5 ತಿಂಗಳ ಹಿಂದೆಯೇ ಬಿಗ್ ಅಲರ್ಟ್​! ನೇಪಾಳದಲ್ಲಿ ಭೀಕರ​ ಜಲಪ್ರಳಯ ಬೆನ್ನಲ್ಲೇ ಹೊರಬಿತ್ತು ICIMOD ವರದಿ | Nepal Flood

ನೇಪಾಳದಲ್ಲಿ ಭೀಕರ​ ಜಲಪ್ರಳಯ ಬೆನ್ನಲ್ಲೇ ಹೊರಬಿತ್ತು ಐಸಿಐಎಂ ICIMOD ವರದಿ
ನೇಪಾಳದಲ್ಲಿ ಭೀಕರ​ ಜಲಪ್ರಳಯ ಬೆನ್ನಲ್ಲೇ ಹೊರಬಿತ್ತು ಐಸಿಐಎಂ ICIMOD ವರದಿ
Published on

ಪ್ರಮುಖ ಮುಖ್ಯಾಂಶಗಳು

  • ನೇಪಾಳದಲ್ಲಿ ಭೀಕರ ಪ್ರವಾಹಕ್ಕೂ 5 ತಿಂಗಳ ಹಿಂದೆಯೇ ಎಚ್ಚರಿಕೆ
  • ವೇಗವಾಗಿ ಕರಗುತ್ತಿರುವ ಹಿಮನದಿಗಳಿಂದ ಹೆಚ್ಚುತ್ತಿದೆ ಜಲಪ್ರಳಯದ ಆತಂಕ
  • ಗಂಗಾ–ಸಿಂಧೂ–ಬ್ರಹ್ಮಪುತ್ರಕ್ಕೂ ಅಪಾಯದ ಮುನ್ಸೂಚನೆ
  • ಹಿಮಾಲಯದ ಬದಲಾದ ವಾತಾವರಣಕ್ಕೆ ವಿಜ್ಞಾನಿಗಳ ಎಚ್ಚರಿಕೆ
ಕಾಠ್ಮಂಡು: ಆಗಸ್ಟ್​ 26ರಂದು ನೇಪಾಳದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ಪ್ರವಾಹದಿಂದಾಗಿ (Nepal Flood ) ಕೆಲವೇ ಗಂಟೆಗಳ ಅಂತರದಲ್ಲಿ ಪರ್ವತಗಳ ನಾಡಿನ ಹಲವಾರು ಪಟ್ಟಣಗಳು ಸಂಪೂರ್ಣವಾಗಿ ನಾಶವಾಗಿವೆ. ಪ್ರಕೃತಿಯ ಈ ರೌದ್ರನರ್ತನಕ್ಕೆ 600ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸಾವಿರಾರೂ ಜನರ ಸುಳಿವೇ ಸಿಕ್ಕಿಲ್ಲ. ಈ ಮಧ್ಯೆ, ಐದು ತಿಂಗಳ ಹಿಂದೆಯೇ ಸ್ಫೋಟಕ ಮಾಹಿತಿ ಮೂಲಕ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಿದ್ದ ಎರಡು ವರದಿಗಳು ಇದೀಗ ಹಲವರ ಅಚ್ಚರಿಗೆ ಕಾರಣವಾಗಿದೆ. 
ನೇಪಾಳ ದುರಂತದ ಬೆನ್ನಲ್ಲೇ ವಿಜ್ಞಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಭೀಕರ ದುರಂತದ ಹಿಂದಿರುವ ಅಸಲಿ ಕಾರಣವೇನು ಎಂಬುದರ ಬಗ್ಗೆ ವಿಜ್ಞಾನಿಗಳು ಸುಧೀರ್ಘ ತನಿಖೆ ನಡೆಸುತ್ತಿದ್ದು, ಹಿಮಾಲಯ ಪ್ರದೇಶದಲ್ಲಿ ಅಪಾಯಕಾರಿ ಹವಾಮಾನ ಬದಲಾವಣೆ ಸಂಭವಿಸುತ್ತಿರುವುದನ್ನು ಕಂಡುಕೊಂಡಿದ್ದಾರೆ. ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ ಹಿಮಪಾತ ಆಗುವ ಬದಲು ಈಗ ಮಳೆ ಸುರಿಯುತ್ತಿರುವುದು ಮತ್ತು ಹಿಮನದಿಗಳು (Glaciers) ಅತಿ ವೇಗವಾಗಿ ಕರಗುತ್ತಿರುವುದು ಇಂತಹ ಹಠಾತ್ ಜಲಪ್ರಳಯಗಳಿಗೆ ಮುಖ್ಯ ಕಾರಣವೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. 

