_1768500046526.webp?w=480&auto=format%2Ccompress&fit=max)
_1768500046526.webp?w=480&auto=format%2Ccompress&fit=max)
ಸೌದಿ ಅರೇಬಿಯಾ: ಪಾಕಿಸ್ತಾನದ ಪರಮಾಣು ಶಕ್ತಿ, ಸೌದಿ ಅರೇಬಿಯಾದ ಸಂಪತ್ತು ಹಾಗೂ ಟರ್ಕಿಯ ಸೇನಾಶಕ್ತಿ ಒಟ್ಟಾಗಿ ಇಸ್ಲಾಮಿಕ್ ನ್ಯಾಟೋವಾಗಿ ಬದಲಾಗುತ್ತಿದ್ದು, ಭಾರತದ ಮುಂದೆ ಭದ್ರತೆಯ ಹೊಸ ಸವಾಲು ಎದುರಾಗಿದೆ. ಈ ಮೂರೂ ದೇಶಗಳು ಒಂದಕ್ಕೊಂದು ಪೂರಕವಾಗಿ ರಣನೀತಿಯನ್ನು ರೂಪಿಸುತ್ತಿದ್ದು, ಇತರ ಮುಸ್ಲಿಂ ದೇಶಗಳನ್ನು ಶಾಮೀಲು ಮಾಡಲು ಪ್ರಯತ್ನ ತೀವ್ರಗೊಳಿಸಿವೆ.
ನ್ಯಾಟೋವಿನಂಥ ಶಕ್ತಿಶಾಲಿ ಸಂಘಟನೆ ರೂಪಿಸುವುದೇ ತಮ್ಮ ಉದ್ದೇಶವಾಗಿದ್ದು, ಈಗಾಗಲೇ ಇದರ ಸ್ವರೂಪ, ವ್ಯಾಪ್ತಿಯನ್ನು ನಿಶ್ಚಯಿಸಲಾಗಿದೆ ಎಂದು ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಒಂದೇ ಸ್ವರದಲ್ಲಿ ಹೇಳಿದ್ದು, ವಿವರ ಇಲ್ಲಿದೆ. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವೆ 2025ರ ಸೆಪ್ಟೆಂಬರ್ನಲ್ಲಿ ಮಹತ್ವದ ರಕ್ಷಣಾ ಒಪ್ಪಂದ ಏರ್ಪಟ್ಟಿತು. ಈ ಒಪ್ಪಂದದಂತೆ ಪಾಕಿಸ್ತಾನದ ಮೇಲೆ ದಾಳಿ ನಡೆದರೆ ಸೌದಿ, ಸೌದಿಯ ಮೇಲೆ ದಾಳಿ ನಡೆದರೆ ಪಾಕ್ ಪರಸ್ಪರ ರಕ್ಷಣೆಗೆ ಧಾವಿಸಲಿದ್ದು, ಶತ್ರುರಾಷ್ಟ್ರದ ಮೇಲೆ ದಾಳಿ ನಡೆಸಲಿವೆ.
ವಾಸ್ತವದಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧ ಮುಂಚಿನಿಂದಲೂ ಇದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಮತ್ತಷ್ಟು ದೃಢಗೊಂಡಿದೆ. ಆದರೆ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಕ್ಷಣಾ ಒಪ್ಪಂದದಿಂದ ಪರಿಸ್ಥಿತಿಗಳು ಒಂದಿಷ್ಟು ಬದಲಾಗಿವೆ. ಟರ್ಕಿ ಕೂಡ ಈ ಎರಡೂ ರಾಷ್ಟ್ರಗಳೊಂದಿಗೆ ಬಲವಾಗಿ ನಿಂತುಕೊಂಡಿದ್ದು, ಇಸ್ಲಾಂ ದೇಶಗಳ ಮೈತ್ರಿಕೂಟ ವಿಸ್ತರಿಸಲು ಮುಂದಾಗಿವೆ. ಸೌದಿ ಅರೇಬಿಯಾ-ಪಾಕಿಸ್ತಾನ-ಟರ್ಕಿ ಈ ಮೂರೂ ರಾಷ್ಟ್ರಗಳು ಪರಸ್ಪರ ಸಹಕಾರದ ನೆಲೆಯಲ್ಲಿ ಒಂದಾದರೆ ಅದರ ಪ್ರಮುಖ ಸವಾಲು ಇಸ್ರೇಲ್ ಮತ್ತು ಭಾರತದ ಮುಂದೆ ಉದ್ಭವವಾಗುತ್ತದೆ.
