ಅಮೆರಿಕ ಇಲ್ಲದ NATO ಅಸ್ತಿತ್ವ ಶೂನ್ಯವೇ? 75 ವರ್ಷಗಳ ಸ್ನೇಹಕ್ಕೆ ಅಂತ್ಯ ಹಾಡುತ್ತಾ ಯುಎಸ್​? ದೊಡ್ಡಣ್ಣನ ನಿರ್ಧಾರದಿಂದ ನಡುಗಿದ ಯುರೋಪ್!

ಅಮೆರಿಕ ಇಲ್ಲದ NATO ಅಸ್ತಿತ್ವ ಶೂನ್ಯವೇ? 75 ವರ್ಷಗಳ ಸ್ನೇಹಕ್ಕೆ ಅಂತ್ಯ ಹಾಡುತ್ತಾ ಯುಎಸ್​? ದೊಡ್ಡಣ್ಣನ ನಿರ್ಧಾರದಿಂದ ನಡುಗಿದ ಯುರೋಪ್!
ಅಮೆರಿಕ ಇಲ್ಲದ NATO ಅಸ್ತಿತ್ವ ಶೂನ್ಯವೇ? 75 ವರ್ಷಗಳ ಸ್ನೇಹಕ್ಕೆ ಅಂತ್ಯ ಹಾಡುತ್ತಾ ಯುಎಸ್​? ದೊಡ್ಡಣ್ಣನ ನಿರ್ಧಾರದಿಂದ ನಡುಗಿದ ಯುರೋಪ್!
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್ ಯುದ್ಧಕ್ಕೆ ಬೆಂಬಲ ನೀಡದ ನಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ.
  • ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನಿಂದ ಅಮೆರಿಕದ ಸೇನಾ ಕಾರ್ಯಾಚರಣೆಗೆ ಅಸಹಕಾರ.
  • ಅಮೆರಿಕ ಹೊರಬಂದರೆ ಯುರೋಪ್ ಮೇಲೆ ರಷ್ಯಾದ ಆಕ್ರಮಣ ಹೆಚ್ಚುವ ಭೀತಿ
  • ನಾಟೋದಿಂದ ಹೊರಬರಲು ಅಮೆರಿಕದ ಕಾಂಗ್ರೆಸ್ ಅನುಮತಿ ಕಡ್ಡಾಯ ಎಂಬ ಕಾನೂನು ಸಂಕಷ್ಟ.
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಈಗ ಜಗತ್ತಿನ ಅತಿದೊಡ್ಡ ಸೇನಾ ಒಕ್ಕೂಟವಾದ ನಾಟೋ (NATO) ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ನೀಡುವ ಹಂತಕ್ಕೆ ಬಂದು ನಿಂತಿದೆ. ಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಸಾಥ್ ನೀಡದ ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಕೆಂಡಾಮಂಡಲವಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕವನ್ನು ನಾಟೋ ಒಕ್ಕೂಟದಿಂದ ಹೊರತರುವ ಬಗ್ಗೆ ಗಂಭೀರ ಸುಳಿವು ನೀಡಿದ್ದಾರೆ. ಇದು ಜಾಗತಿಕ ರಕ್ಷಣಾ ವ್ಯವಸ್ಥೆಯಲ್ಲಿ ಮಹಾ ಭೂಕಂಪಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.

