ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಅಂತ್ಯ? ಲಂಡನ್ ನೈಟ್‌ಕ್ಲಬ್ ಜಗಳದ ಬೆನ್ನಲ್ಲೇ ನಿವೃತ್ತಿ ಹೇಳ್ತಾರಾ ಸ್ಟಾರ್ ಆಲ್‌ರೌಂಡರ್! Ben Stokes Retirement

ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಅಂತ್ಯ? ಲಂಡನ್ ನೈಟ್‌ಕ್ಲಬ್ ಜಗಳದ ಬೆನ್ನಲ್ಲೇ ನಿವೃತ್ತಿ ಹೇಳ್ತಾರಾ ಸ್ಟಾರ್ ಆಲ್‌ರೌಂಡರ್!
ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಅಂತ್ಯ? ಲಂಡನ್ ನೈಟ್‌ಕ್ಲಬ್ ಜಗಳದ ಬೆನ್ನಲ್ಲೇ ನಿವೃತ್ತಿ ಹೇಳ್ತಾರಾ ಸ್ಟಾರ್ ಆಲ್‌ರೌಂಡರ್!
Published on
ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಘಾತ ಎದುರಾಗಿದೆ. ಲಂಡನ್‌ನ ನೈಟ್‌ಕ್ಲಬ್‌ ಒಂದರಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes Retirement) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಲು ಗಂಭೀರ ಚಿಂತನೆ ನಡೆಸಿದ್ದಾರೆ. ಈ ವಿವಾದದ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಸ್ಟೋಕ್ಸ್ ಅವರ 15 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನ ಈಗ ತೂಗುಯ್ಯಾಲೆಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯಲ್ಲಿ ಅನುಭವಿಸಿದ 4-1 ರ ಹೀನಾಯ ಸೋಲಿನ ಬಳಿಕ, ಇಂಗ್ಲೆಂಡ್ ತಂಡದ ಆಟಗಾರರ ಅಶಿಸ್ತು ಮತ್ತು ಮಿತಿಮೀರಿದ ಮದ್ಯಪಾನ ಸಂಸ್ಕೃತಿಯ ಬಗ್ಗೆ ಭಾರಿ ಟೀಕೆಗಳು ಕೇಳಿಬಂದಿದ್ದವು. ಇದನ್ನು ನಿಯಂತ್ರಿಸಲು ಇಸಿಬಿ ಆಟಗಾರರಿಗೆ ಮಧ್ಯರಾತ್ರಿಯ ನಂತರ ಹೊರಗಡೆ ಇರಬಾರದು ಎಂದು ಕಟ್ಟುನಿಟ್ಟಿನ ಕರ್ಫ್ಯೂ ನಿಯಮ ಜಾರಿಗೆ ತಂದಿತ್ತು. ಆದರೆ, ನ್ಯೂಜಿಲೆಂಡ್ ವಿರುದ್ಧ ಗೆದ್ದ ಜೋಶ್‌ನಲ್ಲಿ ನಾಯಕನೇ ನಿಯಮ ಉಲ್ಲಂಘಿಸಿರುವುದು ಮಂಡಳಿಯ ತಾಳ್ಮೆ ಕೆಡಿಸಿದೆ.

ಏನಿದು ನೈಟ್‌ಕ್ಲಬ್ ರೌಡಿರಂಗ? ಅಸಲಿ ಘಟನೆ ಇಲ್ಲಿದೆ

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಸೋಮವಾರ ಮುಂಜಾನೆ ಲಂಡನ್‌ನ ಚೆಲ್ಸಿಯಾದಲ್ಲಿರುವ ಪ್ರಸಿದ್ಧ ರೆಕ್ಸ್ ರೂಮ್ಸ್ ನೈಟ್‌ಕ್ಲಬ್‌ನಲ್ಲಿ ಈ ಹೈಡ್ರಾಮಾ ನಡೆದಿದೆ. ಟೆಸ್ಟ್ ಪಂದ್ಯ ಮುಗಿದ ಸಂಭ್ರಮದಲ್ಲಿದ್ದ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಮಂಡಳಿ ವಿಧಿಸಿದ್ದ ಮಧ್ಯರಾತ್ರಿಯ ಕರ್ಫ್ಯೂ ಸಮಯ ಮುಗಿದರೂ ಕ್ಲಬ್‌ನಲ್ಲೇ ಉಳಿದಿದ್ದರು. ಅದೇ ಸಮಯದಲ್ಲಿ, ಸಾರಾಸೆನ್ಸ್ ಕ್ಲಬ್‌ನ ರಗ್ಬಿ ಆಟಗಾರರು ತಮ್ಮ ಸೀಸನ್ ಮುಕ್ತಾಯದ ಪಾರ್ಟಿಗಾಗಿ ಅಲ್ಲಿಗೆ ಬಂದಿದ್ದರು.
ಈ ವೇಳೆ ಕ್ರಿಕೆಟಿಗರು ಮತ್ತು 125 ಕೆಜಿ ತೂಕದ 21 ವರ್ಷದ ದೈತ್ಯ ರಗ್ಬಿ ಆಟಗಾರ ತೊಟೊವಾ ಔವಾ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆ ರಗ್ಬಿ ಆಟಗಾರ ಇಂಗ್ಲೆಂಡ್ ಬೌಲರ್ ಗಸ್ ಅಟ್ಕಿನ್ಸನ್‌ಗೆ ಗುರಿಯಾಗಿಸಿ ಜೋರಾಗಿ ಪಂಚ್ ಮಾಡಿದ್ದಾನೆ. ಆದರೆ, ಆ ಪಂಚ್ ಅಟ್ಕಿನ್ಸನ್ ಕೈಗೆ ಸಿಗದೆ ಅವರ ರಕ್ಷಣೆಗೆ ನಿಂತಿದ್ದ ಇಸಿಬಿ (ECB) ಭದ್ರತಾ ಅಧಿಕಾರಿಯ ಮುಖಕ್ಕೆ ಬಿದ್ದಿದೆ. ಪರಿಣಾಮ ಅಧಿಕಾರಿಯ ಮುಖಕ್ಕೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಹೊಲಿಗೆ ಹಾಕಲಾಗಿದೆ. ಅಲ್ಲದೆ, ಈ ಗಲಾಟೆಯಲ್ಲಿ ಬೆನ್ ಸ್ಟೋಕ್ಸ್ ಅಥವಾ ಅಟ್ಕಿನ್ಸನ್ ಮೊದಲು ಜಗಳ ತೆಗೆದವರಲ್ಲ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಸಿಬಿ ಕೋಪಕ್ಕೆ ಬಲಿಯಾಗ್ತಾರಾ ಕ್ಯಾಪ್ಟನ್? ಸ್ಟೋಕ್ಸ್ ಮುಂದಿರುವ ದಾರಿಗಳೇನು?

ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಇಸಿಬಿ ಮತ್ತು ಕ್ರಿಕೆಟ್ ನಿಯಂತ್ರಣ ಮಂಡಳಿ, ಬೆನ್ ಸ್ಟೋಕ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಪ್ರಕಾರ, ಇಸಿಬಿ ನಾಯಕನ ವಿರುದ್ಧ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.
1. ಬೆನ್ ಸ್ಟೋಕ್ಸ್ ಅವರೇ ಸ್ವಇಚ್ಛೆಯಿಂದ ನಾಯಕತ್ವಕ್ಕೆ ರಾಜೀನಾಮೆ ನೀಡುವುದು.
2. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ, ಮಂಡಳಿಯೇ ಅವರನ್ನು ನಾಯಕತ್ವದಿಂದ ವಜಾಗೊಳಿಸುವುದು.
3. ತನಿಖೆ ಮುಗಿಯುವವರೆಗೆ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಇಬ್ಬರನ್ನೂ ಕ್ರಿಕೆಟ್‌ನಿಂದ ಅಮಾನತು ಮಾಡುವುದು.
4. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ರಕಟಣೆಯನ್ನು ಸದ್ಯಕ್ಕೆ ತಡೆಹಿಡಿಯುವುದು.
ಮತ್ತೊಂದೆಡೆ, ಈ ಆಂತರಿಕ ತನಿಖೆ ಮತ್ತು ಮಂಡಳಿಯ ಧೋರಣೆಯಿಂದ ತೀವ್ರ ಬೇಸತ್ತಿರುವ 35 ವರ್ಷದ ಬೆನ್ ಸ್ಟೋಕ್ಸ್ ಸದ್ಯ ನಾಲ್ಕು ಆಯ್ಕೆಗಳನ್ನು ಕೈಯಲ್ಲೊಟ್ಟುಕೊಂಡು ಯೋಚಿಸುತ್ತಿದ್ದಾರೆ. ನಾಯಕತ್ವ ಬಿಟ್ಟು ಕೇವಲ ಆಟಗಾರನಾಗಿ ಮುಂದುವರಿಯುವುದು, ಮಂಡಳಿಯ ವಿರುದ್ಧ ಕಾನೂನು ಹೋರಾಟ ಮಾಡುವುದು, ಕ್ರಿಕೆಟ್‌ನಿಂದ ತಾತ್ಕಾಲಿಕ ಬ್ರೇಕ್ ತಗೆದುಕೊಳ್ಳುವುದು ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದು. ಈ ಹಿಂದೆ 2021 ರಲ್ಲೂ ಸ್ಟೋಕ್ಸ್ ತಮ್ಮ ಮಾನಸಿಕ ಆರೋಗ್ಯದ ಕಾರಣ ನೀಡಿ ಕ್ರಿಕೆಟ್‌ನಿಂದ ಸುದೀರ್ಘ ಬ್ರೇಕ್ ಪಡೆದಿದ್ದರು. ಸದ್ಯ ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಲ್‌ರೌಂಡರ್‌ನ ಭವಿಷ್ಯ ಮುಂದಿನ 48 ಗಂಟೆಗಳಲ್ಲಿ ನಿರ್ಧಾರವಾಗಲಿದ್ದು, ಜಾಗತಿಕ ಕ್ರಿಕೆಟ್ ವಲಯದಲ್ಲಿ ಇದು ಭಾರಿ ಸಂಚಲನ ಸೃಷ್ಟಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net