5 ತಿಂಗಳ ಹಿಂದೆಯೇ ಬಿಗ್ ಅಲರ್ಟ್​

ಐದು ತಿಂಗಳ ಹಿಂದೆಯೇ ಅಂದರೆ ಮಾರ್ಚ್​ನಲ್ಲಿ, ಕಾಠ್ಮಂಡುವಿನಲ್ಲಿರುವ ಅಂತಾರಾಷ್ಟ್ರೀಯ ಸಂಯೋಜಿತ ಪರ್ವತ ಅಭಿವೃದ್ಧಿ ಕೇಂದ್ರ (ICIMOD) ತನ್ನ 'HKH ಹಿಮನದಿ ಔಟ್‌ಲುಕ್ 2026' ವರದಿಯಲ್ಲಿ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿತ್ತು. 2000 ಇಸ್ವಿಯ ನಂತರ ಹಿಮಾಲಯದಲ್ಲಿ ಹಿಮನದಿಗಳು ಕರಗುವ ವೇಗ ಎರಡು ಪಟ್ಟು ಹೆಚ್ಚಾಗಿದೆ. 1975ರಿಂದ ಈಚೆಗೆ ಸುಮಾರು 27 ಮೀಟರ್‌ಗಳಷ್ಟು ದಪ್ಪದ ಹಿಮ ಕರಗಿ ನೀರಾಗಿದೆ. 1990ರಿಂದ 2020ರ ನಡುವಿನ ಮೂರು ದಶಕಗಳಲ್ಲಿ ಹಿಂದೂ ಕುಶ್ ಹಿಮಾಲಯ (HKH) ತನ್ನ ಒಟ್ಟು ಹಿಮನದಿ ಪ್ರದೇಶದ ಶೇ.12 ಮತ್ತು ಮಂಜುಗಡ್ಡೆಯ ಶೇ.9ರಷ್ಟು ಭಾಗವನ್ನು ಕಳೆದುಕೊಂಡಿದೆ ಎಂದು ಉಲ್ಲೇಖಿಸಿತ್ತು. 

2 ಶತಕೋಟಿ ಜನರಿಗೆ ಕಂಟಕ

'ಏಷ್ಯಾದ ವಾಟರ್ ಟವರ್‌ಗಳು' ಎಂದೇ ಕರೆಯಲ್ಪಡುವ ಈ ಹಿಮನದಿಗಳ ನೀರನ್ನು ನೆಚ್ಚಿಕೊಂಡಿರುವ ಕೆಳಭಾಗದ 200 ಕೋಟಿ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಭವಿಷ್ಯದಲ್ಲಿ ತೀವ್ರ ಅಭಾವ ಎದುರಾಗಲಿದೆ. ಡೆಹ್ರಾಡೂನ್‌ನ ವಾಡಿಯಾ ಹಿಮಾಲಯನ್ ಭೂವಿಜ್ಞಾನ ಸಂಸ್ಥೆ ಮತ್ತು ICIMOD ವಿಜ್ಞಾನಿಗಳ ಪ್ರಕಾರ, ಹಿಮ-ಬಂಡೆಗಳ ಕುಸಿತ ಎತ್ತರ ಪ್ರದೇಶದಲ್ಲಿದ್ದ ಹಿಮ ಮತ್ತು ಬಂಡೆಯ ದೊಡ್ಡ ತುಂಡುಗಳು ಭೋಟ್‌ಕೋಶಿ ನದಿಯ ಉಪನದಿ ‘ಲೆಂಡೆ ಖೋಲಾ’ಗೆ ಬಿದ್ದಿದ್ದರಿಂದ ದಿಢೀರ್ ಜಲಪ್ರಳಯ ಸೃಷ್ಟಿಯಾಗಿ ಸಡಿಲಗೊಂಡ ಮಣ್ಣು ಮತ್ತು ಬಂಡೆಗಳು ರಭಸವಾಗಿ ಕೊಚ್ಚಿ ಬಂದಿರಬಹುದು ಎಂದು ವಿವರಿಸಲಾಗಿದೆ.

ಅಪಾಯದಲ್ಲಿ ಗಂಗಾ, ಸಿಂಧೂ, ಬ್ರಹ್ಮಪುತ್ರ ಕಣಿವೆ

ಹಿಮ ಬೀಳಬೇಕಾದ ಎತ್ತರದ ಪರ್ವತ ಶ್ರೇಣಿಗಳಲ್ಲಿ ಕಾವು ಹೆಚ್ಚಾಗಿ ಮಳೆ ಸುರಿಯುತ್ತಿದೆ. ಹಿಮದ ಹೊದಿಕೆ ಕಡಿಮೆಯಾಗಿ ಬಂಡೆಗಳು ಉಷ್ಣತೆಯನ್ನು ಹೆಚ್ಚಾಗಿ ಹೀರಿಕೊಳ್ಳುತ್ತಿದ್ದು, ಇಡೀ ಪರ್ವತ ಶ್ರೇಣಿಯ ಇಳಿಜಾರುಗಳು ಅಪಾಯಕ್ಕೆ ಸಿಲುಕುತ್ತಿವೆ. ವಿಶ್ವದಲ್ಲಿ ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ ಅತಿ ಹೆಚ್ಚು ಮಂಜುಗಡ್ಡೆ ಇರುವುದು ಹಿಮಾಲಯದಲ್ಲೇ 63,700ಕ್ಕೂ ಹೆಚ್ಚು ಹಿಮನದಿಗಳು ಏಷ್ಯಾದ 10 ಪ್ರಮುಖ ನದಿಗಳಿಗೆ ಜೀವ ನೀಡುತ್ತಿವೆ. ಆದರೆ, ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಶೇ.74ಕ್ಕೂ ಹೆಚ್ಚು ಹಿಮನದಿಗಳು ಕರಗುತ್ತಿದ್ದು, ಪರಿಸರ ಸಮತೋಲನ ಸಂಪೂರ್ಣ ಏರುಪೇರಾಗುವ ಹಂತ ತಲುಪಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ,(ಏಜೆನ್ಸೀಸ್).   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net