ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಇರಾನ್ ಹೊಸ ನಿಯಮ: 48 ಗಂಟೆ ಮುಂಚಿತವಾಗಿ ಅನುಮತಿ ಕಡ್ಡಾಯ! Strait of Hormuz
ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಇರಾನ್ ಹೊಸ ನಿಯಮ: 48 ಗಂಟೆ ಮುಂಚಿತವಾಗಿ ಅನುಮತಿ ಕಡ್ಡಾಯ!
Published on:
Copied
Follow Us
ಟೆಹ್ರಾನ್: ಜಾಗತಿಕ ಇಂಧನ ಸಾಗಣೆಯ ಅತ್ಯಂತ ಪ್ರಮುಖ ಜಲಮಾರ್ಗವಾಗಿರುವ 'ಹೊರ್ಮುಜ್ ಜಲಸಂಧಿ' (Strait of Hormuz) ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳಿಗೆ ಇರಾನ್ ಸರ್ಕಾರ ಹೊಸ ಮತ್ತು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇರಾನ್‌ನ ನೂತನ ಪರ್ಷಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ (PGSA), ಇನ್ನು ಮುಂದೆ ಈ ಮಾರ್ಗದಲ್ಲಿ ಚಲಿಸುವ ಪ್ರತಿಯೊಂದು ಹಡಗು ಕಡ್ಡಾಯವಾಗಿ 48 ಗಂಟೆಗಳ ಮುಂಚಿತವಾಗಿಯೇ ಅನುಮತಿ ಪಡೆಯಬೇಕು ಮತ್ತು ನಿರಂತರ ಸಂಪರ್ಕದಲ್ಲಿರಬೇಕು ಎಂಬ ಆದೇಶ ಹೊರಡಿಸಿದೆ.
ಇರಾನ್ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ನಡೆದ ಐತಿಹಾಸಿಕ ಶಾಂತಿ ಒಪ್ಪಂದದ ಬೆನ್ನಲ್ಲೇ ಈ ಹೊಸ ನಿಯಮಗಳು ಜಾರಿಗೆ ಬಂದಿರುವುದು ಜಾಗತಿಕ ವಾಣಿಜ್ಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಹೊಸ ನಿಯಮಗಳಲ್ಲೇನಿದೆ? ಹಡಗುಗಳು ಏನು ಮಾಡಬೇಕು?
ಇರಾನ್‌ನ ಪಿಜಿಎಸ್‌ಎ (PGSA) ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಪ್ರಕಟಣೆ ಹೊರಡಿಸಿದ್ದು, "ಇಸ್ಲಾಮಾಬಾದ್ ತಿಳುವಳಿಕಾ ಪತ್ರ (MoU) ಹಾಗೂ ಸಂಬಂಧಿತ ಉನ್ನತ ಅಧಿಕಾರಿಗಳ ಆದೇಶದ ಅನ್ವಯ, ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸಲು ಇಚ್ಛಿಸುವ ಹಡಗುಗಳು ಇನ್ನು ಮುಂದೆ ಅಧಿಕೃತ ವೆಬ್‌ಸೈಟ್ ಮೂಲಕ ಕಡ್ಡಾಯವಾಗಿ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದೆ.
ಹೊಸ ನಿಯಮಾವಳಿಗಳ ಪ್ರಮುಖ ಅಂಶಗಳು ಇಲ್ಲಿವೆ
48 ಗಂಟೆಗಳ ಮುಂಚಿತವಾಗಿ ಅರ್ಜಿ: ಹೊರ್ಮುಜ್ ಜಲಸಂಧಿ ಪ್ರದೇಶವನ್ನು ತಲುಪುವುದಕ್ಕಿಂತ ಕನಿಷ್ಠ 48 ಗಂಟೆಗಳ ಮುಂಚಿತವಾಗಿ ಹಡಗುಗಳು ಇರಾನ್ ಪ್ರಾಧಿಕಾರಕ್ಕೆ ಫಾರ್ಮ್ ಭರ್ತಿ ಮಾಡಿ ಕಳುಹಿಸಬೇಕು.
ವಿವರವಾದ ಮಾಹಿತಿ ಸಲ್ಲಿಕೆ: ಹಡಗಿನ ಹೆಸರು, ಯಾವ ದೇಶದ ಧ್ವಜ ಹೊಂದಿದೆ, ಐಎಂಒ (IMO) ಸಂಖ್ಯೆ, ಹಡಗಿನ ಪ್ರಕಾರ, ಒಟ್ಟು ತೂಕದ ಸಾಮರ್ಥ್ಯ, ಹಡಗಿನಲ್ಲಿರುವ ಸರಕುಗಳ ವಿವರ, ಮಾಲೀಕರು ಮತ್ತು ಹಡಗು ನಿರ್ವಹಣಾ ಸಂಸ್ಥೆಯ ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು.
