ಸುಂಕ ಬಿಸಿ ತಟ್ಟಿದರೂ ಕುಸಿಯದು ಭಾರತದ ಆರ್ಥಿಕತೆ

ಸುಂಕ ಬಿಸಿ ತಟ್ಟಿದರೂ ಕುಸಿಯದು ಭಾರತದ ಆರ್ಥಿಕತೆ
ಸುಂಕ ಬಿಸಿ ತಟ್ಟಿದರೂ ಕುಸಿಯದು ಭಾರತದ ಆರ್ಥಿಕತೆ
Published on
ಅಮೆರಿಕದೊಂದಿಗೆ ಭಾರತ ತನ್ನ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಲಿ ಅಥವಾ ಬಿಡಲಿ, ಈಗಾಗಲೇ ಅನೇಕ ಉತ್ಪನ್ನಗಳಿಗೆ ಸಿಕ್ಕಿರುವ ಹೇರಳ ವಿನಾಯಿತಿಗಳು, ಹೊಸ ವ್ಯಾಪಾರ ಒಪ್ಪಂದಗಳು ಹಾಗೂ ಹಡಗು ಮಾರ್ಗಗಳ ಬದಲಾವಣೆಯಿಂದಾಗಿ ಸುಂಕಗಳ ಪರಿಣಾಮ ಅಷ್ಟಾಗಿ ಆಗುವುದಿಲ್ಲ.
ಟ್ರಂಪ್ ಅವರ 2025ರ ಸುಂಕಗಳ ಅಬ್ಬರ ಯಾವುದೇ ಆರ್ಥಿಕ ವಿನಾಶವನ್ನು ಉಂಟುಮಾಡಲಿಲ್ಲ ಎಂಬುದು ಅನೇಕರನ್ನು ಆಶ್ಚರ್ಯಚಕಿತಗೊಳಿಸಬಹುದು. ಭಾರತದ ಮೇಲೆ ಟ್ರಂಪ್ ಹೇರಿದ್ದ ಆರಂಭಿಕ ಶೇ. 50ರಷ್ಟು ಸುಂಕ, ಕರ್ನಾಟಕದ ರಫ್ತುದಾರರಿಗೆ ದೊಡ್ಡ ಹೊಡೆತವನ್ನೇನೂ ನೀಡಲಿಲ್ಲ. ಈಗ ಅಮೆರಿಕದ ಸುಪ್ರೀಂಕೋರ್ಟ್ ಆ ಸುಂಕಗಳನ್ನು ರದ್ದುಗೊಳಿಸಿದ್ದರೂ ಪೇಟೆಂಟ್ ಪಡೆದ ಫಾರ್ಮಾ ಉತ್ಪನ್ನಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಹೊಸ ಬೆದರಿಕೆಗಳು ಭೀತಿಯನ್ನು ಹುಟ್ಟಿಸಿವೆ. ಅಲ್ಲದೆ, ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ಒಪ್ಪಂದ ಇನ್ನೂ ಸಹಿಯಾಗದೇ ಉಳಿದಿದೆ. ಸುಂಕಗಳ ಅಬ್ಬರ ದೊಡ್ಡದಾಗಿ ಕಂಡರೂ ಆರ್ಥಿಕತೆಯ ಮೇಲೆ ಅವುಗಳ ಪ್ರಭಾವ ತುಂಬ ಕಡಿಮೆ. ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೂ ಅನ್ವಯಿಸುತ್ತದೆ.