ಕಳೆದ ವರ್ಷ ಪಾಕ್ ಮತ್ತು ಸೌದಿ ನಡುವೆ ಅಂತಿಮಗೊಂಡ ರಕ್ಷಣಾ ಒಪ್ಪಂದದಲ್ಲಿ ಟರ್ಕಿ ಒಳಗೊಳ್ಳಲು ಸಮ್ಮತಿಸಿರುವುದೇ, ಮತ್ತೆ ‘ಇಸ್ಲಾಮಿಕ್ ನ್ಯಾಟೋ’ದ ಚರ್ಚೆ ಹುಟ್ಟುಹಾಕಿದೆ. ವಾಸ್ತವದಲ್ಲಿ ಟರ್ಕಿ ಮತ್ತು ಸೌದಿ ಅರೇಬಿಯಾ ಎರಡೂ ಸುನ್ನಿ ಬಾಹುಳ್ಯವುಳ್ಳ ರಾಷ್ಟ್ರಗಳು. ಇಸ್ಲಾಮಿಕ್ ದೇಶಗಳ ನೇತೃತ್ವ ವಹಿಸಿಕೊಳ್ಳುವ ಸಂಬಂಧ ಈ ಎರಡೂ ರಾಷ್ಟ್ರಗಳ ನಡುವೆ ಗುದ್ದಾಟ ನಡೆದುಕೊಂಡೇ ಬಂದಿದ್ದು, ಭಿನ್ನಾಭಿಪ್ರಾಯ ಆಗಾಗ ತಾರಕಕ್ಕೆ ಏರಿದ್ದೂ ಇದೆ. ಆದರೆ, ಇಸ್ರೇಲ್ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದ್ದು, ಇಸ್ಲಾಮಿಕ್ ದೇಶಗಳ ಮೇಲೆ ಮುಗಿಬೀಳುತ್ತಿದೆ.
ಪರಿಸ್ಥಿತಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು, ಸೌದಿ-ಟರ್ಕಿ ಸೇನಾ ಸಹಕಾರದ ವಿಷಯದಲ್ಲಿ ಮುಂದುವರಿಯಲು ನಿರ್ಧರಿಸಿದ್ದು, ಎಲ್ಲ ಕಡೆ ಹಿನ್ನಡೆ ಕಂಡಿದ್ದ ಪಾಕಿಸ್ತಾನ ಈ ಬೆಳವಣಿಗೆಯಿಂದ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ‘ಇಸ್ಲಾಮಿಕ್ ಮೈತ್ರಿಕೂಟ ಏರ್ಪಡಬೇಕು. ಸೇನಾ ಸಹಕಾರದ ವಿಷಯದಲ್ಲಂತೂ ಇದು ಅಗತ್ಯ. ಇದಕ್ಕಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು’ ಎಂದು ಟರ್ಕಿ ಅಧ್ಯಕ್ಷ ರೆಜಿಪ್ ತಯ್ಯಿಪ್ ಎರ್ದೊಗನ್ ಹೇಳಿದ್ದಾರೆ. ‘ನ್ಯಾಟೋ ಮಾದರಿಯ ರಕ್ಷಣಾ ವ್ಯವಸ್ಥೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಅನಿವಾರ್ಯವಾಗಿದೆ. ಇತರ ಅರಬ್ ರಾಷ್ಟ್ರಗಳು ಕೂಡ ಈ ನಿಟ್ಟಿನಲ್ಲಿ ಉತ್ಸಾಹ ತೋರಿವೆ.