ಶುಲ್ಕ ವಿನಾಯಿತಿ ಮತ್ತು ಮೈನ್‌ಗಳ ತೆರವು: ಅಮೆರಿಕ ಜೊತೆಗಿನ ಒಪ್ಪಂದದ ಪ್ರಕಾರ, ಮುಂದಿನ 60 ದಿನಗಳವರೆಗೆ ಹಡಗುಗಳ ಸಂಚಾರಕ್ಕೆ ಯಾವುದೇ ಶುಲ್ಕವನ್ನು ಇರಾನ್ ವಿಧಿಸುವುದಿಲ್ಲ. ಇದರೊಂದಿಗೆ, ಜಲಸಂಧಿಯಲ್ಲಿ ಅಳವಡಿಸಲಾಗಿರುವ ಸಮುದ್ರ ಮೈನ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನೂ ಇರಾನ್ ಮಾಡಲಿದೆ.
ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿ ಹೊರ್ಮುಜ್!
ಪರ್ಷಿಯನ್ ಗಲ್ಫ್ ಮತ್ತು ಒಮಾನ್ ಗಲ್ಫ್ ಅನ್ನು ಜೋಡಿಸುವ ಹೊರ್ಮುಜ್ ಜಲಸಂಧಿಯು ಜಾಗತಿಕವಾಗಿ ಅತ್ಯಂತ ಆಯಕಟ್ಟಿನ ಜಲಮಾರ್ಗವಾಗಿದೆ. ಪ್ರಪಂಚದ ಒಟ್ಟು ಇಂಧನ (ಕಚ್ಚಾ ತೈಲ ಮತ್ತು ಅನಿಲ) ಸರಬರಾಜಿನ ಶೇ. 20 ರಷ್ಟು ಭಾಗ ಕೇವಲ ಈ ಕಿರಿದಾದ ಸಮುದ್ರ ಮಾರ್ಗದ ಮೂಲಕವೇ ಚಲಿಸುತ್ತದೆ.
ಕಳೆದ ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಭೀತಿ ಸೃಷ್ಟಿಯಾಗಿತ್ತು. ಆದರೆ, ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ನಡುವೆ ಯುದ್ಧ ಕೊನೆಗೊಳಿಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ ಈ ಜಲಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮರುಮುಕ್ತಗೊಳಿಸಲಾಗಿದೆ.
ದಾಖಲೆ ಮಟ್ಟಕ್ಕೇರಿದ ಹಡಗುಗಳ ಸಂಚಾರ
ಒಪ್ಪಂದದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರವು ಕಳೆದ ಎರಡು ತಿಂಗಳುಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಖ್ಯಾತ ಕಡಲ ಟ್ರ್ಯಾಕಿಂಗ್ ಸಂಸ್ಥೆ ಎಎಕ್ಸ್‌ಎಸ್ ಮರೈನ್ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ಕಳೆದ ಗುರುವಾರ ಒಂದೇ ದಿನ ಬರೋಬ್ಬರಿ 25 ವಾಣಿಜ್ಯ ಹಡಗುಗಳು ಈ ಮಾರ್ಗವನ್ನು ಸುರಕ್ಷಿತವಾಗಿ ದಾಟಿವೆ. ಇದು ಏಪ್ರಿಲ್ ಮಧ್ಯಭಾಗದ ನಂತರ ದಾಖಲಾದ ಅತ್ಯಂತ ಹೆಚ್ಚಿನ ದೈನಂದಿನ ಸಂಚಾರವಾಗಿದೆ.
ಇರಾನ್ ಸದ್ಯಕ್ಕೆ ಯಾವುದೇ ಶುಲ್ಕ ವಿಧಿಸದೆ ಉಚಿತ ಸಂಚಾರಕ್ಕೆ ಅವಕಾಶ ನೀಡಿದ್ದರೂ, ಭದ್ರತೆ ಮತ್ತು ನಿಯಂತ್ರಣದ ದೃಷ್ಟಿಯಿಂದ ಹಡಗುಗಳ ಮೇಲೆ ಹದ್ದಿನ ಕಣ್ಣಿಡಲು ಈ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ,(ಏಜೆನ್ಸೀಸ್).