ತಪ್ಪಾಗಿ ಅರ್ಥೈಸಿಕೊಳ್ಳಬೇಡಿ: ಇತಿಹಾಸ ನೋಡಿದರೆ ಸುಂಕಗಳು ಯಾವಾಗಲೂ ಕೆಟ್ಟದ್ದೇ. ಅದರಲ್ಲೂ ವಿಶೇಷವಾಗಿ ಅದನ್ನು ಹೇರುವ ದೇಶಕ್ಕೇ ಅದು ಹೆಚ್ಚು ನಷ್ಟ ಉಂಟುಮಾಡುತ್ತದೆ. ಏಕೆಂದರೆ ಅಂತಿಮವಾಗಿ ಆ ದೇಶದ ನಿವಾಸಿಗಳೇ ಈ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಇಷ್ಟೆಲ್ಲ ಆತಂಕಗಳ ನಡುವೆಯೂ 2025ರಲ್ಲಿ ಜಾಗತಿಕ ವ್ಯಾಪಾರ ಶೇ. 3.4ರಷ್ಟು ವೃದ್ಧಿಯಾಗಿದೆ. ಭಾರತದ ರಫ್ತು ಕೂಡ ಏರಿಕೆಯಾಗಿದೆ, ಅದರಲ್ಲೂ ಅಮೆರಿಕಕ್ಕೆ ಮಾಡುವ ರಫ್ತು ಶೇ. 11.6ರಷ್ಟು ಹೆಚ್ಚಾಗಿದೆ! ಇದಕ್ಕೆ ನಿಮ್ಮ ಭಾಗದ ಎಲೆಕ್ಟ್ರಾನಿಕ್ಸ್ ಉತ್ಪಾದಕರಿಗೆ ಭಾಗಶಃ ಧನ್ಯವಾದ ಹೇಳಬೇಕು. ಟ್ರಂಪ್ ಅವರ ಸುಂಕ ಪ್ರಹಾರಕ್ಕೆ ನೇರ ಗುರಿಯಾಗಿದ್ದ ಚೀನಾದ ರಫ್ತು ಕೂಡ ಸಾಗಣೆ ಪ್ರಮಾಣದ ಭಾರಿ ಕುಸಿತದ ಹೊರತಾಗಿಯೂ, ವರ್ಷದಿಂದ ವರ್ಷಕ್ಕೆ ಶೇ. 5.5ರಷ್ಟು ಬೆಳೆದಿದೆ!
ಇದು ಹೇಗೆ ಸಾಧ್ಯ? ಸುಂಕದಿಂದ ಪಾರಾಗಲು ಕಂಪನಿಗಳು ಟ್ರಾನ್ಸ್-ಶಿಪ್ಪಿಂಗ್‌ನಂತಹ ದಾರಿಗಳನ್ನು ಕಂಡುಕೊಂಡಿವೆ. ಗಮನಿಸಿ - 2025ರಲ್ಲಿ ಆಗ್ನೇಯ ಏಷ್ಯಾದ ಆರ್ಥಿಕತೆಗಳಿಗೆ ಚೀನಾದ ರಫ್ತು ಭಾರಿ ಪ್ರಮಾಣದಲ್ಲಿ ಹೆಚ್ಚಾಯಿತು. ಇದಕ್ಕೆ ಪ್ರತಿಯಾಗಿ, ಆಸಿಯಾನ್ ರಾಷ್ಟ್ರಗಳಿಂದ ಅಮೆರಿಕದ ಆಮದು ಶೇ. 29ರಷ್ಟು ಏರಿಕೆಯಾಯಿತು. ಇದು ಕಾಕತಾಳೀಯವೇ? ಅಲ್ಲವೇ ಅಲ್ಲ. ಇದು ಆಗಿದ್ದು ಟ್ರಾನ್ಸ್-ಶಿಪ್ಪಿಂಗ್‌ನಿಂದ.
ಸುಂಕಗಳ ಶಕ್ತಿಯನ್ನು ಕುಗ್ಗಿಸುತ್ತಿರುವ ಮತ್ತೊಂದು ಅಂಶವೆಂದರೆ, ಸುಂಕಗಳನ್ನು ವಸೂಲಿ ಮಾಡುವ ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆನ್ಸಿ (CBP), ನೂರಾರು ಪ್ರವೇಶ ದ್ವಾರಗಳ ಮೇಲ್ವಿಚಾರಣೆ ಮಾಡಲು 2,500 ಉದ್ಯೋಗಿಗಳನ್ನು ಮಾತ್ರ ಹೊಂದಿದೆ. ಹಾಗಾಗಿ, 2025ರ ಹಣಕಾಸು ವರ್ಷದಲ್ಲಿ ಬಂದ 5 ಕೋಟಿಗೂ ಹೆಚ್ಚಿನ ಸರಕು ಸಾಗಣೆಗಳ ಪೈಕಿ ವಾಸ್ತವವಾಗಿ ಸಿಬಿಪಿ ಕೇವಲ 465 ಟ್ಯಾರಿಫ್ ಆಡಿಟ್‌ಗಳನ್ನು ಮಾತ್ರ ಮಾಡಿದ್ದು ಅನೇಕರನ್ನು ಅಚ್ಚರಿಗೊಳಿಸಿದೆ!
