ಅಮೆರಿಕದಲ್ಲಿ ಭಾರತ ಮೂಲದ ಸೋದರರಿಂದ ಕೋಟ್ಯಂತರ ರೂಪಾಯಿ ವಂಚನೆ: 400 ವರ್ಷಗಳ ಜೈಲು ಶಿಕ್ಷೆ! | Savani Brothers
Savani Brothers
Published on:
Copied
Follow Us
ವಾಷಿಂಗ್ಟನ್/ಫಿಲಡೆಲ್ಫಿಯಾ: ಅಮೆರಿಕದ ಇತಿಹಾಸದಲ್ಲೇ ಅತ್ಯಂತ ವ್ಯವಸ್ಥಿತವಾಗಿ ನಡೆದ ಬಹುಕೋಟಿ ಡಾಲರ್ ವಂಚನೆ ಪ್ರಕರಣವೊಂದರಲ್ಲಿ ಭಾರತ ಮೂಲದ ಇಬ್ಬರು ಸಹೋದರರು(Savani Brothers) ದೋಷಿಗಳೆಂದು ಸಾಬೀತಾಗಿದ್ದಾರೆ.
ಪೆನ್ಸಿಲ್ವೇನಿಯಾದ ಭಾಸ್ಕರ್ ಸಾವನಿ (60) ಮತ್ತು ಅರುಣ್ ಸಾವನಿ (58) ಎಂಬುವವರು ವೀಸಾ ವಂಚನೆ, ಆರೋಗ್ಯ ವಿಮೆ ವಂಚನೆ, ಮನಿ ಲಾಂಡರಿಂಗ್ ಮತ್ತು ತೆರಿಗೆ ಚೋರಿ ಸೇರಿದಂತೆ ಹತ್ತಾರು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವುದು ಯುಎಸ್ ನ್ಯಾಯಾಲಯದಲ್ಲಿ ದೃಢಪಟ್ಟಿದೆ.
'ಸಾವನಿ ಗ್ರೂಪ್' ಎಂಬ ಅಪರಾಧ ಸಾಮ್ರಾಜ್ಯ
ವೃತ್ತಿಯಲ್ಲಿ ದಂತವೈದ್ಯರಾಗಿರುವ ಭಾಸ್ಕರ್ ಸಾವನಿ ಮತ್ತು ಅವರ ಸಹೋದರ ಅರುಣ್ ಸೇರಿ 'ಸಾವನಿ ಗ್ರೂಪ್' ಎಂಬ ಉದ್ಯಮ ಜಾಲವನ್ನು ನಿರ್ಮಿಸಿದ್ದರು. ಈ ಸಂಸ್ಥೆಯ ಅಡಿಯಲ್ಲಿ ವೈದ್ಯಕೀಯ ಸೇವೆಗಳ ಹೆಸರಿನಲ್ಲಿ ದಶಕಗಳಿಂದ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಸರ್ಕಾರದ ಕಾರ್ಯಕ್ರಮಗಳನ್ನು ದುರ್ಬಳಕೆ ಮಾಡಿಕೊಂಡು ತಮಗಾಗಿ ಕೋಟ್ಯಂತರ ಡಾಲರ್ ಸಂಪತ್ತನ್ನು ಈ ಸಹೋದರರು ಲೂಟಿ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಸಾಬೀತುಪಡಿಸಿದ್ದಾರೆ.
ಹಗರಣಗಳ ವಿವರ..
1. ಅಕ್ರಮ H-1B ವೀಸಾ ಜಾಲ
ಭಾರತದಿಂದ ಬರುವ ವಲಸಿಗರನ್ನೇ ಗುರಿಯಾಗಿಸಿಕೊಂಡು ಈ ಸಹೋದರರು ವಂಚನೆ ನಡೆಸುತ್ತಿದ್ದರು. ಸುಳ್ಳು ದಾಖಲೆ ನೀಡಿ H-1B ವೀಸಾ ಮೂಲಕ ಭಾರತೀಯರನ್ನು ಅಮೆರಿಕಕ್ಕೆ ಕರೆಸಿಕೊಳ್ಳುತ್ತಿದ್ದರು. ಬಂದ ನಂತರ ಆ ನೌಕರರಿಂದ ವೀಸಾ ಫೀಸ್ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಮಾತ್ರವಲ್ಲದೆ, ಅವರ ವೇತನದ ಒಂದು ಭಾಗವನ್ನು ಬಲವಂತವಾಗಿ ವಾಪಸ್ ಪಡೆದುಕೊಳ್ಳುತ್ತಿದ್ದರು. ಕೆಲಸಗಾರರ ವಲಸೆ ಹಂತದ ಅಸಹಾಯಕತೆಯನ್ನು ಇವರು ಬಂಡವಾಳ ಮಾಡಿಕೊಂಡಿದ್ದರು.
