ಸಮುದ್ರದ ಮೇಲೆ ಇರಾನ್ ಅಧಿಪತ್ಯ! ಒಂದು ಹಡಗಿನ ಸಂಚಾರಕ್ಕೆ 16 ಕೋಟಿ ರೂಪಾಯಿ? ಜಗತ್ತಿನ ಕುತ್ತಿಗೆ ಪಟ್ಟಿ ಟೆಹ್ರಾನ್​ ಕೈಯಲ್ಲಿದೆಯೇ? Hormuz Toll

ಸಮುದ್ರದ ಮೇಲೆ ಇರಾನ್ ಅಧಿಪತ್ಯ! ಒಂದು ಹಡಗಿನ ಸಂಚಾರಕ್ಕೆ 16 ಕೋಟಿ ರೂಪಾಯಿ? ಜಗತ್ತಿನ ಕುತ್ತಿಗೆ ಪಟ್ಟಿ ಟೆಹ್ರಾನ್​ ಕೈಯಲ್ಲಿದೆಯೇ?
ಸಮುದ್ರದ ಮೇಲೆ ಇರಾನ್ ಅಧಿಪತ್ಯ! ಒಂದು ಹಡಗಿನ ಸಂಚಾರಕ್ಕೆ 16 ಕೋಟಿ ರೂಪಾಯಿ? ಜಗತ್ತಿನ ಕುತ್ತಿಗೆ ಪಟ್ಟಿ ಟೆಹ್ರಾನ್​ ಕೈಯಲ್ಲಿದೆಯೇ?
Published on
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಇರಾನ್(Hormuz Toll) ಜಗತ್ತಿಗೆ ಮತ್ತೊಂದು ಆರ್ಥಿಕ ಆಘಾತ ನೀಡಲು ಸಿದ್ಧವಾಗಿದೆ. ಜಗತ್ತಿನ ಅತಿ ಪ್ರಮುಖ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಮರು ಉದ್ಘಾಟಿಸಲು ಒಪ್ಪಿರುವ ಇರಾನ್, ಅಲ್ಲಿ ಸಂಚರಿಸುವ ಪ್ರತಿ ಹಡಗಿನ ಮೇಲೆ ಬರೋಬ್ಬರಿ 2 ಮಿಲಿಯನ್ ಡಾಲರ್ (ಸುಮಾರು ₹16.7 ಕೋಟಿ) ಶುಲ್ಕ ವಿಧಿಸಲು ಮುಂದಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಟೋಲ್ ಮೂಲಕ ದೇಶದ ಪುನರ್ನಿರ್ಮಾಣಕ್ಕೆ ಇರಾನ್ ಮಾಸ್ಟರ್ ಪ್ಲಾನ್

ಇರಾನ್ ಸಂಸತ್ತು ಏಪ್ರಿಲ್ 7 ರಂದು ಈ ಕುರಿತ ಕರಡು ಮಸೂದೆಯನ್ನು ಅನುಮೋದಿಸಿದೆ ಎಂದು ವರದಿಯಾಗಿದೆ. ಯುದ್ಧದಿಂದ ಜರ್ಜರಿತವಾಗಿರುವ ತನ್ನ ದೇಶದ ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ಈ ಟೋಲ್ ಹಣವನ್ನು ಬಳಸಿಕೊಳ್ಳುವುದು ಇರಾನ್‌ನ ಉದ್ದೇಶವಾಗಿದೆ.
ಜೆಪಿ ಮೋರ್ಗನ್ ವರದಿಯ ಆಘಾತಕಾರಿ ಅಂಕಿಅಂಶ ಹೊರಬಿದ್ದಿದೆ.
ಇರಾನ್ ದಿನಕ್ಕೆ 100 ರಿಂದ 130 ಹಡಗುಗಳಿಂದ ಈ ಶುಲ್ಕ ವಸೂಲಿ ಮಾಡಿದರೆ, ವರ್ಷಕ್ಕೆ ಸುಮಾರು $70-90 ಬಿಲಿಯನ್ ಆದಾಯ ಗಳಿಸಲಿದೆ.
ಪ್ರಸ್ತುತ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ 2,000 ರಿಂದ 3,000 ವಾಣಿಜ್ಯ ಹಡಗುಗಳಿಂದ ತಲಾ $2 ಮಿಲಿಯನ್ ವಸೂಲಿ ಮಾಡಿದರೂ, ಇರಾನ್ ಕೇವಲ ಎರಡು ವಾರಗಳಲ್ಲಿ $4-6 ಬಿಲಿಯನ್ ಹಣವನ್ನು ಕ್ರೋಢೀಕರಿಸಲಿದೆ. ಇದು ಸುಯೆಜ್ ಕಾಲುವೆಯ ವಾರ್ಷಿಕ ಆದಾಯಕ್ಕಿಂತಲೂ ಹೆಚ್ಚಾಗಿದೆ.