ವಾಸ್ತವವೇನು?: ಜಾಗತೀಕರಣಗೊಂಡ ಈ ಪ್ರಪಂಚವನ್ನು ತುರ್ತಾಗಿ ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಯಾವುದೇ ಉತ್ಪನ್ನ ಸಂಪೂರ್ಣವಾಗಿ ಒಂದೇ ದೇಶದಲ್ಲಿ ತಯಾರಾಗುವುದು ಬಹಳ ಅಪರೂಪ. ಒಂದು ವಸ್ತು ಅಮೆರಿಕದಲ್ಲಿ ವಿನ್ಯಾಸಗೊಂಡು 20 ವಿವಿಧ ದೇಶಗಳ ಬಿಡಿಭಾಗಗಳನ್ನು ಬಳಸಿಕೊಂಡು ಆಸ್ಟ್ರಿಯಾದ ಯಂತ್ರೋಪಕರಣಗಳ ಸಹಾಯದಿಂದ ಬೆಳಗಾವಿಯಲ್ಲಿ ತಯಾರಾದರೆ ಅದರ ಮೂಲ ದೇಶ ಯಾವುದು? ಯಾವ ಸುಂಕ ಅನ್ವಯಿಸುತ್ತದೆ? ಸಿಬಿಪಿ ಅದನ್ನು ಹೇಗೆ ಆಡಿಟ್ ಮಾಡಲು ಸಾಧ್ಯ? ಇದೆಲ್ಲವೂ ಟ್ರಾನ್ಸ್-ಶಿಪ್ಪಿಂಗ್ ಪೂರ್ವ ಮತ್ತು ಕಾನೂನುಬಾಹಿರ ತೆರಿಗೆ ವಂಚನೆಯ ಪ್ರಭಾವ. ಆದರೆ ಇವೆರಡೂ ಈಗ ಸಾಮಾನ್ಯವಾಗಿಬಿಟ್ಟಿವೆ.
ಸುಂಕ ಜಾರಿಗೆ ಮೊದಲೇ ಕಂಪನಿಗಳು ಒಂದು ಹೆಜ್ಜೆ ಮುಂದಿಟ್ಟಿದ್ದರಿಂದ ಜಾಗತಿಕ ವ್ಯಾಪಾರ ಹೆಚ್ಚಾಯಿತು ಎಂದು ಕೆಲವರು ಹೇಳುತ್ತಾರೆ. ಆರಂಭದಲ್ಲಿ ಇದು ನಿಜ ಅನ್ನಿಸಿತು. ಸುಂಕ ಜಾರಿಗೆ ಮೊದಲೇ ಕಂಪನಿಗಳು ಸರಕುಗಳನ್ನು ದಾಸ್ತಾನು ಮಾಡಿಕೊಂಡವು. ಹೀಗಾಗಿ ದಾಸ್ತಾನು ಹೆಚ್ಚಾದಂತೆ 2025ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಸರಕುಗಳ ಆಮದು ವಾರ್ಷಿಕವಾಗಿ ಶೇ. 52ರಷ್ಟು ಏರಿಕೆ ಕಂಡಿತು. ತದನಂತರ ಎರಡೂ ಬಾರಿ ಕುಸಿತ ಕಂಡವು. ನಂತರದ ಎರಡು ತ್ರೈಮಾಸಿಕಗಳಲ್ಲಿ ಆಮದು ಪ್ರಮಾಣ ವಾರ್ಷಿಕವಾಗಿ ಕ್ರಮವಾಗಿ ಶೇ. -35 ಮತ್ತು ಶೇ. -7ರಷ್ಟು ಭಾರಿ ಕುಸಿತ ಕಂಡಿತು. ಅದು ಜಾಗತಿಕ ಜಿಡಿಪಿ ಮೇಲೂ ಪ್ರಭಾವ ಬೀರಿತು.