ಸಂಘರ್ಷದ ಮೂಲ: ಇರಾನ್ ಯುದ್ಧದಲ್ಲಿ ಅಸಹಕಾರ

ಫೆಬ್ರವರಿ 28 ರಿಂದ ಆರಂಭವಾದ ಇರಾನ್ ಮೇಲಿನ ದಾಳಿಯಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಬ್ರಿಟನ್‌ನಂತಹ ನಾಟೋ ಮಿತ್ರರಾಷ್ಟ್ರಗಳು ಅಮೆರಿಕಕ್ಕೆ ಸೈನ್ಯ ಅಥವಾ ನೌಕಾಪಡೆಯ ಬೆಂಬಲ ನೀಡಲು ನಿರಾಕರಿಸಿವೆ. ಹೋರ್ಮುಜ್ ಜಲಸಂಧಿಯನ್ನು ತೆರೆಯಲು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳಿಗೆ ಈ ರಾಷ್ಟ್ರಗಳು ಕೇವಲ ರಾಜತಾಂತ್ರಿಕ ಬೆಂಬಲ ಸೀಮಿತಗೊಳಿಸಿವೆ.
ಸ್ಪೇನ್ ಮತ್ತು ಇಟಲಿಯ ಬಂಡಾಯ: ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಈ ಯುದ್ಧವನ್ನು ಅನ್ಯಾಯ ಮತ್ತು ಅಪಾಯಕಾರಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದ ಯುದ್ಧ ವಿಮಾನಗಳು ತನ್ನ ವಾಯುಪ್ರದೇಶ ಬಳಸದಂತೆ ನಿಷೇಧ ಹೇರಿದ್ದಾರೆ. ಇಟಲಿಯ ಜಾರ್ಜಿಯಾ ಮೆಲೋನಿ ಕೂಡ ಅಮೆರಿಕದ ಹಸ್ತಕ್ಷೇಪವು ಅಂತಾರಾಷ್ಟ್ರೀಯ ಕಾನೂನಿನ ವ್ಯಾಪ್ತಿಯಿಂದ ಹೊರಗಿದೆ ಎಂದು ಖಂಡಿಸಿದ್ದಾರೆ.
ಬ್ರಿಟನ್ ಮತ್ತು ಫ್ರಾನ್ಸ್ ನಿಲುವು: ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಇದು ನಮ್ಮ ಯುದ್ಧವಲ್ಲ ಎಂದು ಹೇಳುವ ಮೂಲಕ ದೂರ ಉಳಿದಿದ್ದಾರೆ. ಫ್ರಾನ್ಸ್ ತನ್ನ ವಾಯುಪ್ರದೇಶದ ಮೂಲಕ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಸಾಗಿಸಲು ಅಮೆರಿಕಕ್ಕೆ ಅನುಮತಿ ನಿರಾಕರಿಸಿದೆ.

ನಾಟೋ ಒಂದು ಕಾಗದದ ಹುಲಿ: ಟ್ರಂಪ್ ಆಕ್ರೋಶ

ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಯುರೋಪಿಯನ್ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡಿರುವ ಟ್ರಂಪ್, ನಾಟೋ ಕೇವಲ ಒಂದು ಕಾಗದದ ಹುಲಿ ಎಂದು ಕರೆದಿದ್ದಾರೆ.
ನಾವು ಯುರೋಪ್ ಮೇಲೆ ದಾಳಿಯಾದಾಗ ಅವರನ್ನು ರಕ್ಷಿಸಬೇಕು, ಆದರೆ ನಮಗೆ ಅಗತ್ಯವಿದ್ದಾಗ ಅವರು ಬೇಸ್ ನೀಡಲು ನಿರಾಕರಿಸುತ್ತಾರೆ. ಇದು ಸರಿಯಾದ ಒಪ್ಪಂದವಲ್ಲ. ಇರಾನ್ ತೈಲ ಪಡೆಯುವ ರಾಷ್ಟ್ರಗಳೇ ಹಾರ್ಮುಜ್ ಜಲಸಂಧಿಯನ್ನು ರಕ್ಷಿಸಿಕೊಳ್ಳಲಿ ಎಂದು ಟ್ರಂಪ್ ಕಿಡಿಕಾರಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಕೂಡ ನಾಟೋ ಜೊತೆಗಿನ ಸಂಬಂಧವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಅಮೆರಿಕ ನಾಟೋದಿಂದ ಹೊರಬಂದರೆ ಏನಾಗುತ್ತದೆ..?

