ಇಸ್ಲಾಮಾಬಾದ್ ಸಂಧಾನ ಫೇಲ್: ಅಖಾಡಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಎಂಟ್ರಿ! ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆಗೆ ಮಾಸ್ಕೋ ಸಿದ್ಧ | Putin Mediation

ಇಸ್ಲಾಮಾಬಾದ್ ಸಂಧಾನ ಫೇಲ್: ಅಖಾಡಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಎಂಟ್ರಿ! ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆಗೆ ಮಾಸ್ಕೋ ಸಿದ್ಧ
ಇಸ್ಲಾಮಾಬಾದ್ ಸಂಧಾನ ಫೇಲ್: ಅಖಾಡಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಎಂಟ್ರಿ! ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆಗೆ ಮಾಸ್ಕೋ ಸಿದ್ಧ
Published on
ಮಾಸ್ಕೋ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗುತ್ತಿರುವ ಬೆನ್ನಲ್ಲೇ, ಜಾಗತಿಕ ರಾಜಕೀಯದಲ್ಲಿ ದೊಡ್ಡ ಬದಲಾವಣೆಯೊಂದು ಕಂಡುಬಂದಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Putin Mediation) ಈಗ ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿದ್ದಾರೆ.

ಪುಟಿನ್-ಪೆಜೆಶ್ಕಿಯಾನ್ ನಡುವೆ 'ಹೈ ವೋಲ್ಟೇಜ್' ಫೋನ್ ಕರೆ

ಭಾನುವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಕರೆ ನಡೆಸಿದ ಪುಟಿನ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ರಷ್ಯಾ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ. 21 ಗಂಟೆಗಳ ಕಾಲ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ ಚರ್ಚೆಗಳು ವಿಫಲವಾದ ನಂತರ, ಕ್ರೆಮ್ಲಿನ್ ಈ ಪ್ರಮುಖ ಪ್ರಕಟಣೆ ಹೊರಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ರಷ್ಯಾ ರಾಜತಾಂತ್ರಿಕ ಬೆಂಬಲ ನೀಡಲು ತಯಾರಿದೆ ಎಂದು ಪುಟಿನ್ ಭರವಸೆ ನೀಡಿದ್ದಾರೆ.

ಇಸ್ಲಾಮಾಬಾದ್ ಸಂಧಾನ ಹಳಿ ತಪ್ಪಿದ್ದು ಏಕೆ?

1979ರ ನಂತರ ಮೊದಲ ಬಾರಿಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನೇರ ಮಾತುಕತೆ ನಡೆದಿದ್ದರೂ, ಅದು ಸುಖಾಂತ್ಯ ಕಾಣಲಿಲ್ಲ.
ಅಣ್ವಸ್ತ್ರ ಕಾರ್ಯಕ್ರಮ: ಇರಾನ್‌ನ ಯುರೇನಿಯಂ ಪುಷ್ಟೀಕರಣ ನಿಲ್ಲಿಸುವ ಬೇಡಿಕೆಯನ್ನು ಟೆಹ್ರಾನ್ ಒಪ್ಪಲಿಲ್ಲ.
ಹೋರ್ಮುಜ್ ಜಲಸಂಧಿ: ಸಮುದ್ರ ಮಾರ್ಗದ ಮೇಲಿನ ಹತೋಟಿಯ ಬಗ್ಗೆ ಉಭಯ ದೇಶಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ.
ಕ್ಷಿಪಣಿ ಸಾಮರ್ಥ್ಯ: ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ನಿಯಂತ್ರಣ ಹೇರುವ ಅಮೆರಿಕದ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ.

ಜೆಡಿ ವ್ಯಾನ್ಸ್ ಮತ್ತು ಗಾಲಿಬಾಫ್ ನಡುವೆ ಮಾತುಗಳ ಯುದ್ಧ

ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಒಪ್ಪಂದವಾಗದಿರುವುದು ಅಮೆರಿಕಕ್ಕಿಂತ ಇರಾನ್‌ಗೆ ಹೆಚ್ಚು ಕೆಟ್ಟ ಸುದ್ದಿ. ನಮ್ಮ ರೆಡ್‌ಲೈನ್‌ಗಳು ಏನೆಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಸ್ಪೀಕರ್ ಮೊಹಮ್ಮದ್ ಬಾಘರ್ ಗಾಲಿಬಾಫ್, ನಾವು ರಚನಾತ್ಮಕ ಪ್ರಸ್ತಾವನೆಗಳನ್ನು ನೀಡಿದ್ದರೂ ಅಮೆರಿಕ ನಮ್ಮ ನಂಬಿಕೆಯನ್ನು ಗಳಿಸುವಲ್ಲಿ ಸೋತಿದೆ ಎಂದು ದೂಷಿಸಿದ್ದಾರೆ.

ಫೆಬ್ರವರಿ 28 ರಿಂದ ನಡೆಯುತ್ತಿರುವ ರಣಭೂಮಿ

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಈ ಯುದ್ಧ ಆರಂಭವಾಗಿತ್ತು. ಸದ್ಯ ಎರಡು ವಾರಗಳ ಕದನ ವಿರಾಮ ಜಾರಿಯಲ್ಲಿದ್ದರೂ, ಮಾತುಕತೆ ವಿಫಲವಾಗಿರುವುದು ಮತ್ತೆ ಯುದ್ಧ ಸ್ಫೋಟಗೊಳ್ಳುವ ಭೀತಿ ಹುಟ್ಟಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಹೇಗಾದರೂ ಮಾಡಿ ಕದನ ವಿರಾಮವನ್ನು ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಿದ್ದಾರೆ.

ರಷ್ಯಾದ ಮಧ್ಯಸ್ಥಿಕೆ ಫಲ ನೀಡುವುದೇ..?

ರಷ್ಯಾ ಮತ್ತು ಇರಾನ್ ನಡುವೆ ಬಲವಾದ ರಕ್ಷಣಾ ಸಂಬಂಧವಿದೆ. ಅಮೆರಿಕದ ಪ್ರಭಾವವನ್ನು ಕಡಿಮೆ ಮಾಡಲು ಪುಟಿನ್ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅಮೆರಿಕವು ರಷ್ಯಾದ ಮಧ್ಯಸ್ಥಿಕೆಯನ್ನು ಒಪ್ಪದಿದ್ದರೆ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಈಗ ಅಮೆರಿಕ ವರ್ಸಸ್ ರಷ್ಯಾ ಎಂಬ ಶೀತಲ ಸಮರದ ರೂಪ ಪಡೆಯಬಹುದು. ಇದು ಜಾಗತಿಕ ತೈಲ ಮಾರುಕಟ್ಟೆ ಮತ್ತು ಭಾರತದಂತಹ ದೇಶಗಳ ಮೇಲೂ ಗಂಭೀರ ಪರಿಣಾಮ ಬೀರಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net