ಡೊನಾಲ್ಡ್​ ಟ್ರಂಪ್-ಇಸ್ರೇಲಿಯನ್ನರ ರಕ್ತ ಚೆಲ್ಲುವುದು ಕಡ್ಡಾಯ: ಫತ್ವಾ ಹೊರಡಿಸಿದ ಇರಾನ್​ನ ಹಿರಿಯ ಧರ್ಮಗುರು! Fatwa

ಡೊನಾಲ್ಡ್​ ಟ್ರಂಪ್-ಇಸ್ರೇಲಿಯನ್ನರ ರಕ್ತ ಚೆಲ್ಲುವುದು ಕಡ್ಡಾಯ: ಫತ್ವಾ ಹೊರಡಿಸಿದ ಇರಾನ್​ನ ಹಿರಿಯ ಧರ್ಮಗುರು! Fatwa
ಡೊನಾಲ್ಡ್​ ಟ್ರಂಪ್-ಇಸ್ರೇಲಿಯನ್ನರ ರಕ್ತ ಚೆಲ್ಲುವುದು ಕಡ್ಡಾಯ: ಫತ್ವಾ ಹೊರಡಿಸಿದ ಇರಾನ್​ನ ಹಿರಿಯ ಧರ್ಮಗುರು! Fatwa
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಇಸ್ರೇಲಿಯನ್ನರ ರಕ್ತವನ್ನು ಚೆಲ್ಲುವುದು ಕಡ್ಡಾಯ
  • ಶಿಯಾ ಮುಸ್ಲಿಮರಿಗೆ ಕರೆ ನೀಡಿದ ಇರಾನ್​ನ ಹಿರಿಯ ಧರ್ಮಗುರು ಅಬ್ದುಲ್ಲಾ ಜಾವಾದಿ-ಅಮೋಲಿ
  • ಜಾಗತಿಕ ಕಳವಳಕ್ಕೆ ಕಾರಣವಾಯ್ತು ಇರಾನ್​ನ ಹಿರಿಯ ಧರ್ಮಗುರು ಹೊರಡಿಸಿದ ಫತ್ವಾ
ತೆಹ್ರಾನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಇಸ್ರೇಲಿಯನ್ನರ ರಕ್ತವನ್ನು ಚೆಲ್ಲುವುದು ಕಡ್ಡಾಯ ಎಂದು ಶಿಯಾ ಮುಸ್ಲಿಮರಿಗೆ ಕರೆ ನೀಡುವ ಮೂಲಕ ಇರಾನ್​ನ ಹಿರಿಯ ಧರ್ಮಗುರು ಅಬ್ದುಲ್ಲಾ ಜಾವಾದಿ-ಅಮೋಲಿ ಜಿಹಾದ್‌ಗಾಗಿ ಫತ್ವಾ ( Fatwa ) ಹೊರಡಿಸಿದ್ದಾರೆ.
ಇಸ್ರೇಲ್, ಅಮೆರಿಕ ಹಾಗೂ ಇರಾನ್​ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ತಮ್ಮ ಸುಪ್ರೀಂ ಲೀಡರ್​ ಅಯತೊಲ್ಲಾ ಖಮೇನಿಯನ್ನು ಕೊಂದ ಬಳಿಕ ಅಗ್ನಿ ಜ್ವಾಲೆಯಂತೆ ಉರಿಯುತ್ತಿರುವ ಇರಾನ್​, ಅಮೆರಿಕ ಮತ್ತು ಇಸ್ರೇಲ್​ ಮೇಲಿನ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಕೊನೇ ಕ್ಷಣದವರೆಗೂ ಹೋರಾಡುವುದಾಗಿ ಶಪಥ ಮಾಡಿದೆ. ಇದರ ಬೆನ್ನಲ್ಲೇ ಇರಾನ್​ ಧರ್ಮಗುರು ಅಬ್ದುಲ್ಲಾ ಜಾವಾದಿ ಫತ್ವಾ ಹೊರಡಿಸಿದ್ದಾರೆ.

ಫತ್ವಾ ಎಂದರೇನು?

