ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ಮಾಡಿರುವುದರಿಂದ ಜಾಗತಿಕ ವಿಮಾನ ಹಾರಾಟಕ್ಕೆ ಅಡಚಣೆ ಉಂಟಾಗಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಕೇಂದ್ರ ಬಿಂದುವಾಗಿದೆ. ಏಕೆಂದರೆ, ಇದು ಅತ್ಯಂತ ವ್ಯೂಹಾತ್ಮಕ ಭೌಗೋಳಿಕ ಸ್ಥಳವಾಗಿದ್ದು, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಡುವಿನ ಮಧ್ಯಬಿಂದುವಿನಲ್ಲಿದೆ. ಹೀಗಾಗಿ, ವಿಶ್ವದ ಜನಸಂಖ್ಯೆಯ ಗಣನೀಯ ಭಾಗವನ್ನು (ಸುಮಾರು 2/3 ರಷ್ಟು) ಕೇವಲ 8 ಗಂಟೆಗಳ ಒಳಗೆ ತಲುಪಬಹುದಾದ ಸ್ಥಳವಾಗಿದೆ. ಇದರಿಂದಾಗಿ ಎಮಿರೇಟ್ಸ್ ಏರ್ಲೈನ್ಸ್ನಂತಹ ವಿಮಾನಯಾನ ಸಂಸ್ಥೆಗಳು ಇಲ್ಲಿ ತಮ್ಮ ಮುಖ್ಯ ಹಬ್ನ್ನ ನಿರ್ಮಿಸಿ, ಪ್ರಪಂಚದಾದ್ಯಂತದ ನಗರಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಅತ್ಯುತ್ತಮ ಟ್ರಾನ್ಸಿಟ್ ಪಾಯಿಂಟ್ ಆಗಿದೆ. ಜಗತ್ತಿನ ಅನೇಕ ವಿಮಾನಗಳು ದುಬೈ ಏರ್ಪೋರ್ಟ್ ಮೂಲಕವೇ ಹಾದು ಹೋಗುತ್ತವೆ. ಅಂದರೆ, ಪ್ರತಿದಿನ ಸುಮಾರು 1,200 ರಿಂದ 1,250 ವಿಮಾನಗಳ ಹಾರಾಟ ನಡೆಸುತ್ತದೆ. 2025ರಲ್ಲಿ ಸುಮಾರು 4,54,800 ವಿಮಾನಗಳು ಹಾರಾಟ ನಡೆಸಿದವು. ಇದೀಗ ಅದೇ ವಿಮಾನ ನಿಲ್ದಾಣ ಮೇಲೆ ದಾಳಿ ಮಾಡಿರುವುದರಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಅನೇಕ ವಿಮಾನಗಳ ಹಾರಾಟ ರದ್ದಾಗಿದೆ. ಬೇರೆ ದೇಶಗಳಿಂದ ಬರುವ ವಿಮಾನಗಳಿಗೂ ಅಡಚಣೆ ಉಂಟಾಗಿದ್ದು, ಸಂಪೂರ್ಣ ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರವಾಸಿಗರು ಉಸಿರು ಬಿಗಿ ಹಿಡಿದುಕೊಂಡು ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.