ಟ್ರಂಪ್​ ಪುತ್ರನ ಹತ್ಯೆಗೆ ಇರಾನ್​ ಸಂಚು? ಇದೆಲ್ಲಾ ನೆತನ್ಯಾಹು ನಾಟಕ, ಅಮೆರಿಕ ಅಧ್ಯಕ್ಷನನ್ನು ಹೆದರಿಸುವುದೇ ಅವನ ಕೆಲಸ; ಟೆಹ್ರಾನ್​ ತಿರುಗೇಟು! Iran wants to Kill Barron Trump

ಡೊನಾಲ್ಡ್​ ಟ್ರಂಪ್ ಪುತ್ರ ಬ್ಯಾರನ್ ಟ್ರಂಪ್
ಡೊನಾಲ್ಡ್​ ಟ್ರಂಪ್ ಪುತ್ರ ಬ್ಯಾರನ್ ಟ್ರಂಪ್
Published on

ಪ್ರಮುಖ ಮುಖ್ಯಾಂಶಗಳು

  • ಡೊನಾಲ್ಡ್​ ಟ್ರಂಪ್ ಪುತ್ರ ಬ್ಯಾರನ್ ಟ್ರಂಪ್ ಹತ್ಯೆ ಸಂಚು ಆರೋಪ ತಳ್ಳಿಹಾಕಿದ ಇರಾನ್
  • ದೆಲ್ಲಾ ನೆತನ್ಯಾಹು ನಾಟಕ ಎಂದ ಟೆಹ್ರಾನ್
  • ಅಮೆರಿಕ ಅಧ್ಯಕ್ಷರನ್ನು ಹೆದರಿಸುವುದೇ ಅವನ ಕೆಲಸವೆಂದ ಮಿಲಿಟರಿ ಮುಖ್ಯಸ್ಥ
ಟೆಹ್ರಾನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ ಬ್ಯಾರನ್ ಟ್ರಂಪ್ (Iran wants to Kill Barron Trump) ರನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸುತ್ತಿದೆ ಎಂಬ ಆರೋಪಗಳು ಜಾಗತಿಕ ರಾಜಕಾರಣದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದ್ದವು.
ಈಗ ಈ ಕುರಿತು ಮೌನ ಮುರಿದಿರುವ ಇರಾನ್‌ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಝಾಯಿ, ಅಮೆರಿಕ ಅಧ್ಯಕ್ಷರನ್ನು ಹೆದರಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲೆಬನಾನ್‌ನ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೆಝಾಯಿ, ಅಮೆರಿಕ ಮತ್ತು ಟ್ರಂಪ್ ಅವರನ್ನು ದಾರಿ ತಪ್ಪಿಸಲು ನೆತನ್ಯಾಹು ಈ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇವು ಸಂಪೂರ್ಣ ಸುಳ್ಳು ಆರೋಪಗಳು, ಟ್ರಂಪ್ ಅವರನ್ನು ಮೋಸಗೊಳಿಸಲು ನೆತನ್ಯಾಹು ಹೆಣೆದಿರುವ ದೊಡ್ಡ ಜಾಲವಿದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಇರಾನ್ ಅಂತಹ ಯಾವುದೇ ಕೃತ್ಯಕ್ಕೆ ಮುಂದಾಗಿದ್ದರೆ, ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

ಜುಲೈನಲ್ಲಿ ಟರ್ಕಿಯಲ್ಲಿ ನಡೆದ ರೋಚಕ ಘಟನೆ!


ಸಂದರ್ಶನದಲ್ಲಿ ಕಳೆದ ಜುಲೈನಲ್ಲಿ ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯ ಮತ್ತೊಂದು ರಹಸ್ಯವನ್ನು ರೆಝಾಯಿ ಹೊರಹಾಕಿದ್ದಾರೆ. ಟೆಲಿವಿಷನ್ ಕ್ಯಾಮೆರಾಗಳನ್ನು ಕಂಡ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೃಹತ್ 'ಏರ್ ಫೋರ್ಸ್ ಒನ್' ವಿಮಾನದಿಂದ ಸಣ್ಣ ಮಿಲಿಟರಿ ವಿಮಾನಕ್ಕೆ ಬದಲಾಯಿಸಿಕೊಂಡಿದ್ದರು ಎಂದು ಅವರು ವಿವರಿಸಿದ್ದಾರೆ.
ಇರಾನ್ ನಿಮ್ಮನ್ನು ಹತ್ಯೆ ಮಾಡಲು ಹೊಂಚುಹಾಕಿದೆ ಎಂದು ನೆತನ್ಯಾಹು ಟ್ರಂಪ್ ತಲೆಗೆ ಹುಳ ಬಿಟ್ಟಿದ್ದರು. ಇದರಿಂದ ಭಯಭೀತರಾದ ಟ್ರಂಪ್, ಕೊನೆಗೆ ತಪ್ಪಿಸಿಕೊಳ್ಳಲು 'ಆಹಾರ ಟ್ರಕ್' ಒಂದರಲ್ಲಿ ಅಡಗಿಕೊಂಡು ಕಾರ್ಮಿಕರಂತೆ ಅಲ್ಲಿಂದ ಕಳ್ಳಸಾಗಣೆಯಾದರು ಎಂದು ರೆಝಾಯಿ ಹೇಳಿಕೆ ನೀಡಿದ್ದಾರೆ.

ಯುಎಸ್ ಸೀಕ್ರೆಟ್ ಸರ್ವಿಸ್ ತನಿಖೆ ಆರಂಭ

ಇರಾನ್‌ನ ರಾಜ್ಯ ದೂರದರ್ಶನದಲ್ಲಿ ಬ್ಯಾರನ್ ಟ್ರಂಪ್ ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿದೆ ಮತ್ತು ಅವರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳುವ ಮೂರು ನಿಮಿಷಗಳ ವಿಡಿಯೋವೊಂದು ಪ್ರಸಾರವಾಗಿತ್ತು. ಈ ವಿಡಿಯೋ ಈಗ ಅಮೆರಿಕದಲ್ಲಿ ಸಕತ್ ಸದ್ದು ಮಾಡುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಸೀಕ್ರೆಟ್ ಸರ್ವಿಸ್ ವಕ್ತಾರ ನೇಟ್ ಹೆರಿಂಗ್, ನಮ್ಮ ರಕ್ಷಕರಿಗೆ ಅಥವಾ ಗಣ್ಯರಿಗೆ ಎದುರಾಗುವ ಯಾವುದೇ ಬೆದರಿಕೆಯ ವಿಡಿಯೋ ಬಗ್ಗೆ ನಮಗೆ ಮಾಹಿತಿಯಿದೆ ಹಾಗೂ ಇದರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಕಾರ್ಯಾಚರಣೆಯ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಗುಪ್ತಚರ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net