ಕುವೈತ್ ಏರ್‌ಪೋರ್ಟ್ ಮೇಲೆ ಇರಾನ್ ಕ್ಷಿಪಣಿ ದಾಳಿ: ಭಾರತೀಯ ಪ್ರಜೆ ದುರಂತ ಸಾವು; ವಿದೇಶಾಂಗ ಇಲಾಖೆ ತೀವ್ರ ಆಕ್ರೋಶ! MEA Condemns Attack On Kuwait Airport

ಇರಾನ್​ ನಡೆಸಿದ ದಾಳಿಯನ್ನು ಖಂಡಿಸಿದ ವಿದೇಶಾಂಗ ಇಲಾಖೆ
ಇರಾನ್​ ನಡೆಸಿದ ದಾಳಿಯನ್ನು ಖಂಡಿಸಿದ ವಿದೇಶಾಂಗ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ
  • ದಾಳಿಯಲ್ಲಿ ಮೃತಪಟ್ಟ ಒರ್ವ ಭಾರತೀಯ
  • ಇರಾನ್​ ನಡೆಸಿದ ದಾಳಿಯನ್ನು ಖಂಡಿಸಿದ ವಿದೇಶಾಂಗ ಇಲಾಖೆ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಬುಧವಾರ (ಜೂ.3) ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ನಾಗರಿಕ ಸಾವನ್ನಪ್ಪಿದ್ದು, ಹಲವಾರು ಭಾರತೀಯರು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ (MEA) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು(MEA Condemns Attack On Kuwait Airport), ದಾಳಿಯನ್ನು ಕಟು ಶಬ್ದಗಳಿಂದ ಖಂಡಿಸಿದೆ.
ಯುದ್ಧದ ಹೆಸರಿನಲ್ಲಿ ಸಾಮಾನ್ಯ ನಾಗರಿಕರು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಗುರಿಯಾಗಿಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಭಾರತ ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಗಟ್ಟಿಯಾಗಿ ಧ್ವನಿ ಎತ್ತಿದೆ.

ದಾಳಿ ಹೊಣೆ ಹೊತ್ತ ಇರಾನ್ ಮಿಲಿಟರಿ! ಕಾರಣವೇನು?

ಈ ಭೀಕರ ದಾಳಿಯ ಹಿಂದೆ ಇರಾನ್‌ನ ಮಿಲಿಟರಿ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೈವಾಡ ಇರುವುದು ಈಗ ದೃಢವಾಗಿದೆ. ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಇರಾನ್, ಇದು ಪ್ರತೀಕಾರಕ್ಕೆ ತಕ್ಕ ಉತ್ತರ ಎಂದು ಕರೆದಿದೆ.
ತಮ್ಮ ತೈಲ ಟ್ಯಾಂಕರ್ ಮತ್ತು ದ್ವೀಪದ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಈ ಆಪರೇಷನ್ ಮಾಡಲಾಗಿದೆ ಎಂದು ಇರಾನ್ ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದೆ. ಕುವೈತ್‌ನಲ್ಲಿರುವ ಅಲಿ ಅಲ್ ಸಲೇಂ ಏರ್‌ಬೇಸ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ.

ಭಾರತೀಯ ರಾಯಭಾರ ಕಚೇರಿ ಹೈ ಅಲರ್ಟ್!

ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯನ ಸಾವಿನ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಸದ್ಯಕ್ಕೆ ಮೃತ ವ್ಯಕ್ತಿಯ ಹೆಸರು ಮತ್ತು ಊರಿನ ವಿವರಗಳು ಲಭ್ಯವಾಗಿಲ್ಲ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ದಿನದಿಂದಲೂ ನಾವು ನಾಗರಿಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಇಂತಹ ರಕ್ತಪಾತವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತೀಯ ವಿದೇಶಾಂಗ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಕುವೈತ್‌ನಲ್ಲಿ ಗಾಯಗೊಂಡಿರುವ ಉಳಿದ ಭಾರತೀಯರಿಗೆ ಅಲ್ಲಿನ ರಾಯಭಾರ ಕಚೇರಿ ಸಿಬ್ಬಂದಿ ದಿನದ 24 ಗಂಟೆಯೂ ಉಚಿತ ವೈದ್ಯಕೀಯ ಮತ್ತು ತುರ್ತು ನೆರವು ನೀಡುತ್ತಿದ್ದಾರೆ. ಅಲ್ಲದೆ, ಇಡೀ ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಭಾರತೀಯ ರಾಯಭಾರ ಕಚೇರಿಗಳನ್ನು ಹೈ-ಅಲರ್ಟ್‌ನಲ್ಲಿ ಇಡಲಾಗಿದೆ.
ಈ ಘಟನೆಗೆ ಕುವೈತ್ ಸರ್ಕಾರ ಕೂಡ ತೀವ್ರ ಸಂತಾಪ ಸೂಚಿಸಿದ್ದು, ಭಾರತೀಯ ಕುಟುಂಬದ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದೆ.

ಇರಾನ್ ವಿರುದ್ಧ ಕೆಂಡಾಮಂಡಲವಾದ ಗಲ್ಫ್ ದೇಶಗಳು!

ಇರಾನ್‌ನ ಈ ಉಡಾಫೆ ಮತ್ತು ಆಕ್ರಮಣಕಾರಿ ಧೋರಣೆಗೆ ಇಡೀ ಗಲ್ಫ್ ಒಕ್ಕೂಟ ಒಟ್ಟಾಗಿ ತಿರುಗಿಬಿದ್ದಿದೆ. ಯುಎಇ (UAE) ಅಧ್ಯಕ್ಷೀಯ ಸಲಹೆಗಾರ ಅನ್ವರ್ ಗರ್ಗಶ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದು, ಇರಾನ್ ಪದೇ ಪದೇ ಕುವೈತ್ ಮತ್ತು ಬಹ್ರೇನ್ ಮೇಲೆ ದಾಳಿ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈಗ ಇಡೀ ಗಲ್ಫ್ ರಾಷ್ಟ್ರಗಳು ಒಂದಾಗಿ ನಿಲ್ಲುವ ಸಮಯ ಬಂದಿದೆ. ಈ ದಾಳಿ ಕೇವಲ ಕುವೈತ್ ಮೇಲಲ್ಲ, ನಮ್ಮೆಲ್ಲರ ಮೇಲಾದ ದಾಳಿ ಎಂದು ಗುಡುಗಿದ್ದಾರೆ.
ಕುವೈತ್ ವಿದೇಶಾಂಗ ಸಚಿವಾಲಯ ಕೂಡ ಇರಾನ್ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕ ವಿಮಾನ ನಿಲ್ದಾಣವನ್ನು ರಣರಂಗ ಮಾಡಿದ ಇರಾನ್ ನಡೆಗೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net