ದುಬೈ ವಿಮಾನ ನಿಲ್ದಾಣದ ಬಳಿ ಇರಾನ್ ಡ್ರೋನ್ ದಾಳಿ: ಭಾರಿ ಬೆಂಕಿ, ವಿಮಾನ ಹಾರಾಟ ಸ್ಥಗಿತ! | Dubai Airport

Dubai Airport
Dubai Airport
Published on
ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Dubai Airport) ಸಮೀಪವಿರುವ ಇಂಧನ ಟ್ಯಾಂಕ್ ಮೇಲೆ ಸೋಮವಾರ  ಇರಾನ್ ಡ್ರೋನ್ ದಾಳಿ ನಡೆಸಿದ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದೆ.ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸೋಮವಾರ ವರದಿಯಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಮುಂದುವರಿದ ಬೆನ್ನಲ್ಲೇ, ಸೋಮವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (DXB) ಸಮೀಪವಿರುವ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ದಾಳಿಯ ಬೆನ್ನಲ್ಲೇ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಕ್ಷಣಾರ್ಧದಲ್ಲಿ ನಂದಿದ ಜ್ವಾಲೆ

ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ದುಬೈ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. "ಡ್ರೋನ್ ದಾಳಿಯಿಂದ ಇಂಧನ ಟ್ಯಾಂಕ್‌ಗೆ ಹಾನಿಯಾಗಿದ್ದು, ತಕ್ಷಣವೇ ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ," ಎಂದು ದುಬೈ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರ ಪರದಾಟ
ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಹಲವು ವಿಮಾನಗಳನ್ನು ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸುರಂಗ ಮಾರ್ಗಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಪ್ರಯಾಣಿಕರು ವಿಮಾನದ ವೇಳಾಪಟ್ಟಿಗಾಗಿ ಆಯಾ ಏರ್‌ಲೈನ್ಸ್‌ಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಇರಾನ್ ದಾಳಿಯ ತೀವ್ರತೆ
ವರದಿಗಳ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದ ಆರಂಭದಿಂದ ಈವರೆಗೆ ಇರಾನ್ ಯುಎಇ (UAE) ಮೇಲೆ ಸುಮಾರು 1,800ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗೆ ಪ್ರತಿಕಾರವಾಗಿ ಇರಾನ್ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ,(ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net