ಈಗ, 2025ರಲ್ಲಿ ಸಂಗ್ರಹಿಸಿಟ್ಟಿದ್ದ ಸುಂಕರಹಿತ ದಾಸ್ತಾನುಗಳು ಖಾಲಿಯಾಗುತ್ತಿವೆ ಎಂದು ಅನೇಕರು ಭಯಪಡುತ್ತಿದ್ದಾರೆ. ಇರಬಹುದು. ಆದರೆ, ಸುಂಕಗಳ ಪ್ರಭಾವವನ್ನು ಕುಗ್ಗಿಸುವ ದಾರಿಗಳನ್ನು ಹುಡುಕಲು ಉದ್ಯಮಗಳಿಗೆ ಒಂದು ವರ್ಷದ ಕಾಲಾವಕಾಶವಿತ್ತು. ಅವರು ಆ ಪ್ರಯತ್ನವನ್ನು ಮುಂದುವರಿಸಲಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ವಿಶ್ವ ಬ್ಯಾಂಕ್, ಅಮೆರಿಕದ ಸರಾಸರಿ ಸುಂಕ ದರವು ಶೇ. 28ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಜನವರಿ 2026ರ ಅಂದಾಜು ಅದನ್ನು ಶೇ. 17ಕ್ಕೆ ಇಳಿಸಿತು. ಅದಕ್ಕಿಂತಲೂ ಕಡಿಮೆ ಇರಬಹುದು! 2025ರ ರಸೀದಿಗಳ ಮೇಲಿನ ನಿಜವಾದ ಅಮೆರಿಕನ್ ಸುಂಕದ ದರಗಳು ಸರಾಸರಿಯಾಗಿ ಶೇ. 10ಕ್ಕಿಂತ ಕಡಿಮೆ ಇದ್ದವು. ಫೆಬ್ರವರಿಯಲ್ಲಿ ಹೊರಬಿದ್ದ ನ್ಯಾಯಾಲಯದ ತೀರ್ಪು ಅದನ್ನು ಸುಮಾರು ಶೇ. 8ಕ್ಕೆ ಇಳಿಸುತ್ತದೆ. ಒಂದು ವೇಳೆ, ಟ್ರಂಪ್ ತಮ್ಮ ಹೊಸ ಜಾಗತಿಕ ತೆರಿಗೆಯನ್ನು ಶೇ. 15ಕ್ಕೆ ಏರಿಸಿದರೆ ಜಾರಿಗೆ ಬರುವ ಪರಿಣಾಮಕಾರಿ ಸುಂಕಗಳು ಮತ್ತೆ ಶೇ. 10ಕ್ಕೆ ಏರಲಿವೆ. ಆದರೆ, ಅದು ಇನ್ನೂ ಹೆಚ್ಚಿನ ಕಾನೂನು ಹೋರಾಟಗಳನ್ನು ಎದುರಿಸಿ ಉಳಿದುಕೊಂಡರೆ ಮಾತ್ರ. ಪರಿಸ್ಥಿತಿ ಆಶಾದಾಯಕವಾಗಿಲ್ಲದಿದ್ದರೂ ಮೊದಲಿನ ಆತಂಕಕ್ಕೆ ಹೋಲಿಸಿದರೆ ಇದು ಎಷ್ಟೋ ವಾಸಿ.
ಪ್ರಮುಖ ಕಾರಣವೇನು?: ವಿನಾಯಿತಿಗಳು ಟ್ರಂಪ್ ಅವರ ‘ಲಿಬರೇಶನ್ ಡೇ’ ಸುಂಕಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸುವುದಕ್ಕಿಂತ ಮುಂಚೆಯೇ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ ಶೇ. 60ಕ್ಕೂ ಹೆಚ್ಚಿನ ಸರಕುಗಳ ಮೇಲೆ ಯಾವುದೇ ತೆರಿಗೆ ಇರಲಿಲ್ಲ. ಇದರಲ್ಲಿ ಕರ್ನಾಟಕದ ಪ್ರಮುಖ ರಫ್ತು ಉತ್ಪನ್ನಗಳೂ ಸೇರಿದ್ದವು. ಎಲೆಕ್ಟ್ರಾನಿಕ್ಸ್? ವಿನಾಯಿತಿ! ಕಾಫಿ? ವಿನಾಯಿತಿ! ಮಸಾಲೆಗಳು? ನಿಮ್ಮ ಊಹೆ ಸರಿ, ಅದಕ್ಕೂ ವಿನಾಯಿತಿ ಇದೆ! ಟ್ರಂಪ್ ಅವರ ಹೊಸ ಸುಂಕಗಳು ಸ್ವಲ್ಪ ಹೆಚ್ಚಿನ ವಿನಾಯಿತಿಗಳನ್ನು ಒದಗಿಸುತ್ತವೆ. ಇನ್ನು ಹೇಗೆ ನೋಡಿದರೂ ಅನೇಕ ಸುಂಕಗಳಿಂದ ನುಣುಚಿಕೊಳ್ಳುವ ಟ್ರಾನ್ಸ್-ಶಿಪ್ಪಿಂಗ್ ವಿಷಯವನ್ನು ಪರಿಗಣಿಸುವ ಮೊದಲೇ ಪರಿಸ್ಥಿತಿ ಹೀಗಿದೆ.
ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಪೂರ್ಣಗೊಂಡರೆ, ಅದು ಸುಂಕಗಳ ಪ್ರಭಾವವನ್ನು ಮತ್ತಷ್ಟು ತಗ್ಗಿಸಲಿದೆ. ಇದರಿಂದ ಕರ್ನಾಟಕದ ಸಿದ್ಧ ಉಡುಪು ತಯಾರಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಕುದುರುತ್ತಿರುವ ವ್ಯಾಪಾರ ಒಪ್ಪಂದಗಳೂ ಇದಕ್ಕೆ ಪೂರಕವಾಗಿವೆ. ಕೇವಲ ಭಾರತದಂತಹ ದೇಶಗಳು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಮಾತ್ರವಲ್ಲದೆ, ಭಾರತವು ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್‌ನೊಂದಿಗೆ ಮಾಡಿದಂತೆ ಅಮೆರಿಕೇತರ ರಾಷ್ಟ್ರಗಳು ಒಂದಾಗುತ್ತಿರುವುದು ಕೂಡ ಇಲ್ಲಿ ಗಮನಾರ್ಹ.
ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಸುಂಕಗಳನ್ನು ಟ್ರಂಪ್ ಅಸ್ತ್ರವಾಗಿ ಬಳಸುತ್ತಾರೆ. ಏಕೆಂದರೆ ಅವರಿಗೆ ಒಪ್ಪಂದ ಮಾಡಿಕೊಳ್ಳುವುದೆಂದರೆ ಬಹಳ ಇಷ್ಟ. ಹೀಗಾಗಿ, ಕರ್ನಾಟಕ ಮತ್ತು ಭಾರತದ ಇತರ ಭಾಗಗಳಲ್ಲಿ ಬೆಳೆಯುವ ಹೆಸರುಕಾಳು, ಅಲಸಂದೆ ಹಾಗೂ ತೊಗರಿ ಬೇಳೆಯಂತಹ ಕೃಷಿ ಉತ್ಪನ್ನಗಳ ಬಗ್ಗೆ ಇತ್ತೀಚೆಗೆ ಕೇಳಿಬರುತ್ತಿರುವ ಆತಂಕಗಳು ಶಮನವಾಗುವ ಸಾಧ್ಯತೆಯಿದೆ.
ಈ ಎಲ್ಲ ಅಂಶಗಳು ಹೆಡ್‌ಲೈನ್‌ಗಳಲ್ಲಿ ಅಬ್ಬರಿಸುವ ಭಯಾನಕ ಸುಂಕ ಪ್ರಮಾಣದ ಅಂಕಿ-ಅಂಶಗಳ ನೈಜ ಪ್ರಭಾವವನ್ನು ಕಡಿಮೆ ಮಾಡಲು ಪೂರಕವಾಗಿವೆ. ಅನೇಕರು ನಿರೀಕ್ಷಿಸಿದ್ದ ಆ ಭಾರಿ ಸುಂಕ ಆಘಾತ, ಕಳೆದ ವರ್ಷ ವಿಳಂಬಕ್ಕೆ ಸೀಮಿತವಾಗಿರಲಿಲ್ಲ; ಅದು ವಾಸ್ತವವಾಗಿ ಬರಲೇ ಇಲ್ಲ. ಸುಂಕಗಳ ಬಗೆಗಿನ ಚರ್ಚೆಗಳು ಪೂರ್ಣವಾಗಿ ನಿಲ್ಲಲಾರವು. ಆದರೆ, ನೀವೀಗ ಅದರ ಬಗ್ಗೆ ಇರುವ ಸದ್ದು-ಗದ್ದಲ ಮತ್ತು ಆತಂಕಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net