ಟ್ರಂಪ್ ಬೆಂಬಲ: ಇದು ಮಧ್ಯಪ್ರಾಚ್ಯದ ಸುವರ್ಣ ಯುಗ!

ಅಚ್ಚರಿಯ ವಿಷಯವೆಂದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಶುಲ್ಕದ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. "ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಮೆರಿಕ ಸಹಾಯ ಮಾಡಲಿದೆ. ಅಲ್ಲಿ ಭಾರಿ ಹಣ ಹರಿಯಲಿದೆ (Big money will be made). ಇರಾನ್ ತನ್ನ ಪುನರ್ನಿರ್ಮಾಣ ಕಾರ್ಯ ಆರಂಭಿಸಬಹುದು. ಇದು ಮಧ್ಯಪ್ರಾಚ್ಯದ ಪಾಲಿಗೆ ಸುವರ್ಣ ಯುಗವಾಗಲಿದೆ," ಎಂದು ಅವರು ಟ್ರೂತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ಕಾನೂನುಬದ್ಧವೇ? ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯೇ..?

ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದದ (UNCLOS) ಪ್ರಕಾರ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ಹಡಗುಗಳ ಮೇಲೆ ಶುಲ್ಕ ವಿಧಿಸುವುದು ಕಾನೂನುಬಾಹಿರವಾಗಿದೆ. 
ಆರ್ಟಿಕಲ್ 42: ಕೇವಲ ಸಂಚಾರಕ್ಕಾಗಿ ಹಡಗುಗಳಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ.
ಆರ್ಟಿಕಲ್ 44: ಜಲಸಂಧಿಯ ಪಕ್ಕದಲ್ಲಿರುವ ರಾಷ್ಟ್ರಗಳು ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ.
ಆದರೆ, ಇಲ್ಲಿರುವ ದೊಡ್ಡ ಓಟೆಯೆಂದರೆ ಅಮೆರಿಕ ಮತ್ತು ಇರಾನ್ ಈವರೆಗೂ ಈ ಒಪ್ಪಂದಕ್ಕೆ (UNCLOS) ಸಹಿ ಹಾಕಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಇರಾನ್, ಜಲಸಂಧಿಯ ಮೇಲೆ ತನ್ನ ಸಾರ್ವಭೌಮತ್ವ ಸ್ಥಾಪಿಸಲು ಹೊರಟಿದೆ.

ಜಾಗತಿಕ ಆರ್ಥಿಕತೆ ಇರಾನ್ ಹತೋಟಿಯಲ್ಲಿ

ಬ್ಲೂಮ್‌ಬರ್ಗ್ ಆರ್ಥಿಕ ತಜ್ಞರ ಪ್ರಕಾರ, ಜಾಗತಿಕ ಆರ್ಥಿಕತೆಯನ್ನು ಒತ್ತೆ ಇಟ್ಟುಕೊಳ್ಳುವುದು ಅಂದುಕೊಂಡಿದ್ದಕ್ಕಿಂತ ಸುಲಭ ಮತ್ತು ಅಗ್ಗ ಎಂಬ ಪಾಠವನ್ನು ಇರಾನ್ ಈ ಯುದ್ಧದಿಂದ ಕಲಿತಿದೆ. ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಶೇ. 20ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ, ಇರಾನ್ ವಿಧಿಸುವ ಈ ಭಾರಿ ಶುಲ್ಕವು ಪರೋಕ್ಷವಾಗಿ ತೈಲ ಬೆಲೆ ಏರಿಕೆಗೆ ಮತ್ತು ಜಾಗತಿಕ ಹಣದುಬ್ಬರಕ್ಕೆ ಕಾರಣವಾಗುವ ಭೀತಿ ಎದುರಾಗಿದೆ.

ಭಾರತದ ಮೇಲಾಗುವ ಪರಿಣಾಮ

ಭಾರತಕ್ಕೆ ಪೂರೈಕೆಯಾಗುವ ಕಚ್ಚಾ ತೈಲದ ಬಹುಪಾಲು ಇದೇ ಮಾರ್ಗವಾಗಿ ಬರುತ್ತದೆ. ಇರಾನ್ ವಿಧಿಸುವ ಈ ಹೋರ್ಮುಜ್ ಟೋಲ್' ಜಾರಿಯಾದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಬಹುದು. ಕದನ ವಿರಾಮದ ಅವಧಿಯಲ್ಲಿ ಇರಾನ್ ತನ್ನ ಈ ಹಠವನ್ನು ಮುಂದುವರಿಸುತ್ತದೆಯೇ ಅಥವಾ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net