ಜಪಾನ್‌ನಲ್ಲಿ ಕಳೆದುಹೋದ 1 ಲಕ್ಷದ ಪರ್ಸ್‌; ವಾಪಸ್ ಸಿಕ್ಕಾಗ ಭಾರತೀಯ ಮಹಿಳೆಗೆ ಶಾಕ್! | Lost purse in Japan

ಜಪಾನ್‌ನಲ್ಲಿ ಪರ್ಸ್ ಕಳೆದುಕೊಂಡಿದ್ದ ಮಹಿಳೆಗೆ, ಅದು ವಾಪಸ್ ಸಿಕ್ಕಾಗ ಅಚ್ಚರಿ
ಜಪಾನ್‌ನಲ್ಲಿ ಪರ್ಸ್ ಕಳೆದುಕೊಂಡಿದ್ದ ಮಹಿಳೆಗೆ, ಅದು ವಾಪಸ್ ಸಿಕ್ಕಾಗ ಅಚ್ಚರಿ
Published on

ಪ್ರಮುಖ ಮುಖ್ಯಾಂಶಗಳು

  • ಜಪಾನ್‌ನಲ್ಲಿ ಪರ್ಸ್ ಕಳೆದುಕೊಂಡಿದ್ದ ಭಾರತೀಯ ಮಹಿಳೆಯ
  • ಪರ್ಸ್‌ನಲ್ಲಿತ್ತು ಮನೆಯ ಕೀಗಳು ಹಾಗೂ ದುಬಾರಿ ಮೈಕ್ರೊಫೋನ್
  • ಪೊಲೀಸ್ ಠಾಣೆಗೆ ಪರ್ಸ್ ತಲುಪಿಸಿದ ಅಪರಿಚಿತ
ಜಪಾನ್: ಜಪಾನ್‌ ಪ್ರವಾಸಕ್ಕೆ ಹೋಗಿದ್ದ ಭಾರತೀಯ ಮಹಿಳೆಯೊಬ್ಬರಿಗೆ ಬರೋಬ್ಬರಿ 1 ಲಕ್ಷ ಮೌಲ್ಯದ ವಸ್ತುಗಳಿದ್ದ ಪರ್ಸ್ ಕಳೆದುಹೋಗಿತ್ತು. ಪರ್ಸ್‌ ವಾಪಸ್ ಸಿಗುತ್ತೆ ಅನ್ನೋ ಆಸೆಯನ್ನೇ ಬಿಟ್ಟಿದ್ದ ಮಹಿಳೆಗೆ ಜಪಾನ್ ಪೊಲೀಸರು ಕೊಟ್ಟ ಸರ್ಪ್ರೈಸ್‌ ಮಾತ್ರ ಅಚ್ಚರಿ ಮೂಡಿಸಿದೆ.
ಸೋನಂ ಮಿಧಾ ಎಂಬ ಮಹಿಳೆ ತಮ್ಮ ಈ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸ್ನೇಹಿತೆಯ ಜೊತೆ ರೆಸ್ಟೋರೆಂಟ್‌ಗೆ ಹೋಗಿದ್ದ ಸೋನಂ, ಬಾಡಿಗೆ ಸೈಕಲ್‌ನ ಬಾಸ್ಕೆಟ್‌ನಲ್ಲಿ ಪರ್ಸ್‌ ಇಟ್ಟು ಒಳಗೆ ಹೋಗಿದ್ದರು. ಸುಮಾರು ಒಂದು ಗಂಟೆ ಬಳಿಕ ವಾಪಸ್ ಬಂದು ನೋಡಿದಾಗ ಪರ್ಸ್‌ ನಾಪತ್ತೆಯಾಗಿತ್ತು. ಸೈಕಲ್ ಸುತ್ತಮುತ್ತ, ರಸ್ತೆಯಲ್ಲೆಲ್ಲಾ ಹುಡುಕಿದರೂ ಪರ್ಸ್‌ ಸಿಕ್ಕಿರಲಿಲ್ಲ.

ಪರ್ಸ್‌ನಲ್ಲಿದ್ದ ದುಬಾರಿ ವಸ್ತುಗಳು

ಪರ್ಸ್‌ನಲ್ಲಿ ನಗದು ಹಣದ ಜೊತೆಗೆ ಮನೆಯ ಕೀಗಳು ಹಾಗೂ ದುಬಾರಿ ಮೈಕ್ರೊಫೋನ್ ಕೂಡ ಇತ್ತು. ಹೀಗಾಗಿ ಪರ್ಸ್‌ ಯಾರಿಗಾದರೂ ಸಿಕ್ಕು, ವಾಪಸ್ ಸಿಗದೇ ಹೋದರೆ ದೊಡ್ಡ ನಷ್ಟವಾಗುತ್ತೆ ಎಂದು ಸೋನಂ ಚಿಂತೆಗೀಡಾಗಿದ್ದರು. ಕೊನೆಗೆ ಪರ್ಸ್‌ ಯಾರೋ ಕದ್ದಿರಬಹುದು ಎಂದುಕೊಂಡು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳು ಹೇಳಿದ ಮಾತು ಕೇಳಿ ಸೋನಂಗೆ ಶಾಕ್ ಆಗಿದೆ.

ಪೊಲೀಸ್​ ಠಾಣೆಯಲ್ಲೇ ಸಿಕ್ಕ ಪರ್ಸ್‌

ನೀವು ಹೇಳಿದ ವಿವರಣೆಗೆ ಹೋಲುವ ಪರ್ಸ್‌ವೊಂದನ್ನು ಯಾರೋ ಸ್ವಲ್ಪ ಹೊತ್ತಿನ ಹಿಂದೆಯಷ್ಟೇ ಠಾಣೆಗೆ ತಂದುಕೊಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪರ್ಸ್‌ ನೋಡಿದಾಗ ಅದು ಸೋನಂ ಅವರದ್ದೇ ಆಗಿತ್ತು. ಪರ್ಸ್‌ ತೆರೆದು ನೋಡಿದಾಗ ಅದರೊಳಗಿದ್ದ ಹಣ, ಕೀಗಳು, ಮೈಕ್ರೊಫೋನ್ ಸೇರಿದಂತೆ ಎಲ್ಲಾ ವಸ್ತುಗಳು ಹಾಗೆಯೇ ಇದ್ದವು. ಪರ್ಸ್‌ ಸಿಕ್ಕ ವ್ಯಕ್ತಿ ಯಾವುದನ್ನೂ ತೆಗೆದುಕೊಳ್ಳದೆ ಅದನ್ನು ಪೊಲೀಸ್ ಠಾಣೆಗೆ ತಂದುಕೊಟ್ಟಿದ್ದರು.
ಇಷ್ಟು ಒಳ್ಳೆಯ ಜನರಾ? ಇಲ್ಲಿಯ ಜನರಲ್ಲಿ ತುಂಬಾ ಕರುಣೆ ಇದೆ. ಮಾನವೀಯತೆ ಇನ್ನೂ ಜೀವಂತವಾಗಿದೆ. ಥ್ಯಾಂಕ್ ಯೂ, ಜಪಾನ್’ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಳಿಕ ನಾನು ಠಾಣೆಗೆ ಹೋದಾಗ ನನಗಾಗಿ ಪೊಲೀಸರು ಕಾಯುತ್ತಿರುತ್ತಾರೆ ಎಂದು ನಾನು ಊಹಿಸಿರಲಿಲ್ಲ ಎಂದಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದ್ದು, ಜಪಾನ್‌ನ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net