ಮೋದಿ ಡಿಪ್ಲೋಮಸಿಗೆ ಬಿಗ್ ವಿಕ್ಟರಿ!...ಭಾರತ ನಮ್ಮ ನಂಬಿಕಸ್ತ ಗೆಳೆಯ, ಹಾರ್ಮುಜ್ ಹಾದಿಯಲ್ಲಿ ಅಡೆತಡೆಯೇ ಇಲ್ಲ ಎಂದ ಇರಾನ್ ರಾಯಭಾರಿ ಫಥಾಲಿ | Iran envoy Mohammad Fathali

 Iran envoy Mohammad Fathali | ಹಾರ್ಮುಜ್ ಹಾದಿಯಲ್ಲಿ ಅಡೆತಡೆಯೇ ಇಲ್ಲ ಎಂದ ಇರಾನ್ ರಾಯಭಾರಿ ಫಥಾಲಿ
Iran envoy Mohammad Fathali | ಹಾರ್ಮುಜ್ ಹಾದಿಯಲ್ಲಿ ಅಡೆತಡೆಯೇ ಇಲ್ಲ ಎಂದ ಇರಾನ್ ರಾಯಭಾರಿ ಫಥಾಲಿ
Published on
Iran envoy Mohammad Fathali: ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಭೀಕರ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ಭಾರತದ ಇಂಧನ ಭದ್ರತೆಗೆ ಸಂಬಂಧಿಸಿದಂತೆ ಒಂದು ಮಹತ್ವದ ಬೆಳವಣಿಗೆ ನಡೆದಿದ್ದು, ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸುವುದಾಗಿ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಶುಕ್ರವಾರ (ಮಾರ್ಚ್ 13, 2026) ಘೋಷಿಸಿದ್ದಾರೆ.

ಭಾರತ ನಮ್ಮ ಆಪ್ತ ಗೆಳೆಯ

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಥಾಲಿ, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತ ನಮ್ಮ ಅತ್ಯಂತ ಹಳೆಯ ಮತ್ತು ನಂಬಿಕಸ್ತ ಸ್ನೇಹಿತ. ಅದಕ್ಕೆ ಸುರಕ್ಷಿತ ಮಾರ್ಗ ಸಿಗಲಿದೆಯೇ ಎಂಬ ಪ್ರಶ್ನೆ ಎದುರಾದರೆ ಅದಕ್ಕೆ ಉತ್ತರ ಹೌದು. ಇನ್ನು ಎರಡರಿಂದ ಮೂರು ಗಂಟೆಗಳಲ್ಲಿ ಇದರ ಸಕಾರಾತ್ಮಕ ಫಲಿತಾಂಶವನ್ನು ನೀವು ನೋಡಲಿದ್ದೀರಿ ಎಂದು ಭರವಸೆ ನೀಡಿದರು.
ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ ಜೀವನಾಡಿಯಾಗಿದ್ದು, ವಿಶ್ವದ ಒಟ್ಟು ತೈಲ ಸಾಗಣೆಯ ಸುಮಾರು 20% ಭಾಗ ಈ ಕಿರಿದಾದ ಜಲಮಾರ್ಗದ ಮೂಲಕವೇ ಸಾಗುತ್ತದೆ. ಇತ್ತೀಚೆಗೆ ಇರಾನ್ ಈ ಮಾರ್ಗವನ್ನು ನಿರ್ಬಂಧಿಸಿರುವುದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿತ್ತು.
ಭಾರತವು ತನ್ನ ಒಟ್ಟು ಎಲ್‌ಪಿಜಿ ಆಮದಿನ 90% ಭಾಗವನ್ನು ಇದೇ ಮಾರ್ಗದ ಮೂಲಕ ಪಡೆಯುತ್ತಿರುವುದರಿಂದ, ಈ ನಿರ್ಬಂಧ ಭಾರತಕ್ಕೆ ದೊಡ್ಡ ತಲೆನೋವಾಗಿತ್ತು.

ಭಾರತ ಮತ್ತು ಇರಾನ್ ಸಾಮಾನ್ಯ ಹಿತಾಸಕ್ತಿ

ಭಾರತವು ಸಂಘರ್ಷದ ಸಮಯದಲ್ಲಿ ಇರಾನ್‌ಗೆ ವಿವಿಧ ಕ್ಷೇತ್ರಗಳಲ್ಲಿ ಸಹಾಯ ಮಾಡಿದೆ ಎಂದು ಸ್ಮರಿಸಿದ ಫಥಾಲಿ, ನಾವು ಸಾಮಾನ್ಯ ಹಿತಾಸಕ್ತಿ ಮತ್ತು ನಂಬಿಕೆಯನ್ನು ಹಂಚಿಕೊಳ್ಳುತ್ತೇವೆ. ಭಾರತದ ಜನರ ಸಂಕಷ್ಟ ನಮ್ಮ ಸಂಕಷ್ಟವೂ ಹೌದು. ಹೀಗಾಗಿ, ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಲು ಇರಾನ್‌ನ ಉನ್ನತ ಅಧಿಕಾರಿಗಳು ರಾಯಭಾರ ಕಚೇರಿಗೆ ಸೂಚನೆ ನೀಡಿದ್ದಾರೆ ಎಂದರು.

ಮೋದಿ-ಪೆಜೆಶ್ಕಿಯಾನ್ ಮಾತುಕತೆ

ಈ ಘೋಷಣೆಯ ಹಿಂದೆ ಬಲವಾದ ರಾಜತಾಂತ್ರಿಕ ಪ್ರಯತ್ನಗಳಿವೆ ಎನ್ನಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಗುರುವಾರ ರಾತ್ರಿ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ. ಸಂಘರ್ಷ ಪೀಡಿತ ಪ್ರದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಕುರಿತು ಮೋದಿ ಒತ್ತು ನೀಡಿದ್ದರು. ಇದರ ಬೆನ್ನಲ್ಲೇ ಇರಾನ್ ರಾಯಭಾರಿಯಿಂದ ಈ ಸಕಾರಾತ್ಮಕ ಹೇಳಿಕೆ ಹೊರಬಿದ್ದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net