2. 30 ಮಿಲಿಯನ್ ಡಾಲರ್ ಮೆಡಿಕೈಡ್ ವಂಚನೆ
ಅಮೆರಿಕದ ಬಡವರಿಗಾಗಿ ಇರುವ 'ಮೆಡಿಕೈಡ್' (Medicaid) ಆರೋಗ್ಯ ಯೋಜನೆಯನ್ನು ಇವರು ಅಟ್ಟಹಾಸದಿಂದ ಲೂಟಿ ಮಾಡಿದ್ದಾರೆ. ಇವರ ದಂತ ಚಿಕಿತ್ಸಾಲಯಗಳನ್ನು ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿದ್ದರೂ ಸಹ, ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಕ್ಲಿನಿಕ್ ನಡೆಸಿ ಸುಳ್ಳು ಬಿಲ್‌ಗಳನ್ನು ಸೃಷ್ಟಿಸುತ್ತಿದ್ದರು. ಈ ಮೂಲಕ ಸುಮಾರು $30 ಮಿಲಿಯನ್ (ಅಂದಾಜು 250 ಕೋಟಿಗೂ ಹೆಚ್ಚು) ಹಣವನ್ನು ಸರ್ಕಾರದ ಖಜಾನೆಯಿಂದ ಲಪಟಾಯಿಸಿದ್ದಾರೆ.
3. ರೋಗಿಗಳ ಜೀವದ ಜೊತೆ ಚೆಲ್ಲಾಟ
ಇದು ಈ ಪ್ರಕರಣದ ಅತ್ಯಂತ ಕರಾಳ ಮುಖ. ದಂತ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇವರು ಮನುಷ್ಯರ ಬಳಕೆಗೆ ಯೋಗ್ಯವಲ್ಲದ (Not For Human Use) ಎಂದು ಲೇಬಲ್ ಮಾಡಲಾಗಿದ್ದ ಪ್ರೊಟೊಟೈಪ್ ಹಲ್ಲಿನ ಇಂಪ್ಲಾಂಟ್‌ಗಳನ್ನು ಹಾಕುತ್ತಿದ್ದರು. ಎಫ್‌ಡಿಎ (FDA) ಅನುಮೋದನೆ ಇಲ್ಲದ ಇಂತಹ ಅಪಾಯಕಾರಿ ಸಾಧನಗಳನ್ನು ರೋಗಿಗಳ ಗಮನಕ್ಕೆ ತರದೆ ಅಳವಡಿಸಿ ಅವರ ಪ್ರಾಣದ ಜೊತೆ ಆಟವಾಡಿದ್ದಾರೆ.
4. ಮನಿ ಲಾಂಡರಿಂಗ್
ಸಾವನಿ ಸೋದರರು ಅಕ್ರಮವಾಗಿ ಗಳಿಸಿದ ಹಣವನ್ನು ಹತ್ತಾರು ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ ಮನಿ ಲಾಂಡರಿಂಗ್ ಮಾಡುತ್ತಿದ್ದರು. ತಮ್ಮ ವೈಯಕ್ತಿಕ ಖರ್ಚುಗಳಾದ ಮಕ್ಕಳ ಕಾಲೇಜು ಫೀಸ್, ಮನೆ ತೆರಿಗೆ ಮತ್ತು ಮನೆ ನಿರ್ವಹಣಾ ವೆಚ್ಚಗಳನ್ನು ವ್ಯವಹಾರದ ಖರ್ಚು ಎಂದು ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. ಸುಮಾರು $1.6 ಮಿಲಿಯನ್ ವೈಯಕ್ತಿಕ ಆದಾಯವನ್ನು ಇವರು ಮುಚ್ಚಿಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಶಿಕ್ಷೆಯ ಪ್ರಮಾಣ ಎಷ್ಟು?
ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ಭಾಸ್ಕರ್ ಸಾವನಿ: ಗರಿಷ್ಠ 420 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.
ಅರುಣ್ ಸಾವನಿ: ಗರಿಷ್ಠ 415 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.
ಇವರ ಸಹವರ್ತಿ ಅಲೆಕ್ಸಾಂಡ್ರಾ ರಾಡೋಮಿಯಾಕ್ ಕೂಡ ದೋಷಿಯಾಗಿದ್ದು, 40 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾಳೆ.
ಎಫ್‌ಬಿಐ ಡೈರೆಕ್ಟರ್ ಜೊತೆ ಫೋಟೋ ಸಂಚಲನ!
ವಿಶೇಷವೆಂದರೆ, ಇಷ್ಟೆಲ್ಲಾ ಹಗರಣಗಳ ತನಿಖೆ ನಡೆಯುತ್ತಿದ್ದರೂ ಈ ಸಹೋದರರು ಎಫ್‌ಬಿಐ (FBI) ನಿರ್ದೇಶಕ ಕಾಶ್ ಪಟೇಲ್ ಅವರನ್ನು ಭೇಟಿಯಾಗಿ ಫೋಟೋ ಹಂಚಿಕೊಂಡಿದ್ದರು. ಅವರ ನೇಮಕಾತಿಯನ್ನು ಸಂಭ್ರಮಿಸಿದ್ದ ಈ ಸಹೋದರರ ಪೋಸ್ಟ್‌ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿವೆ.
ತೀರ್ಪು ಯಾವಾಗ?
ಸಾವನಿ ಸಹೋದರರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಲು ನ್ಯಾಯಾಲಯವು 2026ರ ಜುಲೈ 8 ಮತ್ತು 9 ರಂದು ದಿನಾಂಕ ನಿಗದಿಪಡಿಸಿದೆ. ಅಲ್ಲಿಯವರೆಗೆ ಈ ಇಡೀ ಉದ್ಯಮ ಜಾಲದ ಆಸ್ತಿಪಾಸ್ತಿಗಳ ಮುಟ್ಟುಗೋಲು ಪ್ರಕ್ರಿಯೆ ನಡೆಯಲಿದೆ,(ಏಜೆನ್ಸೀಸ್).