ಇಸ್ರೇಲ್ ಹಿತಾಸಕ್ತಿಗಾಗಿ ಅಮೆರಿಕನ್ನರ ಪ್ರಾಣ ಪಣಕ್ಕೆ..ಯುಎಸ್​ ಜನರಿಗೆ ಪತ್ರ ಬರೆದ ಇರಾನ್​ ಅಧ್ಯಕ್ಷ | Masoud Pezeshkian

Masoud Pezeshkian | ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
Masoud Pezeshkian | ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
Published on
ಟೆಹ್ರಾನ್: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian) ಅಮೆರಿಕದ ಜನರನ್ನು ಉದ್ದೇಶಿಸಿ ಪತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರದ ಮಿಲಿಟರಿ ಉದ್ದೇಶಗಳನ್ನು ಕಟುವಾಗಿ ಪ್ರಶ್ನಿಸಿದ್ದಲ್ಲದೆ, ಅಮೆರಿಕವು ಇಸ್ರೇಲ್‌ನ ಹಿತಾಸಕ್ತಿಗಾಗಿ ತನ್ನ ಸೈನಿಕರನ್ನು ಮತ್ತು ತೆರಿಗೆದಾರರ ಹಣವನ್ನು ಬಲಿ ಕೊಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಟ್ರಂಪ್​ರ ಅಮೆರಿಕಾ ಫಸ್ಟ್ ನೀತಿಯನ್ನು ಪೆಜೆಶ್ಕಿಯಾನ್ ನೇರವಾಗಿ ಪ್ರಶ್ನಿಸಿದ್ದು, ವಾಷಿಂಗ್ಟನ್ ತನ್ನ ಸ್ವಂತ ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಇಸ್ರೇಲ್‌ನ ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ..?, ಕೊನೆಯ ಅಮೆರಿಕನ್ ಸೈನಿಕನವರೆಗೆ ಹೋರಾಡುವ ಮೂಲಕ ಇಸ್ರೇಲ್‌ನ ಗುರಿಗಳನ್ನು ಈಡೇರಿಸಲು ಸಿದ್ಧವಾಗಿದೆಯೇ? ಎಂದಿದ್ದಾರೆ. ಇಸ್ರೇಲ್ ತನ್ನ ಭ್ರಮೆಗಳ ಹೊರೆಯನ್ನು ಅಮೆರಿಕದ ಮೇಲೆ ವರ್ಗಾಯಿಸುತ್ತಿದೆ ಮತ್ತು ಅಮೆರಿಕನ್ನರ ತೆರಿಗೆ ಹಣವನ್ನು ತನ್ನ ಕಾನೂನುಬಾಹಿರ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇರಾನ್ ಸಾಮಾನ್ಯ ಜನರಲ್ಲಿ ಅಮೆರಿಕನ್ನರ ಬಗ್ಗೆ ಯಾವುದೇ ದ್ವೇಷವಿಲ್ಲವೆಂದು ಪೆಜೆಶ್ಕಿಯಾನ್ ಸ್ಪಷ್ಟಪಡಿಸಿದ್ದು, ನಮ್ಮ ಜನರು ಅಮೆರಿಕ, ಯುರೋಪ್ ಅಥವಾ ನೆರೆಯ ರಾಷ್ಟ್ರಗಳ ಜನರ ಬಗ್ಗೆ ದ್ವೇಷ ಹೊಂದಿಲ್ಲ. ಸರ್ಕಾರಗಳು ಮತ್ತು ಅವರು ಆಳುವ ಜನರ ನಡುವೆ ನಾವು ಯಾವಾಗಲೂ ಸ್ಪಷ್ಟವಾದ ವ್ಯತ್ಯಾಸವನ್ನು ಕಂಡಿದ್ದೇವೆ. ಇದು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ತತ್ವವಾಗಿದೆ ಎಂದು ಬರೆದಿದ್ದಾರೆ.
ಇರಾನ್ ದೇಶವನ್ನು ಆಕ್ರಮಣಕಾರಿ ಎಂದು ಬಿಂಬಿಸುವುದನ್ನು ಖಂಡಿಸಿರುವ ಪೆಜೆಶ್ಕಿಯಾನ್, ಇರಾನ್ ತನ್ನ ಆಧುನಿಕ ಇತಿಹಾಸದಲ್ಲಿ ಎಂದಿಗೂ ಯುದ್ಧವನ್ನು ಪ್ರಾರಂಭಿಸಿಲ್ಲ, ವಸಾಹತುಶಾಹಿ ಅಥವಾ ಪ್ರಾಬಲ್ಯದ ಹಾದಿಯನ್ನು ಹಿಡಿದಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದವರನ್ನು ದೃಢವಾಗಿ ಹಿಮ್ಮೆಟ್ಟಿಸಿದೆ ಎಂದು ತಿಳಿಸಿದ್ದು, ನಮ್ಮ ದೇಶದ ಬಗ್ಗೆ ಆತಂಕ ಸೃಷ್ಟಿಸುವುದು ಕೇವಲ ಶಸ್ತ್ರಾಸ್ತ್ರ ಉದ್ಯಮವನ್ನು ಉಳಿಸಿಕೊಳ್ಳಲು ಮತ್ತು ಮಾರುಕಟ್ಟೆಗಳನ್ನು ನಿಯಂತ್ರಿಸುವ ಪ್ರಚಾರದ ಭಾಗ ಎಂದರು.

ಜಾಗತಿಕ ಪ್ರತಿಷ್ಠೆಗೆ ಹಾನಿ

ಟ್ರಂಪ್​​ರ ಇತ್ತೀಚಿನ ಕೆಲ ಹೇಳಿಕೆಗಳಿಗೆ ತಿರುಗೇಟು ನೀಡಿದ ಪೆಜೆಶ್ಕಿಯಾನ್, ಮುಗ್ಧ ಮಕ್ಕಳ ಹತ್ಯೆ ಅಥವಾ ನಾಗರಿಕ ಮೂಲಸೌಕರ್ಯಗಳ ನಾಶದ ಬಗ್ಗೆ ಹೆಮ್ಮೆಪಡುವುದು ಯುನೈಟೆಡ್ ಸ್ಟೇಟ್ಸ್‌ನ ಜಾಗತಿಕ ಪ್ರತಿಷ್ಠೆಯನ್ನು ಮತ್ತಷ್ಟು ಹಾನಿಗೊಳಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಹೇಳಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net