ಅಂದಹಾಗೆ, ಫತ್ವಾ ಎಂದರೆ ಇಸ್ಲಾಂ ಧರ್ಮದಲ್ಲಿ ಒಬ್ಬ ಅರ್ಹ ಮತ್ತು ಪಾಂಡಿತ್ಯಪೂರ್ಣ ಇಸ್ಲಾಮಿಕ್ ವಿದ್ವಾಂಸ (ಮುಫ್ತಿ) ಪವಿತ್ರ ಕುರಾನ್, ಹದೀಸ್ ಮತ್ತು ಶರೀಯಾ ಕಾನೂನುಗಳ ಆಧಾರದ ಮೇಲೆ ಒಂದು ನಿರ್ದಿಷ್ಟ ಪ್ರಶ್ನೆಗೆ ಅಥವಾ ಸಮಸ್ಯೆಗೆ ನೀಡುವ ಧಾರ್ಮಿಕ ತೀರ್ಪು ಅಥವಾ ನಿಯಮಾವಳಿ. ಇದು ಸಾಮಾನ್ಯವಾಗಿ ಒಂದು ಅಭಿಪ್ರಾಯ ಅಥವಾ ವಿವರಣೆಯ ರೂಪದಲ್ಲಿರುತ್ತದೆ ಮತ್ತು ಎಲ್ಲರಿಗೂ ಕಡ್ಡಾಯವಲ್ಲದಿದ್ದರೂ, ಅನೇಕ ಮುಸ್ಲಿಮರು ಇದನ್ನು ಗೌರವಿಸಿ ಅನುಸರಿಸುತ್ತಾರೆ.
ಅಂದಹಾಗೆ, ಅಬ್ದುಲ್ಲಾ ಜವಾದಿ ಅಮೋಲಿ ಇರಾನ್‌ನ ಪ್ರಮುಖ ಶಿಯಾ ವಿದ್ವಾಂಸರಲ್ಲಿ ಒಬ್ಬರು. ಅಲ್ಲದೆ, ದೇಶದ ಪಾದ್ರಿಗಳ ಸ್ಥಾಪನೆಯಲ್ಲಿ ಹಿರಿಯ ಧಾರ್ಮಿಕ ಅಧಿಕಾರಿಯೂ ಹೌದು. 1933ರಲ್ಲಿ ಜನಿಸಿದ ಅವರನ್ನು ಪ್ರಭಾವಿ ಇಸ್ಲಾಮಿಕ್ ತತ್ವಜ್ಞಾನಿ ಎಂದು ಪರಿಗಣಿಸಲಾಗಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ವಾಗ್ವಾದ ತೀವ್ರಗೊಳ್ಳುತ್ತಿರುವಂತೆಯೇ ಅವರು ಹೊರಡಿಸಿದ ಫತ್ವಾ ಜಾಗತಿಕ ಗಮನ ಸೆಳೆದಿದೆ. ಈಗಾಗಲೇ ಅಸ್ಥಿರವಾಗಿರುವ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯ ಬಗ್ಗೆ ಈ ಫತ್ವಾ ಕಳವಳ ಹುಟ್ಟುಹಾಕಿದೆ.
ಅಮೆರಿಕ ಮತ್ತು ಇಸ್ರೇಲಿ ಪಡೆಗಳು, ಇರಾನಿನ ಸ್ವತ್ತುಗಳ ಮೇಲೆ ವೈಮಾನಿಕ ದಾಳಿಯ ಸುರಿಮಳೆಯನ್ನು ಮುಂದುವರೆಸಿದ್ದು, ಸತತ 6ನೇ ದಿನವೂ ಸಂಘರ್ಷ ಮುಂದುವರಿದಿದೆ. ಇರಾನ್​ ಕೂಡ ಅಮೆರಿಕದ ಸೇನಾ ನೆಲೆಗಳು ಮತ್ತು ಇಸ್ರೇಲ್​ ಮೇಲೆ ಬಾಂಬ್​ ದಾಳಿಗಳನ್ನು ನಡೆಸುತ್ತಿದೆ. ಮಂಗಳವಾರ (ಮಾರ್ಚ್​ 03) ರಾತ್ರಿ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ, ಇರಾನ್‌ನ ಯುದ್ಧನೌಕೆಯ ಮೇಲೆ ದಾಳಿ ಮಾಡಿ, ಅದನ್ನು ಮುಳುಗಿಸಿತು. ಇದರ ಪರಿಣಾಮ 87 ಜನರು ಮೃತಪಟ್ಟರು. ಎರಡನೇ ಮಹಾಯುದ್ಧದ ನಂತರ ಅಮೆರಿಕದ ಜಲಾಂತರ್ಗಾಮಿ ನೌಕೆಯು ಮೇಲ್ಮೈ ಹಡಗಿನ ಮೇಲೆ ದಾಳಿ ಮಾಡಿದ್ದು ಇದೇ ಮೊದಲು.
ಇರಾನ್‌ನಲ್ಲಿ ಇದುವರೆಗೆ 1,000 ಕ್ಕೂ ಹೆಚ್ಚು ಜನರು ಮತ್ತು ಇಸ್ರೇಲ್‌ನಲ್ಲಿ ಸುಮಾರು ಒಂದು ಡಜನ್​ಗೂ ಹೆಚ್ಚು ಜನರು ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಈ ಯುದ್ಧದಲ್ಲಿ ಕನಿಷ್ಠ ಆರು ಅಮೆರಿಕದ ಸೈನಿಕರು ಕೂಡ ಮೃತಪಟ್ಟಿದ್ದಾರೆ. ಇರಾನ್ ನಮಗೆ ಬೆದರಿಕೆಯನ್ನು ಒಡ್ಡಿರುವುದರಿಂದ ನಾವು ಅದರ ಮೇಲೆ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಯುದ್ಧ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net