ಟ್ರಂಪ್‌ಗೆ ಇರಾನ್ ತಿರುಗೇಟು: ಸಂಧಾನವೂ ಇಲ್ಲ, ಒಪ್ಪಂದವೂ ಇಲ್ಲ; ಯುದ್ಧಕ್ಕೆ ಸಿದ್ಧ ಎಂದ ಲೆಫ್ಟಿನೆಂಟ್ ಜೊಲ್ಫಾಘರಿ! | Iran US Conflict

 Iran US Conflict
Iran US Conflict
Published on
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು( Iran US Conflict) ದಟ್ಟವಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಸಂಧಾನ'ದ ಹೇಳಿಕೆಗಳನ್ನು ಇರಾನ್ ಸೇನೆ ಬಹಿರಂಗವಾಗಿ ಅಪಹಾಸ್ಯ ಮಾಡಿದೆ. ವಾಷಿಂಗ್ಟನ್ ಮಂಡಿಸಿರುವ 15 ಅಂಶಗಳ ಕಾರ್ಯಸಾಧ್ಯತೆಯ ಯೋಜನೆಯನ್ನು ತಳ್ಳಿಹಾಕಿರುವ ಇರಾನ್, ಅಮೆರಿಕವು "ತನ್ನೊಂದಿಗೆ ತಾನೇ ಮಾತುಕತೆ ನಡೆಸುತ್ತಿದೆ" ಎಂದು ಲೇವಡಿ ಮಾಡಿದೆ.
ಇತ್ತೀಚೆಗೆ ಶ್ವೇತಭವನದಲ್ಲಿ ಮಾತನಾಡಿದ್ದ ಅಧ್ಯಕ್ಷ ಟ್ರಂಪ್, "ಇರಾನ್ ನಮ್ಮೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿದೆ, ಅವರು ದೊಡ್ಡ ಮಟ್ಟದ ತೈಲ ಮತ್ತು ಅನಿಲ ಒಪ್ಪಂದಕ್ಕೆ ತಯಾರಾಗಿದ್ದಾರೆ" ಎಂದು ಹೇಳಿದ್ದರು. ಆದರೆ, ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಜೊಲ್ಫಾಘರಿ ಅವರು ಈ ಹೇಳಿಕೆಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ.
"ನಮ್ಮ ಮೊದಲ ಮತ್ತು ಕೊನೆಯ ಮಾತು ಒಂದೇ; ನಿಮ್ಮಂತಹವರ ಜೊತೆ ನಾವು ಎಂದಿಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಈಗಲೂ ಇಲ್ಲ, ಮುಂದೆಯೂ ಇಲ್ಲ," ಎಂದು ಜೊಲ್ಫಾಘರಿ ದೂರದರ್ಶನ ಹೇಳಿಕೆಯಲ್ಲಿ ಗುಡುಗಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಬಂದಿದ್ದ ಪ್ರಸ್ತಾವನೆಗಳಿಗೆ ಇರಾನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೆಂಟಗನ್‌ನಿಂದ ಭಾರಿ ಸೇನಾ ಜಮಾವಣೆ

ಒಂದೆಡೆ ಮಾತುಕತೆಯ ನಾಟಕ ನಡೆಯುತ್ತಿದ್ದರೆ, ಮತ್ತೊಂದೆಡೆ ಅಮೆರಿಕ ತನ್ನ ಮಿಲಿಟರಿ ಶಕ್ತಿಯನ್ನು ಬಲಪಡಿಸುತ್ತಿದೆ. ಪೆಂಟಗನ್ ವರದಿಗಳ ಪ್ರಕಾರ, USS ಟ್ರಿಪೋಲಿ ಮತ್ತು USS ಬಾಕ್ಸರ್ ಸೇರಿದಂತೆ ಬೃಹತ್ ಯುದ್ಧನೌಕೆಗಳು ಇರಾನ್ ಕರಾವಳಿಯತ್ತ ಧಾವಿಸಿವೆ.ಸುಮಾರು 5,000ಕ್ಕೂ ಹೆಚ್ಚು ಮರೀನ್ ಸೈನಿಕರು ಮತ್ತು ನೌಕಾ ಸಿಬ್ಬಂದಿಯನ್ನು ಈ ಪ್ರದೇಶಕ್ಕೆ ನಿಯೋಜಿಸಲಾಗಿದೆ.ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ತೈಲ ಕೇಂದ್ರಗಳ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ 48 ಗಂಟೆಗಳ ಗಡುವು ನೀಡಿದ್ದು, ಪರಿಸ್ಥಿತಿ ಸ್ಫೋಟಕ ಹಂತ ತಲುಪಿದೆ.

ಜಾಗತಿಕ ಆರ್ಥಿಕತೆಯ ಮೇಲೆ ಆಘಾತ

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೌಕಾಪಡೆಯು ಗಸ್ತು ಹೆಚ್ಚಿಸಿರುವುದು ಮತ್ತು ಸಂಭವನೀಯ ದಿಗ್ಬಂಧನದ ಭೀತಿಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ನಲುಗಿದೆ.ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ $120 ದಾಟಿದ್ದು, ಭಾರತ ಸೇರಿದಂತೆ ಏಷ್ಯಾದ ದೇಶಗಳಲ್ಲಿ ಆರ್ಥಿಕ ಕಳವಳ ಮೂಡಿಸಿದೆ. ವಿಶ್ವದ ಶೇ. 20ರಷ್ಟು ತೈಲ ಸಾಗಣೆಯಾಗುವ ಈ ಜಲಸಂಧಿ ಮುಚ್ಚಲ್ಪಟ್ಟರೆ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net