ಇರಾನ್‌ನಿಂದ ಕದನ ವಿರಾಮದ ಪ್ರಸ್ತಾವನೆ? ಟ್ರಂಪ್ ಹಾಕಿದ ಆ ಒಂದು ಕಂಡೀಷನ್ ಏನು? Donald Trump

ಇರಾನ್‌ನಿಂದ ಕದನ ವಿರಾಮದ ಪ್ರಸ್ತಾವನೆ? ಟ್ರಂಪ್ ಹಾಕಿದ ಆ ಒಂದು ಕಂಡೀಷನ್ ಏನು?
ಇರಾನ್‌ನಿಂದ ಕದನ ವಿರಾಮದ ಪ್ರಸ್ತಾವನೆ? ಟ್ರಂಪ್ ಹಾಕಿದ ಆ ಒಂದು ಕಂಡೀಷನ್ ಏನು?
Published on
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಅತ್ಯಂತ ಭೀಕರ ಹಂತ ತಲುಪಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಇರಾನ್‌ನ ಹೊಸ ಆಡಳಿತದ ಅಧ್ಯಕ್ಷ ಅಮೆರಿಕಕ್ಕೆ ಕದನ ವಿರಾಮದ ಮೊರೆ ಇಟ್ಟಿದ್ದಾರೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಆದರೆ, ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಟ್ರಂಪ್ ಒಂದು ಕಠಿಣ ಷರತ್ತನ್ನು ವಿಧಿಸಿದ್ದಾರೆ.

ಟ್ರಂಪ್ ಅವರ ಟ್ರುತ್ ಸೋಷಿಯಲ್' ಪೋಸ್ಟ್‌ನಲ್ಲಿ ಏನಿದೆ?

ಈ ಬಗ್ಗೆ ತಮ್ಮ ಟ್ರುತ್ ಸೋಷಿಯಲ್​ನಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್, ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಹಿಂದಿನವರಿಗಿಂತ ಹೆಚ್ಚು ಬುದ್ಧಿವಂತರು ಮತ್ತು ಕಡಿಮೆ ತೀವ್ರಗಾಮಿಯಾಗಿದೆ. ಅವರು ಅಮೆರಿಕಕ್ಕೆ ಕದನ ವಿರಾಮಕ್ಕಾಗಿ ಮನವಿ ಮಾಡಿದ್ದಾರೆ.
ಕಠಿಣ ಷರತ್ತು: ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಮುಕ್ತವಾಗಿ, ಹಡಗುಗಳ ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದಂತಾದಾಗ ಮಾತ್ರ ನಾವು ಕದನ ವಿರಾಮದ ಬಗ್ಗೆ ಯೋಚಿಸುತ್ತೇವೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ವಿನಾಶದ ಎಚ್ಚರಿಕೆ: ಅಲ್ಲಿಯವರೆಗೆ ನಾವು ಇರಾನ್ ಅನ್ನು ಸರ್ವನಾಶ ಮಾಡುತ್ತಲೇ ಇರುತ್ತೇವೆ. ಅವರನ್ನು ಶಿಲಾಯುಗಕ್ಕೆ ತಳ್ಳುವವರೆಗೆ ನಮ್ಮ ದಾಳಿ ನಿಲ್ಲುವುದಿಲ್ಲ ಎಂದು ಅತ್ಯಂತ ಕಠಿಣ ಪದಗಳಲ್ಲಿ ಯುಎಸ್​ ಅಧ್ಯಕ್ಷ ಎಚ್ಚರಿಸಿದ್ದಾರೆ.

ಗೊಂದಲ ಮೂಡಿಸಿದ 'ಹೊಸ ಅಧ್ಯಕ್ಷ' ಯಾರು?

ಟ್ರಂಪ್ ಅವರು ಇರಾನ್‌ನ ಯಾವ ನಾಯಕನನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಹಮ್ಮದ್ ಬಾಘರ್ ಘಾಲಿಬಾಫ್: ಕಳೆದ ವಾರವಷ್ಟೇ ಟ್ರಂಪ್ ಅವರು ಇರಾನ್ ಸಂಸತ್ತಿನ ಸ್ಪೀಕರ್ ಘಾಲಿಬಾಫ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ದೃಢಪಡಿಸಿದ್ದರು. ಆದರೆ ಅವರು ಅಧ್ಯಕ್ಷರಲ್ಲ.
ಮಸೂದ್ ಪೆಜೆಶ್ಕಿಯನ್: ಇರಾನ್‌ನ ಅಧಿಕೃತ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಬುಧವಾರವಷ್ಟೇ ನಮಗೆ ಭದ್ರತೆಯ ಭರವಸೆ ನೀಡಿದರೆ ನಾವು ಕದನ ವಿರಾಮಕ್ಕೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇವರನ್ನೇ ಟ್ರಂಪ್ ಉದ್ದೇಶಿಸಿರಬಹುದು ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಹಾರ್ಮುಜ್ ಜಲಸಂಧಿ: ಟ್ರಂಪ್ ನಿಲುವಿನಲ್ಲಿ ಬದಲಾವಣೆ?

ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಅವರ ನಿಲುವು ಪದೇ ಪದೇ ಬದಲಾಗುತ್ತಿರುವುದು ಮಿತ್ರ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.
ಕಳೆದ ವಾರ: ಹಡಗುಗಳಿಗೆ ದಾರಿ ಬಿಡದಿದ್ದರೆ ಇರಾನ್‌ನ ಇಂಧನ ಕೇಂದ್ರಗಳನ್ನು ಬಾಂಬ್ ಹಾಕಿ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದರು.
ನಿನ್ನೆ: ಹಾರ್ಮುಜ್ ಸಮಸ್ಯೆ ಬಗೆಹರಿಯದಿದ್ದರೂ ನಾವು ಯುದ್ಧ ನಿಲ್ಲಿಸಲು ಸಿದ್ಧ. ಇದು ನಮಗಿಂತ ಇತರ ದೇಶಗಳಿಗೆ ಹೆಚ್ಚು ತೊಂದರೆ ನೀಡುತ್ತಿದೆ, ಹಾಗಾಗಿ ಅವರೇ ಇದನ್ನು ಬಗೆಹರಿಸಿಕೊಳ್ಳಲಿ ಎಂಬ ಜಾರಿಕೆಯ ಹೇಳಿಕೆ ನೀಡಿದ್ದರು.
ಇಂದು: ಮತ್ತೆ ಹಾರ್ಮುಜ್ ಮುಕ್ತವಾಗದಿದ್ದರೆ ಕದನ ವಿರಾಮವಿಲ್ಲ ಎಂಬ ಪಟ್ಟು ಹಿಡಿದಿದ್ದಾರೆ.
ಮಧ್ಯಪ್ರಾಚ್ಯದ ಸಂಘರ್ಷವು ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ತೈಲ ಮಾರುಕಟ್ಟೆಯಲ್ಲಿ ತಲ್ಲಣ ಮುಂದುವರಿದಿದೆ. ಟ್ರಂಪ್ ಅವರ ಈ ಕದನವಿರಾಮದ ಹೇಳಿಕೆಯು ಯುದ್ಧ ಕೊನೆಗೊಳ್ಳುವ ಆಸೆಯನ್ನು ಚಿಗುರಿಸಿದೆಯಾದರೂ, ಅವರು ವಿಧಿಸಿರುವ ಹಾರ್ಮುಜ್ ಮುಕ್ತ ಷರತ್ತಿಗೆ ಇರಾನ್ ಒಪ್ಪುತ್ತದೆಯೇ ಎಂಬುದು ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net