ಇರಾನ್‌ನಲ್ಲಿ ಆರಂಭವಾಯ್ತು ಮೊಜ್ತಬಾ ಯುಗ..ಮೊದಲ ಹೇಳಿಕೆಯಲ್ಲೇ ಯುದ್ಧದ ಮುನ್ಸೂಚನೆ ನೀಡಿದ ಖಮೇನಿ ಪುತ್ರ | Mojtaba Khamenei

Mojtaba Khamenei  |  ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ
Mojtaba Khamenei | ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ
Published on
ಟೆಹ್ರಾನ್: ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ (Mojtaba Khamenei), ತಮ್ಮ ಮೊದಲ ಅಧಿಕೃತ ಹೇಳಿಕೆಯಲ್ಲೇ ಜಗತ್ತಿಗೆ ನಡುಕ ಹುಟ್ಟಿಸುವಂತಹ ಎಚ್ಚರಿಕೆ ನೀಡಿದ್ದು, ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಇರಾನ್‌ನ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಲಿಖಿತ ಸಂದೇಶದಲ್ಲಿ ಮೊಜ್ತಬಾ, ಶತ್ರುಗಳ ವಿರುದ್ಧ ಹಾರ್ಮುಜ್ ಜಲಸಂಧಿಯನ್ನು ತಡೆಯುವ ಲಿವರ್ ಅನ್ನು ಬಳಸುವುದನ್ನು ಮುಂದುವರಿಸಬೇಕು ಎಂದು ತಿಳಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್ ತನ್ನ ಮೇಲುಗೈ ಸಾಧಿಸಲು ಈ ಮಾರ್ಗವನ್ನು ಬಂದ್ ಮಾಡುವುದು ಅನಿವಾರ್ಯ ಎಂದಿದ್ದಾರೆ.
ಶತ್ರು ರಾಷ್ಟ್ರಗಳು ಯುದ್ಧವನ್ನು ಮುಂದುವರಿಸಿದರೆ, ಇರಾನ್ ಹೊಸ ಯುದ್ಧ ರಂಗಗಳನ್ನು ತೆರೆಯಲಿದೆ ಎಂದು ಮೊಜ್ತಬಾ ಎಚ್ಚರಿಕೆ ನೀಡಿದ್ದು, ಶತ್ರುಗಳು ಎಲ್ಲಿ ದುರ್ಬಲವಾಗಿದ್ದಾರೋ ಅಲ್ಲಿ ಹೊಸ ರಂಗಗಳನ್ನು ತೆರೆಯುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಅಗತ್ಯ ಬಿದ್ದರೆ ಈ ರಂಗಗಳನ್ನು ಸಕ್ರಿಯಗೊಳಿಸಲಾಗುವುದು. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿ ಎದುರಿಸಲು ಸಿದ್ಧರಾಗಿ ಎಂದು ಅವರು ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಆಸ್ತಿ ವಶ ಮತ್ತು ಸೇಡಿನ ಕರೆ

ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್‌ಗೆ ಉಂಟಾದ ಹಾನಿಗೆ ಶತ್ರು ರಾಷ್ಟ್ರಗಳಿಂದಲೇ ಪರಿಹಾರ ಪಡೆಯುವುದಾಗಿ ಪ್ರತಿಜ್ಞೆ ಮಾಡಿರುವ ಖಮೇನಿ ಪುತ್ರ, ಒಂದು ವೇಳೆ ಅವರು ಪರಿಹಾರ ನೀಡಲು ನಿರಾಕರಿಸಿದರೆ, ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು, ಇಲ್ಲವೇ ಸಮಾನ ಮೌಲ್ಯದ ಆಸ್ತಿಯನ್ನು ನಾಶಪಡಿಸಲಾಗುವುದು, ನಮ್ಮ ಜನರ ರಕ್ತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ.

ನೆರೆಯ ರಾಷ್ಟ್ರಗಳಿಗೆ ಕರೆ

ತಮ್ಮ ಸಂದೇಶದಲ್ಲಿ ರಾಷ್ಟ್ರೀಯ ಏಕತೆಯ ಅಗತ್ಯವನ್ನು ಒತ್ತಿ ಹೇಳಿದ ಖಮೇನಿ, ನೆರೆಯ ದೇಶಗಳು ಅಮೆರಿಕದ ಸುಳ್ಳು ಭರವಸೆಗಳನ್ನು ನಂಬಬಾರದು ಎಂದು ಸಲಹೆ ನೀಡಿದ್ದಾರೆ. ಇರಾನ್ ಈ ಪ್ರದೇಶದಲ್ಲಿ ಸ್ನೇಹಪರ ಸಂಬಂಧವನ್ನು ಬಯಸುತ್ತದೆ, ಆದರೆ ಆಕ್ರಮಣಕಾರರ ವಿರುದ್ಧ ಯಾವುದೇ ರಾಜಿ ಇಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net