ವಿಶ್ವದ ಬಲಿಷ್ಠ ಮಾರುಕಟ್ಟೆಗೆ ಭಾರತದ ಲಗ್ಗೆ: ಯುರೋಪಿಯನ್ ಯೂನಿಯನ್ ಜೊತೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ | India - EU FTA

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಭಾರತದ ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಜಗತ್ತಿನ 27 ರಾಷ್ಟ್ರಗಳ ಪ್ರಬಲ ಒಕ್ಕೂಟವಾದ ಯುರೋಪಿಯನ್ ಯೂನಿಯನ್ (EU) ಜೊತೆಗೆ ಭಾರತವು ಮಂಗಳವಾರ (ಜ.27) ತನ್ನ ಇತಿಹಾಸದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ (India-EU FTA) ಸಹಿ ಹಾಕಿದೆ. ಇದನ್ನು ಸಮೃದ್ಧಿಯ ಹೊಸ ನೀಲಿನಕ್ಷೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಕೇವಲ ವ್ಯಾಪಾರವಲ್ಲ, ಬದಲಾಗಿ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುವ ಐತಿಹಾಸಿಕ ಹೆಜ್ಜೆ ಎಂದಿದ್ದಾರೆ.

ರಫ್ತು ಕ್ಷೇತ್ರಕ್ಕೆ ಬಲ: ಚೀನಾ ಮೇಲಿನ ಅವಲಂಬನೆಗೆ ಬ್ರೇಕ್!

ಅಮೆರಿಕವು ವಿಧಿಸುತ್ತಿರುವ ಕಠಿಣ ಸುಂಕಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವ ಬೆನ್ನಲ್ಲೇ ಈ ಒಪ್ಪಂದ ನಡೆದಿದೆ. ಭಾರತದ ರಫ್ತುದಾರರು ಈಗ ಅಮೆರಿಕದ ಶೇ.50 ಸುಂಕದ ಹೊರೆಯಿಂದ ಪಾರಾಗಲು ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯುರೋಪ್ ಮಾರುಕಟ್ಟೆಯನ್ನು ಬಳಸಿಕೊಳ್ಳಬಹುದು. ಈ ಒಪ್ಪಂದದಿಂದಾಗಿ ಜವಳಿ, ಚರ್ಮದ ಉತ್ಪನ್ನಗಳು, ಔಷಧ, ಉಕ್ಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಆಮದು ಸುಂಕಗಳು ರದ್ದಾಗಲಿವೆ ಅಥವಾ ಗಣನೀಯವಾಗಿ ಇಳಿಕೆಯಾಗಲಿವೆ.

ಭಾರತಕ್ಕೆ ಆಗಲಿರುವ ಲಾಭಗಳು

ಸ್ಪರ್ಧಾತ್ಮಕ ಮಾರುಕಟ್ಟೆ

ಪ್ರಸ್ತುತ ಭಾರತದ ಬಟ್ಟೆಗಳ ಮೇಲೆ ಯುರೋಪ್‌ನಲ್ಲಿ ಶೇ.12-16ರಷ್ಟು ಸುಂಕವಿದೆ. ಬಾಂಗ್ಲಾದೇಶ ಮತ್ತು ವಿಯೆಟ್ನಾಂಗೆ ಹೋಲಿಸಿದರೆ ನಮಗೆ ಹಿನ್ನಡೆಯಾಗುತ್ತಿತ್ತು. ಈಗ ಶೂನ್ಯ ಸುಂಕದ ಲಾಭದಿಂದ ಭಾರತದ ಬಟ್ಟೆಗಳು ಯುರೋಪ್‌ನಲ್ಲಿ ಅಗ್ಗವಾಗಲಿವೆ.

ಐಷಾರಾಮಿ ಕಾರುಗಳು

ಬಿಎಂಡಬ್ಲ್ಯು , ಮರ್ಸಿಡಿಸ್, ಆಡಿ ಮತ್ತು ಪೋರ್ಷೆ ಅಂತಹ ಕಾರುಗಳ ಮೇಲಿನ ಆಮದು ಸುಂಕವು ಪ್ರಸ್ತುತ ಇರುವ ಶೇ.110% ರಿಂದ ಹಂತ ಹಂತವಾಗಿ ಶೇ.10ಕ್ಕೆ ಇಳಿಕೆಯಾಗಲಿದೆ. ಇದು ಐಷಾರಾಮಿ ಕಾರು ಪ್ರೇಮಿಗಳಿಗೆ ದೊಡ್ಡ ಸಮಾಧಾನ ತರಲಿದೆ.

ಹೂಡಿಕೆ ಮತ್ತು ಉದ್ಯೋಗ

2000 ರಿಂದ 2024 ರವರೆಗೆ ಯುರೋಪ್‌ನಿಂದ ಭಾರತಕ್ಕೆ ಸುಮಾರು 117.4 ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ. ಈಗಿನ ಹೊಸ ಒಪ್ಪಂದದಿಂದ ಸುಮಾರು 6,000 ಯುರೋಪಿಯನ್ ಕಂಪನಿಗಳು ಭಾರತದಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲಿದ್ದು, ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ.

ಆಹಾರ ಉತ್ಪನ್ನಗಳು

ಯುರೋಪ್‌ನಿಂದ ಬರುವ ಚಾಕೊಲೇಟ್‌ಗಳು, ಬಿಸ್ಕತ್ತುಗಳು, ಆಲಿವ್ ಆಯಿಲ್, ಹಣ್ಣಿನ ರಸಗಳು ಮತ್ತು ಸಂಸ್ಕರಿಸಿದ ಆಹಾರಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದರಿಂದ ಇಟಾಲಿಯನ್ ಪಾಸ್ಟಾ ಅಥವಾ ಬೆಲ್ಜಿಯನ್ ಚಾಕೊಲೇಟ್ ಅಗ್ಗವಾಗಲಿವೆ.

