ಭಾರತೀಯರೇ ನಿಮ್ಮ ನಾಶ ನಮ್ಮಿಂದಲೇ... ಭಾರತಕ್ಕೆ ಪಾಕ್ ಸೆನೆಟರ್ ಧಮ್ಕಿ; ಮೊದಲು ತಿನ್ನಲು ಅನ್ನದ ವ್ಯವಸ್ಥೆ ಮಾಡಿಕೊಳ್ಳಿ ಎಂದ ನೆಟ್ಟಿಗರು! Rana Mahmood Anti India Speech

ಅಮೆರಿಕದಲ್ಲಿ ನಿಂತು ಭಾರತದ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್​ ಸೆನೆಟರ್​
ಅಮೆರಿಕದಲ್ಲಿ ನಿಂತು ಭಾರತದ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್​ ಸೆನೆಟರ್​
Published on

ಪ್ರಮುಖ ಮುಖ್ಯಾಂಶಗಳು

  • ಪಾಕ್​ ಸೆನೆಟರ್​ನಿಂದ ಭಾರತಕ್ಕೆ ಧಮ್ಕಿ
  • ನಮ್ಮಿಂದಲೇ ನಿಮ್ಮ ನಾಶ ಎಂದ ರಾಣಾ ಮೊಹಮ್ಮದ್​
  • ಅಮೆರಿಕದಲ್ಲಿ ನಿಂತು ಭಾರತದ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್​ ಸೆನೆಟರ್​
  • ಭಾರತದ ವಿರುದ್ಧ ಹೇಳಿಕೆಗೆ ಅಮೆರಿಕನ್​ ಪತ್ರಕರ್ತೆ ಆಕ್ರೋಶ
  • ಮೊದಲು ತಿನ್ನಲು ಅನ್ನದ ವ್ಯವಸ್ಥೆ ಮಾಡಿಕೋ ಎಂದ ನೆಟ್ಟಿಗರು
ಅಮೆರಿಕ: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದ್ದರೂ, ಅಲ್ಲಿನ ರಾಜಕಾರಣಿಗಳ ಭಾರತ ವಿರೋಧಿ ಅಜೆಂಡಾ ಮಾತ್ರ ಕಮ್ಮಿಯಾಗಿಲ್ಲ. ಈಗ ಅಮೆರಿಕದ ನೆಲಕ್ಕೆ ಹೋಗಿ ಭಾರತದ ವಿರುದ್ಧ ಬಹಿರಂಗವಾಗಿ ವಿಷ ಕಾರಿರುವ ಪಾಕಿಸ್ತಾನಿ ಸೆನೆಟರ್ (Rana Mahmood Anti India Speech) ಒಬ್ಬರ ಉದ್ಧಟತನದ ಭಾಷಣ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಜಮ್ಮು-ಕಾಶ್ಮೀರ ವಿಷಯವನ್ನು ಮುಂದಿಟ್ಟುಕೊಂಡು, ಭಾರತವನ್ನು ನಾಶ ಮಾಡುತ್ತೇವೆ ಎಂದು ಅರಚಾಡಿರುವ ಪಾಕ್ ನಾಯಕನಿಗೆ ನೆಟ್ಟಿಗರು ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ!

ನ್ಯೂಯಾರ್ಕ್‌ನಲ್ಲಿ ನಡೆದಿದ್ದೇನು?

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ನಾಯಕ ಹಾಗೂ ಹಾಲಿ ಸೆನೆಟರ್ ಆಗಿರುವ ರಾಣಾ ಮಹಮೂದ್-ಉಲ್-ಹಸನ್ ಎಂಬಾತ ನ್ಯೂಯಾರ್ಕ್ ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ.
ಮಾರ್ಕಾ-ಎ-ಹಕ್ ಹೆಸರಿನ ಈ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪದೇ ಪದೇ ಮಾತನಾಡಿದ ಈತ, ಭಾರತದ ವಿರುದ್ಧ ತೀವ್ರವಾಗಿ ಗುಡುಗಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಇವನ ಭಾಷಣದಲ್ಲಿ ಭಾರತದ ಮೇಲಿನ ದ್ವೇಷ ಮತ್ತು ಯುದ್ಧದ ಬೆದರಿಕೆಗಳೇ ಕೂಡಿದ್ದವು.

ಉಗ್ರರ ಶೈಲಿಯಲ್ಲಿ ಬೆದರಿಕೆ ಹಾಕಿದ ಪಾಕ್ ಸೆನೆಟರ್!