ಪಾಕ್-ಸೌದಿ ರಕ್ಷಣಾ ಒಪ್ಪಂದದಲ್ಲಿ ಇನ್ನಷ್ಟು ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಶಾಮೀಲಾಗಬಹುದು’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ಅಷ್ಟಕ್ಕೂ, ಇಸ್ಲಾಮಿಕ್ ರಾಷ್ಟ್ರಗಳು ನ್ಯಾಟೋ ಮಾದರಿಯ ರಕ್ಷಣಾ ವ್ಯವಸ್ಥೆ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಆ ಪ್ರಯತ್ನಗಳು ಕೇವಲ ಕಾಗದದಲ್ಲೇ ಉಳಿದವು ಹೊರತು ಅನುಷ್ಠಾನಕ್ಕೆ ಬರಲಿಲ್ಲ. 2015ರಲ್ಲಿ ಸೌದಿ ಅರೇಬಿಯಾ ‘ಇಸ್ಲಾಮಿಕ್ ಮಿಲಿಟರಿ ಕೌಂಟರ್ ಟೆರರಿಜಂ ಕೊಲಿಶನ್- (ಐಎಮ್ಟಿಸಿ) ಅನ್ನು ಆರಂಭಿಸಿತು. ಇದರಲ್ಲಿ ಪಾಕಿಸ್ತಾನ, ಟರ್ಕಿ ಸೇರಿದಂತೆ 43 ಸದಸ್ಯರಾಷ್ಟ್ರಗಳಿವೆ. ಇದನ್ನೇ ‘ಇಸ್ಲಾಮಿಕ್ ನ್ಯಾಟೋ’ ಎಂದು ಕರೆಯಲಾಯಿತಾದರೂ, ನ್ಯಾಟೋದ ಸೆಕ್ಷನ್ 5 ಕಲ್ಪಿಸುವ ಸಾಮೂಹಿಕ ಸುರಕ್ಷೆಯ ಸವಲತ್ತು ಇದರಲ್ಲಿ ಇಲ್ಲ.
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವೆ 1947ರಿಂದಲೂ ದ್ವಿಪಕ್ಷೀಯ ಸಂಬಂಧಗಳಿವೆ. 1951ರಲ್ಲಿ ಉಭಯ ರಾಷ್ಟ್ರಗಳ ನಡುವೆ ‘ಟ್ರೀಟಿ ಆಫ್ ಫ್ರೆಂಡ್ಶಿಪ್’ಗೆ ಅಂಕಿತ ಹಾಕಲಾಗಿತ್ತು. 1965ರಲ್ಲಿ ಭಾರತದೊಂದಿಗಿನ ಸಮರದ ಸಂದರ್ಭದಲ್ಲಿ ಸೌದಿ ಪಾಕ್ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿತ್ತು. 1967ರಲ್ಲಿ ಪಾಕ್-ಸೌದಿ ಅರೇಬಿಯಾ ನಡುವೆ ಮೊದಲ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು. 1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಸೌದಿ ಭಾರತದ ಮಿಲಿಟ್ರಿ ಆಕ್ಷನ್ ಅನ್ನು ‘ಮೋಸ’ ಮತ್ತು ‘ಅಂತಾರಾಷ್ಟ್ರೀಯ ಒಪ್ಪಂದಗಳ ವಿರುದ್ಧ’ ಎಂದು ಹೇಳಿತ್ತು.
ಯುದ್ಧದ ಬಳಿಕ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದರೂ, ಸೌದಿ ಅದಕ್ಕೆ ಮಾನ್ಯತೆ ನೀಡಿರಲಿಲ್ಲ, 1975ರಲ್ಲಿ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯ ಬಳಿಕ ಸೌದಿ ಬಾಂಗ್ಲಾದೇಶವನ್ನು ಒಂದು ರಾಷ್ಟ್ರವಾಗಿ ಮಾನ್ಯ ಮಾಡಿತು. 1977ರಲ್ಲಿ ಸೌದಿ ಪಾಕ್ಗೆ 1 ಮಿಲಿಯನ್ ಡಾಲರ್ನ ಸಾಲ ನೀಡಿತ್ತು. ನಂತರ ಇದೇ ದುಡ್ಡಲ್ಲಿ ಪಾಕ್ ಅಮೆರಿಕದಿಂದ ಎಫ್-16 ಜೆಟ್ಗಳನ್ನು ಖರೀದಿಸಿತು. ಅಷ್ಟೇ ಅಲ್ಲ, ಪಾಕ್ನ ಅಣ್ವಸ್ತ್ರ ಕಾರ್ಯಕ್ರಮಕ್ಕೂ ಸೌದಿ ನೆರವು ನೀಡಿತು. ಪರಮಾಣು ಪರೀಕ್ಷೆ ಯಶಸ್ವಿಗೊಂಡ ಬಳಿಕ ಪಾಕ್ ಮೇಲೆ ಅಮೆರಿಕ ನಿರ್ಬಂಧ ಹೇರಿತು.
