಿಸಿಕೊಂಡು, ತಮ್ಮ ಮೇಲೂ ಅಣು ದಾಳಿಯಾದರೆ ಅದಕ್ಕೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ತಮಗಿದೆ ಎಂದು ತೋರಿಸಲು ಬಯಸುತ್ತಿವೆ. ಪಾಕಿಸ್ತಾನವೂ ಅರಬ್ ದೇಶಗಳಿಗೆ ನ್ಯೂಕ್ಲಿಯರ್ ಶೀಲ್ಡ್ (ಅಣ್ವಸ್ತ್ರ ಸುರಕ್ಷತಾ ಕವಚ) ನೀಡುವುದಾಗಿ ಈ ಹಿಂದೆ ಹೇಳಿದೆ.

ಸಾಮರ್ಥ್ಯಗಳು

ಸೌದಿ ಅರೇಬಿಯಾ: ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ರಫ್ತುದಾರ ದೇಶವಾಗಿದ್ದು, ವಿಶ್ವದ ಟಾಪ್-20 ಅರ್ಥವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಮೈತ್ರಿಕೂಟಕ್ಕೆ ಸೌದಿ ಮುಖ್ಯವಾಗಿ ಆರ್ಥಿಕ ನೆರವು ನೀಡಲಿದೆ.

ಪಾಕಿಸ್ತಾನ: ಅಣುಬಾಂಬ್ ಹೊಂದಿರುವ ಏಕೈಕ ಇಸ್ಲಾಮಿಕ್ ದೇಶ. ಪಾಕಿಸ್ತಾನವು ಅಣ್ವಸ್ತ್ರ, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಸೇನಾ ಬಲದ ಬೆಂಬಲ ನೀಡಲಿದೆ.

ಟರ್ಕಿ: ನ್ಯಾಟೋ ಸದಸ್ಯ ರಾಷ್ಟ್ರಗಳಲ್ಲಿ ಅಮೆರಿಕದ ನಂತರ ಎರಡನೇ ಅತಿ ದೊಡ್ಡ ಸೇನೆಯನ್ನು ಹೊಂದಿರುವ ದೇಶ. ಟರ್ಕಿಯು ತನ್ನ ಸುಧಾರಿತ ಸೈನಿಕ ತಂತ್ರಜ್ಞಾನ ಮತ್ತು ಯುದ್ಧದ ಅನುಭವವನ್ನು ಹಂಚಿಕೊಳ್ಳಲಿದೆ. ಈಗಾಗಲೇ ಟರ್ಕಿ ತನ್ನ ಡ್ರೋನ್ ತಂತ್ರಜ್ಞಾನವನ್ನು ಸೌದಿ ಮತ್ತು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ. ಜೊತೆಗೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳನ್ನು ಅಪ್​ಗ್ರೇಡ್ ಮಾಡಲು ಮತ್ತು ಯುದ್ಧನೌಕೆಗಳನ್ನು ನಿರ್ವಿುಸಲು ನೆರವಾಗಿದೆ.

ಭಾರತಕ್ಕೆ ಸವಾಲು

  • ಸೌದಿ-ಪಾಕಿಸ್ತಾನ-ಟರ್ಕಿ ಮೈತ್ರಿಕೂಟ ಭಾರತದ ಪಾಲಿಗೆ ಎರಡು ಮುಖ್ಯ ಕಾರಣಗಳಿಂದ ಕಳವಳಕಾರಿ ಸಂಗತಿಯಾಗಿದೆ.
  • ದಕ್ಷಿಣ ಏಷ್ಯಾದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ಕ್ಷೀಣಿಸುವ ಭೀತಿ

ದಕ್ಷಿಣ ಏಷ್ಯಾದಲ್ಲಿ ಭಾರತವೇ ಪ್ರಮುಖ ಪ್ರಾದೇಶಿಕ ಶಕ್ತಿಯಾಗಿದೆ, ಆದರೆ ಪಾಕಿಸ್ತಾನ ಸದಾ ಸವಾಲಾಗಿದೆ. ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲವೂ ಇದೆ. ಇರಾನ್ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಇನ್ನೊಂದೆಡೆ ಟರ್ಕಿಯು ಯುರೋಪ್, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದವರೆಗೆ ತನ್ನ ಪ್ರಭಾವ ವಿಸ್ತರಿಸಲು ಬಯಸಿದೆ. ಟರ್ಕಿಯು ಏಷ್ಯಾ ಮತ್ತು ಯುರೋಪ್ ನಡುವೆ ಭೂ-ಸಂಪರ್ಕದ ಸೇತುವೆಯಾಗಿದೆ. ಈ ಒಪ್ಪಂದದಿಂದ ಅರಬ್ಬಿ ಸಮುದ್ರ ಮತ್ತು ಮೆಡಿಟರೇನಿಯನ್ (ಭೂಮಧ್ಯ) ಸಮುದ್ರ ಪ್ರದೇಶದ ಪ್ರಾದೇಶಿಕ ಭದ್ರತಾ ರಚನೆಯೇ ಬದಲಾಗಲಿದೆ. 