ನಾಟೋ ಒಕ್ಕೂಟದ ಆರ್ಟಿಕಲ್ 5 ಪ್ರಕಾರ, ಒಂದು ದೇಶದ ಮೇಲೆ ದಾಳಿಯಾದರೆ ಅದು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಅಮೆರಿಕ ಈ ಒಕ್ಕೂಟದಿಂದ ಹೊರಬಂದರೆ ಪರಿಸ್ಥಿತಿ ಭೀಕರವಾಗಲಿದೆ.
ಯುರೋಪ್‌ನ ಭದ್ರತೆ ಅಪಾಯಕ್ಕೆ: ನಾಟೋದ ಒಟ್ಟು ರಕ್ಷಣಾ ವೆಚ್ಚದ ಶೇ. 60 ರಷ್ಟನ್ನು ಅಮೆರಿಕವೇ ಭರಿಸುತ್ತದೆ. ಅಮೆರಿಕದ 13 ಲಕ್ಷ ಸೈನಿಕರು ಇಲ್ಲದಿದ್ದರೆ, ರಷ್ಯಾದಂತಹ ರಾಷ್ಟ್ರಗಳಿಗೆ ಯುರೋಪ್ ಮೇಲೆ ದಾಳಿ ಮಾಡುವುದು ಸುಲಭವಾಗುತ್ತದೆ.
ಅಮೆರಿಕದ ಜಾಗತಿಕ ಹಿಡಿತ ಸಡಿಲ: ಅಮೆರಿಕವು ಜಗತ್ತಿನಾದ್ಯಂತ ಇರುವ ತನ್ನ ಮಿತ್ರರಾಷ್ಟ್ರಗಳ ಸೇನಾ ನೆಲೆಗಳ ಮೇಲಿನ ಹಕ್ಕನ್ನು ಕಳೆದುಕೊಳ್ಳಬಹುದು. ಇದು ಚೀನಾ ಮತ್ತು ರಷ್ಯಾ ಜಾಗತಿಕವಾಗಿ ಅಧಿಪತ್ಯ ಸಾಧಿಸಲು ದಾರಿ ಮಾಡಿಕೊಡುತ್ತದೆ.
ಆರ್ಥಿಕ ದಿಗ್ಬಂಧನ: ಅಮೆರಿಕವು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಪ್ರಭಾವ ಕಳೆದುಕೊಂಡು, ಹೊಸ ಮಹಾಶಕ್ತಿಗಳಿಂದ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು.

ಕಾನೂನು ಅಡಚಣೆಗಳು ಮತ್ತು ಸುಪ್ರೀಂ ಕೋರ್ಟ್

ಟ್ರಂಪ್ ಅವರು ಬಯಸಿದ ಕೂಡಲೇ ನಾಟೋದಿಂದ ಹೊರಬರಲು ಸಾಧ್ಯವಿಲ್ಲ. 2023 ರಲ್ಲಿ ಅಮೆರಿಕ ಕಾಂಗ್ರೆಸ್ ಅಂಗೀಕರಿಸಿದ ಕಾನೂನಿನ ಪ್ರಕಾರ, ಅಧ್ಯಕ್ಷರು ನಾಟೋ ಸದಸ್ಯತ್ವವನ್ನು ರದ್ದುಗೊಳಿಸಲು ಸೆನೆಟ್ ಅಥವಾ ಕಾಂಗ್ರೆಸ್‌ನ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಆದಾಗ್ಯೂ, ತಜ್ಞರ ಪ್ರಕಾರ ಟ್ರಂಪ್ ಕಾನೂನುಬದ್ಧವಾಗಿ ಅಲ್ಲದಿದ್ದರೂ, ಪ್ರಾಯೋಗಿಕವಾಗಿ ಸೇನೆಯನ್ನು ಹಿಂಪಡೆಯುವ ಮೂಲಕ ನಾಟೋವನ್ನು ದುರ್ಬಲಗೊಳಿಸಬಹುದು. ಈ ವಿವಾದವು ಅಂತಿಮವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.

ಮಾರ್ಕ್ ರುಟ್ಟೆ ವಾಷಿಂಗ್ಟನ್ ಭೇಟಿ

ನಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಮುಂದಿನ ವಾರ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಟ್ರಂಪ್ ಮನವೊಲಿಸಲು ಪ್ರಯತ್ನಿಸಲಿದ್ದಾರೆ. ಇದು ಗ್ರೌಂಡ್‌ಹಾಗ್ ಡೇ' ನಂತೆ ಹಳೆಯ ನಾಟಕದ ಮರುಕಳಿಕೆ ಎಂದು ಕೆಲವು ರಾಜತಾಂತ್ರಿಕರು ಹೇಳುತ್ತಿದ್ದಾರೆ. ಟ್ರಂಪ್ ಕೇವಲ ಒತ್ತಡ ಹೇರಲು ಈ ರೀತಿ ಮಾಡುತ್ತಿದ್ದಾರೆಯೇ ಅಥವಾ ನಿಜವಾಗಿಯೂ ನಾಟೋವನ್ನು ಕೈಬಿಡುತ್ತಾರೆಯೇ ಎಂಬುದು ಸದ್ಯದ ಕುತೂಹಲ ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net