ಆ ಸಂದರ್ಭದಲ್ಲಿ ಸೌದಿ ಪ್ರತಿನಿತ್ಯ ಪಾಕ್ಗೆ 50 ಸಾವಿರ ಬ್ಯಾರೆಲ್ ಕಚ್ಚಾತೈಲವನ್ನು ಒದಗಿಸಿತು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೇ ಸೌದಿಯ ಆಗಿನ ರಕ್ಷಣಾ ಸಚಿವ ಪ್ರಿನ್ಸ್ ಅಬ್ದುಲ್ ಅಜೀಜ್ ಪಾಕ್ನ ಪರಮಾಣು ಮತ್ತು ಮಿಸೈಲ್ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಇಸ್ರೇಲ್ 2025ರ ಸೆಪ್ಟೆಂಬರ್ 8ರಿಂದ 10ರವರೆಗಿನ 72 ಗಂಟೆಗಳಲ್ಲಿ ಆರು ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ದಾಳಿ ನಡೆಸಿತು. ಯಮನ್, ಕತಾರ್, ಲೆಬನಾನ್, ಸಿರಿಯಾ ಹಾಗೂ ಟ್ಯುನೇಶಿಯಾ ಸೇರಿ ಆರು ರಾಷ್ಟ್ರಗಳ ಮೇಲಿನ ದಾಳಿಗಳಲ್ಲಿ 200 ಜನರು ಪ್ರಾಣ ಕಳೆದುಕೊಂಡರೆ ಸಾವಿರಕ್ಕೂ ಅಧಿಕ ಜನರು ಗಾಯಗೊಂಡರು. ಕತಾರ್ನ ರಾಜಧಾನಿ ದೋಹಾ ಮೇಲೂ ಇಸ್ರೇಲ್ ವಾಯುದಾಳಿ ನಡೆಸುತ್ತಿದ್ದಂತೆ ಹಲವು ರಾಷ್ಟ್ರಗಳಲ್ಲಿ ನಡುಕ ಸೃಷ್ಟಿಯಾಯಿತು.
ಈ ಬೆಳವಣಿಗೆಯ ಬಳಿಕ ದೋಹಾದಲ್ಲಿ ಅರಬ್-ಇಸ್ಲಾಮಿಕ್ ತುರ್ತು ಸಮ್ಮೇಳನ ನಡೆದು, ‘ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗಬೇಕು ಹಾಗೂ ಪರಸ್ಪರ ರಕ್ಷಣೆಗೆ ಬದ್ಧರಾಗಬೇಕು’ ಎಂದು ಕರೆ ನೀಡಲಾಯಿತು. ಇಸ್ಲಾಮಿಕ್ ದೇಶಗಳಿಗಾಗಿ ನ್ಯಾಟೋದಂಥ ಒಂದು ಸಂಘಟನೆ ರೂಪಿಸಬೇಕು ಎಂಬ ಪ್ರಸ್ತಾವನೆ. ಇದೇ ಸಮ್ಮೇಳನದ ವೇದಿಕೆಯಿಂದ ಹೊರಡಿತು. ಮತ್ತು ಇಸ್ಲಾಮಿಕ್ ನ್ಯಾಟೋ ಹೇಗಿರಬೇಕು ಎಂಬ ಕಲ್ಪನೆಗಳನ್ನು ಕೂಡ ಹಂಚಿಕೊಳ್ಳಲಾಯಿತು.
ಇಸ್ಲಾಮಿಕ್ ನ್ಯಾಟೋದ ಅಧ್ಯಕ್ಷತೆಯನ್ನು ಅರಬ್ ಜಗತ್ತಿನ 22 ದೇಶಗಳು ಸರದಿಯಲ್ಲಿ ವಹಿಸಿಕೊಳ್ಳಬೇಕು. ಮೊದಲ ಅಧ್ಯಕ್ಷ ಸ್ಥಾನ ಈಜಿಪ್ತ್ಗೆ ಸಲ್ಲಬೇಕು. ಈ ಬಗೆಯ ಸೇನಾ ಮೈತ್ರಿಕೂಟಕ್ಕೆ 20 ಸಾವಿರ ಸೈನಿಕರನ್ನು ನೀಡಲಾಗುವುದು ಎಂದು ಈಜಿಪ್ತ್ ಹೇಳಿದರೆ, ಆರ್ಥಿಕ ನೆರವು ನೀಡಲು ಸೌದಿ ಅರೇಬಿಯಾ, ಯುಎಇ, ಕತಾರ್ಗಳಂಥ ಶ್ರೀಮಂತ ಗಲ್ಪ್ ದೇಶಗಳು ಮುಂದಾಗಿವೆ. ಇಲ್ಲಿ ದೊರೆಯುವ ಆರ್ಥಿಕ ನೆರವಿನಿಂದ ಈಜಿಪ್ತ್ ತನ್ನ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಿದೆ.