ಒಪ್ಪಂದದಲ್ಲಿ ‘ಇಸ್ಲಾಮಿಕ್ ಒಗ್ಗಟ್ಟಿನ’ ಉಲ್ಲೇಖವಿದೆ. ಒಪ್ಪಂದ ನಡೆದ ಸ್ಥಳ ಮಕ್ಕಾ ಆಗಿದೆ, ಅಂದರೆ ಈ ಒಪ್ಪಂದಕ್ಕೆ ಪ್ಯಾನ್-ಇಸ್ಲಾಮಿಕ್ ಸ್ವರೂಪವಿದೆ. ಇಲ್ಲಿಯವರೆಗೆ ಭಾರತವು ಬಹುತೇಕ ಇಸ್ಲಾಮಿಕ್ ದೇಶಗಳೊಂದಿಗೆ ಉತ್ತಮ ರಾಜತಾಂತ್ರಿಕ ಮತ್ತು ಆರ್ಥಿಕ ಬಾಂಧವ್ಯ ಹೊಂದಿದೆ. ಸೌದಿ ಅರೇಬಿಯಾ ಮತ್ತು ಯುಎಇ ಭಾರತದ ಟಾಪ್-5 ವ್ಯಾಪಾರಿ ಪಾಲುದಾರರಲ್ಲಿ ಸೇರಿವೆ. ಈಗ ಈ ವ್ಯಾಪಾರ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು.

ಪಾಕಿಸ್ತಾನದೊಂದಿಗೆ ಯುದ್ಧ ಸಂಭವಿಸಿದರೆ ತೊಂದರೆ

‘ಆಪರೇಷನ್ ಸಿಂಧೂರ’ (2025ರ ಮೇ) ಸಮಯದಲ್ಲಿ, ಟರ್ಕಿಯು ಪಾಕಿಸ್ತಾನಕ್ಕೆ ಸುಧಾರಿತ ಡ್ರೋನ್​ಗಳು ಸೇರಿದಂತೆ ಸೇನಾ ನೆರವು ನೀಡಿತ್ತು ಹಾಗೂ ಪಾಕಿಸ್ತಾನದ ಪರವಾಗಿ ಹೇಳಿಕೆಗಳನ್ನೂ ನೀಡಿತ್ತು. ಮುಂದೆಯೂ ಯಾವುದೇ ಯುದ್ಧ ನಡೆದರೆ, ಭಾರತಕ್ಕೆ ಅದನ್ನು ಪ್ರತಿರೋಧಿಸುವುದು ಸವಾಲಾಗಲಿದೆ. ಭಾರತವು ಪಾಕಿಸ್ತಾನದಲ್ಲಿ ಯಾವುದೇ ಸೈನಿಕ ಕಾರ್ಯಾಚರಣೆ ನಡೆಸಿದರೆ, ಪಾಕಿಸ್ತಾನವು ಭಾರತದ ವಿರುದ್ಧ ಈ ಒಪ್ಪಂದವನ್ನು ಬಳಸಿಕೊಳ್ಳಬಹುದು. ಸೌದಿಯ ಹಣಕಾಸು ಬಲ, ಟರ್ಕಿಯ ರಕ್ಷಣಾ ತಂತ್ರಜ್ಞಾನ ಮತ್ತು ಪಾಕಿಸ್ತಾನದ ಕಾರ್ಯತಂತ್ರದ ಭೌಗೋಳಿಕ ಸ್ಥಾನಮಾನಗಳು ಸೇರಿ ತ್ರಿವಳಿ ಮೂಲಸೌಕರ್ಯವನ್ನು ಸೃಷ್ಟಿಸುತ್ತವೆ. ಇದರಿಂದ ರಕ್ಷಣಾ ಸಂಶೋಧನೆ ಮತ್ತು ಗುಪ್ತಚರ ಮಾಹಿತಿ ಹಂಚಿಕೊಳ್ಳುವಿಕೆ ವೇಗಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net