ಇಸ್ಲಾಮಾಬಾದ್‌ನಲ್ಲಿ ಇರಾನ್-ಅಮೆರಿಕಾ ಮಹತ್ವದ ಮಾತುಕತೆ ಆರಂಭ: ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನ! ಯುದ್ಧಕ್ಕೆ ಬೀಳುತ್ತಾ ಬ್ರೇಕ್? | Iran US Talks Pakistan

Iran US Talks Pakistan
Iran US Talks Pakistan
Published on
ಇಸ್ಲಾಮಾಬಾದ್/ಲಾಹೋರ್: ಪಶ್ಚಿಮ ಏಷ್ಯಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಭೀಕರ ಯುದ್ಧ ಮತ್ತು ಸಂಘರ್ಷಕ್ಕೆ ಅಂತ್ಯ ಹಾಡಲು ಜಾಗತಿಕ ಮಟ್ಟದ ಬೃಹತ್ ರಾಜತಾಂತ್ರಿಕ ಕಸರತ್ತು(Iran US Talks Pakistan) ಆರಂಭವಾಗಿದೆ. ಅಚ್ಚರಿಯ ಬೆಳವಣಿಗೆ ಎಂಬಂತೆ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕಾ ನಡುವಿನ ಸಂಧಾನ ಮಾತುಕತೆಗಳು ಶನಿವಾರ ಇಸ್ಲಾಮಾಬಾದ್‌ನಲ್ಲಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿವೆ.

ಇಸ್ಲಾಮಾಬಾದ್‌ನಲ್ಲಿ ಜಾಗತಿಕ ನಾಯಕರ ದಂಡು!

ಈ ಮಹತ್ವದ ಮಾತುಕತೆಗಾಗಿ ಅಮೆರಿಕಾ ಮತ್ತು ಇರಾನ್‌ನ ಉನ್ನತ ಮಟ್ಟದ ನಿಯೋಗಗಳು ಪಾಕಿಸ್ತಾನಕ್ಕೆ ಆಗಮಿಸಿವೆ.
ಅಮೆರಿಕಾ ನಿಯೋಗ: ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ತಂಡ ಶನಿವಾರ ಬೆಳಿಗ್ಗೆ ಆಗಮಿಸಿದ್ದು, ಈ ತಂಡದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಕೂಡ ಇದ್ದಾರೆ.
ಇರಾನ್ ನಿಯೋಗ: ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕಿರ್ ಘಾಲಿಬಾಫ್ ನೇತೃತ್ವದ ತಂಡ ಶುಕ್ರವಾರ ರಾತ್ರಿಯೇ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಕೂಡ ನಿಯೋಗದಲ್ಲಿದ್ದಾರೆ.

ಪರೋಕ್ಷ ಮಾತುಕತೆಯಿಂದ ಆರಂಭ

ಸದ್ಯದ ಮಾಹಿತಿಯ ಪ್ರಕಾರ, ಉಭಯ ದೇಶಗಳ ನಾಯಕರು ಮುಖಾಮುಖಿಯಾಗಿ ಮಾತನಾಡುವ ಬದಲು, ಪಾಕಿಸ್ತಾನದ ಅಧಿಕಾರಿಗಳ ಮೂಲಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. "ಆರಂಭಿಕ ಹಂತದಲ್ಲಿ ಇದು ಪರೋಕ್ಷ ಮಾತುಕತೆಯಾಗಿದ್ದು, ಮೊದಲ ಸುತ್ತಿನಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದರೆ ಅಮೆರಿಕಾ ಮತ್ತು ಇರಾನ್ ನಾಯಕರು ನೇರವಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ" ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

ಮಧ್ಯಸ್ಥಗಾರನಾಗಿ ಪಾಕಿಸ್ತಾನದ ಪಾತ್ರ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಎರಡೂ ದೇಶಗಳ ನಿಯೋಗದೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗಬೇಕು ಎಂಬುದು ಪಾಕಿಸ್ತಾನದ ಆಶಯವಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ಈ ವೇಳೆ ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಂ ಮುನೀರ್ ಕೂಡ ಉಪಸ್ಥಿತರಿದ್ದರು. ಷರೀಫ್ ಅವರು ಇರಾನ್ ನಾಯಕರನ್ನು ಅಪ್ಪಿಕೊಂಡು ಆತ್ಮೀಯವಾಗಿ ಸ್ವಾಗತಿಸಿದ ಫೋಟೋಗಳು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.

ಕದನ ವಿರಾಮದ ನಿರೀಕ್ಷೆ

ಫೆಬ್ರವರಿ 28 ರಿಂದ ಆರಂಭವಾದ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಏಪ್ರಿಲ್ 8 ರಂದು ಪಾಕಿಸ್ತಾನದ ಪ್ರಯತ್ನದಿಂದಾಗಿ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿತ್ತು. ಈಗ ಈ ಕದನ ವಿರಾಮವನ್ನು ಕಾಯಂಗೊಳಿಸಿ, ಪಶ್ಚಿಮ ಏಷ್ಯಾದಲ್ಲಿ ಸಂಪೂರ್ಣ ಶಾಂತಿ ಸ್ಥಾಪಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿದೆ.
ಪಾಕಿಸ್ತಾನವು ಇತ್ತೀಚೆಗೆ ಇರಾನ್ ಜೊತೆ ನಿಕಟ ಸಂಬಂಧ ಹೊಂದುತ್ತಿರುವುದು ಮತ್ತು ಅಮೆರಿಕಾದೊಂದಿಗೆ ಸಂಧಾನಕ್ಕೆ ಮುಂದಾಗಿರುವುದು ಭಾರತ ಸೇರಿದಂತೆ ಜಾಗತಿಕ ಸಮುದಾಯದ ಕುತೂಹಲಕ್ಕೆ ಕಾರಣವಾಗಿದೆ. ಈ ಮಾತುಕತೆ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಸ ರಾಜತಾಂತ್ರಿಕ ಶಕ್ತಿ ಸಿಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net