ತಂತ್ರಜ್ಞಾನ ಮತ್ತು ಆಟೋಮೊಬೈಲ್

ಐಟಿ ಕ್ಷೇತ್ರ, ವೈದ್ಯಕೀಯ ಉಪಕರಣಗಳು ಮತ್ತು ವಾಹನ ಬಿಡಿಭಾಗಗಳ ಕ್ಷೇತ್ರದಲ್ಲಿ ನವೀನ ಪಾಲುದಾರಿಕೆಗಳು ಏರ್ಪಡಲಿವೆ.

ಮದ್ಯ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರ

ಒಪ್ಪಂದದ ಪ್ರಕಾರ ವೈನ್, ವಿಸ್ಕಿ ಮತ್ತು ಬ್ರಾಂದಿ ಸೇರಿದಂತೆ ಆಲ್ಕೋಹಾಲ್ ವ್ಯಾಪಾರಕ್ಕೂ ಉತ್ತೇಜನ ಸಿಗಲಿದೆ. ಭಾರತದಿಂದ ಯುರೋಪ್‌ಗೆ ಹೋಗುವ ಮದ್ಯದ ಪ್ರಮಾಣವು ಈ ಒಪ್ಪಂದದಿಂದ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.

ಭಾರತೀಯ ಐಟಿ (IT) ಕಂಪನಿಗಳಿಗೆ ಹೊಸ ಅವಕಾಶಗಳು

ಭಾರತದ ಐಟಿ ಕ್ಷೇತ್ರಕ್ಕೆ ಈ ಒಪ್ಪಂದವು ಯುರೋಪ್‌ನ 'ಡಿಜಿಟಲ್ ಬಾಗಿಲು'ಗಳನ್ನು ತೆರೆದಿದೆ:

ವೃತ್ತಿಪರರ ಸುಲಭ ಸಂಚಾರ

ಭಾರತೀಯ ಐಟಿ ಇಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಡೇಟಾ ತಜ್ಞರು ಯುರೋಪ್‌ನಲ್ಲಿ ಕೆಲಸ ಮಾಡಲು ಅಗತ್ಯವಿರುವ ವೀಸಾ ಪ್ರಕ್ರಿಯೆಗಳು ಸರಳವಾಗಲಿವೆ. ಇದು ಬ್ರೈನ್ ಡ್ರೈನ್ ಬದಲಿಗೆ ಬ್ರೈನ್ ಗೇನ್​ಗೆ ದಾರಿ ಮಾಡಿಕೊಡಲಿದೆ.

ಡಿಜಿಟಲ್ ಎಕಾನಮಿ ಮತ್ತು ಸೆಮಿಕಂಡಕ್ಟರ್

ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ಯುರೋಪ್‌ನ ಕಂಪನಿಗಳೊಂದಿಗೆ ಭಾರತೀಯ ಐಟಿ ಕಂಪನಿಗಳು ನೇರ ಪಾಲುದಾರಿಕೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಸೇವೆಗಳ ರಫ್ತು

ಯುರೋಪ್‌ನಲ್ಲಿರುವ ಹಣಕಾಸು ಮತ್ತು ಸಾರಿಗೆ ಸೇವೆಗಳ ಮಾರುಕಟ್ಟೆಗೆ ಭಾರತೀಯ ಟೆಕ್ ಕಂಪನಿಗಳಿಗೆ ವಿಶೇಷ ಪ್ರವೇಶ ಸಿಗಲಿದೆ. ಇದರಿಂದ ಭಾರತದ ಐಟಿ ರಫ್ತು ಆದಾಯವು ಮುಂದಿನ 10 ವರ್ಷಗಳಲ್ಲಿ ದುಪ್ಪಟ್ಟಾಗುವ ನಿರೀಕ್ಷೆಯಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಲಾಭ

ಭಾರತದ ಕೈಗರಿಕೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳು ಯುರೋಪ್‌ನಿಂದ ಕಡಿಮೆ ಬೆಲೆಯಲ್ಲಿ ಸಿಗಲಿವೆ. ಇದು ಭಾರತದ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ದೊಡ್ಡ ಬಲ ನೀಡಲಿದ್ದು, ಉತ್ಪಾದನಾ ವೆಚ್ಚ ತಗ್ಗಲಿದೆ.

2014 ರಿಂದ ಭಾರತದ ಯಶಸ್ವಿ ಪಯಣ

ಕಳೆದ ಹತ್ತು ವರ್ಷಗಳಲ್ಲಿ ಭಾರತವು ಮಾರಿಷಸ್, ಆಸ್ಟ್ರೇಲಿಯಾ, ಯುಎಇ, ಓಮನ್, ಬ್ರಿಟನ್ ಮತ್ತು ನ್ಯೂಜಿಲೆಂಡ್ ಸೇರಿದಂತೆ ಒಟ್ಟು ಏಳು ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಆದರೆ ಯುರೋಪಿಯನ್ ಯೂನಿಯನ್ ಜೊತೆಗಿನ ಈ ಇತ್ತೀಚಿನ ಒಪ್ಪಂದವು ಗಾತ್ರ ಮತ್ತು ಪ್ರಾಮುಖ್ಯತೆಯಲ್ಲಿ ಎಲ್ಲಕ್ಕಿಂತ ದೊಡ್ಡದಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net