ಸೌದಿ ಅರೇಬಿಯಾ ತೈಲ ಸಂಪನ್ನ ರಾಷ್ಟ್ರವಾಗಿರುವುದರಿಂದ ಆರ್ಥಿಕವಾಗಿ ಸಮೃದ್ಧಿ ಹೊಂದಿದೆ. ಆದರೆ, ಅದು ಈವರೆಗೆ ಪರಮಾಣು ಅಸ್ತ್ರಗಳನ್ನು ಹೊಂದಿಲ್ಲ. ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಜತೆಗಿರುವ ಸ್ನೇಹ. ಸೌದಿ ಅಮೆರಿಕಕ್ಕೂ ಕಚ್ಚಾತೈಲ ಪೂರೈಸುತ್ತಿದ್ದು, ಅದರ ಬದಲಿಗೆ ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಸೇನಾ ತಂತ್ರಜ್ಞಾನದ ನೆರವು ಕೂಡ ಅಮೆರಿಕದಿಂದ ದೊರೆತಿದೆ. ಹೀಗಾಗಿ, ಯಾವುದೇ ಸಂಕಷ್ಟದ ಸನ್ನಿವೇಶ ಎದುರಾದರೂ ತನ್ನ ರಕ್ಷಣೆಗೆ ಅಮೆರಿಕ ಇರಲಿದೆ ಎಂಬ ಭಾವನೆಯಿಂದ ತನ್ನದೇ ಆದ ಅಣ್ವಸ್ತ್ರಗಳನ್ನು ಹೊಂದಲು ಸೌದಿ ಈವರೆಗೆ ಹಪಹಪಿಸಿದ ನಿದರ್ಶನಗಳಿಲ್ಲ. ಆದರೆ, ಸೌದಿಗೂ ಇಸ್ರೇಲ್ ಭೀತಿ ವ್ಯಾಪಕವಾಗಿ ಕಾಡುತ್ತಿದೆ.
ಆರು ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ನಡೆದ ದಾಳಿಯ ನಂತರ ಇಸ್ರೇಲ್ನ ಮುಂದಿನ ಗುರಿ ಸೌದಿ ಅರೇಬಿಯಾ, ಇರಾಕ್ ಮತ್ತು ಟರ್ಕಿ ಎಂದು ಹೇಳಲಾಗಿದ್ದು, ಇದು ಸೌದಿಯ ನಿದ್ದೆಗೆಡಿಸಿದೆ. ಜತೆಗೆ, ಅಮೆರಿಕ ಮೇಲಿದ್ದ ನಂಬಿಕೆಗೆ ಧಕ್ಕೆ ಬಂದಿದೆ. ಹಾಗಾಗಿಯೇ, ಪಾಕಿಸ್ತಾನದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದು, ಇದು ಎಲ್ಲ ಬಗೆಯ ಶಸ್ತ್ರಾಸ್ತ್ರ ಸಹಕಾರದ ಅಂಶವನ್ನೂ ಒಳಗೊಂಡಿದೆ. ಈ ಒಪ್ಪಂದದಲ್ಲಿ ಈಗ ಟರ್ಕಿಯನ್ನೂ ಒಳಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಭವಿಷ್ಯದಲ್ಲಿ ಸೌದಿ ಅರೇಬಿಯಾ ಇಸ್ರೇಲ್ ಅಥವಾ ಇತರ ದೈತ್ಯ ರಾಷ್ಟ್ರದಿಂದ ದಾಳಿಗೆ ಒಳಗಾದರೆ, ಪಾಕ್ನ ಅಣ್ವಸ್ತ್ರಗಳನ್ನು ಬಳಸಬಹುದು. ಇಷ್ಟು ವರ್ಷಗಳ ಕಾಲ ಪಾಕಿಸ್ತಾನ ಇದೇ ಅಣ್ವಸ್ತ್ರಗಳ ಮೂಲಕ ಭಾರತದ ವಿರುದ್ಧ ಬ್ಲಾ್ಯಕ್ವೆುೕಲ್ ತಂತ್ರ ಅನುಸರಿಸುತ್ತಿತ್ತು. ಈಗ, ಈ ಸಾಲಿಗೆ ಸೌದಿಯೂ ಸೇರ್ಪಡೆಗೊಂಡರೆ ಭಾರತದ ತಲೆನೋವು ಹೆಚ್ಚುವುದು ಖಚಿತ.