ಭಾಷಣದ ನಡುವೆ ತೀರಾ ಕೆಳಮಟ್ಟಕ್ಕೆ ಇಳಿದ ಮಹಮೂದ್-ಉಲ್-ಹಸನ್, ಶಾಯರಿಗಳ ಮೂಲಕ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ನಾ ಸಮ್‌ಜೋಗೆ ತೋ ಮಿಟ್ ಜಾವೋಗೆ ಹಿಂದೂಸ್ತಾನ್ ವಾಲೋ...ತುಮ್ಹಾರಿ ದಸ್ತಾನ್ ತಕ್ ನ ಹೋಗಿ ದಸ್ತಾನೋನ್ ಮೇ! (ಭಾರತೀಯರೇ ನೀವು ಸರ್ವನಾಶವಾಗುತ್ತೀರಿ... ಇತಿಹಾಸದ ಪುಟಗಳಲ್ಲೂ ನಿಮ್ಮ ಕಥೆ ಇಲ್ಲದಂತೆ ನಾಶವಾಗುತ್ತಿರಿ) ಎಂದು ಉಗ್ರರ ಶೈಲಿಯಲ್ಲಿ ಧಮಕಿ ಹಾಕಿದ್ದಾನೆ.
ಅಷ್ಟಕ್ಕೇ ನಿಲ್ಲದ ಈತ, "ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ನಾವು ಪ್ರತಿಯೊಂದು ರಂಗದಲ್ಲೂ ಭಾರತದ ವಿರುದ್ಧ ಹೋರಾಡುತ್ತೇವೆ. ಕೊನೆಯ ಉಸಿರಿರುವವರೆಗೂ ಹಡಗನ್ನು ಮುಳುಗಿಸಿಯಾದರೂ ಹೋರಾಡುತ್ತೇವೆ ಎಂದು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ನೈಜ ಮುಖವನ್ನು ಪ್ರದರ್ಶಿಸಿದ್ದಾನೆ.
ಯಾವುದೇ ಪುರಾವೆಗಳಿಲ್ಲದೆ, ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಗೆ ಭಾರತವೇ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿರುವ ಈತ, ಭಾರತವನ್ನು ಎಂದಿಗೂ ಬದಲಾಗದ ಖಾಯಂ ಶತ್ರು ಎಂದು ಕರೆದಿದ್ದಾನೆ.

ರೊಚ್ಚಿಗೆದ್ದ ಅಮೆರಿಕನ್ ಪತ್ರಕರ್ತೆ!

ಈ ಇಡೀ ಘಟನೆಯನ್ನು ಅಮೆರಿಕದ ಪ್ರಸಿದ್ಧ ರಾಜಕೀಯ ನಿರೂಪಕಿ ಮತ್ತು ಪತ್ರಕರ್ತೆ ಆಮಿ ಮೆಕ್ ಜಗತ್ತಿನ ಮುಂದೆ ತಂದಿದ್ದಾರೆ. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಇದನ್ನು ಅಮೆರಿಕದ ನೆಲದಲ್ಲಿ ನಿಂತು ಪಾಕಿಸ್ತಾನ ನೀಡುತ್ತಿರುವ ನೇರ ಬೆದರಿಕೆ ಎಂದು ಕರೆದಿದ್ದಾರೆ.
ಭಯೋತ್ಪಾದನೆಯನ್ನು ರಫ್ತು ಮಾಡುವ ದೇಶದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬ ಅಮೆರಿಕದಲ್ಲಿ ನಿಂತು, ಇಲ್ಲಿರುವ ಪಾಕಿಸ್ತಾನಿ ವಲಸೆಗಾರರನ್ನು ಕೆರಳಿಸಲು ಯತ್ನಿಸುತ್ತಿದ್ದಾನೆ. ನಮ್ಮ ಪ್ರಜಾಸತ್ತಾತ್ಮಕ ಮಿತ್ರ ರಾಷ್ಟ್ರವಾದ ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾನೆ. ಇಂತಹ ದ್ವೇಷ ಹರಡುವ ಪಾಕ್ ನಾಯಕರಿಗೆ ಭವಿಷ್ಯದಲ್ಲಿ ಅಮೆರಿಕ ವೀಸಾ ನೀಡಬಾರದು, ಇವರನ್ನು ನಿಷೇಧಿಸಬೇಕು ಎಂದು ಆಮಿ ಮೆಕ್ ಆಗ್ರಹಿಸಿದ್ದಾರೆ.

ನೆಟ್ಟಿಗರಿಂದ ಭರ್ಜರಿ ಕ್ಲಾಸ್!

ಈ ವಿಡಿಯೋ ಮತ್ತು ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಜನ ಪಾಕ್ ಸೆನೆಟರ್ ಕಾಲೆಳೆಯಲು ಶುರು ಮಾಡಿದ್ದಾರೆ. ಸ್ವಂತ ದೇಶದಲ್ಲಿ ತಿನ್ನಲು ಅನ್ನವಿಲ್ಲ, ಆದರೂ ಭಾರತವನ್ನು ಮುಗಿಸುವ ಕನಸು ಕಾಣುತ್ತಿದ್ದಾರೆ, ಹಿಂದೂಗಳ ವಿರುದ್ಧ ದ್ವೇಷ ಹರಡಲು ಅಮೆರಿಕದ ನೆಲ ಏಕೆ ಬೇಕು? ನಿನಗೆ ತಾಕತ್ತಿದ್ದರೆ ಪಾಕಿಸ್ತಾನಕ್ಕೆ ಬಂದು ಮಾತನಾಡು ಎಂದು ನೆಟ್ಟಿಗರು ಚಾಲೆಂಜ್​ ನೀಡಿದ್ದಾರೆ.
ಇನ್ನು ಕೆಲವರು, ಇಂತಹ ಪರಾವಲಂಬಿಗಳನ್ನು ತಕ್ಷಣವೇ ಅಮೆರಿಕದಿಂದ ಗಡೀಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಅಮೆರಿಕದಲ್ಲಿ ಭಾರತದ ವಿರುದ್ಧ ಬೊಗಳೆ ಬಿಡಲು ಹೋದ ಪಾಕ್ ಸೆನೆಟರ್‌ಗೆ ಈಗ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ ಎಂದರೆ ಸುಳ್ಳಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net